* ರೈತರ ಪ್ರತಿಭಟನೆಗೆ ಮಣಿದು ಕೃಷಿ ಕಾನೂನು ವಾಪಾಸ್ ಪಡೆದ ಪ್ರಧಾನಿ ಮೋದಿ
* ಗುರು ನಾನಕ್ ಜಯಂತಿಯಂದೇ ಪ್ರಧಾನಿ ಮೋದಿ ಮಹತ್ವದ ಘೋಷಣೆ
* ಮೋದಿ ಕೃಷಿ ಕಾನೂನು ಹಿಂಪಡೆಯಲು ಇಲ್ಲಿವೆ ನೋಡಿ 6 ಕಾರಣಗಳು
ಬೆಂಗಳೂರು(ನ.19): ಗುರು ನಾನಕ್ ಜಯಂತಿಯ ದಿನದಂದೇ ಪ್ರಧಾನಿ ನರೇಂದ್ರ ಮೋದಿ (Narendra Modi) ದೇಶದ ರೈತರನ್ನು ಉದ್ದೇಶಿಸಿ ಮಹತ್ವದ ಘೋಷಣೆ ಮಾಡಿದ್ದು, ವಿವಾದಿತ ಮೂರು ಕೃಷಿ ಕಾನೂನುಗಳನ್ನು (Farm Law) ಹಿಂಪಡೆಯುತ್ತಿರುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ ವರ್ಷಗಳ ರೈತರ ಹೋರಾಟಕ್ಕೆ (Farmers Protest) ಕೊನೆಗೂ ಗೆಲುವು ಸಿಕ್ಕಂತೆ ಆಗಿದೆ.ವಿರೋಧ ಪಕ್ಷಗಳು ಸೇರಿದಂತೆ ಹಲವರು ಮೋದಿ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಹೌದು, ನಾವು ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದೇವೆ. ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗುವ ಸಂಸತ್ ಅಧಿವೇಶನದಲ್ಲಿ, ಈ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಸಾಂವಿಧಾನಿಕ ಪ್ರಕ್ರಿಯೆಗಳನ್ನು ನಾವು ಪೂರ್ಣಗೊಳಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಮೋದಿ ಒಂದು ತೀರ್ಮಾನ ತೆಗೆದುಕೊಂಡರೆ ಎಷ್ಟೇ ಅಡ್ಡಿ ಆತಂಕಗಳು ಎದುರಾದರೂ ಅದರಿಂದ ಹಿಂದೆ ಸರಿಯುವುದಿಲ್ಲ ಎನ್ನುವ ಮಾತು ಇದೀಗ ಹುಸಿಯಾಗಿದೆ. ಆದರೆ ಏಕಾ ಏಕಿ ಮೋದಿ ಇಂದೇ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲು ಕಾರಣವೇನು ಎನ್ನುವುದನ್ನು ವಿಶ್ಲೇಷಿಸುವುದಾದರೇ,
undefined
PM Address to Nation: ಕೃಷಿ ಕಾಯ್ದೆ ಹಿಂಪಡೆಯುವುದಾಗಿ ಘೋಷಿಸಿದ ಪ್ರಧಾನಿ ಮೋದಿ
1. ರೈತರಿಂದ ವ್ಯಾಪಕ ವಿರೋಧ: ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಕಾನೂನಾದ ಮೂರು ಕೃಷಿ ಕಾಯ್ದೆಗಳು ಆರಂಭದಿಂದಲೇ ವ್ಯಾಪಕ ವಿರೋಧ ವ್ಯಕ್ತವಾಗಿದ್ದವು. ಒಂದು ಹಂತದಲ್ಲಿ ವಿರೋಧ ಪಕ್ಷಗಳು ಪ್ರತಿಭಟಿಸಿ ಸುಮ್ಮನಾದರೂ ಸಹಾ ರೈತರೂ ಹೋರಾಟವನ್ನು ಕೈಬಿಟ್ಟಿರಲಿಲ್ಲ. ವರ್ಷದಿಂದ ರೈತರು ಬೀದಿಬದಿಯಲ್ಲಿ ಕುಳಿತು ಪ್ರತಿಭಟಿಸುತ್ತಲೇ ಇದ್ದರು. ಹೀಗಾಗಿ ಕೊನೆಗೂ ರೈತರ ಪ್ರತಿಭಟನೆಗೆ ಮಣಿಸು ವಿವಾದಿತ ಕಾಯ್ದೆ ಹಿಂಪಡೆಯಲು ಮೋದಿ ತೀರ್ಮಾನಿಸಿದಂತಿದೆ.
2. ಉತ್ತರ ಪ್ರದೇಶ-ಪಂಜಾಬ್ ಚುನಾವಣೆ: ಇತ್ತೀಚೆಗಷ್ಟೇ ದೇಶಾದ್ಯಂತ ಮುಕ್ತಾಯವಾದ ಉಪಚುನಾವಣೆಯಲ್ಲಿ ಬಿಜೆಪಿ ಕೊಂಚ ಹಿನ್ನೆಡೆಯನ್ನು ಅನುಭವಿಸಿತ್ತು. ಮುಂದಿನ ವರ್ಷ ಉತ್ತರ ಪ್ರದೇಶ ಹಾಗೂ ಪಂಜಾಬ್‌ನಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಹಿನ್ನೆಡೆಯಾಗುವ ಸಾಧ್ಯತೆಗಳನ್ನು ಮನಗಂಡು ಮೋದಿ ಇಂತಹದ್ದೊಂದು ತೀರ್ಮಾನ ತೆಗೆದುಕೊಂಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
3. ರೈತರ ಮನ ಗೆಲ್ಲಲು ಗುರು ಪೂರಬ್ ದಿನವೇ ಘೋಷಣೆ: ಇಂದು ಸಿಖ್ ಸಮುದಾಯದ ಸಂತ ಗುರು ನಾನಕ್ ಅವರ ಜನ್ಮದಿನ. ನೂತನ ಮೂರು ಕೃಷಿ ಕಾಯಿದೆ ಜಾರಿಗೆ ಪಂಜಾಬ್‌ನಲ್ಲೇ ಅತಿಹೆಚ್ಚು ವಿರೋಧ ವ್ಯಕ್ತವಾಗಿತ್ತು. ರೈತರು ಮನೆ-ಮಠ ತೊರೆದು ಸರ್ಕಾರದ ಈ ವಿವಾದಿತ ಕಾನೂನಿನ ವಿರುದ್ದ ತಿರುಗಿ ಬಿದ್ದಿದ್ದರು. ಇದೀಗ ರೈತರ ಕೋಪ ಶಮನ ಮಾಡಲು ಗುರು ಪೂರಬ್ ದಿನ ಭರ್ಜರಿ ಗಿಫ್ಟ್ ನೀಡಿದ್ದಾರೆ.
4. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮಹತ್ವದ ನಿರ್ಧಾರ: ಮುಂಬರುವ ಚುನಾವಣೆಯ ಜತೆ ಜತೆಗೆ ದೇಶದ ಬೆನ್ನೆಲುಬು ಎನಿಸಿಕೊಂಡಿರುವ ರೈತರ ಮನಗೆಲ್ಲುವುದು ಪ್ರಧಾನಿ ಮೋದಿ ಅವರಿಗೆ ಅನಿವಾರ್ಯ ಎನಿಸುವ ಮಟ್ಟಿಗೆ ಪರಿಸ್ಥಿತಿ ನಿರ್ಮಾಣವಾಗಿತ್ತು. ದೇಶದ ಮೂಲೆ ಮೂಲೆಯಿಂದ ರೈತರು ಮೋದಿ ಸರ್ಕಾರದ ಈ ವಿವಾದಿತ ಕೃಷಿ ಕಾನೂನುಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ರೈತರನ್ನು ಎದುರು ಹಾಕಿಕೊಂಡರೆ ಭವಿಷ್ಯದಲ್ಲಿ ಪಕ್ಷದ ವರ್ಚಸ್ಸಿಗೆ ಹೊಡೆತ ಬೀಳಬಹುದು ಎನ್ನುವ ಮುನ್ನೆಚ್ಚರಿಕೆಯಿಂದ ಈ ಅಚ್ಚರಿಯ ತೀರ್ಮಾನ ಹೊರಬಿದ್ದಿರಬಹುದು.
5. ಮೋದಿ ತಾಯಿಗೆ ಪತ್ರ ಬರೆದಿದ್ದ ರೈತರು: ಕೃಷಿ ಕಾಯ್ದೆಯನ್ನು ರದ್ದುಪಡಿಸಲು ನೀವು ನಿಮ್ಮ ಮಗ ಮೋದಿಗೆ ತಿಳಿ ಹೇಳಿ ಎಂದು ಪತ್ರದ ಮೂಲಕ ಮನವಿ ಮಾಡಿದ್ದರು. ಮೈಕೊರೆಯುವ ಚಳಿಯಲ್ಲೂ ರೈತರು, ಮಕ್ಕಳು, ಮಹಿಳೆಯರು ರಸ್ತೆ ಬದಿಯಲ್ಲಿ ನಿಂತು ಪ್ರತಿಭಟನೆ ಮಾಡುತ್ತಿದ್ದಾರೆ. ನಾವು ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ನಿಮ್ಮೆಲ್ಲ ಶಕ್ತಿಯನ್ನು ಬಳಸಿ ಪ್ರಧಾನಿ ಮೋದಿಯವರ ಮನಸ್ಸು ಬದಲಿಸುವಂತೆ ಮಾಡಿ. ಹಾಗದಲ್ಲಿ ಇಡೀ ದೇಶವೇ ನಿಮಗೆ ಕೃತಜ್ಞತೆ ಸಲ್ಲಿಸಲಿದೆ ಎಂದು ಮನವಿ ಮಾಡಿದ್ದರು. ಈ ಪತ್ರ ಮೋದಿಯವರ ಮೇಲೆ ಪ್ರಭಾಗ ಬೀರಿರಬಹುದು.
6. ನವೆಂಬರ್ ತಿಂಗಳಿನಲ್ಲೇ 2 ಮಹತ್ವದ ಘೋಷಣೆ: ಪ್ರಧಾನಿ ನರೇಂದ್ರ ಮೋದಿ ನವೆಂಬರ್ ತಿಂಗಳಿನಲ್ಲಿ ಇದೀಗ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ. 2016ರ ನವೆಂಬರ್ 08ರಂದು ಪ್ರಧಾನಿ ಮೋದಿ 500 ಹಾಗೂ 1000 ರುಪಾಯಿ ಮುಖಬೆಲೆಯ ನೋಟು ಅಮಾನ್ಯೀಕರಣ ಮಾಡಿ ಮಹತ್ವದ ಘೋಷಣೆ ಮಾಡಿದ್ದರು. ಇದೀಗ ಹಲವು ತಿಂಗಳುಗಳಿಂದ ರೈತರು ಪ್ರತಿಭಟಿಸುತ್ತಿದ್ದರೂ ನವೆಂಬರ್ ತಿಂಗಳಿನಲ್ಲೇ ಮೋದಿ ಈ ಮಹತ್ವದ ತೀರ್ಮಾನ ತೆಗೆದುಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.