ಮನೆ ಬಾಗಿಲಿಗೇ ಪಿಜ್ಜಾ ಬರುತ್ತೆ, ರೇಶನ್‌ ಏಕಿಲ್ಲ?: ಕೇಜ್ರಿ ಕಿಡಿ

By Suvarna NewsFirst Published Jun 7, 2021, 8:39 AM IST
Highlights

* ಕೊರೋನಾ ವೈರಸ್‌ ಹಾವಳಿಯ ನಿಯಂತ್ರಣಕ್ಕಾಗಿ ದೆಹಲಿ ಮಾದರಿಯಲ್ಲಿ ಜಾರಿಗೆ ತರಲಾಗಿದ್ದ ‘ಮನೆ ಬಾಗಿಲಿಗೆ ಪಡಿತರ’ ಯೋಜನೆ'

* ಮನೆ ಬಾಗಿಲಿಗೇ ಪಿಜ್ಜಾ ಬರುತ್ತೆ, ರೇಶನ್‌ ಏಕಿಲ್ಲ?: ಕೇಜ್ರಿ ಕಿಡಿ

* ಮನೆಬಾಗಿಲಿಗೆ ಪಡಿತರಕ್ಕೆ ಕೇಂದ್ರ ತಡೆ: ಆಕ್ರೋಶ

ನವದೆಹಲಿ(ಜೂ.07): ಕೊರೋನಾ ವೈರಸ್‌ ಹಾವಳಿಯ ನಿಯಂತ್ರಣಕ್ಕಾಗಿ ದೆಹಲಿ ಮಾದರಿಯಲ್ಲಿ ಜಾರಿಗೆ ತರಲಾಗಿದ್ದ ‘ಮನೆ ಬಾಗಿಲಿಗೆ ಪಡಿತರ’ ಯೋಜನೆಗೆ ಕೇಂದ್ರ ಸರ್ಕಾರ ಬ್ರೇಕ್‌ ಹಾಕಿದ್ದಕ್ಕೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಕಿಡಿಕಾರಿದ್ದಾರೆ.

ಈ ಯೋಜನೆ ವಿವಾದ ಹೈಕೋರ್ಟಲ್ಲಿದೆ ಎಂದು ಉಪರಾಜ್ಯಪಾಲರು ಶುಕ್ರವಾರ ಪಡಿತರ ವಿತರಣೆಗೆ ತಡೆ ನೀಡಿದ್ದರು. ಭಾನುವಾರ ಈ ಬಗ್ಗೆ ಮಾತನಾಡಿದ ಕೇಜ್ರಿವಾಲ್‌, ‘ಮನೆ-ಮನೆಗಳಿಗೇ ಹೋಗಿ ಪಡಿತರ ವಿತರಣೆ ಮಾಡುವ ನಮ್ಮ ಸರ್ಕಾರದ ಯೋಜನೆಯನ್ನು ಕೇಂದ್ರ ಸರ್ಕಾರ ತಡೆದದ್ದು ಏಕೆ? ಗ್ರಾಹಕರು ಆರ್ಡರ್‌ ಮಾಡಿದ ಪಿಜ್ಜಾ, ಬರ್ಗರ್‌ಗಳು, ಸ್ಮಾರ್ಟ್‌ಫೋನ್‌ಗಳು ಮತ್ತು ಉಡುಪುಗಳು ಮನೆ ಬಾಗಿಲಿಗೇ ತಲುಪಿಸಲು ಇರುವ ಅನುಮತಿ ಪಡಿತರ ವಿತರಣೆಗೆ ಏಕೆ ಇಲ್ಲ?’ ಎಂದು ಪ್ರಶ್ನಿಸಿದರು.

‘ಕೊರೋನಾ ಹಾವಳಿ ನಿಯಂತ್ರಿಸಲು ಪಡಿತರ ಫಲಾನುಭವಿಗಳಿಗೆ ಅವರ ಮನೆ ಬಾಗಿಲಿಗೇ ಪಡಿತರ ವಿತರಣೆ ಮಾಡಬೇಕು. ಇಲ್ಲದಿದ್ದರೆ ಪಡಿತರ ಅಂಗಡಿಗಳು ಕೋವಿಡ್‌ ಹರಡುವ ಕೇಂದ್ರಗಳಾಗಿ ಮಾರ್ಪಡಲಿವೆ’ ಎಂದು ಅವರು ಇದೇ ವೇಳೆ ಎಚ್ಚರಿಕೆ ನೀಡಿದರು.

ಬಿಜೆಪಿ ಸಮರ್ಥನೆ:

ಪಡಿತರಕ್ಕೆ ತಡೆ ಮೂಲಕ ಕೇಜ್ರಿವಾಲ್‌ ಸರ್ಕಾರ ನಡೆಸಬಹುದಾಗಿದ್ದ ಕೋಟ್ಯಂತರ ರು. ಮೌಲ್ಯದ ಹಗರಣವೊಂದನ್ನು ಕೇಂದ್ರ ಸರ್ಕಾರ ತಡೆದಿದೆ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ಹೇಳಿದ್ದಾರೆ.

click me!