ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ರಕ್ಷಣಾ ಸಚಿವ ಎಕೆ ಆಂಟನಿ ಅವರ ಪುತ್ರ ಅನಿಲ್ ಆಂಟನಿ ಬಿಜೆಪಿ ಸೇರಿದ ಒಂದು ದಿನದ ಬಳಿಕ, ಅವರ ಸಹೋದರ ಅಜಿತ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ತನ್ನ ಸಹೋದರ ಶ್ರಮವನ್ನು ಅಗತ್ಯಕ್ಕೆ ತಕ್ಕಂತೆ ಮಾತ್ರವೇ ಬಳಸಿಕೊಳ್ಳಲಿದೆ ಎಂದು ಹೇಳಿದ್ದಾರೆ.
ತಿರುವನಂತಪುರ (ಏ.7): ಮಾಜಿ ರಕ್ಷಣಾ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಎಕೆ ಆಂಟಿ ಪುತ್ರ ಅನಿಲ್ ಆಂಟನಿ ಅವರು ಕಾಂಗ್ರೆಸ್ ಜೊತೆಗಿನ ಎಲ್ಲಾ ಸಂಬಂಧವನ್ನು ಮುರಿದುಕೊಂಡು ಭಾರತೀಯ ಜನತಾ ಪಕ್ಷಕ್ಕೆ ಸೇರಿದ ಒಂದು ದಿನದ ನಂತರ, ಎಕೆ ಆಂಟನಿ ಅವರ ಕಿರಿಯ ಪುತ್ರ ಅಜಿತ್ ಶುಕ್ರವಾರ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಅಣ್ಣ ಸಿಟ್ಟಿನಲ್ಲಿ ತೆಗೆದುಕೊಂಡ ನಿರ್ಧಾರವಿದೆ. ಆದರೆ, ಕೇಸರಿ ಪಕ್ಷವು ಅವರನ್ನು ಸಾಂಬಾರ್‌ನಲ್ಲಿ ಬಳಸುವ ಕರಿಬೇವಿನೆ ಎಲೆಯಂತೆ, ತಾತ್ಕಾಲಿಕವಾಗಿ ಬಳಸಿಕೊಂಡು ಎತ್ತಿ ಹೊರಹಾಕುತ್ತದೆ ಎಂದಿದ್ದಾರೆ. ತಿರುವನಂತಪುರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅಜಿತ್ ಆಂಟನಿ, ತಮ್ಮ ನಿರ್ಧಾರದ ಬಗ್ಗೆ ಇಡೀ ಕುಟುಂಬಕ್ಕೆ ಒಂದೇ ಒಂದು ಸಣ್ಣ ಸೂಚನೆಯನ್ನೂ ನೀಡಲಿಲ್ಲ. ಗುರುವಾರ ಅಣ್ಣ ಬಿಜೆಪಿ ಸೇರುತ್ತಾರೆ ಎನ್ನುವ ಸುದ್ದಿ ಟಿವಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿ ಬರುವಾಗ ನಮಗೆಲ್ಲರಿಗೂ ಆಘಾತವಾಗಿತ್ತು ಎಂದು ಹೇಳಿದ್ದಾರೆ. ನವದೆಹಲಿಯಲ್ಲಿರುವ ತಮ್ಮ ಕೇಂದ್ರ ಕಚೇರಿಯಲ್ಲಿ ಅನಿಲ್ ಬಿಜೆಪಿ ಸದಸ್ಯತ್ವವನ್ನು ಸ್ವೀಕರಿಸಿದ್ದನ್ನು ನೋಡಿದ ನಂತರ ತಂದೆ ಬಹಳ ಆಘಾತಗೊಂಡಿದ್ದಾರೆ ಎಂದು ಅಜಿತ್ ತಿಳಿಸಿದ್ದಾರೆ. 'ಅಣ್ಣ ಬಿಜೆಪಿಗೆ ಸೇರಿದ ಬಳಿಕ, ಪಪ್ಪ (ಎಕೆ ಆಂಟನಿ) ಮನೆಯ ಮೂಲೆಯೊಂದರಲ್ಲಿ ಬಹಳ ನೋವಿನಿಂದ ಕುಳಿತುಕೊಂಡಿದ್ದರು. ನನ್ನ ಜೀವನನ್ನು ನಾನು ಅವರನ್ನು ಆ ರೀತಿ ದುಬರ್ಲವಾಗಿ ನೋಡಿರಲಿಲ್ಲ. ಅವರು ಕಣ್ಣೀರು ಮಾತ್ರ ಹಾಕಿರಲಿಲ್ಲ' ಎಂದಿದ್ದಾರೆ.
ಇನ್ನು ಅಣ್ಣ ಬಿಜೆಪಿಗೆ ಸೇರಲು ತನ್ನದೇ ಆದ ವೈಯಕ್ತಿಕ ಕಾರಣಗಳನ್ನು ಹೊಂದಿದ್ದ ಎಂದು ಅಜಿತ್ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಪರಿಚಿತ ಕಾರ್ಯಕರ್ತರಿಂದ ಅವರಿಗೆ ನಿಂದನೆಯ ಕರೆಗಳು ಬರುತ್ತಿದ್ದವು. ಇದು ಅವರಿಗೆ ನೋವುಂಟು ಮಾಡಿತ್ತು. ಆತ ಸಿಟ್ಟಿನಿಂದ ಕಾಂಗ್ರೆಸ್ ಪಕ್ಷದಿಂದ ದೂರ ಉಳಿಯಬಹುದು ಎಂದು ಯೋಚನೆ ಮಾಡಿದ್ದೆ. ಆದರೆ, ನಾನೆಂದೂ ಆತ ಬಿಜೆಪಿ ಸೇರಬಹುದು ಎನ್ನುವ ಯೋಚನೆಯನ್ನೇ ಮಾಡಿರಲಿಲ್ಲ. ಆದರೆ, ಈ ನಿರ್ಧಾರ ನನಗೆ ಬಹಳ ಅಚ್ಚರಿ ನೀಡಿದೆ' ಎಂದು ಅಜಿತ್ ತಿಳಿಸಿದ್ದಾರೆ.
ಇನ್ನು ಅನಿಲ್ ಬಿಜೆಪಿಗೆ ಸೇರಿದ್ದು ಸಿಟ್ಟಿನ ನಿರ್ಧಾರ ಎಂದಿರುವ ಅಜಿತ್, ತನ್ನ ತಪ್ಪುಗಳು ಅರ್ಥವಾದ ಬಳಿಕ ಮತ್ತೊಮ್ಮೆ ಅವರು ಕಾಂಗ್ರೆಸ್ ಪಕ್ಷಕ್ಕೆ ವಾಪಸಾಗಲಿದ್ದಾರೆ ಎಂದು ಹೇಳಿದರು. ಹಾಗೇನಾದರೂ ಅವರ ರಾಜಕೀಯ ಭವಿಷ್ಯಕ್ಕೆ ಬಿಜೆಪಿಯೇ ಉತ್ತಮ ಎಂದು ಅವರು ಭಾವಿಸಿದರೆ, ಬಿಜೆಪಿಯಲ್ಲಿಯೇ ಉಳಿಯಬಹುದು ಎಂದಿದ್ದಾರೆ. 'ನಾನು ಪದೇ ಪದೇ ಇದನ್ನೇ ಹೇಳುತ್ತೇನೆ. ಖಂಡಿತವಾಗಿ ಬಿಜೆಪಿ ನನ್ನ ಅಣ್ಣನನ್ನು ಕರಿಬೇವಿನ ಎಲೆಯ ರೀತಿ ಉಪಯೋಗಿಸಿಕೊಂಡು ಎಸೆಯಲಿದೆ ಎಂದು ಹೇಳಿದ್ದಾರೆ. ಕೆಲ ವರ್ಷಗಳ ಹಿಂದೆ ಬಿಜೆಪಿ ಸೇರಿದ ಅಲ್ಫೋನ್ಸ್ ಕಣ್ಣಂತಾನಂ ಮತ್ತು ಟಾಮ್ ವಡಕ್ಕನ್ ಅವರಂತಹ ನಾಯಕರ ಉದಾಹರಣೆಗಳನ್ನು ಉಲ್ಲೇಖಿಸಿದ ಅಜಿತ್, ಬಿಜೆಪಿ ಎಲ್ಲರನ್ನೂ ತಾತ್ಕಾಲಿಕವಾಗಿ ಬಳಸಿಕೊಳ್ಳುತ್ತದೆ ಮತ್ತು ಕರಿಬೇವಿನ ಎಲೆಗಳಂತೆ ಹೊರಹಾಕುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಹಿರಿಯ ನಾಯಕ ಎಕೆ ಆಂಟನಿ ಪುತ್ರ ಅನಿಲ್ ಆಂಟನಿ ಬಿಜೆಪಿಗೆ ಸೇರ್ಪಡೆ
ಗುರುವಾರ ನವದೆಹಲಿಯಲ್ಲಿ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ವಿ ಮುರಳೀಧರನ್ ಅವರ ಸಮ್ಮುಖದಲ್ಲಿ ಅನಿಲ್ ಆಂಟನಿ ಬಿಜೆಪಿಗೆ ಸೇರ್ಪಡೆಯಾದರು. ಮಗನ ನಿರ್ಧಾರದಿಂದ ಭಾವುಕರಾಗಿದ್ದ ಎಕೆ ಆಂಟನಿ, ಆತ ಮಾಡಿದ್ದಯ ತಪ್ಪು ನಿರ್ಧಾರ ಎಂದು ಕೇರಳದಲ್ಲಿ ಹೇಳಿದ್ದರು. "ಬಿಜೆಪಿ ಸೇರುವ ಅನಿಲ್ ಅವರ ನಿರ್ಧಾರದಿಂದ ನನಗೆ ತೀವ್ರ ನೋವಾಗಿದೆ. ಇದು ತಪ್ಪು ನಿರ್ಧಾರ" ಎಂದು ಮಾಜಿ ರಕ್ಷಣಾ ಸಚಿವ ಹೇಳಿದ್ದಾರೆ.
ಬಿಜೆಪಿ ಸೇರ್ತಿಲ್ಲ, ಆದರೆ ದೇಶ ದುರ್ಬಲ ಮಾಡುವ ಶಕ್ತಿಗಳ ವಿರುದ್ಧವಿದ್ದೇನೆ: ಅನಿಲ್ ಆಂಟನಿ!
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಡಿಜಿಟಲ್ ಮೀಡಿಯಾ ಸೆಲ್ ಮುಖ್ಯಸ್ಥರಾಗಿದ್ದ ಅನಿಲ್, ಎರಡು ತಿಂಗಳ ಹಿಂದೆ ಕಾಂಗ್ರೆಸ್ ತೊರೆದಿದ್ದರು. ಪ್ರಧಾನಿ ಕುರಿತಾಗಿ ಬಂದ ಬಿಬಿಸಿ ಸಾಕ್ಷ್ಯಚಿತ್ರವನ್ನು ಟೀಕೆ ಮಾಡಿದ್ದ ಕಾರಣಕ್ಕೆ ಸ್ವತಃ ಕಾಂಗ್ರೆಸ್ ಪಕ್ಷ ಇವರ ಮೇಲೆ ಆಕ್ರೋಶ ಹೊರಹಾಕಿತ್ತು.