
ಉಜ್ಜಯಿನಿ (ಮೇ.2): ಮಧ್ಯಪ್ರದೇಶದ ಪವಿತ್ರ ನಗರಿ ಉಜ್ಜಯಿನಿಯ ವಿಶ್ವಪ್ರಸಿದ್ಧ ಮಹಾಕಾಳೇಶ್ವರ ದೇವಾಲಯದ ಆವರಣದ ಬಳಿ ಭಾರಿ ಗಾತ್ರದ ಶಿವಲಿಂಗವೊಂದು ಪತ್ತೆಯಾಗಿದೆ. 2028ರ ಸಿಂಹಸ್ಥ ಕುಂಭಮೇಳದ ಪೂರ್ವಸಿದ್ಧತೆಗಾಗಿ ದೇವಾಲಯದ ಆವರಣದ ವಿಸ್ತರಣೆ ಮತ್ತು ಉತ್ಖನನ ಕಾರ್ಯ ನಡೆಯುತ್ತಿದ್ದಾಗ ಈ ಅಪರೂಪದ ಪುರಾತನ ಶಿವಲಿಂಗ ದರ್ಶನ ನೀಡಿದೆ.
ಶುಕ್ರವಾರ ಮುಂಜಾನೆ ಸುಮಾರು 4 ಗಂಟೆಗೆ ದೇವಾಲಯದ ಪ್ರಿಪೇಯ್ಡ್ ಬೂತ್ ಬಳಿ ಜೆಸಿಬಿ ಮತ್ತು ಭಾರಿ ಯಂತ್ರೋಪಕರಣಗಳ ಮೂಲಕ ಭೂಮಿಯನ್ನು ಸಮತಟ್ಟು ಮಾಡುವ ಕೆಲಸ ನಡೆಯುತ್ತಿತ್ತು. ಈ ವೇಳೆ ನೆಲದ ಆಳದಲ್ಲಿ ಏನೋ ವಸ್ತು ಇರುವುದು ಯಂತ್ರ ಚಾಲಕನ ಗಮನಕ್ಕೆ ಬಂದಿದೆ. ಕೂಡಲೇ ಕಾರ್ಯ ಸ್ಥಗಿತಗೊಳಿಸಿ ಮಣ್ಣು ತೆಗೆದಾಗ ಬೃಹತ್ ಶಿವಲಿಂಗ ಕಾಣಿಸಿಕೊಂಡಿದೆ.
ದೇವಾಲಯದ ಅರ್ಚಕ ಆಕಾಶ್ ಶರ್ಮಾ ಅವರು ಈ ಬಗ್ಗೆ ಮಾತನಾಡಿ, "ದೇವಾಲಯದ ಒಳಗೆ ಭಗವಂತನಿಗೆ 'ಭಸ್ಮ ಆರತಿ' ನಡೆಯುತ್ತಿದ್ದ ಪುಣ್ಯಕಾಲದಲ್ಲೇ ಆವರಣದ ಹೊರಗೆ ಈ ಶಿವಲಿಂಗ ಪತ್ತೆಯಾಗಿದೆ. ಉಜ್ಜಯಿನಿಯ ಪ್ರತಿ ಕಣ ಕಣದಲ್ಲೂ ಮಹಾಕಾಲ ನೆಲೆಸಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ. ಈ ದಿನದಂದು ಶಿವಲಿಂಗದ ದರ್ಶನವಾಗಿರುವುದು ಅತ್ಯಂತ ಶುಭ ಶಕುನ" ಎಂದು ಹರ್ಷ ವ್ಯಕ್ತಪಡಿಸಿದರು.
ಶಿವಲಿಂಗ ಪತ್ತೆಯಾದ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆ ನೂರಾರು ಭಕ್ತರು ಮತ್ತು ಸ್ಥಳೀಯರು ಜಮಾಯಿಸಿದರು. ಭಕ್ತರು ಭಕ್ತಿಯಿಂದ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿ, ಪೂಜೆ ಸಲ್ಲಿಸಿ ಧನ್ಯತೆ ಮೆರೆದರು. ಸದ್ಯ ಉತ್ಖನನ ಕಾರ್ಯವನ್ನು ತಾತ್ಕಾಲಿಕವಾಗಿ ನಿಧಾನಗೊಳಿಸಲಾಗಿದೆ.
ದೇವಾಲಯದ ಸಹಾಯಕ ಆಡಳಿತಾಧಿಕಾರಿ ಆಶಿಶ್ ಫಲ್ವಾಡಿಯಾ ಅವರು ಮಾಹಿತಿ ನೀಡಿ, "ಶಿವಲಿಂಗ ಪತ್ತೆಯಾದ ತಕ್ಷಣ ಜಾಗರೂಕತೆಯಿಂದ ಕೆಲಸ ಮಾಡಲು ಸೂಚಿಸಲಾಗಿದೆ. ಪುರಾತತ್ವ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಅವರು ಈ ಶಿವಲಿಂಗದ ಕಾಲಮಾನ ಮತ್ತು ಐತಿಹಾಸಿಕ ಮಹತ್ವದ ಬಗ್ಗೆ ಅಧಿಕೃತ ತನಿಖೆ ನಡೆಸಲಿದ್ದಾರೆ" ಎಂದು ತಿಳಿಸಿದರು.
ಉಜ್ಜಯಿನಿಯಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಸಿಂಹಸ್ಥ ಕುಂಭಮೇಳವು 2028ರ ಮಾರ್ಚ್ 27ರಿಂದ ಮೇ 27ರವರೆಗೆ ನಡೆಯಲಿದೆ. ಇದಕ್ಕಾಗಿ ರಾಜ್ಯ ಸರ್ಕಾರವು 2,923.84 ಕೋಟಿ ರೂಪಾಯಿ ವೆಚ್ಚದ 22 ಬೃಹತ್ ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ರಸ್ತೆಗಳು, ಪಾರ್ಕಿಂಗ್ ಮತ್ತು ಭಕ್ತರ ಅನುಕೂಲಕ್ಕಾಗಿ ಕೈಗೊಂಡಿರುವ ಈ ವಿಸ್ತರಣಾ ಕಾಮಗಾರಿಯ ವೇಳೆಯೇ ಈ ಪವಿತ್ರ ಶಿವಲಿಂಗ ಪತ್ತೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ