ಬಿಜೆಪಿಗೆ ಏಕಾಂಗಿ ಜಯ ಅಸಾಧ್ಯ: ರಾಷ್ಟ್ರಪತಿ ಆಯ್ಕೆಗೆ ಮೈತ್ರಿ ಅನಿವಾರ್ಯ!

By Kannadaprabha NewsFirst Published Jul 13, 2021, 7:23 AM IST
Highlights

* ರಾಷ್ಟ್ರಪತಿ, ಉಪರಾಷ್ಟ್ರಪತಿ ಎಲೆಕ್ಷನ್‌ಗೆ

* ಬಿಜೆಪಿಗೆ ಬೇಕು ಮಿತ್ರ ಪಕ್ಷಗಳ ಸಾಥ್‌

* ಬಿಜೆಪಿಗೆ ತನ್ನ ಮತಗಳಿಂದ ಮಾತ್ರ ಬೇಕಾದ ಅಭ್ಯರ್ಥಿ ಆಯ್ಕೆ ಅಸಾಧ್ಯ

* ಮುಂದಿನ ವರ್ಷ ರಾಷ್ಟ್ರಪತಿ, ಉಪರಾಷ್ಟ್ರಪತಿ ಹುದ್ದೆಗೆ ಚುನಾವಣೆ

ನವದೆಹಲಿ(ಜು.13): ಮುಂದಿನ ವರ್ಷ ನಡೆಯಲಿರುವ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಗೆ ಎನ್‌ಡಿಎ ಮೈತ್ರಿ ಪಕ್ಷಗಳು ಹಾಗೂ ಇನ್ನಿತರ ಕೆಲ ರಾಜಕೀಯ ಪಕ್ಷಗಳ ನೆರವು ಬೇಕಾಗುತ್ತದೆ. ಬಿಜೆಪಿಯ ಬಳಿಯಿರುವ ಮತಗಳನ್ನು ಮಾತ್ರ ಬಳಸಿದರೆ ಆ ಪಕ್ಷಕ್ಕೆ ಬೇಕಾಗುವ ಅಭ್ಯರ್ಥಿಯ ಆಯ್ಕೆ ಸಾಧ್ಯವಿಲ್ಲ ಎಂಬ ರಾಜಕೀಯ ಲೆಕ್ಕಾಚಾರಗಳು ಆರಂಭವಾಗಿವೆ.

ರಾಷ್ಟ್ರಪತಿ ಚುನಾವಣೆಯಲ್ಲಿ ಸಂಸದರು ಮತ್ತು ಶಾಸಕರು ಮತದಾನ ಮಾಡುತ್ತಾರೆ. ಇವರು ಪ್ರತಿನಿಧಿಸುವ ಕ್ಷೇತ್ರಗಳ ಜನಸಂಖ್ಯೆಯನ್ನಾಧರಿಸಿ ಇವರ ಮತಗಳಿಗೆ ತೂಕ ವ್ಯತ್ಯಾಸವಾಗುತ್ತದೆ. ಅದರಂತೆ ಬಿಜೆಪಿ ಬಳಿ ಈಗ 4,74,102 ಮತಗಳಿವೆ. ರಾಷ್ಟ್ರಪತಿ ಚುನಾವಣೆಯಲ್ಲಿ 10,98,903 ಮತಗಳು ಚಲಾವಣೆಯಾಗುತ್ತವೆ. ಬಿಜೆಪಿಗೆ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಇದರ ಅರ್ಧದಷ್ಟು ಅಂದರೆ 5,49,452 ಮತಗಳು ಬೇಕಾಗುತ್ತವೆ.

ಹೀಗಾಗಿ ಜೆಡಿಯು, ಆರ್‌ಪಿಐ, ಅಪ್ನಾದಳ್‌, ಎಲ್‌ಜೆಪಿ ಮುಂತಾದ ಎನ್‌ಡಿಎ ಅಂಗಪಕ್ಷಗಳ ಜೊತೆಗೆ ಎಐಎಡಿಎಂಕೆ, ಬಿಜು ಜನತಾ ದಳ, ವೈಎಸ್‌ಆರ್‌ ಕಾಂಗ್ರೆಸ್‌, ಟಿಎಆರ್‌ಎಸ್‌ ಮುಂತಾದ ಬಿಜೆಪಿ ಕಡೆ ಒಲವಿರುವ ಪಕ್ಷಗಳ ಮತಗಳೂ ಅಗತ್ಯ ಬೀಳುತ್ತವೆ. ಈ ಕಾರಣಕ್ಕಾಗಿ ಮತ್ತು ಮುಂಬರುವ ಉತ್ತರ ಪ್ರದೇಶದ ಚುನಾವಣೆ ಮತ್ತು ಮುಂದಿನ ವರ್ಷದ ಜೂನ್‌ ಒಳಗೆ ನಡೆಯುವ 41 ರಾಜ್ಯಸಭೆ ಸ್ಥಾನಗಳ ಚುನಾವಣೆಗಾಗಿ ಬಿಜೆಪಿ ತನ್ನ ಮಿತ್ರ ಪಕ್ಷಗಳನ್ನು ಓಲೈಸುತ್ತಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸಂಸದರು ಮಾತ್ರ ಮತದಾನ ಮಾಡುತ್ತಾರೆ. ಶಾಸಕರು ಮತದಾನ ಮಾಡುವುದಿಲ್ಲ. ಇನ್ನು, ರಾಜ್ಯಸಭೆಯಲ್ಲಿ ಈಗಲೂ ಬಿಜೆಪಿಗೆ ಬಹುಮತವಿಲ್ಲ. ರಾಜ್ಯಸಭೆಯ 41 ಸೀಟುಗಳ ಚುನಾವಣೆಯ ನಂತರ ಹಾಗೂ ಉತ್ತರ ಪ್ರದೇಶ ಮತ್ತು ಪಂಜಾಬ್‌ನ ವಿಧಾನಸಭೆ ಚುನಾವಣೆಯ ನಂತರ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಯ ಮತಗಳ ಲೆಕ್ಕಾಚಾರ ಬದಲಾಗುತ್ತದೆ. ಆದರೂ ಬಿಜೆಪಿಗೆ ಮಿತ್ರ ಪಕ್ಷಗಳ ನೆರವು ಬೇಕಾಗುತ್ತದೆ ಎಂದು ಹೇಳಲಾಗಿದೆ.

Close

click me!