
ಲಖನೌ (ನ.23) ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಾಯಿ ಇತ್ತೀಚೆಗೆ ನಿಧನರಾಗಿದ್ದಾರೆ. ತಾಯಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಯೋಗಿ ಆದಿತ್ಯನಾಥ್ ಕಣ್ಣೀರಿಟ್ಟಿದ್ದರು. ತಾಯಿ ಅಂತ್ಯಕ್ರಿಯೆ ಬಳಿಕ ತೀವ್ರ ನೋವಿನಲ್ಲಿದ್ದರೂ ಯೋಗಿ ಆದಿತ್ಯನಾಥ್ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ತಾಯಿ ಕುರಿತು ಪತ್ರವೊಂದನ್ನು ಬರೆದಿದ್ದಾರೆ. ಸನ್ಯಾಸತ್ವದ ಸಂಪ್ರದಾಯದಂತೆ ತಾಯಿ ಮನೆಯಲ್ಲಿ ಮೊದಲ ಭಿಕ್ಷೆ ಬೇಡಿದ ಘಟನೆ ನೆನೆದು ಭಾವುಕರಾಗಿದ್ದಾರೆ. ಬಾಗಿಲ ಬಳಿ ನಿಂತು ಅಮ್ಮಾ ಭಿಕ್ಷೆ ನೀಡಿ ಎಂದು ಕೂಗಿದ್ದೆ. ಒಳಗಿನಿಂದ ಬಂದ ತಾಯಿ ಸನ್ಯಾಸಿ ದೀಕ್ಷೆಯಲ್ಲಿ ನನ್ನ ನೋಡಿ ಕಣ್ಣೀರಾಗಿದ್ದಳು. ನಾನು ಇಲ್ಲಿ ಉಳಿದುಕೊಳ್ಳಲು ಬಂದಿಲ್ಲ, ಭಿಕ್ಷೆ ನೀಡಿ ಎಂದು ನನ್ನ ದೃಢಸಂಕಲ್ಪ ಕುರಿತು ಯೋಗಿ ಭಾವುಕರಾಗಿ ಬರೆದುಕೊಂಡಿದ್ದಾರೆ.
ತಾಯಿ ಸಾವಿತ್ರಿ ದೇವಿ ನಿಧನದ ನೋವಿನ ನಡುವೆ ಯೋಗಿ ಆದಿತ್ಯನಾಥ್ ಭಾವುಕ ಪತ್ರ ಬರೆದಿದ್ದಾರೆ. ಈ ಪತ್ರ ಓದಿದ ಹಲವರ ಕಣ್ಣಾಲಿ ತೇವಗೊಂಡಿದೆ. ಯೋಗಿ ಆದಿತ್ಯನಾಥ್ ಉತ್ತರಖಂಡದಿಂದ ಉತ್ತರ ಪ್ರದೇಶದ ಗೋರಖಪುರಕ್ಕೆ ಬಂದು ಸನ್ಯಾಸಿ ದೀಕ್ಷೆ ಸ್ವೀಕರಿಸಿದ್ದರು. 3 ವರ್ಷಗಳ ಕಾಲ ಗೋರಖಪುರ ಮಠದಲ್ಲಿ ಉಳಿದು ಸನ್ಯಾಸತ್ವ ದೀಕ್ಷೆ ಪಡೆದಿದ್ದರು. ಮೂರು ಸನ್ಯಾಸ ದೀಕ್ಷೆ ಸ್ವೀಕರಿಸಿದ ಬಳಿಕ ಸಂಪ್ರದಾಯದಂತೆ ತಾಯಿ ಮನೆಯಲ್ಲಿ ಮೊದಲ ಭಿಕ್ಷೆ ಬೇಡಬೇಕು. ಇದರಂತೆ ಗೋರಖಪುರದಿಂದ ಉತ್ತರಖಂಡದ ಪಂಚೂರ್‌ನಲ್ಲಿರುವ ತಾಯಿ ಮನೆಗೆ ತೆರಳಿದ ಯೋಗಿ ಆದಿತ್ಯನಾಥ್, ತಾನು ಹುಟ್ಟಿದ, ಬೆಳದ ಮನೆಯ ಬಾಗಿಲಲ್ಲಿ ನಿಂತು ಅಮ್ಮಾ ಭಿಕ್ಷೆ ನೀಡಿ ಎಂದು ಕೂಗಿದ್ದೆ ಎಂದು ಯೋಗಿ ಆದಿತ್ಯನಾಥ್ ಘಟನೆ ವಿವರಿಸಿದ್ದಾರೆ.
ಸನ್ಯಾಸ ಸಂಪ್ರದಾಯದಂತೆ ಮನೆ ಬಾಗಿಲಲ್ಲಿ ನಿಂತು ಭಿಕ್ಷೆಗಾಗಿ ಕೂಗಿದಾಗ , ಮನೆಯೊಳಗಿದ್ದ ತಾಯಿ ಸಾವಿತ್ರಿ ದೇವಿ ಹೊರಬಂದಿದ್ದಾರೆ. ನನ್ನ ನೋಡಿ ತಾಯಿಗೆ ನಂಬಲು ಕಷ್ಟವಾಯಿತು. ತಾಯಿ ಸಾವಿತ್ರಿ ದೇವಿ ಮಾತನಾಡುವ ಮೊದಲೇ ನಾನು ಅಮ್ಮಾ ದಯವಿಟ್ಟು ನನಗೆ ಭಿಕ್ಷೆ ಕೊಡು ಎಂದು ಬೇಡಿಕೊಂಡೆ. ತಾಯಿ ಸಾವಿತ್ರಿ ದೇವಿ ಕಣ್ಣೀರಿಟ್ಟಿದ್ದರು. ಮಗನೇ ಏನು ಮಾಡಿಕೊಂಡೆ ನೀನು, ಭಿಕ್ಷೆ ಬೇಡುವಂತ ಪರಿಸ್ಥಿತಿ ಯಾಕೆ ಮಾಡಿಕೊಂಡೆ, ಮನೆಯಲ್ಲಿ ಏನು ಕೊರತೆ ಇತ್ತು ಎಂದು ಪ್ರಶ್ನಿಸುತ್ತಾ ಕಣ್ಣೀರಿಟ್ಟಿದ್ದರು.
ಅಮ್ಮಾ ಸನ್ಯಾಸ ಧರ್ಮ ನನ್ನದು. ಒಬ್ಬ ಯೋಗಿಯ ಹಸಿವು ಭಿಕ್ಷೆಯಿಂದ ಮಾತ್ರ ತಣಿಯಲು ಸಾಧ್ಯ. ನಾನು ಇಲ್ಲಿ ಉಳಿಯಲು ಬಂದಿಲ್ಲ, ಭಿಕ್ಷೆ ಬೇಡಲು ಬಂದಿದ್ದೇನೆ. ನೀನು ನೀಡುವ ಭಿಕ್ಷೆ ನನ್ನ ಹಾಗೂ ಸನ್ಯಾಸ ಧರ್ಮದ ಉದ್ದೇಶ ಈಡೇರಿಸುತ್ತದೆ ಎಂದು ತಾಯಿಗೆ ಹೇಳಿದೆ. ತಾಯಿ ಕಣ್ಣೀರು ನಿಲ್ಲಲಿಲ್ಲ. ಸನ್ಯಾಸದ ದೃಢಸಂಕಲ್ಪ ಕುರಿತು ಹೇಳಿದ ಬಳಿಕ ತಾಯಿ ಸಾವರಿಸಿಕೊಂಡು ಭಿಕ್ಷೆ ನೀಡಿದರು ಎಂದು ಯೋಗಿ ಭಾವುಕರಾಗಿದ್ದಾರೆ.
ತಾಯಿ ವಿಶ್ವಮಾತೆ, ದೇವರಿಗೂ ಒಬ್ಬ ತಾಯಿ ಇರುತ್ತಾಳೆ. ತಾಯಿಯ ಸಂಸ್ಕಾರವೇ ಮಗುವನ್ನು ಶ್ರೇಷ್ಠ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಮೊದಲ ಅಕ್ಷರ ಕಲಿಸಿದ ಗುರು ನನ್ನ ತಾಯಿ. ಆಕೆಯ ಅಗಲಿಕೆ ನನಗೆ ಒಬ್ಬ ವ್ಯಕ್ತಿಯ ನಷ್ಟವಲ್ಲ, ಭಾವನಾತ್ಮಕ ಭದ್ರತೆ, ನಿಸ್ವಾರ್ಥ ಪ್ರೀತಿ, ಮನೆಯ ಆಶ್ರಯದ ನಷ್ಟ ಎಂದು ಯೋಗಿ ಆದಿತ್ಯನಾಥ್ ತಾಯಿ ಕುರಿತು ಸ್ಮರಿಸಿದ್ದಾರೆ.
91ನೇ ವಯಸ್ಸಿನ ಸಾವಿತ್ರಿ ದೇವಿ ನವೆಂಬರ್ 20ರಂದು ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ಪಂಚೂರ್ ಗ್ರಾಮದಲ್ಲಿ ನಿಧನರಾಗಿದ್ದಾರೆ. ಯೋಗಿ ಅದಿತ್ಯನಾಥ್ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದರು. ಪ್ರಧಾನಿ ಮೋದಿ ಕರೆ ಮಾಡಿ ಸಾಂತ್ವನ ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ