
ಜೋಗುಳ ಹಾಡಿ ಮಲಗಿಸಿದವಳೇ ಕೊಲೆ ಮಾಡಿದಳು
ಅಜ್ಮೇರ್: ದೇವರು ಬರೆದ ಕತೆಯಲ್ಲಿ ತಾಯಿಯ ಪ್ರೀತಿಯೇ ಮೊದಲಿಲ್ಲಿ, ಹೆತ್ತವಳು ಬರೆದ ಕತೆಯಲ್ಲಿ ಕಂದನ ಪ್ರೀತಿಯೇ ಮೊದಲಿಲ್ಲಿ.... ಹೀಗೆ ಅಮ್ಮ ಹಾಗೂ ಆಕೆಗೆ ಮಕ್ಕಳ ಮೇಲಿರುವ ಪ್ರೀತಿಯನ್ನು ಬಣ್ಣಿಸಿ ಬರೆದ ಒಂದು ಕನ್ನಡದ ನೀಲಕಂಠ ಸಿನಿಮಾದ ಹಾಡಿದು. ಅಮ್ಮ ಮಕ್ಕಳ ಬಾಂಧವ್ಯ ಹಾಗೂ ಅಮ್ಮನ ಪ್ರೀತಿಯನ್ನು ಸಾರುವ ನೂರಾರು ಸಿನಿಮಾ ಗೀತೆಗಳಿವೆ, ಜಾನಪದ ಹಾಡುಗಳಿವೆ. ಅಮ್ಮನ ಪ್ರೀತಿ ಅಂತದ್ದು ಎಂಬುದನ್ನು ನಮ್ಮ ಸಾಹಿತಿಗಳು ಕವಿಗಳು ಅಷ್ಟೊಂದು ಅಮೋಘವಾಗಿ ಬಣ್ಣಿಸಿದ್ದಾರೆ. ಆದರೆ ಕಾಲದ ಮಹಿಮೆಯೋ ಏನೋ ತಿಳಿಯದು ಇದೆಲ್ಲ ಭಾವನೆಗಳನ್ನು ಸುಳ್ಳು ಮಾಡುವ ಹಲವು ಘಟನೆಗಳು ನಡೆಯುತ್ತಿವೆ. ಒಂಭತ್ತು ತಿಂಗಳು ಹೊತ್ತು ಹೆತ್ತ ತಾಯಿಯೇ, ಜೋಗುಳ ಹಾಡಿ ಮಗುವನ್ನು ನಿದ್ರೆ ಮಾಡುವಂತೆ ಮಾಡಿದವಳೇ ಮಕ್ಕಳನ್ನು ಬಾರದ ಲೋಕಕ್ಕೆ ಅಟ್ಟುತ್ತಿದ್ದಾಳೆ. ಇಂತಹ ಪ್ರಕರಣಗಳ ಸಂಖ್ಯೆ ಈಗ ಹೆಚ್ಚಾಗುತ್ತಿದ್ದು, ಇಂತಹ ಮತ್ತೊಂದು ಘಟನೆ ಈಗ ರಾಜಸ್ಥಾನದ ಅಜ್ಮೇರ್‌ನಲ್ಲಿ ನಡೆದಿದೆ.
ಮಗುವಿನ ಬಗ್ಗೆ ಅಂಜಲಿಗೆ ಹಂಗಿಸುತ್ತಿದ್ದ ಲವರ್...
ಜೋಗುಳ ಹಾಡಿ ನಿದ್ದೆ ಮಾಡಿಸಿದ ತಾಯಿಯೇ ನಂತರ ಮಗುವನ್ನು ಎತ್ತಿಕೊಂಡು ಹೋಗಿ ಕೆರೆಗೆ ಎಸೆದು ಸಾಯಿಸಿದ ಆಘಾತಕಾರಿ ಘಟನೆ ರಾಜಸ್ಥಾನದ ಅಜ್ಮೇರ್‌ನಲ್ಲಿ ನಡೆದಿದೆ. ನಂತರ ಮಗು ಕಾಣೆಯಾಗಿದೆ ಎಂದು ಆಕೆ ನಾಟಕ ಮಾಡಲು ಶುರು ಮಾಡಿದ್ದಾಳೆ. ಅಂಜಲಿ ಎಂಬಾಕೆಯೇ ಹೀಗೆ ಮಗುವನ್ನು ಕೆರೆಗೆ ಎಸೆದು ಸಾಯಿಸಿದ ಮಹಿಳೆ. ಅಂಜಲಿ ವಿವಾಹಿತೆಯಾಗಿದ್ದು, ದಾಂಪತ್ಯ ಕಲಹದ ನಂತರ ದಂಪತಿ ಪರಸ್ಪರರ ದೂರವಾಗಿದ್ದಳು. ಗಂಡನನ್ನು ತೊರೆದ ನಂತರ ಈಕೆ ಅಜ್ಮೇರ್‌ನಲ್ಲಿ ಬೇರೊಂದು ವ್ಯಕ್ತಿಯ ಜೊತೆ ವಾಸ ಮಾಡುತ್ತಿದ್ದಳು. ಆದರೆ ಆ ವ್ಯಕ್ತಿ ಈಕೆಯ ಮೊದಲ ಮದುವೆಯಿಂದ ಜನಿಸಿದ ಮಗಳನ್ನು ಇಷ್ಟಪಡದೇ ಯಾವಾಗಲೂ ಕೊಂಕು ಮಾತನಾಡುತ್ತಿದ್ದ ಎನ್ನಲಾಗಿದೆ. ಗೆಳೆಯನ ಕೊಂಕು ಮಾತಿನಿಂದ ಅಂಜಲಿ ರೋಸಿ ಹೋಗಿದ್ದಳು. ಇದೇ ಕಾರಣಕ್ಕೆ ಮಗುವನ್ನು ಆಕೆ ಸಾಯಿಸುವ ನಿರ್ಧಾರ ಮಾಡಿದ್ದಾಳೆ.
ಮಗುವನ್ನು ಕೆರೆಗೆ ಎಸೆದು ನಾಪತ್ತೆಯಾಗಿದೆ ಎಂದು ನಾಟಕವಾಡಿದ ಅಂಜಲಿ
ಇದೇ ನಿರ್ಧಾರ ಮಾಡಿ ಮಗುವನ್ನು ಜೋಗುಳ ಹಾಡಿ ಮಲಗಿಸಿದ ಈ ತಾಯಿ ನಂತರ ಆಕೆ ನಿದ್ದೆಗೆ ಜಾರಿದ ಮೇಲೆ ಎತ್ತಿಕೊಂಡು ಹೋಗಿ ಕೆರೆಗೆ ಎಸೆದಿದ್ದಾಳೆ. ಮಂಗಳವಾರ ರಾತ್ರಿ ಪೊಲೀಸ್ ಕಾನ್ಸ್‌ಟೇಬಲ್ ಗೋವಿಂದ್ ಶರ್ಮಾ ಪಟ್ರೋಲಿಂಗ್ ಮಾಡ್ತಿದ್ದ ವೇಳೆ ಈ ಅಂಜಲಿ ಹಾಗೂ ಆಕೆಯ ಪ್ರಿಯಕರ ರಸ್ತೆಯಲ್ಲಿ ನಿಂತಿರುವುದನ್ನು ಕಂಡು ಅನುಮಾನದಿಂದ ಈ ತಡರಾತ್ರಿಯಲ್ಲಿ ಇಲ್ಲಿ ಏನು ಮಾಡುತ್ತಿದ್ದೀರಿ ಎಂದು ವಿಚಾರಣೆ ನಡೆಸಿದಾಗ, ಅವರಿಗೆ ಈ ಅಂಜಲಿ ಸುಳ್ಳು ಹೇಳಿದ್ದಾಳೆ. ತಾನು ತನ್ನ ಮಗಳನ್ನು ಕರೆದುಕೊಂಡು ವಾಕ್ ಬಂದಿದ್ದು, ಈ ವೇಳೆ ಮಗು ಇದ್ದಕ್ಕಿದ್ದಂತೆ ದಾರಿ ಮಧ್ಯೆಯೇ ನಾಪತ್ತೆಯಾಗಿದ್ದಾಳೆ ಆಕೆಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ ಪೊಲೀಸರಿಗೆ ಶಾಕ್...
ನಂತರ ಪೊಲೀಸರು ಅಲ್ಲಿದ್ದ ಸಿಸಿಟಿವಿಯನ್ನು ಪರೀಕ್ಷಿಸಿದಾಗ ಈ ಅಂಜಲಿ ಮಗುವನ್ನು ಎತ್ತಿಕೊಂಡು ನಗರದ ಅನಾ ಸಾಗರ್ ಕೆರೆಯ ಬಳಿ ಹೋಗುತ್ತಿರುವುದು ಕಂಡು ಬಂದಿದೆ. ಹಾಗೆಯೇ ರಾತ್ರಿ 1.30ರ ಸಮಯದಲ್ಲಿ ಆಕೆ ಒಬ್ಬಂಟಿಯಾಗಿ ಬರುತ್ತಿರುವುದು ಕಂಡು ಬಂದಿದೆ. ಜೊತೆಗೆ ಆಕೆ ಆ ಸಮಯದಲ್ಲಿ ಮೊಬೈಲ್ ಫೋನ್‌ನಲ್ಲಿ ಬ್ಯುಸಿಯಾಗಿದ್ದುದ್ದು ಕಂಡು ಬಂದಿದೆ. ಸಿಸಿಟಿವಿಯಲ್ಲಿ ಕಂಡ ದೃಶ್ಯಕ್ಕೂ ಅವಳ ವರ್ತನೆಗೂ ಬಹಳ ವ್ಯತ್ಯಾಸವಿದ್ದಿದ್ದರಿಂದ ಪೊಲೀಸರು ಅನುಮಾನಗೊಂಡು ಚಾರ್ಜ್ ಮಾಡಿದಾಗ ಆಕ ಸತ್ಯ ಬಾಯ್ಬಿಟ್ಟಿದ್ದಾಳೆ.
ಮಗುವನ್ನು ಅಲ್ಲಿನ ಕೃತಕ ಕೆರೆಗೆ ಎಸೆದಿದ್ದಾಗಿ ಆಕೆ ಹೇಳಿದ್ದಾಳೆ. ಒಬ್ಬಂಟಿಯಾಗಿಯೇ ಈ ಕೃತ್ಯವನ್ನು ಆಕೆ ಮಾಡಿರುವುದು ಪೊಲೀಸರ ವಿಚಾರಣೆಯಲ್ಲಿ ಬಯಲಾಗಿದೆ. ಆಕೆಯ ಗೆಳೆಯ ಅಲ್ಕೇಶ್ ಎಂಬಾತನೇ ರಾತ್ರಿ 2 ಗಂಟೆಗೆ ಮಗು ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾನೆ. ಈ ವೇಳೆ ಆತನ ಕೊಂಕು ಮಾತನ್ನು ಕೇಳಲಾಗದೇ ಈ ಕೃತ್ಯವೆಸಗಿದ್ದಾಗಿ ಅಂಜಲಿ ಹೇಳಿದ್ದಾಳೆ.
ಗಂಡನಿಂದ ದೂರಾದ ನಂತರ ಅಜ್ಮೇರ್‌ಗೆ ತೆರಳಿ ಪ್ರೇಮಿಯ ಜೊತೆ ವಾಸ...
ಅಂಜಲಿ ಮೂಲತಃ ಉತ್ತರ ಪ್ರದೇಶದ ವಾರಣಾಸಿಯವನಾಗಿದ್ದು, ಗಂಡನಿಂದ ದೂರಾದ ಬಳಿಕ ರಾಜಸ್ಥಾನದ ಅಜ್ಮೀರ್‌ಗೆ ತೆರಳಿ ಅಲ್ಲಿ ತನ್ನ ಪ್ರೇಮಿಯ ಜೊತೆ ವಾಸಿಸುತ್ತಿದ್ದಳು. ಅಜ್ಮೇರ್‌ನಲ್ಲಿ ತನ್ನ ಗೆಳೆಯ ಕೆಲಸ ಮಾಡ್ತಿದ್ದ ಹೊಟೇಲ್‌ನಲ್ಲಿಯೇ ಈಕೆ ರಿಸೆಪ್ಷನಿಸ್ಟ್ ಆಗಿ ಕೆಲಸಕ್ಕೆ ಸೇರಿದ್ದಳು. ಘಟನೆಯ ಬಳಿಕ ಈಗ ಕ್ರಿಶ್ಚಿಯನ್ ಗಂಜ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಅಂಜಲಿಯನ್ನು ಬಂಧಿಸಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಅಲ್ಕೇಶ್ ಕೂಡ ಭಾಗಿಯಾಗಿದ್ದಾನಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ವೃದ್ಧಾಪ್ಯದಲ್ಲಿ NRIಗಳ ಲವ್ ಆಫೇರ್: 75ರ ಅಜ್ಜನ ಮದ್ವೆಯಾಗಲು ಭಾರತಕ್ಕೆ ಬಂದು ಶವವಾದ 71ರ ಅಜ್ಜಿ
ಇದನ್ನೂ ಓದಿ: ಮುಂಬೈನಲ್ಲಿ ಕ್ರೌರ್ಯದ ಪರಾಕಾಷ್ಠೆ: ಬೀದಿ ನಾಯಿ ಕಣ್ಣು ಕಿತ್ತು ಆಟವಾಡಿದ ರಾಕ್ಷಸ...!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ