ಕೃಷಿ ಕಾಯ್ದೆ ವಾಪಸ್, ಮೋದಿ ನಿರ್ಧಾರವನ್ನು ಸ್ವಾಗತಿಸಿದ ನಾಯಕರು, ಟಿಕಾಯತ್ ಹೇಳಿದ್ದು ಹೀಗೆ

By Suvarna NewsFirst Published Nov 19, 2021, 10:47 AM IST
Highlights

* ಮೂರು ಕೃಷಿ ಕಾಯ್ದೆ ಹಿಂಪಡೆದ ಪ್ರಧಾನಿ ನರೇಂದ್ರ ಮೋದಿ
* ಭಾರತೀಯ ಕಿಸಾನ್ ಯೂನಿಯನ್ ನಾಯಕ  ರಾಕೇಶ್ ಟಿಕಾಯತ್ ಪ್ರತಿಕ್ರಿಯೆ
 * ಕೃಷಿ ಕಾಯ್ದೆ ಹಿಂಪಡೆದಿದ್ದಕ್ಕೆ ನಾಯಕರ ಅಭಿಪ್ರಾಯಗಳು ಹೀಗಿವೆ

ನವದೆಹಲಿ, (ನ.19): ಕೇಂದ್ರ ಸರ್ಕಾರ ಕೊನೆಗೂ ದೆಹಲಿ ಗಡಿಭಾಗದಲ್ಲಿ ಹೋರಾಟ ನಡೆಸುತ್ತಿದ್ದ ಹಾಗೂ ದೇಶದ ಹಲವು ರಾಜ್ಯಗಳ ರೈತರು ವಿರೋಧಿಸುತ್ತಿದ್ದ ಮೂರು ನೂತನ ಕೃಷಿ ಕಾಯ್ದೆಗಳನ್ನು (farmer laws) ವಾಪಸ್ ಪಡೆಯುವ ಮಹತ್ವದ ನಿರ್ಧಾರವನ್ನು ಮಾಡಿದೆ. 

ಇಂದು(ನ.19) ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi), 3 ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯಲಾಗುವುದು. ಈ ತಿಂಗಳ ಅಂತ್ಯದಲ್ಲಿ ಸಂಸತ್ತಿನ ಚಳಿಗಾಲ ಅಧಿವೇಶನ ಆರಂಭವಾಗುತ್ತಿದ್ದು ಅದರಲ್ಲಿಯೇ 3 ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ಮೋದಿ ಪ್ರಕಟಿಸಿದ್ದಾರೆ. ಇನ್ನು ಮೋದಿಯ ಮಹತ್ವದ ನಿರ್ಧಾರವನ್ನು ಕ್ಯಾಪ್ಟನ್ ಅಮರಿಂದರ ಸಿಂಗ್ ಸೇರಿದಂತೆ ಹಲವು ನಾಯಕರು ಟ್ವೀಟ್‌ ಮೂಲಕ ಸ್ವಾಗತ ಮಾಡಿದ್ದಾರೆ. ಅಲ್ಲದೇ ಮೋದಿಗೆ ಧನ್ಯವಾದ ಹೇಳಿದ್ದಾರೆ.

"

PM Address to Nation: ಕೃಷಿ ಕಾಯ್ದೆ ಹಿಂಪಡೆಯುವುದಾಗಿ ಘೋಷಿಸಿದ ಪ್ರಧಾನಿ ಮೋದಿ

ರಾಕೇಶ್ ಟಿಕಾಯತ್ ಪ್ರತಿಕ್ರಿಯೆ
 ರೈತರ ಆಂದೋಲನ ತಕ್ಷಣವೇ ಹಿಂಪಡೆಯುವುದಿಲ್ಲ, ಸಂಸತ್ತಿನಲ್ಲಿ ಕೃಷಿ ಕಾನೂನುಗಳನ್ನು ರದ್ದುಪಡಿಸುವ ದಿನಕ್ಕಾಗಿ ನಾವು ಕಾಯುತ್ತೇವೆ. ಎಂಎಸ್​​ಪಿ ಜೊತೆಗೆ ಸರ್ಕಾರವು ರೈತರ ಇತರ ಸಮಸ್ಯೆಗಳನ್ನು ಚರ್ಚಿಸಬೇಕು ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ (Rakesh Tikait) ಟ್ವೀಟ್ ಮಾಡಿದ್ದಾರೆ. ಮೂರು ವಿವಾದಾತ್ಮಕ ಕೃಷಿ ಮಸೂದೆಗಳನ್ನು ಹಿಂಪಡೆಯುವ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆ ಆರಂಭವಷ್ಟೇ ಎಂದು ಹೇಳಿದ  ರಾಕೇಶ್ ಟಿಕಾಯತ್, ಸಂಸತ್ತಿನಲ್ಲಿ ನಿರ್ಧಾರವನ್ನು ಅಂಗೀಕರಿಸಿದ ನಂತರವೇ ಪ್ರತಿಭಟನಾ ನಿರತ ರೈತರು ತಮ್ಮ ಮನೆಗಳಿಗೆ ಮರಳುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.

Modi Withdraws Farm Bills ವಿವಾದಿತ ಕೃಷಿ ಕಾಯ್ದೆ ಪ್ರಧಾನಿ ಮೋದಿ ಹಿಂಪಡೆಯಲು ಕಾರಣವೇನು..?

ರೈತರು ಅಹಂಕಾರವನ್ನು ಸೋಲಿಸಿದ್ದಾರೆ ಎಂದ ರಾಹುಲ್
ವಿವಾದಿತ ಮೂರು ಕೃಷಿ ಮಸೂದೆಗಳ ಕೇಂದ್ರ ಸರ್ಕಾರ ರದ್ದು ಮಾಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿಯವರು, ಸತ್ಯಾಗ್ರಹದ ಮೂಲಕ ದೇಶದ ರೈತರು 'ಅಹಂಕಾರ'ವನ್ನು ಸೋಲಿಸಿದ್ದಾರೆ. ಅನ್ಯಾಯದ ವಿರುದ್ಧ ಪಡೆದ ಗೆಲುವಿನ ಶುಭಾಶಯಗಳು, ಜೈ ಹಿಂದ್, ಜೈ ಹಿಂದ್ ಕಿಸಾನ್ ಎಂದು ಟ್ವೀಟ್ ಮಾಡಿದ್ದಾರೆ.

ಖರ್ಗೆ ಮಾತು
ಕೇಂದ್ರ ಸರ್ಕಾರದಿಂದ 3 ಕೃಷಿ ತಿದ್ದುಪಡಿ ಕಾಯ್ದೆ ವಾಪಸ್​ ತೆಗೆದುಕೊಂಡಿರುವುದು ರೈತರ ಹೋರಾಟಕ್ಕೆ ದೊರೆತ ವಿಜಯವಾಗಿದೆ. ಹೋರಾಟದಲ್ಲಿ 700ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ರೈತರು ಅನುಭವಿಸಿದ ಸಂಕಷ್ಟಗಳಿಗೆ ಯಾರು ಹೊಣೆ? ಸಂಸತ್ತಿನಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸುತ್ತೇವೆ ಎಂದು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 
 700ಕ್ಕೂ ಅಧಿಕ ರೈತರು ಹುತಾತ್ಮರಾಗಿ, ದೇಶದ ರೈತರು ಹಾಗೂ ಕೃಷಿಯನ್ನು ರಕ್ಷಿಸಿದ್ದಾರೆ. ಅವರನ್ನು ಮುಂದಿನ ಪೀಳಿಗೆ ಸ್ಮರಿಸುತ್ತದೆ. ಎಲ್ಲಾ ರೈತರಿಗೆ ನನ್ನ ನಮನಗಳು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್
 ಮುಂಬರುವ ಉತ್ತರ ಪ್ರದೇಶ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡ ಈ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ ಎಂದು ಟೀಕಿಸಿದ್ದಾರೆ. ಜೊತೆಗೆ ಅವರು, ಇದು ರೈತರ ಹೋರಾಟದ ವಿಜಯ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್  ತಿಳಿಸಿದ್ದಾರೆ.

ಕ್ಯಾಪ್ಟನ್ ಅಮರಿಂದರ ಸಿಂಗ್
ಪ್ರತಿ ಪಂಜಾಬಿಗಳ ಬೇಡಿಕೆಗಳಿಗೆ ಸ್ಪಂದಿಸಿರುವುದಕ್ಕೆ ಮತ್ತು ಗುರುನಾನಕ್ ಜಯಂತಿಯ ಸಂದರ್ಭದಲ್ಲಿ 3 ಬ್ಲ್ಯಾಕ್ ಕಾನೂನುಗಳನ್ನು ರದ್ದುಗೊಳಿಸಿದ್ದಕ್ಕಾಗಿ ಧನ್ಯವಾದಗಳು. ರೈತರ ಏಳಿಗಾಗಿ ಕೇಂದ್ರ ಸರ್ಕಾರವು ಕೆಲಸ ನಿರ್ವಹಿಸಲಿದೆ ಎನ್ನುವ ಖಾತ್ರಿಯಿದೆ ಎಂದು ಕ್ಯಾಪ್ಟನ್ ಅಮರಿಂದರ ಸಿಂಗ್  ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡ
ಪ್ರಧಾನಿ ಮೋದಿ ಅವರ ತೀರ್ಮಾನವನ್ನು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಸ್ವಾಗತಿಸಿದ್ದು, 3 ಕಾನೂನುಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಕಾನೂನಿನ ವಿರುದ್ಧ ಪ್ರಜಾಸತ್ತಾತ್ಮಕವಾಗಿ ಪ್ರತಿರೋಧ ತೋರಿದ ಎಲ್ಲ ರೈತರಿಗೆ ನನ್ನ ಸೆಲ್ಯೂಟ್ ಎಂದಿದ್ದಾರೆ. ಅಲ್ಲದೇ 2020 ಸೆಪ್ಟೆಂಬರ್ ರಲ್ಲಿ ಸಂಸತ್ತಿನಲ್ಲಿ ಕೃಷಿ ಕಾನೂನುಗಳ ವಿರುದ್ಧ ಮಾಡಿದ ಭಾಷಣ ಹಾಗೂ ಚರ್ಚೆಯ ಪ್ರತಿಯನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

click me!