ಒಂದೇ ವಾಕ್ಯದಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಆಂಧ್ರ ಮಾಜಿ ಸಿಎಂ!

Published : Apr 07, 2023, 01:45 PM ISTUpdated : Apr 07, 2023, 02:14 PM IST
ಒಂದೇ ವಾಕ್ಯದಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಆಂಧ್ರ ಮಾಜಿ ಸಿಎಂ!

ಸಾರಾಂಶ

ಅಖಂಡ ಆಂಧ್ರಪ್ರದೇಶದ ಕೊನೆಯ ಸಿಎಂ ಆಗಿದ್ದ ಹಿರಿಯ ಕಾಂಗ್ರೆಸ್‌ ನಾಯಕ ಕಿರಣ್‌ ಕುಮಾರ್‌ ರೆಡ್ಡಿ ಶುಕ್ರವಾರ ಬಿಜೆಪಿ ಸೇರಿದ್ದಾರೆ. ಒಂದೇ ವಾಕ್ಯದ ರಾಜೀನಾಮೆ ಪತ್ರವನ್ನು ಸಲ್ಲಿಸಿ ಅವರು ಕಾಂಗ್ರೆಸ್‌ಅನ್ನು ತೊರೆದಿದ್ದಾರೆ.  

ನವದೆಹಲಿ (ಏ.7): ಹಿರಿಯ ಕಾಂಗ್ರೆಸ್‌ ನಾಯಕ ಹಾಗೂ ಅಖಂಡ ಆಂಧ್ರಪ್ರದೇಶದ ಕೊನೆಯ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಕಿರಣ್‌ ಕುಮಾರ್‌ ರೆಡ್ಡಿ ಶುಕ್ರವಾರ ನವದೆಹಲಿಯಲ್ಲಿ ಬಿಜೆಪಿ ಪಕ್ಷ ಸೇರಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ತೊರೆಯುವ ಮುನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಒಂದೇ ವಾಕ್ಯದ ರಾಜೀನಾಮೆ ಪತ್ರ ಸಲ್ಲಿಸಿರುವ ಅವರು, ಅವರಿಗೆ ಪಕ್ಷದ ಎಲ್ಲಾ ರೀತಿಯ ಸ್ಥಾನದಿಂದ ಹೊರನಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಕಿರಣ್‌ ಕುಮಾರ್‌ ರೆಡ್ಡಿ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದು ಇದು 2ನೇ ಬಾರಿ. 2014ರಲ್ಲಿ ಯುಪಿಎ ಸರ್ಕಾರ ಆಂಧ್ರಪ್ರದೇಶದಿಂದ ತೆಲಂಗಾಣವನ್ನು ಬೇರ್ಪಡಿಸಿ ಬೇರೆ ರಾಜ್ಯ ಮಾಡಿದ ಬಳಿಕ ಪ್ರತಿಭಟನೆಯ ರೂಪದಲ್ಲಿ ಕಿರಣ್‌ ಕುಮಾರ್‌ ರೆಡ್ಡಿ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದರು. ನಂತರ ಅವರು ತಮ್ಮ ಜೈ ಸಮೈಕ್ಯ ಆಂಧ್ರ ಪಕ್ಷವನ್ನು ಸ್ಥಾಪಿಸಿದರು ಮತ್ತು ಸಾರ್ವತ್ರಿಕ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು. ಆದರೆ, ಒಂದೇ ಒಂದು ಸೀಟು ಗೆಲ್ಲಲು ಅವರ ಪಕ್ಷದಿಂದ ಸಾಧ್ಯವಾಗಿರಲಿಲ್ಲ. ಇದಾದ ನಂತರ ಬಹಳ ಕಾಲ ರಾಜಕೀಯದಿಂದ ದೂರ ಉಳಿದಿದ್ದ ಕಿರಣ್‌ ಕುಮಾರ್‌ ರೆಡ್ಡಿ 2018ರಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷಕ್ಕೆ ವಾಪಸಾಗಿದ್ದರು. ಕಿರಣ್‌ ಕುಮಾರ್‌ ರೆಡ್ಡಿ ಅವರು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಈ ವೇಳೆ ಮಾತನಾಡಿದ ಅವರು, ಕಾಂಗೆಸ್‌ ನಾಯಕತ್ವವನ್ನು ಟೀಕಿಸಿದ್ದು ಮಾತ್ರವಲ್ಲದೆ, ಜನರ ನಿರ್ಧಾರವನ್ನು ಒಪ್ಪಿಕೊಳ್ಳಲು ಕೂಡ ಕಾಂಗ್ರೆಸ್‌ ಸಿದ್ಧವಿಲ್ಲ ಎಂದು ಹೇಳಿದ್ದಾರೆ.

ಇದು ಕಾಂಗ್ರೆಸ್ ಪಾಲಿಗೆ ಮತ್ತೊಂದು ಮುಜುಗರದ ಸನ್ನಿವೇಶ ಎನಿಸಿದೆ. ಗುರುವಾರವಷ್ಟೇ, ಯುಪಿಎ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದ, ಕೇರಳ ಕಾಂಗ್ರೆಸ್‌ನ ಹಿರಿಯ ನಾಯಕ ಎಕೆ ಆಂಟನಿ ಅವರ ಪುತ್ರ ಹಾಗೂ ಕೇರಳ ಕಾಂಗ್ರೆಸ್‌ ನ ಮಾಜಿ ಮಾಧ್ಯಮ ಸಂಯೋಜನ ಅನಿಲ್‌ ಆಂಟನಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈಗ ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿಯೊಬ್ಬರು ಬಿಜೆಪಿ ಪಕ್ಷಕ್ಕೆ ಸೇರಿದ್ದಾರೆ. ಇದು ಆಂಧ್ರದಲ್ಲಿ ಬಿಜೆಪಿಯ ಬಲವನ್ನು ಇನ್ನಷ್ಟು ಹೆಚ್ಚಿಸಲಿದೆ.

ಕಾಂಗ್ರೆಸ್‌ನ ನಾಯಕರು ಹೇಗಿದ್ದಾರೆಂದರೆ, ಅವರು ಮಾತ್ರ ಸರಿ. ಉಳಿದಂತೆ ಭಾರತದ ಎಲ್ಲಾ ಜನರೂ ತಪ್ಪು ದಾರಿಯಲ್ಲಿದ್ದಾರೆ ಎಂದು ಅಂದುಕೊಂಡಿದ್ದಾರೆ. ಜನರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಅಧಿಕಾರ ಬೇಕು ಎನ್ನುತ್ತಾರೆ. ಆದರೆ ಕಷ್ಟಪಟ್ಟು ಕೆಲಸ ಮಾಡಲು ಅಥವಾ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಬಯಸುವುದಿಲ್ಲ ಎಂದು ಕಳೆದ ತಿಂಗಳು ಕಾಂಗ್ರೆಸ್‌ ಪಕ್ಷವನ್ನು ತೊರೆದಿದ್ದ ಹಾಗೂ ನಾಲ್ಕು ಬಾರಿ ಶಾಸಕರೂ ಆಗಿದ್ದ ಕಿರಣ್‌ ಕುಮಾರ್‌ ರೆಡ್ಡಿ ಹೇಳಿದ್ದಾರೆ.

ಕಾಂಗ್ರೆಸ್‌ಗೆ ದೊಡ್ಡ ಶಾಕ್‌: ಆಂಧ್ರ ಮಾಜಿ ಸಿಎಂ ಕಿರಣ್‌ ಕುಮಾರ್ ರೆಡ್ಡಿ ರಾಜೀನಾಮೆ; ಬಿಜೆಪಿಗೆ ಸೇರ್ಪಡೆ..!

ಕಾಂಗ್ರೆಸ್‌ನೊಂದಿಗೆ ತಮ್ಮ ಕುಟುಂಬದ ಆರು ದಶಕಗಳ ಸುದೀರ್ಘ ಒಡನಾಟವನ್ನು ಉಲ್ಲೇಖಿಸಿದ ರೆಡ್ಡಿ, ಎಂದಿಗೂ ನಾನು ಕಾಂಗ್ರೆಸ್‌ ಪಕ್ಷವನ್ನು ತೊರೆಯುತ್ತೇನೆ ಅನ್ನೋದನ್ನು ಊಹೆ ಮಾಡಿರಲಿಲ್ಲ. ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಹಾಳಾಗುತ್ತಿದೆ ಮತ್ತು ಅದರ ಹೈಕಮಾಂಡ್ ಇತರರೊಂದಿಗೆ ಸಂವಹನ ನಡೆಸುವುದಿಲ್ಲ ಅಥವಾ ಅವರ ಅಭಿಪ್ರಾಯವನ್ನು ತೆಗೆದುಕೊಳ್ಳುವುದಿಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್‌ ಹಿರಿಯ ನಾಯಕ ಎಕೆ ಆಂಟನಿ ಪುತ್ರ ಅನಿಲ್‌ ಆಂಟನಿ ಬಿಜೆಪಿಗೆ ಸೇರ್ಪಡೆ

1984ರಲ್ಲಿ ದೇಶದಲ್ಲಿ ಕಾಂಗ್ರೆಸ್‌ ಪಕ್ಷದ ಅವನತಿ ಆರಂಭವಾದರೆ, ಅದೇ ಸಮಯದಲ್ಲಿ ಬಿಜೆಪಿ ಪಕ್ಷದ ಪ್ರಗತಿ ಆರಂಭಿಸಿತ್ತು. ಮೋದಿ ನೇತೃತ್ವದ ಆಡಳಿತ  ಪಕ್ಷದ ನಾಯಕರನ್ನು ಶ್ಲಾಘಿಸಿದ ಕಿರಣ್‌ ಕುಮಾರ್‌ ರೆಡ್ಡಿ, ಕಠಿಣ ಪರಿಶ್ರಮ ಮತ್ತು ಬದ್ಧತೆಯನ್ನು ಹೊಂದಿರುವ ಈ ನಾಯಕರನ್ನು ಮೆಚ್ಚಲೇಬೇಕಿದೆ ಎಂದಿದ್ದಾರೆ. ಅವರು ಚಿಂತನೆಯ ಸ್ಪಷ್ಟತೆ ಮತ್ತು ಸ್ಥಿರತೆಯನ್ನು ಹೊಂದಿದ್ದಾರೆ ಮತ್ತು ಧೈರ್ಯದ ನಿರ್ಧಾರವನ್ನು ತೆಗೆದುಕೊಳ್ಳುವುದು ಸರ್ಕಾರದ ವಿಶಿಷ್ಟ ಲಕ್ಷಣವಾಗಿದೆ ಎಂದು ಅವರು ಹೇಳಿದರು. ಭ್ರಷ್ಟಾಚಾರದ ವಿರುದ್ಧ ಹೋರಾಡಲು ಮೋದಿಯವರ ಬದ್ಧತೆಯನ್ನು ರೆಡ್ಡಿ ಶ್ಲಾಘಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ