ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪಿ ಶಂಕರ್‌ ಮಿಶ್ರಾ ಬೆಂಗಳೂರಲ್ಲಿ?

Published : Jan 07, 2023, 07:55 AM IST
ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪಿ ಶಂಕರ್‌ ಮಿಶ್ರಾ ಬೆಂಗಳೂರಲ್ಲಿ?

ಸಾರಾಂಶ

6 ವಾರಗಳ ಹಿಂದೆ ನ್ಯೂಯಾರ್ಕ್-ದೆಹಲಿ ಏರ್‌ ಇಂಡಿಯಾ ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ, ಮುಂಬೈ ಮೂಲದ ಉದ್ಯಮಿ ಶಂಕರ್‌ ಮಿಶ್ರಾ ಬೆಂಗಳೂರಿನ ಅಡಗಿದ್ದ ಎಂದು ಮೂಲಗಳು ಶುಕ್ರವಾರ ಹೇಳಿವೆ.

ನವದೆಹಲಿ (ಜ.07): 6 ವಾರಗಳ ಹಿಂದೆ ನ್ಯೂಯಾರ್ಕ್-ದೆಹಲಿ ಏರ್‌ ಇಂಡಿಯಾ ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ, ಮುಂಬೈ ಮೂಲದ ಉದ್ಯಮಿ ಶಂಕರ್‌ ಮಿಶ್ರಾ ಬೆಂಗಳೂರಿನ ಅಡಗಿದ್ದ ಎಂದು ಮೂಲಗಳು ಶುಕ್ರವಾರ ಹೇಳಿವೆ. ‘ಬೆಂಗಳೂರಿನಲ್ಲಿ ಮಿಶ್ರಾ ಸೋದರಿ ವಾಸಿಸುತ್ತಿದ್ದಾರೆ. ಅಲ್ಲಿ ಈತ ಇತ್ತೀಚೆಗೆ ಬಂದಿದ್ದ ಎಂದು ಗೊತ್ತಾಗಿದೆ. ಹೀಗಾಗಿ ಮಿಶ್ರಾ ಬಂಧನಕ್ಕೆ ರಚಿಸಿರುವ 2 ತಂಡಗಳ ಪೈಕಿ 1 ತಂಡ ಬೆಂಗಳೂರಿನಲ್ಲಿದೆ ಹಾಗೂ ಮಿಶ್ರಾ ಸೋದರಿಯನ್ನು ವಿಚಾರಣೆಗೆ ಒಳಪಡಿಸಿದೆ’ ಎಂದು ಅವು ಹೇಳಿವೆ.

ಶಂಕರ್‌ ಮಿಶ್ರಾ ನಾಪತ್ತೆಯಾಗಿದ್ದು, ಆತನಿಗೆ ಲುಕ್‌ ಔಟ್‌ ನೋಟಿಸ್‌ ಹೊರಡಿಸಿರುವ ದಿಲ್ಲಿ ಪೊಲೀಸರು ಶೋಧಕ್ಕೆ 2 ತಂಡ ರಚಿಸಿದ್ದಾರೆ. ಇನ್ನೊಂದು ತಂಡವನ್ನು ಮಿಶ್ರಾ ಅವರ ತಂದೆ ವಾಸಿಸುವ ಮುಂಬೈಗೆ ಕಳುಹಿಸಲಾಗಿದೆ. ಇನ್ನೊಂದೆಡೆ ವಿಮಾನದ ಪೈಲಟ್‌ ಹಾಗೂ ಸಿಬ್ಬಂದಿ ಸೇರಿ 6 ಮಂದಿಗೆ ವಿಚಾರಣೆಗೆ ದಿಲ್ಲಿ ಪೊಲೀಸರು ನೋಟಿಸ್‌ ನೀಡಿದ್ದಾರೆ.

ಪೇಟಿಎಂ ಮೂಲಕ ಪರಿಹಾರ ನೀಡಿದ್ದೆ: ಏರ್‌ ಇಂಡಿಯಾ ವಿಮಾನದಲ್ಲಿ ಮಹಿಳಾ ಸಹ-ಪ್ರಯಾಣಿಕರಿಗೆ ಮೂತ್ರ ವಿಸರ್ಜನೆ ಮಾಡಿದ ಆರೋಪ ಹೊತ್ತಿರುವ ಮುಂಬೈ ಉದ್ಯಮಿ ಶಂಕರ್‌ ಮಿಶ್ರಾ ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ‘ಈ ವಿಷಯವನ್ನು ಇತ್ಯರ್ಥಗೊಳಿಸಲಾಗಿತ್ತು ಮತ್ತು ವೃದ್ಧ ಮಹಿಳೆಗೆ ಪೇಟಿಎಂ ಮೂಲಕ ಪರಿಹಾರವನ್ನು ಕೂಡ ನೀಡಲಾಗಿದೆ’ ಎಂದು ಹೇಳಿದ್ದಾರೆ. ನ್ಯೂಯಾರ್ಕ್-ನವದೆಹಲಿ ವಿಮಾನದಲ್ಲಿ ಮಹಿಳೆಯ ಮೇಲೆ ಕುಡಿದು, ಜಿಪ್‌ ಬಿಚ್ಚಿಕೊಂಡು ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಶಂಕರ್‌ ಮಿಶ್ರಾ ಮೇಲಿದೆ. ಅವರ ವಿರುದ್ಧ ಲುಕ್‌ಔಟ್‌ ನೋಟಿಸ್‌ ಕೂಡ ಬಿಡುಗಡೆ ಆಗಿದ್ದು, ದೆಹಲಿ ಪೊಲೀಸರು ಹುಡುಕುತ್ತಿದ್ದಾರೆ. ಇದರ ನಡುವೆ ಅವರು ಇದೀಗ ತಮ್ಮ ವಕೀಲರ ಮೂಲಕ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರವಿಸರ್ಜನೆ ಮಾಡಿದ ಶಂಕರ್‌ನ ವಜಾಗೊಳಿಸಿದ ವೆಲ್ಸ್ ಫಾರ್ಗೋ!

‘ಮಿಶ್ರಾ ಮತ್ತು ಮಹಿಳೆಯ ನಡುವಿನ ವಾಟ್ಸಾಪ್‌ ಸಂದೇಶಗಳು ವಿನಿಮಯವಾಗಿವೆ. ಈ ಸಂದೇಶದ ಅನುಸಾರ ಮಹಿಳೆಯ ಬಟ್ಟೆಹಾಗೂ ಬ್ಯಾಗ್‌ಗಳನ್ನು ನ.28ರಂದು ಮಿಶ್ರಾ ಸ್ವಚ್ಛ ಮಾಡಿಸಿದ್ದಾರೆ ಹಾಗೂ ನ.30ರಂದು ಮಹಿಳೆಗೆ ತಲುಪಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದಲ್ಲದೆ, ‘ತನ್ನ ಸಂದೇಶದಲ್ಲಿರುವ ಮಹಿಳೆಯು ಈ ಕೃತ್ಯವನ್ನು ಸ್ಪಷ್ಟವಾಗಿ ಕ್ಷಮಿಸಿದ್ದಾಳೆ ಮತ್ತು ದೂರು ದಾಖಲಿಸುವ ಉದ್ದೇಶವನ್ನು ತೋರಿಸಿಲ್ಲ ಎಂದು ತಿಳಿದುಬರುತ್ತದೆ’ ಎಂದು ಹೇಳಿಕೆ ತಿಳಿಸಿದೆ.

‘ಮಿಶ್ರಾ ಅವರು ನ. 28 ರಂದು ಪೇಟಿಎಂ ಮೂಲಕ ಎರಡೂ ಪಕ್ಷಗಳ ನಡುವೆ ಒಪ್ಪಂದದಂತೆ ಪರಿಹಾರವನ್ನು ಪಾವತಿಸಿದ್ದರು. ಆದರೆ ಸುಮಾರು ಒಂದು ತಿಂಗಳ ನಂತರ ,ಮಹಿಳೆಯ ಮಗಳು ಡಿ.19 ರಂದು ಹಣವನ್ನು ಹಿಂದಿರುಗಿಸಿದ್ದಾರೆ’ ಎಂದು ವಕೀಲರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ, ಡಿ.20ರಂದು ಮಹಿಳೆ ನೀಡಿದ ದೂರು ಏರ್‌ ಇಂಡಿಯಾದಿಂದ ಪರಿಹಾರ ಬಯಸಿದ್ದಾಗಿದೆ ಎಂದು ಮಿಶ್ರಾ ಪರ ವಕೀಲರು ಹೇಳಿಕೊಂಡಿದ್ದಾರೆ.

ನಾನು ಫ್ಯಾಮಿಲಿ ಮ್ಯಾನ್‌, ದೂರಬೇಡಿ: ನವೆಂಬರ್‌ನಲ್ಲಿ ಏರ್‌ ಇಂಡಿಯಾ ವಿಮಾನದಲ್ಲಿ ನ.26ರಂದು ಮಹಿಳಾ ಸಹ-ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ ಶಂಕರ್‌ ಮಿಶ್ರಾ, ಸಂತ್ರಸ್ತೆಯ ಕ್ಷಮೆಯಾಚಿಸಿದ್ದ. ‘ಈ ಬಗ್ಗೆ ದೂರು ಕೊಡಬೇಡಿ. ಈ ವಿಷಯ ಬಹಿರಂಗ ಆದರೆ ನನ್ನ ಹೆಂಡತಿ ಮತ್ತು ಮಗುವಿನ ಮನಸ್ಸಿಗೆ ಘಾಸಿಯಾಗುತ್ತದೆ ಎಂದು ಗೋಗರೆದಿದ್ದ ಎಂದು ಎಫ್‌ಐಆರ್‌ ಹೇಳಿದೆ. ಸಂತ್ರಸ್ತೆ ಏರ್‌ ಇಂಡಿಯಾಗೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯ ವಿರುದ್ಧ ದೆಹಲಿ ಪೊಲೀಸರು ಬುಧವಾರ ಎಫ್‌ಐಆರ್‌ ದಾಖಲಿಸಿದ್ದರು. ಅದರಲ್ಲಿ ಈ ಅಂಶವಿದೆ. ‘ಆರೋಪಿಯ ಜತೆ ಸಂಧಾನ ನಡೆಸುವಂತೆ ನನಗೆ ಬಲವಂತ ಮಾಡಲಾಯಿತು. ಆಗ ಮೂತ್ರ ವಿಸರ್ಜಿಸಿದಾತ ನನ್ನ ವಿರುದ್ಧ ದೂರಬೇಡಿ. ನಾನು ಫ್ಯಾಮಿಲಿ ಮ್ಯಾನ್‌. ಹೆಂಡತಿ-ಮಕ್ಕಳಿಗೆ ಗೊತ್ತಾದರೆ ಕಷ್ಟಎಂದು ಗೋಗರೆದ. ಇದು ನನ್ನನ್ನು ದಿಗ್ಭ್ರಮೆಗೊಳಿಸಿತು’ ಎಂದೂ ಮಹಿಳೆ ಆಪಾದಿಸಿದ್ದಾರೆ.

ಘಟನೆ ಹೇಗಾಯ್ತು?: ನ.26ರಂದು ಭೋಜನ ವಿರಾಮದ ನಂತರ ಲೈಟ್‌ ಆಫ್‌ ಮಾಡಲಾಯಿತು. ಆಗ ಬಿಸಿನೆಸ್‌ ಕ್ಲಾಸ್‌ 8ನೇ ಸೀಟಿನಲ್ಲಿದ್ದ ಪುರುಷ ಪ್ರಯಾಣಿಕನು ವಯಸ್ಸಾದ ಮಹಿಳೆಯ ಸೀಟಿನ ಬಳಿ ನಡೆದು ನಡೆದು, ತನ್ನ ಪ್ಯಾಂಟ್‌ಅನ್ನು ಬಿಚ್ಚಿ ಅವಳ ಮೇಲೆ ಮೂತ್ರ ವಿಸರ್ಜಿಸಿದ್ದಾನೆ ಎಂದು ಎಫ್‌ಐಆರ್‌ ಹೇಳಿದೆ. ‘ಏನಾಯಿತು ಎಂಬುದರ ಕುರಿತು ವ್ಯವಸ್ಥಾಪಕರಿಗೆ ತಿಳಿಸಲು ನಾನು ತಕ್ಷಣ ಎದ್ದು ಬಂದೆ. ನನ್ನ ಬಟ್ಟೆ, ಶೂ ಮತ್ತು ಬ್ಯಾಗ್‌ ಮೂತ್ರದಲ್ಲಿ ತೊಯ್ದಿದ್ದವು. ಬ್ಯಾಗ್‌ನಲ್ಲಿ ನನ್ನ ಪಾಸ್‌ಪೋರ್ಚ್‌, ಪ್ರಯಾಣ ದಾಖಲೆಗಳು ಮತ್ತು ಕರೆನ್ಸಿ ಇದ್ದವು. ವಿಮಾನ ಸಿಬ್ಬಂದಿ ಅವರನ್ನು ಮುಟ್ಟಲು ನಿರಾಕರಿಸಿದರು, ನನ್ನ ಬ್ಯಾಗ್‌ ಮತ್ತು ಬೂಟುಗಳನ್ನು ಸೋಂಕುನಿವಾರಕದಿಂದ ಸಿಂಪಡಿಸಿದರು ಮತ್ತು ನನ್ನನ್ನು ಬಾತ್ರೂಮ್‌ಗೆ ಕರೆದೊಯ್ದು ನನಗೆ ಸಿಬ್ಬಂದಿಯ ಪೈಜಾಮ ಮತ್ತು ಸಾಕ್ಸ್‌ಗಳನ್ನು ನೀಡಿದರು. 

ನಾನು ಸೀಟು ಬದಲಾವಣೆಗಾಗಿ ಸಿಬ್ಬಂದಿಯನ್ನು ಕೇಳಿದೆ ಆದರೆ ಬೇರೆ ಯಾವುದೇ ಸೀಟುಗಳು ಲಭ್ಯವಿಲ್ಲ ಎಂದು ತಿಳಿಸಲಾಯಿತು. ಆದರೆ, ನನ್ನ ಅವಸ್ಥೆಯನ್ನು ಕಣ್ಣಾರೆ ಕಂಡಿದ್ದ ಮತ್ತೊಬ್ಬ ಬ್ಯುಸಿನೆಸ್‌ ಕ್ಲಾಸ್‌ ಪ್ರಯಾಣಿಕ, ಪ್ರಥಮ ದರ್ಜೆಯಲ್ಲಿ ಸೀಟುಗಳು ಲಭ್ಯವಿವೆ ಎಂದು ನನ್ನ ಪರ ವಾದಿಸಿದರು’ ಎಂದು ಸಂತ್ರಸ್ತೆ ಹೇಳಿದ್ದಾರೆ. ‘20 ನಿಮಿಷಗಳ ಕಾಲ ನಿಂತ ನಂತರ ಸಂತ್ರಸ್ತೆಗೆ ವಿಮಾನಯಾನ ಸಿಬ್ಬಂದಿ ಬಳಸುವ ಒಂದು ಸಣ್ಣ ಆಸನವನ್ನು ನೀಡಲಾಯಿತು, ಅಲ್ಲಿ ಅವಳು ಸುಮಾರು 2 ಗಂಟೆಗಳ ಕಾಲ ಕುಳಿತಿದ್ದಳು. ನಂತರ ಆಕೆಯನ್ನು ತನ್ನ ಸ್ವಂತ ಆಸನಕ್ಕೆ ಹಿಂತಿರುಗುವಂತೆ ಕೇಳಲಾಯಿತು. ಇದಕ್ಕೆ ಆಕೆ ನಿರಾಕರಿಸಿದಾಗ ಮತ್ತೆ ಸಿಬ್ಬಂದಿಯ ಆಸನ ನೀಡಲಾಯಿತು’ ಎಂದು ಎಫ್‌ಐಆರ್‌ ಹೇಳಿದೆ.

ಆತ್ಮೀಯ ಗೆಳೆಯರ ಸಮ್ಮಿಲನ, ಸತ್ಯ ನಾದೆಲ್ಲಾ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಭೇಟಿ!

ನಂತರ, ವಿಮಾನ ಸಿಬ್ಬಂದಿ ಸಂತ್ರಸ್ತೆಗೆ ಅಪರಾಧಿ ತನ್ನ ಕ್ಷಮೆಯಾಚಿಸಲು ಬಯಸಿದ್ದಾರೆ ಎಂದು ತಿಳಿಸಿದರು. ಪ್ರತಿಕ್ರಿಯೆಯಾಗಿ, ಅವಳು ಅವನೊಂದಿಗೆ ಸಂವಹನ ನಡೆಸಲು ಅಥವಾ ಅವನ ಮುಖವನ್ನು ನೋಡಲು ಬಯಸುವುದಿಲ್ಲ. ಆತನನ್ನು ಬಂಧಿಸಿ ಎಂದು ಕೇಳಿಕೊಂಡೆ. ಆದರೆ ನನ್ನ ಇಚ್ಛೆಗೆ ವಿರುದ್ಧವಾಗಿ ಆತನೊಂದಿಗೆ ಸಂಧಾನಕ್ಕೆ ಬಲವಂತ ಮಾಡಲಾಯಿತು. ಮೂತ್ರ ಮಾಡಿದ ಪ್ರಯಾಣಿಕ ನನ್ನ ಮುಂದೆ ಅತ್ತ. ಕ್ಷಮೇ ಕೇಳಿದ. ‘ನಾನು ಕುಟುಂಬದ ವ್ಯಕಿ. ನನ್ನ ಹೆಂಡತಿ ಮತ್ತು ಮಗುವಿಗೆ ಈ ಘಟನೆಯಿಂದ ತೊಂದರೆಯಾಗಬಾರದು. ನನ್ನ ವಿರುದ್ಧ ದೂರು ನೀಡಬೇಡಿ’ ಎಂದು ಗೋಗರೆದ’ ಎಂದು ಮಹಿಳೆ ಹೇಳಿದ್ದಾರೆ ಎಂದು ಎಫ್‌ಐಆರ್‌ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಂಪು, ನೀಲಿ, ಹಸಿರು, ಭಾರತೀಯ ರೈಲುಗಳ ಕಲರ್ ಕೋಡ್ ಬಗ್ಗೆ ನಿಮಗೆಷ್ಟು ಗೊತ್ತು?
ಅಜ್ಜ ಅಜ್ಜಿಯ ಮೊದಲ ಬಾರಿ ವಿಮಾನದಲ್ಲಿ ಕರೆದೊಯ್ದ ಮೊಮ್ಮಗ : ವೀಡಿಯೋ ಭಾರಿ ವೈರಲ್