ಕಾಶ್ಮೀರ ಭಾಗದಂತೆ ಜಮ್ಮುವಿನಲ್ಲೂ ಶೂನ್ಯ ಭಯೋತ್ಪಾದನೆ ಕ್ರಮ ಜಾರಿಗೊಳಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಭದ್ರತಾ ಪಡೆ ಅಧಿಕಾರಿಗಳಿಗೆ ಭಾನುವಾರ ಖಡಕ್ ಆದೇಶ ನೀಡಿದ್ದಾರೆ.
ನವದೆಹಲಿ (ಜೂ.17): ಕಾಶ್ಮೀರ ಭಾಗದಂತೆ ಜಮ್ಮುವಿನಲ್ಲೂ ಶೂನ್ಯ ಭಯೋತ್ಪಾದನೆ ಕ್ರಮ ಜಾರಿಗೊಳಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಭದ್ರತಾ ಪಡೆ ಅಧಿಕಾರಿಗಳಿಗೆ ಭಾನುವಾರ ಖಡಕ್ ಆದೇಶ ನೀಡಿದ್ದಾರೆ. ‘ಹೊಸ ವಿಧಾನಗಳ ಮೂಲಕ ನರೇಂದ್ರ ಮೋದಿ ಸರ್ಕಾರ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಬಗ್ಗು ಬಡಿದು,ಈ ಮೂಲಕ ಮಾದರಿ ಆಗಲಿದೆ’ ಎಂದರು.
ಇತ್ತೀಚಿಗೆ ಜಮ್ಮು-ಕಾಶ್ಮೀರದ ಜಮ್ಮು ಭಾಗದಲ್ಲಿ ನಡೆದ ಸರಣಿ ಭಯೋತ್ಪಾದಕ ಘಟನೆ ಹಿನ್ನಲೆಯಲ್ಲಿ ಶಾ ಅವರು ಭಾನುವಾರ ಉನ್ನತ ಅಧಿಕಾರಿಗಳ ಸಭೆ ನಡೆಸಿದರು. ಇದೇ ವೇಳೆ, ಜೂನ್ 29 ರಿಂದ ಪವಿತ್ರ ಅಮರನಾಥ ಯಾತ್ರೆ ಆರಂಭವಾಗಲಿರುವ ಹಿನ್ನೆಲೆಯಲ್ಲೂ ಪರಿಸ್ಥಿತಿಯ ಅವಲೋಕನ ಮಾಡಿದರು. ಈ ವೇಳೆ ಮಾತನಾಡಿದ ಅವರು, ‘ಪ್ರದೇಶ ಪ್ರಾಬಲ್ಯ ಯೋಜನೆ’ ಮತ್ತು ‘ಶೂನ್ಯ ಭಯೋತ್ಪಾದನಾ ಯೋಜನೆ’ಯ ಮೂಲಕ ಕಾಶ್ಮೀರ ಕಣಿವೆಯಲ್ಲಿ ಸಾಧಿಸಿದ ಯಶಸ್ಸನ್ನು ಜಮ್ಮು ವಿಭಾಗದಲ್ಲಿ ಪುನರಾವರ್ತಿಸಬೇಕು ಎಂದು ಭದ್ರತಾ ಏಜೆನ್ಸಿಗಳಿಗೆ ನಿರ್ದೇಶಿಸಿದರು.
ಈ ವೇಳೆ ಅಧಿಕಾರಿಗಳು ಜಮ್ಮು-ಕಾಶ್ಮೀರದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯ ಕುರಿತು ಗೃಹ ಸಚಿವರಿಗೆ ಸಂಪೂರ್ಣ ಮಾಹಿತಿ ನೀಡಿದರು ಹಾಗೂ ಪ್ರಧಾನಿಯವರ ನಿರ್ದೇಶನದಂತೆ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸಲಾಗುವುದು ಎಂದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್, ಜಮ್ಮು ಮತ್ತು ಕಾಶ್ಮೀರದ ಲೆ. ಗವರ್ನರ್ ಮನೋಜ್ ಸಿನ್ಹಾ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಅಮಿತ್ ಶಾ ದೊಡ್ಡ ಗಿಫ್ಟ್ ಬಗ್ಗೆ ಮಾತನಾಡದಿದ್ದು ಒಳ್ಳೆಯದಾಯಿತು: ನೂತನ ಸಂಸದ ವಿ.ಸೋಮಣ್ಣ
ಜಮ್ಮು-ಕಾಶ್ಮೀರದಲ್ಲಿ ಕೆಲ ದಿನಗಳ ಹಿಂದೆ ಭಯೋತ್ಪಾದಕರು, ಯಾತ್ರಾರ್ಥಿಗಳು ,ಭದ್ರತಾ ಸಿಬ್ಬಂದಿಗಳು ಮತ್ತು ಯೋಧರನ್ನು ಹತ್ಯೆ ಮಾಡಿದ್ದರು. ವೈಷ್ಣೋದೇವಿ ದೇವಸ್ಥಾನಕ್ಕೆ ತೆರಳುತ್ತಿದ್ದ ಬಸ್ ಮೇಲೆ ಗುಂಡಿನ ದಾಳಿ ಮಾಡಿ ಅಟ್ಟಹಾಸ ಮೆರೆದಿದ್ದರು. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಕೂಡ ಸಭೆ ನಡೆಸಿ ಉಗ್ರರ ಸದೆಬಡಿಯಲು ಸೂಚಿಸಿದ್ದರು.