ಜಾತಿಗಳ ಮಧ್ಯೆ ಒಡಕಿಗೆ ಕಾಂಗ್ರೆಸ್‌ ಸಂಚು, ಎಲ್ಲರೂ ಒಗ್ಗಟ್ಟಾಗಿದ್ದರಷ್ಟೇ ಸುರಕ್ಷಿತ: ಪ್ರಧಾನಿ ಮೋದಿ

By Kannadaprabha News  |  First Published Nov 11, 2024, 10:18 AM IST

ಜಾರ್ಖಂಡ್‌ನಲ್ಲಿ ಒಬಿಸಿಗಳನ್ನು ಒಡೆಯಲು ಕಾಂಗ್ರೆಸ್-ಜೆಎಂಎಂ ಮೈತ್ರಿ ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. 


ಒಬಿಸಿಯನ್ನು ವಿಭಜಿಸಲು ಕಾಂಗ್ರೆಸ್ ಯತ್ನ । ಒಗ್ಗಟ್ಟಿಲ್ಲದಿದ್ದಾಗೆಲ್ಲಾ ಕಾಂಗ್ರೆಸ್ ಜಯ “ಏಕ್ ರಹೋಗೆ ತೋ ಸೇಫ್ ರಹೋಗೆ': ಜಾರ್ಖಂಡ್‌ಗೆ ಪಿಎಂ ಮೋದಿಯ ಮಂತ್ರ

ಬೊಕಾರೋ: ಉಪ ಪಂಗಡಗಳನ್ನುಪರಸ್ಪರ ಎತ್ತಿ ಕಟ್ಟುವ ಮೂಲಕ ಕಾಂಗ್ರೆಸ್- ಜೆಎಂಎಂ ಮಿತ್ರ ಕೂಟ ಜಾರ್ಖಂಡ್‌ನಲ್ಲಿ ಒಬಿಸಿಗಳನ್ನು ಒಡೆಯಲು ಯತ್ನಿಸುತ್ತಿದೆ. ಹೀಗಾಗಿ ಎಲ್ಲರೂ ಒಟ್ಟಾಗಿದ್ದರೆ ಸುರಕ್ಷಿತವಾಗಿರುತ್ತೀರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಪ್ರಚಾರದವೇಳೆ 'ಏಕ್ ಹೈ ತೋಸೇಫ್ ಹೈ' (ಒಗ್ಗಟ್ಟಿಂದ ಇದ್ದರೆ ಸುರಕ್ಷಿತ) ಎಂಬ ಮಂತ್ರ ಬೋಧಿಸಿದ್ದ ಮೋದಿ ಅವರು ಜಾರ್ಖಂಡ್ ಚುನಾವಣಾ ಪ್ರಚಾರದ ವೇಳೆ ಭಾನುವಾರ 'ಏಕ್ ರಹೋಗೆ ತೋ ಸೇಫ್‌ ರಹೋಗೆ'(ಒಟ್ಟಾಗಿದ್ದರೆಸುರಕ್ಷಿತವಾ ಗಿರುತ್ತೀರಿ) ಎಂದು ಹೇಳಿದರು.

Latest Videos

ಕಾಂಗ್ರೆಸ್- ಜೆಎಂಎಂ ಮಿತ್ರ ಕೂಟದ ದುಷ್ಟ ಯೋಜನೆ ಹಾಗೂ ಸಂಚುಗಳ ಬಗ್ಗೆ ಎಚ್ಚರದಿಂದ ಇರಿ. ಅಧಿಕಾರ ಕಸಿಯಲು ಅವರು ಯಾವುದೇ ಹಂತಕ್ಕೆ ಬೇಕಾದರೂ ಹೋಗುತ್ತಾರೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಎಸ್ಸಿ, ಎಸ್ಟಿ ಹಾಗೂ ಒಬಿಸಿ ಒಗ್ಗಟ್ಟಿಗೆ ಕಾಂಗ್ರೆಸ್ ವಿರುದ್ಧವಾಗಿತ್ತು. ಒಗ್ಗಟ್ಟು ಮೂಡುವವರೆಗೂ ಕಾಂಗ್ರೆಸ್‌ ಕೇಂದ್ರದಲ್ಲಿ ಸರ್ಕಾರ ರಚಿಸಿ, ದೇಶವನ್ನು ಲೂಟಿ ಹೊಡೆಯಿತು ಎಂದು ಬೊಕಾರೋದಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಟೀಕಾ ಪ್ರಹಾರ ನಡೆಸಿದರು.

ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್ ಹಾಗೂ ಅದರಮಿತ್ರ ಪಕ್ಷಗಳು ಸಂವಿಧಾನದ 370ನೇ ವಿಧಿಯನ್ನು ಮರು ತರಲು ಬಯಸುತ್ತಿವೆ. ತನ್ಮೂಲಕ ಭಯೋತ್ಪಾದನೆಯ ಬೆಂಕಿಯ ಬಿಸಿಯನ್ನು ನಮ್ಮ ಯೋಧರು ಎದುರಿಸುವಂತಾಗಲಿ ಎಂದು ಬಯಸು ತ್ತಿವೆ. 370ನೇವಿಧಿಯನ್ನು ಜಮ್ಮು-ಕಾಶ್ಮೀರದಲ್ಲಿ ಮೋದಿ ಹೂತಿದ್ದರಿಂದಾಗಿ ಏಳು ದಶಕಗಳ ಬಳಿಕ ಅಂಬೇಡ್ಕರ್ ಸಂವಿಧಾನ ಆ ರಾಜ್ಯದಲ್ಲಿ ಜಾರಿಗೆ ಬಂದಿದೆ. ಜಮ್ಮು-ಕಾಶ್ಮೀರ ಮುಖ್ಯಮಂತ್ರಿಯೊಬ್ಬರು ಮೊದಲ ಬಾರಿಗೆ ಸಂವಿಧಾನದ ಹೆಸರಿನಲ್ಲಿ ಶಪಥ ಮಾಡುತ್ತಾರೆ ಎಂದು ಮೋದಿ ಹೇಳಿದರು.

ಮುಸ್ಲಿಮರಿಗೆ ಮೀಸಲು ಹೆಚ್ಚಿಸಲು ಕೈ ಸಂಚು: ಶಾ

ಜಲಗಾಂವ್: ಮಹಾರಾಷ್ಟ್ರದ ಸಾಮಾಜಿಕ ವ್ಯವಸ್ಥೆಯನ್ನು ಬಲಿಕೊಟ್ಟು ವಿಪಕ್ಷಗಳ ಕೂಟವಾದ ಮಹಾವಿಕಾಸ್ ಅಘಾಡಿ (ಎಂವಿಎ) ತುಷ್ಟಿಕರಣದ ರಾಜಕೀಯದಲ್ಲಿ ತೊಡಗಿದೆ. ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲು ನೀಡಿ ಇತರರ ಮೀಸಲು ಕಿತ್ತುಕೊಳ್ಳುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಆರೋಪಿಸಿದ್ದಾರೆ.
ಜಲಗಾಂವ್‌ನ ರೇವರ್‌ ಕ್ಷೇತ್ರದಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಶಾ, 'ಮುಸ್ಲಿಂ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10ರಷ್ಟು ಮೀಸಲು ಕೋರಿ ಉಲೇಮಾ ಅಸೋಸಿಯೇಷನ್ ಕಾಂಗ್ರೆಸ್‌ಗೆ ಮನವಿ ಸಲ್ಲಿಸಿದೆ. ಇದಕ್ಕೆ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಒಪ್ಪಿದ್ದಾರೆ. ಮುಸ್ಲಿಮರಿಗೆ ಶೇ.10ರಷ್ಟು ಮೀಸಲು ನೀಡಿದರೆ ಅದು ದಲಿತರು, ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ ಪ್ರಯೋಜನಗಳನ್ನೇ ಆಪೋಶನ ತೆಗೆದುಕೊಳ್ಳುತ್ತದೆ. ಏಕೆಂದರೆ ಮೀಸಲಿಗೆ ಶೇ.50ರ ಮಿತಿ ಇದೆ' ಎಂದು ವಿಶ್ಲೇಷಿಸಿದರು.  ಬಿಜೆಪಿ ಎಲ್ಲ ಸಮುದಾಯಗಳ ಕಲ್ಯಾಣಕ್ಕೆ ದೃಢವಾಗಿ ಬದ್ಧ. ಆದರೆ ಮುಸ್ಲಿಮರಿಗೆ ಯಾವುದೇ ರೀತಿಯ ಮೀಸಲಾತಿಯನ್ನು ಕಟ್ಟುನಿಟ್ಟಾಗಿ ವಿರೋಧಿಸುತ್ತದೆ. ಇದು ನಮ್ಮ ಬದ್ಧತೆ' ಎಂದು ಶಾ ನುಡಿದರು.

click me!