
ಇಂಡಿಯಾ ಗೇಟ್
ದೆಹಲಿಯಿಂದ ಕಂಡ ರಾಜಕಾರಣ
ಪ್ರಶಾಂತ್ ನಾತು ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು(ಜ.19): ರಾಜಕಾರಣ ಒಂದೇ ದಿಕ್ಕಿನತ್ತ ಅಥವಾ ಒಂದೇ ರೀತಿ ಬಹು ದಿನಗಳ ಕಾಲ ನಡೆಯುವುದು ಕಷ್ಟ. ಏಕೆಂದರೆ ಪಾಲಿಟಿಕ್ಸ್ ಯಾವತ್ತೂ ನಿಂತ ನೀರಲ್ಲ. ಅದು ಸದಾಕಾಲ ವಿಧವಿಧ ದಿಕ್ಕುಗಳಲ್ಲಿ ಹರಿಯುವ ನೀರು. ಯಾವುದೇ ಜನಪ್ರಿಯ ನಾಯಕರು ಅಧಿಕಾರದ ಒಂದು ಸುತ್ತು ಪೂರ್ಣಗೊಳಿಸಿದಾಗ ಅವರ ನಂತರ ಯಾರು ಅಧಿಕಾರಕ್ಕೆ ಬರುತ್ತಾರೆ ಎಂಬ ಪ್ರಶ್ನೆ ಏಳುವುದು ಸಹಜ ಮತ್ತು ಸ್ವಾಭಾವಿಕ.
ಪಂಡಿತ್ ನೆಹರು ನಂತರ ಯಾರು? ಇಂದಿರಾ ಗಾಂಧಿ ಉತ್ತರಾಧಿಕಾರಿ ಯಾರು? ಅಟಲ್ ಬಿಹಾರಿ ಜಾಗವನ್ನು ಬಿಜೆಪಿಯಲ್ಲಿಯಾರು ತುಂಬಬಹುದು? ಹೀಗೆ ನಾನಾ ಸಂದರ್ಭದಲ್ಲಿ ಆಯಾ ಪಾರ್ಟಿಯ ಒಳಗೆ ಮತ್ತು ಮಾಧ್ಯಮಗಳಲ್ಲಿ ವರ್ಷಗಟ್ಟಲೆ ಚರ್ಚೆಗಳು ನಡೆದಿವೆ. ಈಗ ಕರ್ನಾಟಕದ ರಾಜಕಾರಣ ಹೇಗೆ ಸಿದ್ದರಾಮಯ್ಯ ನಂತರ ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿದೆಯೋ ಅದೇ ರೀತಿ ಭಾರತದ ರಾಜಕಾರಣವೂ ಮೋದಿ ನಂತರ ಯಾರು ಎಂಬ ಕವಲು ಒಡೆಯುವ ದಾರಿಯ ಪ್ರತೀಕ್ಷೆಯಲ್ಲಿದೆ. ಆದರೆ ಮೋದಿ ನಂತರ ಯಾರು ಎಂಬುದು ಗೊತ್ತಾಗಬೇಕಾದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜಾಗಕ್ಕೆ ಯಾರು ಎಂಬ ಪ್ರಶ್ನೆಗೆ ಮೊದಲು ಉತ್ತರ ಸಿಗಬೇಕು. ಬಹುತೇಕ ಫೆಬ್ರವರಿ ಅಂತ್ಯದ ಒಳಗೆ ಬಿಜೆಪಿಗೆ ಹೊಸ ರಾಷ್ಟ್ರೀಯ ಅಧ್ಯಕ್ಷರ ನೇಮಕ ಆಗಬೇಕು. ಯಾರು ಆಗುತ್ತಾರೆ, ಮೋದಿಯಾರನ್ನು ಬಯಸುತ್ತಿದ್ದಾರೆ, ಬಿಜೆಪಿಯ ವೈಚಾರಿಕ ಬೇರಿನ ಸ್ಥಾನದಲ್ಲಿರುವ ಆರ್‌ಎಸ್‌ಎಸ್ ಯಾರನ್ನು ತರಬೇಕು ಅಂದುಕೊಳ್ಳುತ್ತಿದೆ ಎಂಬುದು ಹೊಸ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕ ಆಗಬಹುದು ಅನ್ನಿಸುತ್ತದೆ.
ಜೇಬಲ್ಲೇ ರಾಜೀನಾಮೆ ಪತ್ರ ಇಟ್ಟುಕೊಂಡು ಮೌನದಿಂದಲೇ ಜಗತ್ತು ಗೆದ್ದ ಮನಮೋಹನ ಸಿಂಗ್!
ಗಡ್ಕರಿ ಟು ನಡ್ಡಾ ಆಗಿದ್ದೇನು?
2009ರಲ್ಲಿ ವೆಂಕಯ್ಯ ನಾಯ್ಡು, ರಾಜನಾಥ್ ಸಿಂಗ್, ಅರುಣ್ ಜೈಟ್ಲಿ, ಸುಷ್ಮಾ ಸ್ವರಾಜ್ ರಂತಹ ಘಟಾನುಘಟಿ ನಾಯಕರು ಇದ್ದಾಗಲೂ ಆಗ ಆರ್‌ಎಸ್‌ಎಸ್ ಮುಖ್ಯಸ್ಥರಾಗಿದ್ದ ಮೋಹನ್ ಭಾಗವತ್ ಅವರು ನಾಗಪುರದಿಂದ ನೇರವಾಗಿ ನಿತಿನ್ ಗಡ್ಕರಿ ಅವರನ್ನು ಕರೆದುಕೊಂಡು ಬಂದು ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದರು. ಆದರೆ ಯಾವಾಗ 2012ರ ಉತ್ತರ ಪ್ರದೇಶದ ಚುನಾವಣೆಯಲ್ಲಿ ಸಂಜಯ್ ಭಾಯಿ ಜೋಶಿ ಅವರನ್ನು ಗಡ್ಕರಿ ಪ್ರಭಾರಿ ಮಾಡಿದರೋ ಮುಂಬೈ ಕಾರ್ಯಕಾರಿಣಿ ಸಭೆಗೆ ಮೋದಿ ಸಾಹೇಬರು ಬರದೇ ಗಡ್ಕರಿಗೆ ನೇರವಾಗಿ, ಆರ್‌ಎಸ್‌ಎಸ್ ವಿರುದ್ಧ ಪರೋಕ್ಷವಾಗಿ ಸಡ್ಡು ಹೊಡೆದರು. ಆ ಘಟನೆ ನಂತರ ಗಡ್ಕರಿ ಅವರನ್ನೇ ಮುಂದುವರೆಸುವ ಮನಸು ಇದ್ದರೂ ಆರ್ ಎಸ್ಎಸ್ ಅನಿವಾರ್ಯವಾಗಿ ರಾಜನಾಥ ಸಿಂಗ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕಾಯಿತು. ಆಗ ಮೋದಿ ಇಲ್ಲದೆ ಚುನಾವಣೆ ಎದುರಿಸಲು ಸಾಧ್ಯವೇ ಇಲ್ಲ ಎಂದು ಮನವರಿಕೆ ಆಗಿದ್ದರಿಂದಲೇ ಭಾಗವತ ಮತ್ತು ರಾಜನಾಥ ಸಿಂಗ್ ಅವರು ಸ್ವತಃ ಅಡ್ವಾಣಿ ಎಷ್ಟೇ ವಿರೋಧಿಸಿದರೂ ಮೊದಲು ಮೋದಿ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ, ಅದಾಗಿ 3 ತಿಂಗಳಿಗೇ ಪ್ರಧಾನಿ ಅಭ್ಯರ್ಥಿ ಮಾಡಿದರು. 2014ರಲ್ಲಿ ಭರ್ಜರಿ ಗೆಲುವು ಸಿಕ್ಕ ಕೂಡಲೇ ಮೋದಿ ಮೊದಲು ಪಾರ್ಟಿಯನ್ನು ಕೈಗೆ ತೆಗೆದುಕೊಳ್ಳುವ ಭಾಗವಾಗಿ ತಮ್ಮ ಪರಮಾಪ್ತ ಅಮಿತ್ ಶಾ ಅವರನ್ನು ಬಿಜೆಪಿ ಅಧ್ಯಕ್ಷರ ಮಾಡಿದರು. ಆದರೆ 2019ರಲ್ಲಿ ಅಮಿತ್ ಭಾಯಿ ಶಾ ಯಾವಾಗ ಕೇಂದ್ರ ಗ್ರಹ ಸಚಿವರಾದರೋ ಮೋದಿ ಮತ್ತು ಅಮಿತ್ ಶಾ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಕೂರಿಸಿದ್ದು ಮೃದು ಸ್ವಭಾವದ, ಸಂಘದ ಹಿನ್ನೆಲೆಯಿಂದ ಬಂದ ಜೆ.ಪಿ.ನಡ್ಡಾ ಅವರನ್ನು. ಆದರೆ ನಡ್ಡಾ ಅಧ್ಯಕ್ಷರಾಗಿದ್ದರೂ ಪಾರ್ಟಿ ಸಂಘಟನೆ ಮತ್ತು ಟಿಕೆಟ್ ಹಂಚಿಕೆ ಬಗ್ಗೆ ಅಂತಿಮ ನಿರ್ಣಯ ತೆಗೆದು ಕೊಳ್ಳುತ್ತಾ ಇದ್ದದ್ದು ಅಮಿತ್ ಭಾಯಿ ಶಾ ಅವರೇ. ನಡ್ಡಾ ಒಂದು ರೀತಿ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಅನ್ನುವ ರೀತಿಯ ಅಧ್ಯಕ್ಷರಾಗಿದ್ದರು. ಜೊತೆಗೆ 2014ರಿಂದ 2024ರವರೆಗೆ ಸಂಘಟನೆ ಮತ್ತು ಪಾರ್ಟಿ ವಿಷಯಗಳು ಬಂದಾಗ ಆರ್‌ಎಸ್‌ಎಸ್‌ಗೆ ನಿರ್ಣಯಗಳ ಮಾಹಿತಿ ಕೊಡಲಾಗುತ್ತಿತ್ತೇ ಹೊರತು ಅಂತಿಮ ನಿರ್ಣಯ ಮೋದಿ ಮತ್ತು ಅಮಿತ್ ಶಾ ಮಧ್ಯೆಯ ಮಾತುಕತೆಯಲ್ಲೇ ಆಗುತ್ತಿತ್ತು. ಆದರೆ ಈಗ 2024ರ ಚುನಾವಣಾಹಿನ್ನಡೆಯನಂತರಆರ್‌ಎಸ್‌ಎಸ್‌ಮರಳಿ ಬಿಜೆಪಿವ್ಯವಹಾರಗಳಲ್ಲಿ ಸಕ್ರಿಯವಾಗಿದೆ. ಹೀಗಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರುಯಾರುಆಗಬಹುದು ಎಂಬ ಕುತೂಹಲ ಜಾಸ್ತಿ ಆಗಿದೆ.
ಜೆ.ಪಿ. ನಡ್ಡಾ ದುರ್ಬಲ ಅಧ್ಯಕ್ಷ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಯಾರು ಆಗಬೇಕು ಎಂಬ ಚರ್ಚೆ 2019ರಲ್ಲಿ ಬಂದಾಗ ಅಮಿತ್ ಶಾ ಮೊದಲು ಹೇಳಿದ ಹೆಸರು ಧರ್ಮೇಂದ್ರ ಪ್ರಧಾನ ಇಲ್ಲವೇ ಭೂಪೇಂದ್ರ ಯಾದವ ಅವರನ್ನು ಮಾಡೋಣ ಎಂದು. ಆದರೆ ಇಬ್ಬರನ್ನೂ ಮೋದಿ ಹಾಗೂ ಆರ್‌ಎಸ್‌ಎಸ್ ಒಪ್ಪಲಿಲ್ಲ. ಆಗ ಮೋದಿ ಕಡೆಯಿಂದ ಬಂದ ಹೆಸರೇ ನಡ್ಡಾ ಅವರದು. ಆ ಹೆಸರಿಗೆ ಆರ್‌ಎಸ್‌ಎಸ್ ಒಪ್ಪಿಗೇ ಕೂಡ ಸಹಜವಾಗಿ ಇತ್ತು. ಆದರೆ ಜೆ.ಪಿ.ನಡ್ಡಾ ಬಿಜೆಪಿ ಇತಿಹಾಸದಲ್ಲಿ ಅತ್ಯಂತ ದುರ್ಬಲ ರಾಷ್ಟ್ರೀಯ ಅಧ್ಯಕ್ಷ ಅನ್ನಿಸಿಕೊಂಡರೆ ಹೊರತು ಅಧಿಕಾರ ಚಲಾಯಿಸಲು ಬೇಕಾದ ಗುಣಗಳನ್ನು ಪ್ರದರ್ಶಿಸಲಿಲ್ಲ. ಆದರೆ ಯಾವಾಗ 2024ರ ಚುನಾವಣೆಗೆ ಮುಂಚೆ ನಡ್ಡಾ ಅವರನ್ನು ಒಂದು ವರ್ಷದ ಅವಧಿಗೆ ಮುಂದುವರೆಸುವ ಪ್ರಸ್ತಾಪ ಬಂತೋ ಆಗ ಅದನ್ನು ವಿರೋಧಿಸಿದ್ದು ನಿತಿನ್ ಗಡ್ಕರಿ, ಮೂಲಗಳು ಹೇಳುವ ಪ್ರಕಾರ, ಅಮಿತ್ ಶಾ ಅವರು ನಿತಿನ್ ಗಡ್ಕರಿಗೆ ಫೋನ್ ಮಾಡಿ ಜೆ.ಪಿ.ನಡ್ಡಾ ಅವರನ್ನು ಚುನಾವಣೆ ಮುಗಿಯುವವರೆಗೆ ಒಂದು ವರ್ಷಕ್ಕೆ ಮುಂದುವರೆಸುವ ಬಗ್ಗೆ ಹೇಳಿದಾಗ ಗಡ್ಕರಿ 'ಅಲ್ಲಾ ನೀವು ಯಾವ ನಿರ್ಣಯ ಕೇಳಿ ತೆಗೆದುಕೊಂಡಿದ್ದೀರಿ ಅಂತ ಈಗ ಹೇಳುತ್ತಿದ್ದಿರಿ. ನಿಮಗೇನು ಬೇಕೋ ಅದನ್ನು ಮಾಡಿಕೊಳ್ಳಿ. ಕೇಳುವ ನಾಟಕ ಯಾಕೆ' ಅಂತ ಕೇಳಿದಾಗ ಅಮಿತ್ ಶಾ ಬೇಸರಗೊಂಡಿದ್ದರು. ಅದರ ಪರಿಣಾಮವೇ ಒಂದು ವಾರದಲ್ಲಿ ಹೊಸದಾಗಿ ಸಂಸದೀಯ ಮಂಡಳಿ ರಚಿಸಿ ಅದರಿಂದ ಮಾಜಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ನಿತಿನ್ ಗಡ್ಕರಿ ಅವರನ್ನು ಹೊರಗಿಡಲಾಗಿತ್ತು. ಆಶ್ಚರ್ಯ ಎಂದರೆ, ವಾರದ ಹಿಂದಷ್ಟೆ ಗಡ್ಕರಿ ಹತ್ತಿರ ಹೋಗಿ ರಾಜ್ಯಸಭೆ ಟಿಕೆಟ್ ಕೇಳಿದ್ದ ಸುಧಾ ಯಾದವ್ ಸಂಸದೀಯ ಮಂಡಳಿ ಸದಸ್ಯೆ, ಗಡ್ಕರಿ ಅವರನ್ನು ಹೊರಗೆ ಹಾಕಲಾಗಿತ್ತು. ಗಡ್ಕರಿ ನಾಗಪುರದವರು ಮತ್ತು ಭಾಗವತ್ ಅವರಿಗೆ ಆತ್ಮೀಯರು ಅನ್ನುವುದು ಕಾಕತಾಳೀಯ ಇರಲಿಕ್ಕಿಲ್ಲ ಅಲ್ಲವಾ.
ಆರ್‌ಎಸ್‌ಎಸ್ ಏನು ಹೇಳಬಹುದು?
2024ರ ಚುನಾವಣೆಯಲ್ಲಿ ಯಾಕೋ ಏನೋ ಮೋದಿ ಮತ್ತು ಅಮಿತ್ ಶಾ ಜೊತೆಗಿನ ಆಂತರಿಕ ಗುದ್ದಾಟದ ಕಾರಣದಿಂದ ಆರ್‌ಎಸ್‌ಎಸ್ ಯಾವ ಪ್ರಮಾಣದಲ್ಲಿ ಅಖಾಡಾಕ್ಕೆ ಇಳಿಯಬೇಕಿತ್ತೋ ಆರೀತಿಮೈದಾನಕ್ಕೆ ಇಳಿಯಲಿಲ್ಲ. ಅದರ ಪರಿಣಾಮವೇ ಬಿಜೆಪಿ 300 ರಿಂದ 240ಕ್ಕೆ ಕುಸಿದದ್ದು. ಅನೇಕ ಆರ್‌ಎಸ್ ಎಸ್ ನಾಯಕರು ಖಾಸಗಿಯಾಗಿ '2024ರಲ್ಲಿ ಏನಾದರೂ ಬಿಜೆಪಿಗೆ 300 ಬಂದಿತ್ತು ಅಂತ ಆದರೆ ಮೋದಿ ಮತ್ತು ಅಮಿತ್ ಶಾ ನಾಗಪುರದ ಮಾತಿಗೆ ಕ್ಯಾರೇ ಅನ್ನುತ್ತಾ ಇರಲಿಲ್ಲ. ಹೀಗಾಗಿ ಒಂದು ಧಕ್ಕಾ ಅನಿವಾರ್ಯ ಇತ್ತು. ಅದರರ್ಥ ಬಿಜೆಪಿ ಅಧಿಕಾರ ಕಳೆದುಕೊಳ್ಳಬೇಕು ಅಂತ ಇರಲಿಲ್ಲ' ಎಂದು ಹೇಳುತ್ತಿದ್ದುದು ರಹಸ್ಯವಾಗಿ ಏನೂ ಉಳಿದಿಲ್ಲ. ಆದರೆ ಆರ್‌ಎಸ್‌ಎಸ್ ಏಕದಂ ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಹಾಕಿದ ಪರಿಶ್ರಮಮತ್ತು ಮಾಡಿದಕೆಲಸದ ಹಿಂದಿನ ಕಾರಣವೇ ಬಿಜೆಪಿ ಸಂಘಟನೆಯನ್ನು ಪುನರ್ ಕೈಗೆತೆಗೆದುಕೊಳ್ಳುವ ಪ್ರಯತ್ನ ಅನ್ನುವ ರೀತಿಯಲ್ಲಿ ನೋಡಲಾಗುತ್ತಿದೆ. ಈಗ ಯಾರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗುತ್ತಾರೋ ಅವರೇ 2029ರ ಚುನಾವಣೆಯ ನೇತೃತ್ವ ವಹಿಸುತ್ತಾರೆ ಅನ್ನುವುದು ಕೂಡ ಯಾರು ಅಧ್ಯಕ್ಷರಾಗುತ್ತಾರೋ ಅನ್ನುವ ಕುತೂಹಲ ಹೆಚ್ಚಲು ಮುಖ್ಯ ಕಾರಣ. ಮೂಲಗಳು ಹೇಳುವ ಪ್ರಕಾರ, ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಬಿಜೆಪಿ ಅಧ್ಯಕ್ಷರಾದರೆ ಒಳ್ಳೇದು ಎಂದು ಆರ್‌ಎಸ್‌ಎಸ್‌ನ ಮನಸ್ಸಿನಲ್ಲಿದೆ. ಆದರೆ ಶಿವರಾಜ್ ಸಿಂಗ್ ಅವರು ನಡ್ಡಾ ತರಹ ದಿನವೂ ಎಲ್ಲದಕ್ಕೂ ಹೋಗಿ ಅಮಿತ್ ಶಾ ಮೇಲೇ ನಿರ್ಭರರಾಗುವ ಜಾಯಮಾನದವರು ಅಲ್ಲ. ಹೀಗಾಗಿ ಅಮಿತ್ ಶಾ ಈಗ ಮರಳಿ ತಾನೇ ರಾಷ್ಟ್ರೀಯ ಅಧ್ಯಕ್ಷರಾದರೆ ಮುಂದೆ ನೇತೃತ್ವ ತನ್ನ ಕೈಯಲ್ಲಿ ಬರಬಹುದು ಅನ್ನುವ ಲೆಕ್ಕಾಚಾರದಲ್ಲಿ ಇದ್ದಂತೆ ಕಾಣುತ್ತಿದೆ. ಆದರೆ ಇದಕ್ಕೆ ಆರ್‌ಎಸ್‌ಎಸ್ ಅಭಿಪ್ರಾಯ ಏನೆಂದು ಸ್ಪಷ್ಟ ಇಲ್ಲ. ಹೆಚ್ಚಾಗಿ ಮೋದಿ ಮನಸ್ಸಿನಲ್ಲಿ ಏನಿದೆ ಎನ್ನುವುದು ತಿಳಿಯೋದು ಕಷ್ಟ ಬಿಡಿ.
India Gate: ರಾಷ್ಟ್ರೀಯ ಬಿಜೆಪಿಗೆ ‘ಅಧ್ಯಕ್ಷ ಸಂಕಟ’: ಪ್ರಶಾಂತ್ ನಾತು
ಸಂಘ ಬಿಜೆಪಿ ನಡುವಿನ ತಿಕ್ಕಾಟ
ಹಾಗೆ ನೋಡಿದರೆ ಜನಸಂಘ ಮತ್ತು ಬಿಜೆಪಿ ಶುರು ಆಗಿದ್ದೇ ಆರ್‌ಎಸ್‌ಎಸ್ ರಾಜಕೀಯ ಸಂಘಟನೆಯೊಂದು ಇರಬೇಕು ಎನ್ನುವ ಕಾರಣಕ್ಕಾಗಿ. 1980ರಲ್ಲಿ ಜನತಾ ಪಾರ್ಟಿಯಿಂದ ಹೊರಗೆ ಬಂದು ಆಟಲ್, ಅಡ್ವಾಣಿ ಯಾವಾಗ ಬಿಜೆಪಿ ಶುರು ಮಾಡಿದರೋ ವಾಜಪೇಯಿ ಅವರು ಗಾಂಧೀ ಪ್ರಣೀತ ಸಮಾಜವಾದ ಬಿಜೆಪಿ ಸಿದ್ದಾಂತ ಎಂದು ಹೇಳಿದ್ದರಿಂದ ಬೇಸರ ಗೊಂಡ ಆಗಿನ ಸರ ಸಂಘ ಚಾಲಕ ಬಾಳಾಸಾಹೇಬ್ ದೇವರಸ್ ಎಲ್ಲಾ ಪ್ರಚಾರಕರನ್ನು ವಾಪಸ್ ಬರುವಂತೆ ಸೂಚನೆ ನೀಡಿದ್ದರು. ಅದಾದ ಮೇಲೆ ಯಾವಾಗ ಅಡ್ವಾಣಿ 1986ರಲ್ಲಿ ಬಿಜೆಪಿ ಅಧ್ಯಕ್ಷರಾದರೋ ಆಗ ಸಂಘದಿಂದ ಮೊದಲು ಸಲಹೆಗಾರರಾಗಿ ಗೋವಿಂದ ಆಚಾರ್ಯರನ್ನು ಕಳುಹಿಸಿ ನಂತರ ಅವರೇ ಸಂಘಟನಾ ಕಾರ್ಯದರ್ಶಿಆದರು. ವಾಜಪೇಯಿ ಪ್ರಧಾನಿ ಆದಾಗಲು ಕೂಡ ಆಗಿನ ಸರಸಂಘ ಚಾಲಕ ಕೆ.ಸಿ.ಸುದರ್ಶನ ಜೊತೆ ತಿಕ್ಕಾಟ ವಿಪರೀತ ಮಟ್ಟಕ್ಕೆ ಹೋಗಿ ಸುದರ್ಶನ ಅವರು ಪತ್ರಕರ್ತ ಶೇಖರ್ ಗುಪ್ತಗೆ ಅಟಲ್ ಜಿ ವಿರುದ್ಧ ಸಂದರ್ಶನವನ್ನೇ ನೀಡಿದ್ದರು. ಅದಾಗಿ 2005 ರಲ್ಲಿ ಅಡ್ವಾಣಿಕರಾಚಿಗೆ ಹೋಗಿ ಜಿನ್ನಾ ಸಮಾಧಿಗೆ ಹೋಗಿ ಜಿನ್ನಾರ ದ್ವಿ ರಾಷ್ಟ್ರ ಸಿದ್ಧಾಂತವನ್ನು ಹೊಗಳಿದಾಗ ಸಂಘ ಬೇಸರಗೊಂಡಿತ್ತು. ಅದು ಯಾವ ಮಟ್ಟಕ್ಕೆ ಎಂದರೆ ಕರಾಚಿಯಿಂದ ದಿಲ್ಲಿಗೆ ಬಂದು ಅಡ್ವಾಣಿ ಇಳಿದಾಗ ವಿಮಾನ ನಿಲ್ಲುವ ಟಾರ್ಮಾಕ್‌ಗೆ ಹೋದ ಆಗಿನ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂಜಯ್ ಜೋಶಿ ಸರಸಂಘ ಚಾಲಕರ ಸಂದೇಶ ಇದೆ, ನೀವು ಕೂಡಲೇ ಕ್ಷಮೆ ಯಾಚಿಸಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹೇಳಿದ್ದರು. ಈಗ ಮರಳಿ ಸಂಘ ಮತ್ತು ಬಿಜೆಪಿ ಸಂಬಂಧಗಳು ಕವಲು ದಾರಿಯಲ್ಲಿ ನಿಂತಿವೆ. ಮೋದಿ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗೆ ಸರಿಯಾಗಿ ಉತ್ತರ ಕಂಡು ಹಿಡಿಯುವುದು ಬರೀ ಬಿಜೆಪಿ ಅಷ್ಟೇ ಅಲ್ಲ ಸಂಘ ಪರಿವಾರದ ಭವಿಷ್ಯ ಮತ್ತು ರಾಜಕೀಯ ಪ್ರಸ್ತುತತೆಯನ್ನು ಕೂಡ ನಿರ್ಧರಿಸಲಿದೆ.
ಮೋದಿ ನಂತರ ಯಾರು ಎಂಬುದು ಗೊತ್ತಾಗಬೇಕಾದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜಾಗಕ್ಕೆ ಯಾರು ಎಂಬ ಪ್ರಶ್ನೆಗೆ ಮೊದಲು ಉತ್ತರ ಸಿಗಬೇಕು. ಮೋದಿ ಯಾರನ್ನು ಬಯಸುತ್ತಿದ್ದಾರೆ. ಬಿಜೆಪಿಯ ವೈಚಾರಿಕ ಬೇರಿನ ಸ್ಥಾನದಲ್ಲಿರುವ ಆರ್‌ಎಸ್‌ಎಸ್ ಯಾರನ್ನು ತರಬೇಕು ಅಂದುಕೊಳ್ಳುತ್ತಿದೆ ಎಂಬುದು ಹೊಸ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕ ಆಗಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ