
ನವದೆಹಲಿ: ಏರ್ ಇಂಡಿಯಾದ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ಮಾಡಿದ ಉದ್ಯಮಿಗೆ ದೆಹಲಿ ಪಟಿಯಾಲ ಕೋರ್ಟ್ ಜಾಮೀನು ನಿರಾಕರಿಸಿದೆ. ಕಳೆದ ನವಂಬರ್‌ನಲ್ಲಿ ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ವಿಮಾನದಲ್ಲಿ ಈತ ತನ್ನ ಪಕ್ಕ ಕುಳಿತಿದ್ದ ವೃದ್ಧೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಪ್ರಾರಂಭದಲ್ಲಿ ಮಹಿಳೆ ಪ್ರಕರಣ ದಾಖಲಿಸಲು ಮುಂದಾಗದ ಹಿನ್ನೆಲೆ ಹಾಗೂ ಇಬ್ಬರು ಪರಸ್ಪರ ಮಾತುಕತೆಯ ಮೂಲಕ ಈ ಪ್ರಕರಣವನ್ನು ಮುಚ್ಚಿ ಹಾಕಲಾಗಿತ್ತು. ಆದರೆ ನಂತರ ಈ ಪ್ರಕರಣದ ಬಗ್ಗೆ ವಿಮಾನಯಾನ ಸಂಸ್ಥೆ ಕ್ರಮಕ್ಕೆ ಮುಂದಾದ ಹಿನ್ನೆಲೆಯಲ್ಲಿ ಕೇಸು ದಾಖಲಿಸಿಕೊಂಡ ದೆಹಲಿ ಪೊಲೀಸರು ನಂತರ ಆರೋಪಿ ಉದ್ಯಮಿ ಶಂಕರ್ ಮಿಶ್ರಾ ಅವರನ್ನು ಬೆಂಗಳೂರಿನಲ್ಲಿ ಬಂಧಿಸಿದ್ದರು.
ಬಂಧನದ ನಂತರ ಶಂಕರ್, ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದು, ಆದರೆ ಪಟಿಯಾಲಾ ಕೋರ್ಟ್‌ನ ನ್ಯಾಯಾಧೀಶ ಕೋಮಲ್ ಗಾರ್ಗ್, ಜಾಮೀನು ನಿರಾಕರಿಸಿದ್ದಾರೆ. ಈ ಸಂದರ್ಭದಲ್ಲಿ ಆತನಿಗೆ ಜಾಮೀನು ನೀಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಜಾಮೀನು ಅರ್ಜಿಯಲ್ಲಿ ಆರೋಪಿಯೂ ವಿಮಾನಯಾನ ಸಂಸ್ಥೆಯಿಂದ ಹಾರಾಟ ನಿಷೇಧಕ್ಕೆ ಒಳಗಾದರೂ, ಹಾಗೂ ಮಹಿಳೆ ಜೊತೆ ಪ್ರಕರಣವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲು ಪ್ರಯತ್ನಿಸಿದ್ದು, ತನಿಖೆಯಿಂದ ತಪ್ಪಿಸಿಕೊಂಡು ಪರಾರಿಯಾಗುವ ಸಾಧ್ಯತೆ ಇಲ್ಲದ ಕಾರಣ ಜಾಮೀನು ನೀಡುವಂತೆ ಮನವಿ ಮಾಡಿದ್ದರು. ಈತನ ಕೃತ್ಯ ಮಹಿಳೆಯ ಘನತೆಗೆ ಕುಂದು ಉಂಟು ಮಾಡಿದೆ ಎಂದು ನ್ಯಾಯಾಲಯ ಹೇಳಿದೆ. ಜನವರಿ 7 ರಂದು ನ್ಯಾಯಾಲಯ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡುವುದಕ್ಕೆ ನಿರಾಕರಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ನಾವು ಸ್ಪಷ್ಟವಾಗಿ ಕೆಲವು ಪಾಠ ಕಲಿಯಬೇಕು: ಸಿಬ್ಬಂದಿಗೆ ಏರ್ ಇಂಡಿಯಾ ಸಿಇಒ ಕ್ಲಾಸ್..!
ನ್ಯೂಯಾರ್ಕ್‌ನಿಂದ ದೆಹಲಿಗೆ (New York-Delhi flight) ಬರುತ್ತಿದ್ದ ವಿಮಾನದಲ್ಲಿ 70 ವರ್ಷದ ಮಹಿಳೆ ಮೇಲೆ ಆತ ಮೂತ್ರ ವಿಸರ್ಜನೆ ಮಾಡಿದ್ದ. ಇದಾದ ಬಳಿಕ ಏರ್ ಇಂಡಿಯಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇಂತಹ ನೀಚ ಕೃತ್ಯದ ಬಳಿಕವೂ ಶಂಕರ್ ಮಿಶ್ರಾ ಯಾವುದೇ ಶಿಕ್ಷೆಗೆ ಗುರಿಯಾಗದೇ ವಿಮಾನ ನಿಲ್ದಾಣದಿಂದ ಹೊರಟು ಹೋಗಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿತ್ತು. ನವಂಬರ್ 26ರಂದು ಘಟನೆ ನಡೆದಿದ್ದರೂ ಈ ಪ್ರಕರಣವನ್ನು ಇಬ್ಬರು ಮಾತುಕತೆ ಮೂಲಕ ಬಗೆಹರಿಸಿಕೊಂಡಿದ್ದಾರೆ ಎಂದು ವಿಮಾನಯಾನ ಸಂಸ್ಥೆ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಆದರೆ ಈ ಬಗ್ಗೆ ತೀವ್ರ ಆಕ್ರೋಶ ಕೇಳಿ ಬಂದ ನಂತರ ಜನವರಿ ನಾಲ್ಕರಂದು ಪ್ರಕರಣ ದಾಖಲಿಸಲಾಗಿತ್ತು.
ನವೆಂಬರ್ 26 ರಂದು ನ್ಯೂಯಾರ್ಕ್-ದೆಹಲಿ ಏರ್ ಇಂಡಿಯಾ ವಿಮಾನದ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಶಂಕರ್ ಮಿಶ್ರಾ ಅವರು ತಮ್ಮ ಪ್ಯಾಂಟ್ ಅನ್ನು ಬಿಚ್ಚಿ ವಯಸ್ಸಾದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ನಂತರ ತನ್ನ ಹೆಂಡತಿ ಮತ್ತು ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿ ಪೊಲೀಸರಿಗೆ ದೂರು ನೀಡದಂತೆ ಮಹಿಳೆಯನ್ನು ಬೇಡಿಕೊಂಡಿದ್ದರು ಎಂದೂ ಹೇಳಲಾಗಿದೆ. ಏರ್ ಇಂಡಿಯಾ ಈ ವಾರವಷ್ಟೇ ಪೊಲೀಸ್ ದೂರು ದಾಖಲಿಸಿತ್ತು ಮತ್ತು ವೃದ್ಧೆಯ ಇಚ್ಛೆಯನ್ನು ಗೌರವಿಸಿ, ವಿಮಾನ ಲ್ಯಾಂಡ್ ಆದ ಬಳಿಕ ಕಾನೂನು ಕ್ರಮವನ್ನು ತೆಗೆದುಕೊಳ್ಳದಂತೆ ಸಿಬ್ಬಂದಿ ನಿರ್ಧರಿಸಿದ್ದರು. ಬಳಿಕ, 30 ದಿನಗಳ ಕಾಲ ವಿಮಾನ ಹಾರಾಟ ನಡೆಸದಂತೆ ನಿಷೇಧಿಸಿದ ಬಳಿಕ ಸಾಮಾಜಿಕ ಮಾಧ್ಯಮ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದರು.
ದೂರುದಾರರು ತನಗೆ ಶಂಕರ್ ಮಿಶ್ರಾ ಅವರ ಮುಖ ನೋಡಲು ಇಷ್ಟವಿಲ್ಲ ಎಂದು ಸಿಬ್ಬಂದಿಗೆ ತಿಳಿಸಿದ್ದರು ಮತ್ತು ಅಪರಾಧಿಯನ್ನು ತನ್ನ ಮುಂದೆ ಕರೆತಂದಾಗ ಹಾಗೂ ಆತ ಅಳುತ್ತಾ ಕ್ಷಮೆಯಾಚಿಸಲು ಪ್ರಾರಂಭಿಸಿದಾಗ ವೃದ್ಧೆ ದಿಗ್ಭ್ರಮೆಗೊಂಡರು ಎಂದು ಎಫ್‌ಐಆರ್ ಭಾಗವಾಗಿರುವ ಅವರ ದೂರಿನ ಪ್ರಕಾರ ಹೇಳಲಾಗಿತ್ತು. ಅಲ್ಲದೆ, ಏರ್ ಇಂಡಿಯಾ ವಿಮಾನದ ಮಹಿಳಾ ಸಿಬ್ಬಂದಿ ಸರಿಯಾದ ವೃತ್ತಿಪರರಲ್ಲ ಹಾಗೂ ಸಿಬ್ಬಂದಿ ಅತ್ಯಂತ ಸೂಕ್ಷ್ಮ ಮತ್ತು ಆಘಾತಕಾರಿ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಸಿದ್ಧರಾಗಿಲ್ಲ ಎಂದೂ ವೃದ್ಧೆ ಆರೋಪಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ