
ಭೋಪಾಲ್(ಸೆ.13): ಕೊರೋನಾ ಸೋಂಕು ತಡೆಗಟ್ಟಲು ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂದು ಕೊರೋನಾ ಯುಗದ ಆರಂಭದಿಂದಲೂ ಹೇಳಿಕೊಂಡು ಬಂದಿರುವ ಪ್ರಧಾನಿ ನರೇಂದ್ರ ಮೋದಿ, ಶನಿವಾರ ಮತ್ತೊಮ್ಮೆ ದೇಶವಾಸಿಗಳಲ್ಲಿ ಅಂಥದ್ದೇ ಮನವಿ ಮಾಡಿಕೊಂಡಿದ್ದಾರೆ. ಕೊರೋನಾ ಸೋಂಕಿಗೆ ಲಸಿಕೆ ಸಿಗುವವರೆಗೂ ಆ ಕುರಿತು ನಿರ್ಲಕ್ಷ್ಯ ಮಾಡಬೇಡಿ ಎಂದು ಅವರು ಕರೆ ನೀಡಿದ್ದಾರೆ.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮಧ್ಯ ಪ್ರದೇಶದ ಗ್ರಾಮೀಣ ಭಾಗದಲ್ಲಿ ನಿರ್ಮಿಸಿದ 1.75 ಲಕ್ಷ ಮನೆಗಳನ್ನು ವರ್ಚುಚಲ್ ಸಮಾರಂಭದ ಮೂಲಕ ಉದ್ಘಾಟಿಸಿ ಮಾತನಾಡಿದ ಮೋದಿ, ಕೊರೋನಾ ವಿರುದ್ಧದ ಹೋರಾಟಕ್ಕೆ ಹಿಂದಿಯಲ್ಲಿ ಘೋಷಣೆಯೊಂದನ್ನು ಪ್ರಕಟಿಸಿದರು. ‘ಜಬ್ ತಕ್ ದವಾಯಿ ನಹಿ, ತಬ್ ತಕ್ ಧಿಲಾಯಿ ನಹೀ (ಔಷಧಿ ಕಂಡುಹಿಡಿಯುವರೆಗೂ ನಿರ್ಲಕ್ಷ್ಯ ಬೇಡ). ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯ ಎಂದು ಹೇಳಿದ್ದಾರೆ.
ದೇಶದಲ್ಲಿ ಕಳೆದ ಕೆಲ ದಿನಗಳಿಂದ ನಿತ್ಯವೂ 1ಲಕ್ಷದ ಆಸುಪಾಸಿನಲ್ಲಿ ಹೊಸ ಕೇಸು ದಾಖಲಾಗಿ, ಒಟ್ಟಾರೆ ಸೋಂಕಿತರ ಸಂಖ್ಯೆ 50 ಲಕ್ಷ ಗಡಿಗೆ ಸಮೀಪಿಸುತ್ತಿರುವಾಗಲೇ ಪ್ರಧಾನಿ ಮೋದಿ ನೀಡಿದ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಅಲ್ಲದೆ ಹಂತಹಂತವಾಗಿ ಲಾಕ್ಡೌನ್ ತೆರವಾಗುತ್ತಲೇ, ಜನಸಾಮಾನ್ಯರು ಮಾಸ್ಕ್ ಧರಿಸದೇ ತಿರುಗಾಡುತ್ತಿರುವ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಹೊಸ ಪ್ರಕರಣಗಳು ಹೆಚ್ಚಲು ಕಾರಣವಾಗುತ್ತಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಅವರಿಂದ ಇಂಥ ಹೇಳಿಕೆ ಹೊರಬಿದ್ದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ