50 ವರ್ಷದ ಮಹಾಹೋರಾಟದ ಬಳಿಕ ಆಂಧ್ರದ 2ನೇ ಶ್ರೀಮಂತ ದೇವಸ್ಥಾನಕ್ಕೆ ಸಿಕ್ತು ಭೂಮಿ!

By Santosh NaikFirst Published Mar 10, 2023, 5:27 PM IST
Highlights

ಒಂದಲ್ಲ, ಎರಡಲ್ಲ.. ಬರೋಬ್ಬರಿ 50 ವರ್ಷಗಳ ಮಹಾ ಹೋರಾಟದ ಬಳಿಕ ಆಂಧ್ರಪ್ರದೇಶದ 2ನೇ ಶ್ರೀಮಂತ ದೇಗುಲ ಶ್ರೀಶೈಲಂ ದೇವಸ್ಥಾನ 4500 ಎಕರೆ ಭೂಮಿಯನ್ನು ಪಡೆದುಕೊಂಡಿದೆ. ಇದು ದೇವಸ್ಥಾನದ ಜಾಗ ಎಂದು ಹೇಳುವಂಥ ಐತಿಹಾಸಿಕ ದಾಖಲೆಗಳನ್ನು ಸ್ಥಳೀಯ ಶಾಸಕ ಅರಣ್ಯ ಅಧಿಕಾರಿಗಳಿಗೆ ನೀಡಿದ ಬಳಿಕ ಈ ಜಾಗ ದೇವಸ್ಥಾನದ ಸುಪರ್ದಿಗೆ ಬಂದಿದೆ.
 

ಗುಂಟೂರು (ಮಾ.10): ಬರೋಬ್ಬರಿ 50 ವರ್ಷಗಳ ಮಹಾಹೋರಾಟ ಬಳಿಕ ಆಂಧ್ರಪ್ರದೇಶದ ಎರಡನೇ ಶ್ರೀಮಂತ ದೇವಾಲಯಕ್ಕೆ ಅಂತಿಮವಾಗಿ 4,500 ಎಕರೆ ಭೂಮಿ ಸಿಕ್ಕಿದೆ. ಆಂಧ್ರಪ್ರದೇಶದ ಅರಣ್ಯ ಇಲಾಖೆಯು ಶ್ರೀಶೈಲಂ ದೇವಸ್ಥಾನಕ್ಕೆ 2,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 4,500 ಎಕರೆ ಭೂಮಿಯನ್ನು ನೀಡಲು ಒಪ್ಪಿಗೆ ನೀಡಿದೆ. ಶ್ರೀಶೈಲಂ ದೇವಸ್ಥಾನವು ತಿರುಮಲ ನಂತರ ಆಂಧ್ರ ಪ್ರದೇಶದ ಎರಡನೇ ಶ್ರೀಮಂತ ದೇವಾಲಯವಾಗಿದೆ. ಈ ದೇವಸ್ಥಾನವು ನಲ್ಲಮಲ ಮೀಸಲು ಅರಣ್ಯದ ಆಸುಪಾಸಿನಲ್ಲಿದೆ.  ದೇವಸ್ಥಾನದ ಬಳಿ ಇರುವ ಬೆಲೆಬಾಳುವ ಜಮೀನಿನ ಹಕ್ಕುಗಳಿಗಾಗಿ ಕಳೆದ ಐದು ದಶಕಗಳಿಂದ ಅರಣ್ಯ ಇಲಾಖೆ ಹಾಗೂ ದತ್ತಿ ಇಲಾಖೆ ನಡುವೆ ಘರ್ಷಣೆ ನಡೆಯುತ್ತಿತ್ತು. ಸ್ಥಳೀಯ ಶಾಸಕಿ ಶಿಲ್ಪಾ ಚಕ್ರಪಾಣಿ ರೆಡ್ಡಿ ವಿವಾದಿತ ಭೂಮಿಯು ಮೂಲತಃ ದೇವಸ್ಥಾನಕ್ಕೆ ಸೇರಿದ್ದು ಎನ್ನುವುದನ್ನು ಸಾಬೀತುಪಡಿಸುವ ಕೆಲವು ಐತಿಹಾಸಿಕ ದಾಖಲೆಗಳೊಂದಿಗೆ ಹೋರಾಟ ನಡೆಸಿದ್ದರು. ಅದಲ್ಲದೆ, ಹಲವು ದಶಕಗಳ ಹಿಂದಿನ ವಿವಾದವನ್ನು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಬಗೆಹರಿಸುವಂತೆ ಮನವಿ ಮಾಡಿದ್ದರು. ಈ ಜಗಳದಿಂದ ದೇವಸ್ಥಾನಕ್ಕಾಗಲಿ, ಅರಣ್ಯ ಇಲಾಖೆಗಾಗಲಿ ಯಾವುದೇ ರೀತಿಯಲ್ಲಿ ಪ್ರಯೋಜನವಾಗುತ್ತಿಲ್ಲ ಎಂದು ನೇರವಾಗಿಯೇ ಹೇಳಿಕೆ ನೀಡಿದ್ದರು.

ಹೈಟೆಕ್‌ ಸರ್ವೇ: ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವೈ ಮಧುಸೂದನ್ ರೆಡ್ಡಿ ಅವರು ರಾಜ್ಯದ ಹಿರಿಯ ಅಧಿಕಾರಿಗಳನ್ನು ಈ ಕಾರ್ಯಕ್ಕಾಗಿ ನಿಯೋಜಿಸಿದರು. ಇದರೊಂದಿಗೆ ಪುರಾತತ್ವ ಇಲಾಖೆಯಿಂದ ದೇವಾಲಯದ ಸತ್ಯಾಸತ್ಯತೆ ತಿಳಿಯಲು ಸಹಾಯವನ್ನೂ ಪಡೆಯಲಾಗಿದೆ. ಇತ್ತೀಚೆಗಷ್ಟೇ ರಾಜ್ಯಾದ್ಯಂತ ಸಮಗ್ರ ಭೂಮಾಪನಕ್ಕೆ ಕಂದಾಯ ಇಲಾಖೆ ಅಧಿಕಾರಿಗಳೂ ಚಾಲನೆ ನೀಡಿದ್ದರು. ಅರಣ್ಯ ಇಲಾಖೆ, ಪುರಾತತ್ವ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು.

ಅವರೊಂದಿಗೆ ದತ್ತಿ, ಸರ್ವೆ ಮತ್ತು ಭೂ ದಾಖಲೆಗಳ ಅಧಿಕಾರಿಗಳು ಇದ್ದರು. ಪುರಾತತ್ವ ಇಲಾಖೆಯು ಹೆಚ್ಚಿನ ಪ್ರಮಾಣದ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಲ್ಲದೆ,  ಸುಧಾರಿತ ತಂತ್ರಗಳನ್ನು ಬಳಸಿಕೊಂಡು ಕ್ಷೇತ್ರ ಮಟ್ಟದ ಸಮೀಕ್ಷೆಗಳನ್ನು ನಡೆಸಿತು. ಇದಕ್ಕಾಗಿ ಡ್ರೋನ್‌ಗಳನ್ನೂ ಬಳಸಿಕೊಳ್ಳಲಾಗಿತ್ತು. ಹಲವಾರು ತಿಂಗಳುಗಳ ಸಂಶೋಧನೆಯ ನಂತರ, ವಿಶೇಷ ತಂಡಗಳು ವಿವಾದಿತ ಭೂಮಿಯ ಒಡೆಯ ಭಗವಾನ್ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ಎಂದು ದೃಢಪಡಿಸಿದ್ದಾರೆ. ದತ್ತಿ ಸಚಿವ ಕೊಟ್ಟು ಸತ್ಯನಾರಾಯಣ ಮಾತನಾಡಿ, ಈ ಜಮೀನು ದೇವಸ್ಥಾನದ ಒಡೆತನದಲ್ಲಿದೆ ಎಂಬುದು ಅನುಮಾನಾಸ್ಪದವಾಗಿ ದೃಢಪಟ್ಟಿದೆ. ಐದು ದಶಕಗಳ ಸುದೀರ್ಘ ಹೋರಾಟದ ನಂತರ ನಮಗೆ ನ್ಯಾಯ ಸಿಕ್ಕಿದ್ದಕ್ಕೆ ಸಂತೋಷವಾಗಿದೆ ಎಂದಿದ್ದಾರೆ.

ಇನ್ಮುಂದೆ ಯಂತ್ರದಲ್ಲಿ ತಯಾರಾಗಲಿವೆ ತಿರುಪತಿ ಲಡ್ಡು: 50 ಕೋಟಿ ರೂ. ವೆಚ್ಚದ ಯಂತ್ರ ನೀಡಲು ರಿಲಯನ್ಸ್‌ ಸಜ್ಜು

ಭೂಮಿ ಹಸ್ತಾಂತರಿಸುವ ಪ್ರಕ್ರಿಯೆ ಪೂರ್ಣ: ಸಚಿವರ ಗುಂಪಿನಲ್ಲಿ ಕಂದಾಯ ಸಚಿವ ಧರ್ಮಣ್ಣ ಪ್ರಸಾದ ರಾವ್, ಅರಣ್ಯ ಮತ್ತು ಪರಿಸರ ಸಚಿವ ಪೆದ್ದಿರೆಡ್ಡಿ ರಾಮಚಂದ್ರ ರೆಡ್ಡಿ ಉಪಸ್ಥಿತರಿದ್ದರು. ದೇವಾಲಯದ ಆಡಳಿತ ಮಂಡಳಿಗೆ ಭೂಮಿಯನ್ನು ಔಪಚಾರಿಕವಾಗಿ ಹಸ್ತಾಂತರಿಸುವಂತೆ ದತ್ತಿ ಸಚಿವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಮಾಡಿದರು. ಮಧುಸೂದನ್ ರೆಡ್ಡಿ ಅವರು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ದೇವಸ್ಥಾನದ ಅಧಿಕಾರಿಗಳೊಂದಿಗೆ ಔಪಚಾರಿಕ ಒಪ್ಪಂದಕ್ಕೆ ಸಹಿ ಹಾಕುವಂತೆ ಸ್ಥಳೀಯ ವಿಭಾಗೀಯ ಅರಣ್ಯಾಧಿಕಾರಿಗೆ ಸೂಚಿಸಿದರು.

 

ತಿರುಪತಿ ದೇಗುಲದ ಮೇಲೆ ಡ್ರೋನ್‌ ವಿಡಿಯೋ: ಡ್ರೋನ್‌ ಬಿಟ್ಟವರ ಮೇಲೆ ಕ್ರಿಮಿನಲ್‌ ಕೇಸ್‌..!

ಶ್ರೀಶೈಲ ದೇವಸ್ಥಾನದ ಇಒ ಎಸ್ ಲವಣ್ಣ ಮತ್ತು ಅರಣ್ಯ ಇಲಾಖೆಯ ಉಪನಿರ್ದೇಶಕ ಅಲನ್ ಚೋಂಗ್ ಟೆರಾನ್ ಅವರು ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿದರು. ಇದರಲ್ಲಿ 4,500 ಎಕರೆ ಜಮೀನಿನ ಮೇಲಿನ ತನ್ನ ಹಕ್ಕನ್ನು ದೇವಾಲಯದ ಅಧಿಕಾರಿಗಳಿಗೆ ಬಿಟ್ಟುಕೊಡಲು ಅರಣ್ಯ ಇಲಾಖೆ ಒಪ್ಪಿಕೊಂಡಿದೆ.
 

click me!