ಕೊರೋನಾಗೆ ಕೊವ್ಯಾಕ್ಸಿನ್‌ ಲಸಿಕೆ: ಮೊದಲ ಹಂತದ ಪ್ರಯೋಗ ಯಶಸ್ವಿ!

By Kannadaprabha NewsFirst Published Sep 13, 2020, 7:25 AM IST
Highlights

ಕೊರೋನಾ ವೈರಸ್‌ಗೆ ಹೈದರಾಬಾದ್‌ನ ಭಾರತ್‌ ಬಯೋಟೆಕ್‌ ಕಂಪನಿ ತಯಾರಿಸಿರುವ ಕೋವ್ಯಾಕ್ಸಿನ್| ಮಂಗಗಳ ಮೇಲೆ ಕೊವ್ಯಾಕ್ಸಿನ್‌ ಲಸಿಕೆ ಪ್ರಯೋಗ ಯಶಸ್ವಿ

 

ನವದೆಹಲಿ: ಕೊರೋನಾ ವೈರಸ್‌ಗೆ ಹೈದರಾಬಾದ್‌ನ ಭಾರತ್‌ ಬಯೋಟೆಕ್‌ ಕಂಪನಿ ತಯಾರಿಸಿರುವ ಕೋವ್ಯಾಕ್ಸಿನ್‌ ಲಸಿಕೆಯ ಪ್ರಯೋಗ ಮಂಗಗಳ ಮೇಲೆ ಯಶಸ್ವಿಯಾಗಿದೆ. ತನ್ಮೂಲಕ ಮೊದಲ ಹಂತದ ಪ್ರಯೋಗ ಮುಗಿದಿದ್ದು, ಎರಡನೇ ಹಂತದ ಪ್ರಯೋಗಕ್ಕೆ ಭಾರತೀಯ ಔಷಧ ನಿಯಂತ್ರಣ ಪ್ರಧಿಕಾರದಿಂದ ಒಪ್ಪಿಗೆ ದೊರಕಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಹಾಗೂ ಪುಣೆಯ ವೈರಾಲಜಿ ಸಂಸ್ಥೆಯ ಸಹಯೋಗದಲ್ಲಿ ಭಾರತ್‌ ಬಯೋಟೆಕ್‌ ಕಂಪನಿ ಈ ಲಸಿಕೆ ಅಭಿವೃದ್ಧಿಪಡಿಸಿದೆ. ಇದರ ಮೊದಲ ಹಂತದ ಪ್ರಯೋಗಕ್ಕಾಗಿ 20 ಮಂಗಗಳನ್ನು ಆಯ್ಕೆ ಮಾಡಲಾಗಿತ್ತು. ಅವುಗಳನ್ನು ನಾಲ್ಕು ಪಾಲು ಮಾಡಿ, ಒಂದು ಪಾಲಿನ ಐದು ಮಂಗಗಳಿಗೆ ಲಸಿಕೆ ನೀಡಿರಲಿಲ್ಲ. ಇನ್ನು ಮೂರು ಗುಂಪಿನ ತಲಾ ಐದೈದು ಮಂಗಗಳಿಗೆ ಮೂರು ರೀತಿಯ ಲಸಿಕೆಯ ಎರಡು ಡೋಸ್‌ ನೀಡಲಾಗಿತ್ತು. ನಂತರ ಎಲ್ಲಾ ಮಂಗಗಳಿಗೂ ಕೊರೋನಾ ವೈರಸ್‌ ತಗಲುವಂತೆ ಮಾಡಲು ಪ್ರಯತ್ನಿಸಲಾಯಿತು. ಆಗ ಲಸಿಕೆ ಪಡೆಯದ ಮಂಗಗಳಲ್ಲಿ ನ್ಯುಮೋನಿಯಾ ಸೇರಿದಂತೆ ಕೊರೋನಾದ ಲಕ್ಷಣಗಳು ಕಂಡುಬಂದವು. ಆದರೆ, ಇನ್ನುಳಿದ ಮೂರು ಗುಂಪಿನ ಮಂಗಗಳಲ್ಲಿ ಲಸಿಕೆ ನೀಡಿದ 14 ದಿನಗಳ ನಂತರ ಪ್ರತಿಕಾಯ ಹಾಗೂ ಕೊರೋನಾ ನಿರೋಧಕ ಶಕ್ತಿ ಉತ್ಪತ್ತಿಯಾಗಿರುವುದು ಕಂಡುಬಂತು. ಅಲ್ಲದೆ ಈ ಮಂಗಗಳಲ್ಲಿ ರೋಗದ ಲಕ್ಷಣಗಳು ಕಂಡುಬರಲಿಲ್ಲ ಎಂದು ಭಾರತ್‌ ಬಯೋಟೆಕ್‌ ಕಂಪನಿ ತಿಳಿಸಿದೆ.

ರೇಸ್‌ನಲ್ಲಿ 3 ಲಸಿಕೆ:

ಭಾರತದಲ್ಲಿ ಪ್ರಸಕ್ತ 2 ದೇಸಿ ಕಂಪನಿಗಳು ಕೋವಿಡ್‌ ಲಸಿಕೆ ಅಭಿವೃದ್ದಿಪಡಿಸಿವೆ. ಒಂದು ಭಾರತ ಬಯೋಟೆಕ್‌ ಮತ್ತೊಂದು ಝೈಡಸ್‌ ಕ್ಯಾಡಿಲಾ ಅಭಿವೃದ್ಧಿಪಡಿಸಿರುವ ಲಸಿಕೆ. ಇನ್ನು ಆಕ್ಸ್‌ಫರ್ಡ್‌ ವಿವಿ ಅಭಿವೃದ್ಧಿಪಡಿಸಿರುವ ಲಸಿಕೆ ಕೂಡಾ ಭಾರತದಲ್ಲಿ 2ನೇ ಹಂತದ ಪ್ರಯೋಗಕ್ಕೆ ಒಳಪಟ್ಟಿದೆ.

click me!