ಆಂಧ್ರಪ್ರದೇಶದಲ್ಲಿ ವೈಎಸ್ಆರ್ ಕಾಂಗ್ರೆಸ್ ಸರ್ಕಾರ ರಚಿಸಿದ್ದ ವಕ್ಫ್ ಬೋರ್ಡ್ ಅನ್ನು ಟಿಡಿಪಿ ಸರ್ಕಾರ ರದ್ದುಗೊಳಿಸಿದೆ. ಆಡಳಿತ ಮತ್ತು ವಕ್ಫ್ ಆಸ್ತಿಗಳ ರಕ್ಷಣೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ. ಹೊಸ ಬೋರ್ಡ್ ಶೀಘ್ರದಲ್ಲೇ ರಚನೆಯಾಗಲಿದೆ.
ಅಮರಾವತಿ: ಈ ಹಿಂದಿನ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಚನೆಯಾದ ಆಂಧ್ರ ವಕ್ಫ್ ಬೋರ್ಡ್ ಅನ್ನು ಬಿಜೆಪಿ ಮೈತ್ರಿಕೂಟದ ಭಾಗವಾಗಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರ ಇದೀಗ ರದ್ದು ಮಾಡಿದೆ. ಶೀಘ್ರದಲ್ಲೇ ಹೊಸ ವಕ್ಫ್ ಬೋರ್ಡ್ ರಚಿಸುವುದಾಗಿ ಘೋಷಿಸಿದೆ.
ಉತ್ತಮ ಆಡಳಿತ, ವಕ್ಫ್ ಆಸ್ತಿಗಳ ರಕ್ಷಣೆ, ವಕ್ಫ್ ಮಂಡಳಿಯ ಸುಗಮ ಕಾರ್ಯಾಚರಣೆಗೆ ಪೂರಕವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಹಳೆಯ ವಕ್ಫ್ ಮಂಡಳಿಯಲ್ಲಿ ಸುನ್ನಿ ಮತ್ತು ಶಿಯಾ ಸಮುದಾಯದ ವಿದ್ವಾಂಸರಿಗೆ ಯಾವುದೇ ಪ್ರಾತಿನಿಧ್ಯ ಇರಲಿಲ್ಲ. ಮಾಜಿ ಸಂಸದರಿಗೂ ಕೂಡ ಸ್ಥಾನವಿರಲಿಲ್ಲ. ಜತೆಗೆ, ಬಾರ್ ಕೌನ್ಸಿಲ್ ಕೆಟಗಿರಿಯಿಂದ ಕಿರಿಯ ವಕೀಲರನ್ನು ಮಂಡಳಿಗೆ ನೇಮಿಸಿ ಹಿರಿಯ ವಕೀಲರ ಜತೆಗೆ ಹಿತಾಸಕ್ತಿಯ ಸಂಘರ್ಷಕ್ಕೆ ಹಾದಿ ಮಾಡಿಕೊಡಲಾಗಿತ್ತು. ವಕ್ಫ್ ಸದಸ್ಯರಾಗಿ ಎಸ್.ಕೆ.ಖಾಜಾ ಅವರ ಆಯ್ಕೆ ಕುರಿತೂ ಸಾಕಷ್ಟು ದೂರುಗಳಿದ್ದವು. ಹಲವು ಕೋರ್ಟ್ ಕೇಸ್‌ಗಳಿಂದಾಗಿ ವಕ್ಫ್ ಅಧ್ಯಕ್ಷರ ಕೂಡ ನೇಮಕವಾಗಿರಲಿಲ್ಲ. ಹೀಗಾಗಿ ಸುಮಾರು ಒಂದೂವರೆ ವರ್ಷದಿಂದ ವಕ್ಫ್ ಮಂಡಳಿ ಇದ್ದೂ ಇಲ್ಲದಂತಿದ್ದ ಕಾರಣ ಸರ್ಕಾರ ವಕ್ಫ್ ಮಂಡಳಿಯನ್ನೇ ರದ್ದು ಮಾಡಿದೆ ಎಂದು ಸರ್ಕಾರ ತಿಳಿಸಿದೆ.
ಆದರೆ, ಸರ್ಕಾರದ ಈ ನಿರ್ಧಾರ ಆಕ್ಷೇಪಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರದ ವಕ್ಫ್ ಕಾಯ್ದೆ ತಿದ್ದುಪಡಿಗೆ ಪೂರಕವಾಗಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಸಂಭಲ್ ಮಸೀದಿ ನಿಯಂತ್ರಣಕ್ಕೆ ಮನವಿ ಸಲ್ಲಿಸಿದ ASI; ಭಾರತದ ಮುಸ್ಲಿಮರ ಸ್ಥಿತಿ ಬಾಂಗ್ಲಾ ಹಿಂದೂಗಳ ರೀತಿ ಎಂದ ಮುಫ್ತಿ