500 ಕೋಟಿ ಊಟ ದಾನ ಮಾಡಿದ ಅಕ್ಷಯಪಾತ್ರ: ಗೌರವಾನ್ವಿತ ರಾಷ್ಟ್ರಪತಿ ದೌಪದಿ ಮುರ್ಮು ಅವರಿಂದ ಶ್ಲಾಘನೆ

Published : Apr 24, 2026, 09:28 PM IST
akshaya patra foundation

ಸಾರಾಂಶ

ಇತ್ತೀಚೆಗೆ ನವದೆಹಲಿಯ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಅಕ್ಷಯಪಾತ್ರ ಫೌಂಡೇಶನ್ 500 ಕೋಟಿ ಊಟ ದಾನ ಮಾಡಿದ ಸಾಧನೆಯನ್ನು ಮತ್ತು ಸಂಸ್ಥೆಯ ಬೆಳ್ಳಿ ಹಬ್ಬ ಸಂಭ್ರಮವನ್ನು ಆಚರಿಸಲಾಯಿತು.

ನವದೆಹಲಿ (ಏ.24): ಮಧ್ಯಾಹ್ನದ ಬಿಸಿಯೂಟ ಪೂರೈಸುವ ಮಹೋನ್ನತ ಕಾರ್ಯ ನೆರವೇರಿಸುತ್ತಿರುವ ಅಕ್ಷಯಪಾತ್ರ ಫೌಂಡೇಶನ್ 500 ಕೋಟಿ ಊಟ ದಾನ ಮಾಡಿದ್ದು, ಇತ್ತೀಚೆಗೆ ನವದೆಹಲಿಯ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ 500 ಕೋಟಿ ಊಟ ದಾನ ಮಾಡಿದ ಸಾಧನೆಯನ್ನು ಮತ್ತು ಸಂಸ್ಥೆಯ ಬೆಳ್ಳಿ ಹಬ್ಬ ಸಂಭ್ರಮವನ್ನು ಆಚರಿಸಲಾಯಿತು. ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದೌಪದಿ ಮುರ್ಮು ಅವರು 500ನೇ ಕೋಟಿಯ ಊಟವನ್ನು ಬಡಿಸುವ ಮೂಲಕ ಸಂಸ್ಥೆಯ ಸಾಧನೆಗೆ ಶ್ಲಾಘನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್, ಅಕ್ಷಯಪಾತ್ರದ ಸಂಸ್ಥಾಪಕರಾದ ಇಸ್ಕಾನ್ ಬೆಂಗಳೂರಿನ ಅಧ್ಯಕ್ಷರಾದ ಶ್ರೀ ಮಧು ಪಂಡಿತ ದಾಸ ಮತ್ತು ಉಪಾಧ್ಯಕ್ಷರಾದ ಶ್ರೀ ಚಂಚಲಪತಿ ದಾಸ ಅವರು ಉಪಸ್ಥಿತರಿದ್ದರು. ಶ್ರೀ ಮಧು ಪಂಡಿತ್ ದಾಸ ಅವರು ಮಾತನಾಡಿ, "ಇಂದಿನ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದ ಗೌರವಾನ್ವಿತ ರಾಷ್ಟ್ರಪತಿಗಳಿಗೆ ನಾನು ಹೃತ್ತೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಗೌರವಾನ್ವಿತ ಶಿಕ್ಷಣ ಸಚಿವರಿಗೆ ಮತ್ತು ಇತರ ಎಲ್ಲಾ ಗಣ್ಯರಿಗೂ ಧನ್ಯವಾದಗಳು.

ಮಾನವಕುಲಕ್ಕೆ ಅಕ್ಷಯಪಾತ್ರದ 25 ವರ್ಷಗಳ ಸೇವೆ ಮತ್ತು 500 ಕೋಟಿ ಊಟಗಳನ್ನು ಬಡಿಸಿದ ಮಹತ್ವದ ಕ್ಷಣವನ್ನು ಸ್ಮರಿಸುತ್ತಿರುವ ಈ ಸಂದರ್ಭದಲ್ಲಿ, 'ಯಾರೂ ಹಸಿವಿನಿಂದ ಇರಬಾರದು' ಎಂಬ ಶ್ರೀಲ ಪ್ರಭುಪಾದರ ಉದ್ದೇಶವನ್ನು ನೆನೆಯಲು ಬಯಸುತ್ತೇವೆ ಮತ್ತು ಈ ಉದ್ದೇಶ ಸಾಕಾರಕ್ಕಾಗಿ ಮುಂದೆಯೂ ಶ್ರಮಿಸುತ್ತೇವೆ. ಈ ಕಾರ್ಯಕ್ರಮವು ಅಕ್ಷಯಪಾತ್ರದ ಪ್ರತಿಯೊಬ್ಬರಿಗೂ ಇನ್ನಷ್ಟು ಹೆಚ್ಚಿನ ಉತ್ಸಾಹದಿಂದ ಮಕ್ಕಳಿಗೆ ಸೇವೆ ಸಲ್ಲಿಸಲು ಪ್ರೇರಣೆ ನೀಡಿದೆ'' ಎಂದು ತಿಳಿಸಿದರು.

ಅತ್ಯಂತ ಸಂತೋಷದ ವಿಷಯ

ಮಾತು ಮುಂದುವರಿಸಿದ ಅವರು, 'ಪಿಎಂ ಪೋಷಣ್ ಯೋಜನೆಯು ಮಕ್ಕಳ ಪೌಷ್ಟಿಕಾಂಶದ ಮಟ್ಟವನ್ನು ಸುಧಾರಿಸುವಲ್ಲಿ ಮತ್ತು ಅವರು ನಿಯಮಿತವಾಗಿ ಶಾಲೆಗೆ ಹಾಜರಾಗುವಂತೆ ಪ್ರೇರೇಪಿಸುವಲ್ಲಿ ನೆರವಾಗಿದೆ. ಈಗ ನಾವು ನಮ್ಮ ಈ ಆಹಾರ ವಿತರಣಾ ಸೇವೆಯನ್ನು ಭಾರತದ ಹೊರಗಿನ ಭೂಭಾಗಗಳಿಗೂ ವಿಸ್ತರಿಸಿದ್ದೇವೆ' ಎಂದು ಹೇಳಿದರು. ಶ್ರೀ ಚಂಚಲಪತಿ ದಾಸ ಅವರು ಮಾತನಾಡಿ, "ಅಕ್ಷಯಪಾತ್ರದ 25 ವರ್ಷಗಳ ಪಯಣದಲ್ಲಿ ಒಟ್ಟು 500 ಕೋಟಿ ಊಟಗಳನ್ನು ಬಡಿಸಿದ ಈ ಮಹತ್ವದ ಕ್ಷಣವನ್ನು ಎದುರುಗೊಂಡಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ.

ನಮ್ಮ ಎಲ್ಲಾ ಪ್ರಯತ್ನಗಳಿಗೆ ನಿರಂತರ ಬೆಂಬಲ ಮತ್ತು ಪ್ರೋತ್ಸಾಹ ನೀಡುತ್ತಿರುವ ಭಾರತ ಸರ್ಕಾರ ಹಾಗೂ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ, ದಾನಿಗಳಿಗೆ ನಾವು ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಅಕ್ಷಯಪಾತ್ರದ ಈ ಯಶಸ್ವಿ ಯೋಜನೆಯು ಇನ್ನೂ ಹೆಚ್ಚಿನ ಮಕ್ಕಳಿಗೆ ಪೌಷ್ಟಿಕಾಂಶ ಮತ್ತು ಶಿಕ್ಷಣವನ್ನು ಸುಲಭವಾಗಿ ಪಡೆಯಲು ಸಹಾಯ ಮಾಡುತ್ತದೆ ಮತ್ತು ಮುಂಬರುವ ವರ್ಷಗಳಲ್ಲಿ ಅವರು 'ನವ ಮತ್ತು ಅಭಿವೃದ್ಧಿ ಹೊಂದಿದ ಭಾರತ'ಕ್ಕೆ ಕೊಡುಗೆ ನೀಡಲು ಶಕ್ತರನ್ನಾಗಿ ಮಾಡುತ್ತದೆ ಎಂಬ ವಿಶ್ವಾಸ ನಮಗಿದೆ,' ಎಂದು ತಿಳಿಸಿದರು.

'ವಿಕಸಿತ ಭಾರತಕ್ಕಾಗಿ ಪೌಷ್ಠಿಕ ಮತ್ತು ಸುಶಿಕ್ಷಿತ ಭಾರತ' ಎಂಬ ಘೋಷವಾಕ್ಯದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಅಕ್ಷಯಪಾತ್ರದ ಟ್ರಸ್ಟಿಗಳು, ಹಿರಿಯ ಸರ್ಕಾರಿ ಅಧಿಕಾರಿಗಳು, ಗಣ್ಯರು, ಸಾರ್ವಜನಿಕ ನೀತಿ ನಿರೂಪಕರು, ದಾನಿಗಳು ಮತ್ತು ಪಾಲುದಾರರು ಭಾಗವಹಿಸಿದ್ದರು. ಅಕ್ಷಯಪಾತ್ರದ ಹಳೆಯ ಫಲಾನುಭವಿಗಳು, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಸರ್ಕಾರಿ ಶಾಲಾ ಸಿಬ್ಬಂದಿ ಸಹ ಉಪಸ್ಥಿತರಿದ್ದರು. ಆಚರಣೆಯ ಭಾಗವಾಗಿ ಗೌರವಾನ್ವಿತ ರಾಷ್ಟ್ರಪತಿಗಳು ಮಕ್ಕಳಿಗೆ ಉಡುಗೊರೆಗಳನ್ನು ನೀಡಿ, ಸ್ವತಃ ಊಟ ಬಡಿಸಿದರು.

ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಪಿಎಂ ಪೋಷಣೆ ಯೋಜನೆಯ ಅನುಷ್ಠಾನ ಪಾಲುದಾರರಾಗಿರುವ ಅಕ್ಷಯಪಾತ್ರ ಫೌಂಡೇಶನ್, ಭಾರತದಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಲಕ್ಷಾಂತರ ಮಕ್ಕಳಿಗೆ ತಾಜಾ ಮತ್ತು ಪೌಷ್ಟಿಕ ಆಹಾರವನ್ನು ನೀಡುತ್ತಿದೆ. ಈ ಸಂಸ್ಥೆಯು ಪ್ರಸ್ತುತ ಭಾರತದ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳ 78 ಸ್ಥಳಗಳಲ್ಲಿರುವ ತನ್ನ ಅತ್ಯಾಧುನಿಕ ಅಡುಗೆಮನೆಗಳ ಮೂಲಕ 23.5 ಲಕ್ಷ ಮಕ್ಕಳಿಗೆ ಆಹಾರವನ್ನು ನೀಡುತ್ತಿದೆ. 2030ರ ವೇಳೆಗೆ ಪ್ರತಿದಿನ 30 ಲಕ್ಷ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಗುರಿಯನ್ನು ಸಂಸ್ಥೆ ಹೊಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇದು ನನ್ನ ಮಗು, ನಿಮ್ಗೆ ಕೊಡಲ್ಲ: ಮನೆಗೆ ನುಗ್ಗಿ 3 ತಿಂಗಳ ಕಂದನ ಹಿಡಿದಿಟ್ಟುಕೊಂಡ ಕೋತಿ- ವಿಡಿಯೋ ವೈರಲ್​
ಮಾರಾಟಕ್ಕಿದೆ ಈ ಪರೀಕ್ಷಾ ಕೇಂದ್ರ! 300 ರೂ. ಕೊಟ್ರೆ ಸಾಕು, ಓದದೇ IAS, IPS, IFS ಅಧಿಕಾರಿಯಾಗಲು ದಾರಿ