
ಮದುವೆಯಾಗಲು ಅಮೆರಿಕಾದಿಂದ ಬಂದ ಅಜ್ಜಿ ಪಂಜಾಬ್‌ನಲ್ಲಿ ಹೆಣವಾದಳು:
ಲೂಧಿಯಾನ: ಇತ್ತೀಚೆಗೆ ಪ್ರೀತಿ ಪ್ರೇಮಕ್ಕೆ ವಯಸ್ಸಿನ ಹಂಗಿಲ್ಲ, ಯಾವಾಗ ಬೇಕಾದರೂ ಪ್ರೀತಿ ಸಂಭವಿಸಬಹುದು. ಆದರೆ ವೃದ್ಧಾಪ್ಯದಲ್ಲಿ ಪ್ರೀತಿ ಅರಸಿ ಬಂದ ಅಮೆರಿಕನ್ ಅಜ್ಜಿಯೊಬ್ಬಳು ಭಾರತದ ಪಂಜಾಬ್‌ನಲ್ಲಿ ಶವವಾಗಿದ್ದಾಳೆ. ಸುಟ್ಟು ಕರಕಲಾದ ಸ್ಥಿತಿಯಲ್ಲಿ ಆಕೆ ಪತ್ತೆಯಾಗಿದ್ದಾಳೆ. ಹೌದು ಮೂಲತಃ ಅಮೆರಿಕನ್ ಪ್ರಜೆಯಾದ ಭಾರತೀಯ ಮೂಲದ 71ರ ಹರೆಯದ ವೃದ್ಧೆಯೊಬ್ಬರು ಮದುವೆಯಾಗುವುದಕ್ಕಾಗಿ ಭಾರತಕ್ಕೆ ಬಂದಿದ್ದರು. ಪಂಜಾಬ್‌ನ ಲೂಧಿಯಾನ ಮೂಲದ ಆದರೆ ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಚರಣ್‌ಜಿತ್ ಸಿಂಗ್ ಗ್ರೇವಲ್ ಎಂಬ 75ರ ಹರೆಯದ ಅಜ್ಜ, ಈ ಅಮೆರಿಕನ್ ಅಜ್ಜಿಗೆ ವಿವಾಹ ನಿವೇದನೆ ಮಾಡಿದ್ದ. ಆದರೆ ಅದೇನಾಯ್ತೋ ಏನೋ ಮದುವೆಯಾಗುವ ಖುಷಿಯಲ್ಲಿ ಅಮೆರಿಕಾದಿಂದ ಫ್ಲೈಟ್ ಏರಿದ ಆಕೆ ಭಾರತದಲ್ಲಿ ಶವವಾಗಿದ್ದಾಳೆ.
ಲೂಧಿಯಾನ ಮೂಲದ 75ರ ಹರೆಯದ ಅಜ್ಜನಿಂದ ಮದುವೆ ಪ್ರಪೋಸಲ್:
ರೂಪಿಂದರ್ ಕೌರ್ ಪಂಧೇರ್ ಕೊಲೆಯಾದ ಅಜ್ಜಿ, ಈಕೆ ಭಾರತಕ್ಕೆ ಆಗಮಿಸಿದ ಕೆಲ ದಿನಗಳಲ್ಲೇ ಈಕೆಯ ಕೊಲೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಅಂದಹಾಗೆ ಈ ಘಟನೆ ಜುಲೈನಲ್ಲಿಯೇ ನಡೆದಿದ್ದು, ಈಗ ಬೆಳಕಿಗೆ ಬಂದಿದೆ. ರೂಪಿಂದರ್ ಕೌರ್ ಪಂಧೇರ್ ನಾಪತ್ತೆಯಾದ ಬಗ್ಗೆ ಕೇಸ್ ದಾಖಲಾದ ನಂತರ ಪ್ರಕರಣ ಬೆಳಕಿಗೆ ಬಂದಿದೆ.ಚರಣ್‌ಜಿತ್ ಸಿಂಗ್ ಗ್ರೇವಾಲ್‌ನ ಆಹ್ವಾನದ ಮೇರೆಗೆಯೇ ಅಮೆರಿಕನ್ ಮೂಲದ ರೂಪಿಂದರ್ ಕೌರ್ ಪಂಧೇರ್ ಅವರು ಪಂಜಾಬ್‌ಗೆ ಬಂದಿಳಿದಿದ್ದರು. ಆದರೆ ಇಲ್ಲಿಗೆ ಬಂದ ನಂತರ ಚರಣ್‌ಜಿತ್ ಸಿಂಗ್ ಗ್ರೇವಾಲ್‌ನೇ ಆಕೆಯನ್ನು ಕೊಲೆ ಮಾಡಿರಬಹುದು ಎಂಬ ಆರೋಪವಿದೆ ಎಂದು ಪೊಲೀಸರು ಹೇಳಿದ್ದಾರೆ.
ಜುಲೈ 24ರಿಂದಲೇ ಅಜ್ಜಿ ಫೋನ್ ಸ್ವಿಚ್‌ಆಫ್, ದೆಹಲಿ ರಾಯಭಾರ ಕಚೇರಿ ಸಂಪರ್ಕಿಸಿದ ಅಜ್ಜಿ ಕುಟುಂಬ
ಪಂಧೇರ್‌ನ ಸೋದರಿ ಕಮಲ್ ಕೌರ್ ಖೈರಾ ಅವರು ತನ್ನ ಸೋದರಿಗೆ ಕರೆ ಮಾಡಿದ್ದು, ಫೋನ್ ನಂಬರ್ ಜುಲೈ 24ರಿಂದಲೂ ಸ್ವಿಚ್‌ಆಫ್ ಬರುತ್ತಿದ್ದಿದ್ದರಿಂದ ಅವರಿಗೆ ಆಕೆಗೇನೋ ಆಗಿದೆ ಎಂಬ ಅನುಮಾನ ಮೂಡಿದೆ. ಹೀಗಾಗಿ ಜುಲೈ 28ರಂದು ಖೈರಾ ಅವರು ನವದೆಹಲಿಯಲ್ಲಿರುವ ಅಮೆರಿಕನ್ ರಾಯಭಾರ ಕಚೇರಿಗೆ ಈ ಬಗ್ಗೆ ಮಾಹಿತಿ ನೀಡಿದ ಎಚ್ಚರಿಸಿದ್ದಾರೆ. ಇದು ಸ್ಥಳೀಯ ಪೊಲೀಸರಿಂದ ತನಿಖೆ ಮಾಡುವುದಕ್ಕೆ ಪ್ರೇರಣೆ ನೀಡಿದೆ.
ಪಂಜಾಬ್‌ಗೆ ಬರುವ ಮೊದಲೇ ಅಜ್ಜನಿಗೆ ಭಾರಿ ಮೊತ್ತದ ಹಣ ಟ್ರಾನ್ಸ್‌ಫಾರ್ ಮಾಡಿದ್ದ ಅಜ್ಜಿ:
ಆದರೆ ವಿಚಾರಣೆ ನಡೆಸಿದ ಪೊಲೀಸರಿಗೆ ರೂಪಿಂಧರ್ ಕೊಲೆಯಾಗಿರುವುದು ತಿಳಿದು ಬಂದಿದೆ. ಇತ್ತ ಅವರ ಕುಟುಂಬಕ್ಕೂ ಕಳೆದ ವಾರವಷ್ಟೇ ರೂಪಿಂಧರ್ ಕೊಲೆಯಾದ ವಿಚಾರ ತಿಳಿದಿದೆ. ಇದಾದ ನಂತರ ಜಾಗೃತರಾದ ಸ್ಥಳೀಯ ಪೊಲೀಸರು ಮಲ್ಹಾ ಪಟ್ಟಿ ನಿವಾಸಿ ಆರೋಪಿ ಸುಖ್‌ಜಿತ್ ಸಿಂಗ್ ಸೋನು ಎಂಬಾತನನ್ನು ಬಂಧಿಸಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ಸೋನು, ರೂಪಿಂಧರ್ ಕೌರ್ ಪಂಧೇರ್‌ನ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಚರಣ್‌ಜಿತ್ ಸಿಂಗ್ ಗ್ರೇವಾಲ್ 50 ಲಕ್ಷ ಹಣ ನೀಡುವುದಾಗಿ ಭರವಸೆ ನೀಡಿ ಕೊಲೆ ಮಾಡುವಂತೆ ಹೇಳಿದ್ದರಿಂದ ಆತನ ಸೂಚನೆಯಂತೆ ರೂಪಿಂಧರ್ ಹತ್ಯೆ ಮಾಡಿದ್ದಾಗಿ ಹೇಳಿದ್ದಾನೆ.
ಕೊಲೆ ಮಾಡಿ ಸ್ಟೋರ್ ರೂಮ್‌ನಲ್ಲೇ ಶವ ಸುಟ್ಟ ಆರೋಪಿ:
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ರೂಪಿಂಧರ್ ಕೊಲೆ ಮಾಡಿ, ಶವವನ್ನು ಸ್ಟೋರ್ ರೂಮ್‌ನಲ್ಲೇ ಸುಟ್ಟಿದ್ದಾರೆ. ಗ್ರೇವಾಲ್‌ನ ಸೂಚನೆಯಂತೆ ಸೋನು ಈ ಕೆಲಸ ಮಾಡಿದ್ದಾನೆ. ಕೊಲೆಯ ಹಿಂದಿನ ಕಾರಣ ಹಣಕಾಸು ವ್ಯವಹಾರವಾಗಿತ್ತು, ರೂಪಿಂಧರ್ ಅವರು ಪಂಜಾಬ್‌ಗೆ ಬರುವುದಕ್ಕೂ ಮೊದಲೇ ಭಾರಿ ಮೊತ್ತದ ಹಣವನ್ನು ಗ್ರೇವಾಲ್‌ನ ಖಾತೆಗೆ ವರ್ಗಾಯಿಸಿದ್ದರು. ಘಟನೆಯ ಬಳಿಕ ಗ್ರೇವಾಲ್ ನಾಪತ್ತೆಯಾಗಿದ್ದು, ಶಂಕಿತನ ಪಟ್ಟಿಯಲ್ಲಿ ಆತನ ಹೆಸರಿದೆ ಹಾಗೂ ಕೊಲೆಯಾದ ರೂಪಿಂಧರ್ ಅವರ ಅಸ್ಥಿಪಂಜರಗಳ ಅವಶೇಷ ಹಾಗೂ ಇತರ ಸಾಕ್ಷ್ಯಾಧಾರಗಳ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಲೂಧಿಯಾನ ಪೊಲೀಸ್ ವಿಭಾಗದ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಸತ್ಯೇಂದರ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಮುಂಬೈನಲ್ಲಿ ಕ್ರೌರ್ಯದ ಪರಾಕಾಷ್ಠೆ: ಬೀದಿ ನಾಯಿ ಕಣ್ಣು ಕಿತ್ತು ಆಟವಾಡಿದ ರಾಕ್ಷಸ...!
ಇದನ್ನೂ ಓದಿ: ಚಿನ್ನದ ದರದಲ್ಲಿ ಸತತ 2ನೇ ದಿನವೂ ಇಳಿಕೆ: ಹೇಗಿದೆ ಇಂದಿನ ಬೆಳ್ಳಿ ಬಂಗಾರದ ದರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ