ಮಣಿಪುರ ನಗ್ನ ಪರೇಡ್‌ ಬಗ್ಗೆ ಅಮೆರಿಕ ಕಳವಳ: ದಾಳಿಗೊಳಗಾದ ಬಿಜೆಪಿ ಶಾಸಕನ ಕೇಳೋರಿಲ್ಲ!

By Kannadaprabha News  |  First Published Jul 27, 2023, 8:11 AM IST

ಮಣಿಪುರದಲ್ಲಿ ನಡೆದ ಮಹಿಳೆಯರ ನಗ್ನ ಮೆರವಣಿಗೆ ಹಾಗೂ ಪ್ರತಿಭಟನೆ ಬಗ್ಗೆ ಅಮೆರಿಕ ತೀವ್ರ ಕಳವಳ ವ್ಯಕ್ತಪಡಿಸಿದೆ. ಜೊತೆಗೆ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಭಾರತ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಹೇಳಿದೆ.


ವಾಷಿಂಗ್ಟನ್‌: ಮಣಿಪುರದಲ್ಲಿ ನಡೆದ ಮಹಿಳೆಯರ ನಗ್ನ ಮೆರವಣಿಗೆ ಹಾಗೂ ಪ್ರತಿಭಟನೆ ಬಗ್ಗೆ ಅಮೆರಿಕ ತೀವ್ರ ಕಳವಳ ವ್ಯಕ್ತಪಡಿಸಿದೆ. ಜೊತೆಗೆ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಭಾರತ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಹೇಳಿದೆ. ಈ ಕುರಿತು ಪಾಕಿಸ್ತಾನದ ವರದಿಗಾರರೊಂದಿಗೆ ಮಾತನಾಡಿದ ಗೃಹ ಇಲಾಖೆ ಉಪ ವಕ್ತಾರ ವೇದಾಂತ ಪಟೇಲ್‌ ಮೇ 4ರಂದು ನಡೆದ ಮಹಿಳೆಯರ ನಗ್ನ ಪರೇಡ್‌ ಬಗ್ಗೆ ಅಮೆರಿಕಕ್ಕೆ ಆಘಾತವಾಗಿದೆ. ನಾವು ಸಂತ್ರಸ್ತರ ಪರವಾಗಿದ್ದೇವೆ. ಮಹಿಳೆಯರಿಗೆ ನ್ಯಾಯ ಒದಗಿಸಲು ಭಾರತ ಸರ್ಕಾರಕ್ಕೆ ನಮ್ಮ ಬೆಂಬಲವನ್ನು ನೀಡುತ್ತೇವೆ’ಎಂದರು.

ದಾಳಿಗೊಳಗಾದ ಬಿಜೆಪಿ ಶಾಸಕನ ಕೇಳೋರಿಲ್ಲ!

Tap to resize

Latest Videos

ನವದೆಹಲಿ: ಮಣಿಪುರದಲ್ಲಿ ಸಾಮುದಾಯಿಕ ಘರ್ಷಣೆ ಆರಂಭವಾದ ಸಮಯದಲ್ಲಿ ಮೈತೇಯಿ ಸಮುದಾಯದ ದಾಳಿಗೆ ತುತ್ತಾಗಿದ್ದ ಬಿಜೆಪಿ ಶಾಸಕ ವುಂಗ್ಜಾಜಿನ್‌ ವಾಲ್ತೆ, ಬಹುತೇಕ ನಿಷ್ಕ್ರಿಯ ಸ್ಥಿತಿಗೆ ತಲುಪಿದ್ದಾರೆ. ಇಷ್ಟಾದರೂ ಯಾರೂ ಸಹಾಯಕ್ಕೆ ಮುಂದಾಗಿಲ್ಲ ಎಂದು ಅವರ ಕುಟುಂಬದವರು ಆರೋಪಿಸಿದ್ದಾರೆ. ಮೇ ತಿಂಗಳಿನಲ್ಲಿ ದುಷ್ಕರ್ಮಿಗಳ ಗುಂಪೊಂದು ವಾಲ್ತೆ ಅವರ ಮೇಲೆ ಭೀಕರ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡರೂ ಅದೃಷ್ಟವಶಾತ್‌ ವಾಲ್ತೆ ಬದುಕಿಕೊಂಡರು. ಅವರನ್ನು ದೆಹಲಿಗೆ ಏರ್‌ಲಿಫ್ಟ್ ಮಾಡಿ ಚಿಕಿತ್ಸೆ ಕೊಡಿಸಲಾಯಿತು. ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿ 2 ವಾರ ಕಳೆದರೂ ಸರ್ಕಾರ ಯಾವುದೇ ಗಮನ ಹರಿಸುತ್ತಿಲ್ಲ. ಬೀರೇನ್‌ ಸಿಂಗ್‌ ನಮಗೆ ಮೋಸ ಮಾಡಿದ್ದಾರೆ ಎಂದು ಅವರ ಪತ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

'ದೇವಸ್ಥಾನದ ಎದುರಲ್ಲೇ ಹಿಂದುಗಳನ್ನ ನೇಣಿಗೆ ಹಾಕ್ತೇವೆ' ಕೇರಳ ಮುಸ್ಲಿಂ ಲೀಗ್‌ ಜಾಥಾದಲ್ಲಿ ಘೋಷಣೆ!

ವಾಲ್ತೆ ಅವರು ಇದೀಗ ಹಾಸಿಗೆ ಹಿಡಿದಿದ್ದು, ಸ್ನಾನ, ಊಟ ಮತ್ತು ಶೌಚಾಲಯಕ್ಕೆ ಹೋಗಲು ಅವರಿಗೆ ಬೇರೊಬ್ಬರ ಸಹಕಾರ ಬೇಕಾಗಿದೆ. ವಾಲ್ತೆ ಅವರು ಫೆರ್ಜಾವಲ್‌ ಜಿಲ್ಲೆಯ ಥಾನ್ಲೋನ್‌ ಕ್ಷೇತ್ರದಿಂದ 3 ಬಾರಿ ಬಿಜೆಪಿಯಿಂದ ಗೆದ್ದು ಶಾಸಕರಾಗಿದ್ದಾರೆ. ಅಲ್ಲದೇ ಕಳೆದ ಅವಧಿಯಲ್ಲಿ ಬುಡಕಟ್ಟು ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಮಣಿಪುರ: ಮತ್ತೆ 30 ಮನೆಗೆ ಬೆಂಕಿ

ಮೂರು ತಿಂಗಳಾಗುತ್ತಾ ಬಂದರೂ ಮಣಿಪುರದಲ್ಲಿ ಪರಿಸ್ಥಿತಿ ಪ್ರಕ್ಷುಬ್ಧವಾಗಿದ್ದು, ಎದುರಾಳಿ ಸಮುದಾಯಗಳಿಗೆ ಗುಂಪುಗಳು ತೀವ್ರ ಶೋಧ ನಡೆಸುವ ಹಾಗೂ ಯಾರೂ ಸಿಗದೆ ಹೋದರೆ ಮನೆ, ವಾಹನಗಳಿಗೆ ಬೆಂಕಿ ಹಚ್ಚುವ ಘಟನೆಗಳು ವರದಿಯಾಗಿವೆ. ಮಣಿಪುರದ ಮೋರೆ ಜಿಲ್ಲೆಯಲ್ಲಿ ಭೀತಿಯಿಂದ ಜನರು ಮನೆ ಖಾಲಿ ಮಾಡಿರುವ 30ಕ್ಕೂ ಹೆಚ್ಚು ಮನೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಮತ್ತೊಂದೆಡೆ, ಮಣಿಪುರ ನೋಂದಣಿಯ ಬಸ್‌ಗಳನ್ನು ತಡೆದು, ಎದುರಾಳಿಗಳಿಗಾಗಿ ಶೋಧ ನಡೆಸಿದ್ದಾರೆ. ಯಾರೂ ಸಿಗದಿದ್ದಾಗ ಎರಡು ಬಸ್‌ಗಳನ್ನು ಸುಟ್ಟು ಹಾಕಿದ್ದಾರೆ. ಈ ಎರಡೂ ಬಸ್‌ಗಳು ಭದ್ರತಾ ಪಡೆಗಳ ಸಾಗಣೆಗೆ ನಿಯೋಜನೆಯಾಗಿದ್ದವು.

ನಿರ್ಭಯ ಘಟನೆ-ಮಣಿಪುರ ಹಿಂಸಾಚಾರ ಪ್ರತಿಭಟನೆ ಹೋಲಿಸಿ ಪೇಚಿಗೆ ಸಿಲುಕಿದ ಕಾಂಗ್ರೆಸ್!

ಈ ನಡುವೆ ಭದ್ರತಾ ಪಡೆಗಳ ನಡುವೆ ಕೆಲವು ಗುಂಪುಗಳು ಗುಂಡಿನ ಚಕಮಕಿಯಲ್ಲಿ ನಿರತವಾಗಿರುವ ಕುರಿತಂತೆಯೂ ವರದಿ ಬಂದಿವೆ. ಇದರಿಂದಾಗಿ ಮಣಿಪುರದ ಜನರು ಆತಂಕದಲ್ಲೇ ಜೀವನ ದೂಡುವಂತಾಗಿದೆ. ಮ್ಯಾನ್ಮಾರ್‌ ಗಡಿಯಲ್ಲಿರುವ ಮೋರೆ ಬಜಾರ್‌ನಲ್ಲಿ ಖಾಲಿಯಾಗಿರುವ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಈ ನಡುವೆ, ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಎರಡು ಬಸ್‌ಗಳನ್ನು ತಡೆಯಲಾಗಿದೆ. ಏಕೆಂದು ವಿಚಾರಿಸಿದಾಗ, ಎದುರಾಳಿ ಸಮುದಾಯದ ಜನರಿಗಾಗಿ ಶೋಧಿಸುತ್ತಿರುವುದಾಗಿ ಗುಂಪು ಹೇಳಿದೆ. ಯಾರೂ ಸಿಗದಿದ್ದಾಗ ಬಸ್‌ಗೆ ಬೆಂಕಿ ಹಚ್ಚಲಾಗಿದೆ.  ಮೇ 3ರಂದು ಆರಂಭವಾದ ಹಿಂಸಾಚಾರಕ್ಕೆ ಮಣಿಪುರದಲ್ಲಿ ಈಗಾಗಲೇ 160 ಮಂದಿ ಬಲಿಯಾಗಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ.

click me!