ದೇಶಾದ್ಯಂತ ಕೊರೋನಾ ಲಸಿಕೆ ತಾಲೀಮು

By Kannadaprabha NewsFirst Published Jan 1, 2021, 7:40 AM IST
Highlights

ದೇಶಾದ್ಯಂತ ಕೋವಿಡ್‌ 19 ಲಸಿಕೆ ನೀಡುವ ಅಣಕು ಅಭಿಯಾನ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತಾದ ಒಂದು ಡೀಟೈಲ್ಸ್‌ ಇಲ್ಲಿದೆ ನೋಡಿ.

ನವದೆಹಲಿ(ಜ.01): ನಾಲ್ಕು ರಾಜ್ಯಗಳಲ್ಲಿ ಕೆಲವೇ ದಿನಗಳ ಹಿಂದೆ ಕೊರೋನಾ ಲಸಿಕೆ ನೀಡುವ ಅಣಕು ಅಭಿಯಾನ ನಡೆಸಿದ್ದ ಕೇಂದ್ರ ಸರ್ಕಾರ ಇದೀಗ ಜ.2ರಂದು ಎಲ್ಲಾ ರಾಜ್ಯಗಳಲ್ಲೂ ಅಣಕು ಅಭಿಯಾನ ನಡೆಸುವುದಾಗಿ ಪ್ರಕಟಿಸಿದೆ. ದೇಶಾದ್ಯಂತ ಕೊರೋನಾ ಲಸಿಕೆ ವಿತರಿಸುವುದಕ್ಕೆ ಮಾಡಿಕೊಂಡಿರುವ ಸಿದ್ಧತೆಯನ್ನು ಪರಿಶೀಲಿಸಲು ಈ ಅಭಿಯಾನ ನಡೆಯಲಿದೆ.

ಜ.2ರಂದು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ತಮ್ಮ ರಾಜಧಾನಿಯಲ್ಲಿ ಕನಿಷ್ಠ 3 ಕೇಂದ್ರಗಳಲ್ಲಿ ಅಣಕು ಅಭಿಯಾನ ನಡೆಸಬೇಕು. ಕೆಲ ರಾಜ್ಯಗಳು ಬೇರೆ ಬೇರೆ ಜಿಲ್ಲಾ ಕೇಂದ್ರಗಳಲ್ಲೂ ಅಭಿಯಾನ ನಡೆಸುವುದಾಗಿ ಹೇಳಿವೆ. ಮಹಾರಾಷ್ಟ್ರ, ಕೇರಳದಂತಹ ರಾಜ್ಯಗಳು ತಮ್ಮ ರಾಜಧಾನಿಯಲ್ಲಿ ಮಾತ್ರವಲ್ಲದೆ ಇತರ ಕೆಲ ಪ್ರಮುಖ ನಗರಗಳಲ್ಲೂ ಅಣಕು ಅಭಿಯಾನ ನಡೆಸಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

ದೇಶದಲ್ಲಿ ಕೊರೋನಾ ಹರಡದಂತೆ ತಡೆಯುವ ಲಸಿಕೆಗೆ ಒಪ್ಪಿಗೆ ನೀಡುವ ಸಮಯ ಸನ್ನಿಹಿತವಾಗಿದ್ದು, ಅದರ ಬೆನ್ನಲ್ಲೇ ಲಸಿಕೆ ವಿತರಣೆಗೆ ರೂಪಿಸಲಾದ ವ್ಯವಸ್ಥೆ ಎಷ್ಟುಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಪರೀಕ್ಷಿಸಲು ಡಿ.28 ಹಾಗೂ 29ರಂದು ಆಂಧ್ರಪ್ರದೇಶ, ಅಸ್ಸಾಂ, ಗುಜರಾತ್‌ ಮತ್ತು ಪಂಜಾಬ್‌ನಲ್ಲಿ ಅಣಕು ಅಭಿಯಾನ ನಡೆದಿತ್ತು. ಅಲ್ಲಿ ಸಣ್ಣಪುಟ್ಟತೊಂದರೆಗಳಷ್ಟೇ ತಲೆದೋರಿದ್ದು, ಅಭಿಯಾನ ಯಶಸ್ವಿಯಾಗಿದೆ. ಹೀಗಾಗಿ ದೇಶಾದ್ಯಂತ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಜ.2ರಿಂದ ರಾಜ್ಯದ 5 ಜಿಲ್ಲೆಗಳಲ್ಲಿ ಕೊರೋನಾ ಲಸಿಕೆ ತಾಲೀಮು

ರಾಜಧಾನಿಯ ಪ್ರತಿ ಲಸಿಕಾ ಕೇಂದ್ರಕ್ಕೂ ಕನಿಷ್ಠ 25 ಆರೋಗ್ಯ ಕಾರ್ಯಕರ್ತರನ್ನು ಕೋ-ವಿನ್‌ ಅಪ್ಲಿಕೇಷನ್‌ ಮೂಲಕ ಲಸಿಕೆ ಪಡೆಯಲು ನೋಂದಣಿ ಮಾಡಿಸಬೇಕು. ನಂತರ ಅವರಿಗೆ ಆ್ಯಪ್‌ನಲ್ಲೇ ಸಮಯ ನೀಡಿ ಲಸಿಕೆ ಕೇಂದ್ರಕ್ಕೆ ಕರೆಸಿಕೊಳ್ಳಬೇಕು. ಆ ಮಾಹಿತಿಯನ್ನು ಮತ್ತೆ ಆ್ಯಪ್‌ಗೆ ಅಪ್‌ಲೋಡ್‌ ಮಾಡಬೇಕು ಎಂದು ಸಚಿವಾಲಯ ಸೂಚಿಸಿದೆ.

ಲಸಿಕೆ ವಿತರಣೆಗೆ ರೆಡಿ

96000 ಲಸಿಕೆ ವಿತರಕರಿಗೆ ಇಲ್ಲಿಯವರೆಗೆ ತರಬೇತಿ

2360 ಮಂದಿಗೆ ನ್ಯಾಷನಲ್‌ ಟ್ರೇನಿಂಗ್‌ ಆಫ್‌ ಟ್ರೇನರ್ಸ್‌ನಲ್ಲಿ ತರಬೇತಿ

57,000 ಮಂದಿಗೆ ಜಿಲ್ಲಾ ಮಟ್ಟದಲ್ಲಿ ತರಬೇತಿ

719 ಜಿಲ್ಲೆಗಳಲ್ಲಿ ಕೊರೋನಾ ಲಸಿಕೆ ವಿತರಣೆಗೆ ಸಿದ್ಧತೆ

click me!