
ನವದೆಹಲಿ ಮೇ.2): ಕರ್ನಾಟಕ ಸೇರಿದಂತೆ 9 ರಾಜ್ಯಗಳಲ್ಲಿನ ಆದಾಯ ಕೊರತೆ, ಸಾಲದ ಹೊರೆ ಕುರಿತು ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ, ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಈ ರಾಜ್ಯಗಳು ಆರ್ಥಿಕ ಸಂಕಷ್ಟಕ್ಕೆ ತುತ್ತಾಗುವುದಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದೆ.
ವಿಶೇಷವೆಂದರೆ ಆದಾಯ ಕೊರತೆ, ಸಾಲದ ಹೊರೆ ಹೆಚ್ಚಳಕ್ಕೆ ಏನು ಕಾರಣ ಎಂಬ ಬಗ್ಗೆ ಕೇಂದ್ರ ಸರ್ಕಾರ ನೇರವಾಗಿ ಪ್ರಸ್ತಾಪ ಮಾಡದೇ ಇದ್ದರೂ, ಈ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರಗಳು ಘೋಷಿಸಿರುವ ಗ್ಯಾರಂಟಿಗಳ ಬಗ್ಗೆ ಈ ಹಿಂದೆಯೂ ಹಲವು ಬಾರಿ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿತ್ತು. ಜೊತೆಗೆ ಆರ್‌ಬಿಐ ಕೂಡ ಗ್ಯಾರಂಟಿ ಯೋಜನೆಗಳಿಂದ ರಾಜ್ಯಗಳ ಆರ್ಥಿಕ ಪರಿಸ್ಥಿತಿ ಹದೆಗೆಡುತ್ತಿರುವ ಬಗ್ಗೆ ಹಲವು ಸಲ ಎಚ್ಚರಿಕೆ ನೀಡಿತ್ತು ಎಂಬುದು ಗಮನಾರ್ಹ.
ಈ ಕುರಿತು ಪತ್ರ ಬರೆದಿರುವ ಕೇಂದ್ರ ಹಣಕಾಸು ಸಚಿವಾಲಯ, ‘ಹೆಚ್ಚಿನ ಹಣಕಾಸು ಕೊರತೆ ಮತ್ತು ಸಾಲದ ಹೊರೆಯು, ಭವಿಷ್ಯದಲ್ಲಿ ಮಧ್ಯಪ್ರಾಚ್ಯ ಬಿಕ್ಕಟ್ಟು ಸೇರಿದಂತೆ ಇತರೆ ಯಾವುದೇ ಪರಿಸ್ಥಿತಿಗಳಿಂದ ಎದುರಾಗಬಹುದಾದ ಹಣಕಾಸಿನ ಆಘಾತ ಎದುರಿಸುವ ರಾಜ್ಯಗಳ ಸಾಮರ್ಥ್ಯವನ್ನು ಕಠಿಣಗೊಳಿಸಲಿದೆ. ಜೊತೆಗೆ ಈ ಪರಿಸ್ಥಿತಿಯು ಅವು ಅನಿವಾರ್ಯವಾಗಿ ಆದ್ಯತಾ ವಲಯಕ್ಕೆ ಹಣ ವಿನಿಯೋಗ ಮಾಡುವುದನ್ನು ತಪ್ಪಿಸಬಹುದು. ಜೊತೆಗೆ ಸ್ವತಃ ಕೇಂದ್ರ ಸರ್ಕಾರವೇ ತನ್ನ ಹಣಕಾಸಿನ ವ್ಯವಸ್ಥೆಯನ್ನು ಕ್ರೋಢೀಕರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ, ಸಂಕಷ್ಟದಲ್ಲಿರುವ ರಾಜ್ಯಗಳು ಕೇಂದ್ರ ಸರ್ಕಾರದ ಬಳಿ ಹಣಕಾಸಿನ ಅಗತ್ಯಕ್ಕಾಗಿ ಮೊರೆ ಇಡುವಂಥ ಪರಿಸ್ಥಿತಿ ನಿರ್ಮಾಣ ಮಾಡಬಹುದು’ ಎಂದು ಎಚ್ಚರಿಸಿದೆ.
ಈ ಮೂಲಕ, ಗ್ಯಾರಂಟಿ ನೀಡಿ ಸಂಕಷ್ಟಕ್ಕೆ ಸಿಕ್ಕಿಬಿದ್ದ ರಾಜ್ಯಗಳು ಕೇಂದ್ರದ ಬಳಿ ಹಣಕಾಸಿನ ನೆರವಿಗೆ ಮೊರೆ ಇಟ್ಟರೆ ನೆರವು ನೀಡುವುದು ಕಷ್ಟ ಎಂಬ ಪರೋಕ್ಷ ಸಂದೇಶ ರವಾನಿಸಿದೆ ಎಂದು ವಿಶ್ಲೇಷಿಸಲಾಗಿದೆ.
- 2026-27ನೇ ಸಾಲಿನ ಆರ್ಥಿಕ ಸ್ಥಿತಿ ಕುರಿತು ರಾಜ್ಯಗಳು ನೀಡಿರುವ ಮಾಹಿತಿ ಆಧರಿಸಿ ಕೇಂದ್ರದಿಂದ ಪತ್ರ
2026-27ರ ಅರ್ಥಸ್ಥಿತಿಯ ಬಗ್ಗೆ ರಾಜ್ಯಗಳೇ ಬಹಿರಂಗಪಡಿಸಿರುವ ಮಾಹಿತಿಯನ್ನಾಧರಿಸಿ ಏಪ್ರಿಲ್ ತಿಂಗಳ ಮಾಸಿಕ ಆರ್ಥಿಕ ವಿಮರ್ಶೆಯಲ್ಲಿ ಸಚಿವಾಲಯವು ಈ ಎಚ್ಚರಿಕೆ ನೀಡಿದೆ. ಈ ವರದಿ ಅನ್ವಯ, 18 ರಾಜ್ಯಗಳ ಪೈಕಿ 9 ಆದಾಯ ಕೊರತೆಯನ್ನು ಎದುರಿಸುತ್ತಿದ್ದರೆ, 7 ರಾಜ್ಯಗಳಲ್ಲಿ ಮಿಗತೆ ಸ್ಥಿತಿಯಿದೆ. ಇನ್ನೊಂದರ ಆದಾಯ ಸ್ಥಿರವಾಗಿದೆ ಎನ್ನಲಾಗಿದೆ.
ಹಿಮಾಚಲ ಪ್ರದೇಶ ಶೇ.-2.4, ಪಂಜಾಬ್ ಶೇ.-2.2, ಕೇರಳ ಶೇ.-2.1, ಆಂಧ್ರಪ್ರದೇಶ ಶೇ.-1.1, ರಾಜಸ್ಥಾನ ಶೇ.-1.1, ಹರ್ಯಾಣ ಶೇ.-0.9, ಕರ್ನಾಟಕ ಶೇ.-0.7, ಮಹಾರಾಷ್ಟ್ರ ಶೇ.-0.7 ಮತ್ತು ಛತ್ತೀಸ್‌ಗಢ ಶೇ.-0.3ರಷ್ಟು ಆದಾಯ ಕೊರತೆ ಅನುಭವಿಸುತ್ತಿವೆ.
ತೆರಿಗೆಯಂತಹ ಮಾರ್ಗಗಳಿಂದ ಸಂಗ್ರಹವಾಗುವ ರಾಜ್ಯದ ಆದಾಯಕ್ಕಿಂತ ಸಂಬಳ, ಪಿಂಚಣಿ, ಸಬ್ಸಿಡಿ, ಬಡ್ಡಿ ಮರುಪಾವತಿಯಂತಹ ಖರ್ಚುಗಳೇ ಹೆಚ್ಚಾಗಿರುವುದು ಈ ಸ್ಥಿತಿಗೆ ಕಾರಣ. ಇವುಗಳ ಆದಾಯದಲ್ಲಿ ಶೇ.15ರಷ್ಟು ಪಾಲು ಬಡ್ಡಿ ಪಾವತಿಗೇ ಹೋಗುತ್ತಿರುವುದು ಗಮನಾರ್ಹ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ