
ನವದೆಹಲಿ (ಜ.9):ಅಮಾನತುಗೊಂಡಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿ ನೂಪುರ್ ಶರ್ಮಾ 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಿಂದ ದೆಹಲಿಯಿಂದ ಸ್ಪರ್ಧಿಸಿದರೆ ಆಶ್ಚರ್ಯವಿಲ್ಲ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನಾಯಕ ಮತ್ತು ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಪ್ರವಾದಿ ಮೊಹಮದ್ ಪೈಗಂಬರ್ ಕುರಿತಾಗಿ ಖಾಸಗಿ ಸುದ್ದಿವಾಹಿನಿಯಲ್ಲಿ ನಡೆದ ಚರ್ಚೆಯ ವೇಳೆ ನೂಪುರ್ ಶರ್ಮ ಅವಹೇಳನಕಾರಿಯಾಗಿ ಮಾತನಾಡಿದ್ದರು. ಇದರ ಬೆನ್ನಲ್ಲಿಯೇ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಆ ಬಳಿಕ ಬಿಜೆಪಿ ನೂಪುರ್ ಶರ್ಮ ಅವರನ್ನು ರಾಷ್ಟ್ರೀಯ ವಕ್ತಾರೆ ಸ್ಥಾನದಿಂದ ಅಮಾನತುಗೊಳಿಸಿತ್ತು. ಎಎನ್‌ಐ ಜೊತೆಗಿನ ಮಾತುಕತೆಯ ವೇಳೆ ಅಸಾಸುದ್ದೀನ್ ಓವೈಸಿ, ಬಿಜೆಪಿಯು ನೂಪುರ್ ಶರ್ಮ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ. ಖಂಡಿತವಾಗಿ ಅವರು ರಾಜಕಾರಣಕ್ಕೆ ಮರಳುತ್ತಾರೆ. ಬಿಜೆಪಿ ಪರವಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ನೂಪುರ್ ಶರ್ಮ ಹೆಸರಿನೊಂದಿಗೆ ಬಂದ ವಿವಾದವನ್ನು ಬಿಜೆಪಿ ಖಂಡಿತವಾಗಿ ಬಳಕೆ ಮಾಡಿಕೊಳ್ಳಲಿದೆ. ಮುಂದಿನ ಲೋಕಸಭಾ ಚುನಾವಣೆಯ ವೇಳೆ ದೆಹಲಿಯಿಂದ ಬಿಜೆಪಿ ಆಕೆಯನ್ನು ಕಣಕ್ಕಿಳಿಸಿದರೆ, ಅದರಲ್ಲಿ ಅಚ್ಚರಿ ಪಡಬೇಕಂತಿಲ್ಲ ಎಂದು ಎಐಎಂಐಎಂ ಸಂಸದ ತಿಳಿಸಿದ್ದಾರೆ. 2022ರ ಮೇನಲ್ಲಿ ಖಾಸಗಿ ಸುದ್ದಿವಾಹಿನಿಯಲ್ಲಿ ಗ್ಯಾನವಾಪಿ ಶಿವಲಿಂಗದ ಕುರಿತಾದ ಚರ್ಚೆಯ ವೇಳೆ ನೂಪುರ್ ಶರ್ಮ ಪ್ರವಾದಿ ಮೊಹಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿಯಾಗಿ ಕಾಮೆಂಟ್‌ಗಳನ್ನು ಮಾಡಿದ್ದರು. ಇದರ ಬೆನ್ನಲ್ಲಿಯೇ ರಾಷ್ಟ್ರ ಹಾಗೂ ವಿದೇಶದ ಮುಸ್ಲಿಂ ರಾಷ್ಟ್ರಗಳಲ್ಲಿ ವ್ಯಾಪಕ ಪ್ರತಿಭಟನೆ ಹಾಗೂ ಖಂಡನಾ ಹೇಳಿಕೆಗಳು ವ್ಯಕ್ತವಾಗಿದ್ದವು. ಅದರೊಂದಿಗೆ ಹಿಂದು ಹಾಗೂ ಮುಸ್ಲಿಂ ನಡುವೆ ಹಿಂಸಾತ್ಮಕ ಘಟನೆಗಳು ನಡೆದಿದ್ದವು.
ಮಹಾರಾಷ್ಟ್ರದಲ್ಲಿ 54 ವರ್ಷದ ಕೆಮಿಸ್ಟ್ ಉಮೇಶ್ ಕೊಲ್ಹೆಯನ್ನು ಇದೇ ಕಾರಣಕ್ಕಾಗಿ ಚುಚ್ಚಿ ಕೊಲೆ ಮಾಡಲಾಗಿತ್ತು. ನೂಪುರ್ ಅವರನ್ನು ಬೆಂಬಲಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಪ್ರತೀಕಾರವಾಗಿ ಕೋಲ್ಹೆಯನ್ನು ಕೊಲ್ಲಲಾಗಿದೆ ಎಂದು ತನಿಖಾಧಿಕಾರಿಗಳು ನಂಬಿದ್ದಾರೆ. ಪ್ರವಾದಿಯವರ ಕುರಿತು ಶರ್ಮಾ ಅವರು ಮೇ ತಿಂಗಳಲ್ಲಿ ನೀಡಿದ ಹೇಳಿಕೆಗಳನ್ನು ಕೋಲ್ಹೆ ಬೆಂಬಲಿಸಿದ್ದರು.
2022ರ ಜೂನ್ 21 ರಂದು ಮಹಾರಾಷ್ಟ್ರದ ಅಮರಾತಿಯಲ್ಲಿ ಕೊಲ್ಹೆ ಅವರನ್ನು ಇರಿದು ಸಾಯಿಸಲಾಗಿತ್ತು. ಬೈಕ್‌ನಲ್ಲಿ ಬಂದಿದ್ದ ಇಬ್ಬರು ಅನಾಮಿಕ ವ್ಯಕ್ತಿಗಳು ಕೊಲ್ಹೆಯವರ ಕುತ್ತಿಗೆ ಸೀಳಿ ಕೊಲೆ ಮಾಡಿದ್ದರು. ಇದೇ ರೀತಿಯ ಇನ್ನೊಂದು ಘಟನೆಯಲ್ಲಿ ರಾಜಸ್ಥಾನದ ಉದಯ್‌ಪುರದಲ್ಲಿ ನೂಪುರ್ ಶರ್ಮ ಅವರ ಹೇಳಿಕೆಯನ್ನು ಬೆಂಬಲಿಸಿದ ಕಾರಣಕ್ಕೆ ಟೈಲರ್‌ನ ಕುತ್ತಿಗೆಯನ್ನು ಕತ್ತರಿಸಿ ಕೊಲೆ ಮಾಡಲಾಗಿತ್ತು.
"ಉದೈಪುರ್ ಶಿರಚ್ಛೇದದಂತಹ ಘಟನೆಗಳನ್ನು ಖಂಡಿಸಬೇಕು. ನಾನು 'ಸರ್ ತಾನ್ ಸೆ ಜುದಾ' ದಂತಹ ಘೋಷಣೆಗಳ ವಿರುದ್ಧ ನಾನಿದ್ದೇನೆ. ನಾನು ಅದನ್ನು ಬಹಿರಂಗವಾಗಿ ಖಂಡಿಸುತ್ತೇನೆ. ಅಂತಹ ಹೇಳಿಕೆಯು ಹಿಂಸಾಚಾರವನ್ನು ಪ್ರಚೋದಿಸುತ್ತದೆ. ನಾನು ಹಿಂಸೆಯ ವಿರುದ್ಧ" ಎಂದು ಓವೈಸಿ ಹೇಳಿದ್ದಾರೆ.
ಹಿಂದೂಗಳನ್ನು ಓಡಿಸಿ ಎಂದು ಅರಬ್ ದೇಶಗಳಿಗೆ ಅಲ್‌ಖೈದಾ ಕರೆ: ಪ್ರಧಾನಿ ಮೋದಿ, ನೂಪುರ್ ಗುರಿಯಾಗಿಸಿ ಲೇಖನ ಪ್ರಕಟ
ನೂಪುರ್ ಶರ್ಮ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಲು ನರೇಂದ್ರ ಮೋದಿ ಸರ್ಕಾರ ಎಷ್ಟು ದಿನಗಳನ್ನು ತೆಗೆದುಕೊಂಡಿದೆ ಎನ್ನುವುದನ್ನು ಎಲ್ಲರೂ ನೋಡಿದ್ದಾರೆ ಎಂದು ಎಐಎಂಐಎಂ ನಾಯಕ ಹೇಳಿದ್ದಾರೆ. ನೂಪುರ್ ಶರ್ಮ ಟಿವಿ ಚಾನೆಲ್‌ನಲ್ಲಿ ಬಂದಿರುವುದು ಇದೇ ಮೊದಲ ಬಾರಿ ಏನಲ್ಲ. ಹಿಂದಿ ಸುದ್ದಿವಾಹಿನಿಗಳಲ್ಲಿ ಇದಕ್ಕೂ ಮುನ್ನವೇ ಸಾಕಷ್ಟು ಬಾರಿ ವಿವಾದಾತ್ಮಕ ಮಾತುಗಳನ್ನು ಆಡಿದ್ದರು. ಆಕೆಗೆ ಜೀವ ಬೆದರಿಕೆ ಹಾಕಿದ್ದು ಕೂಡ ಸರಿಯಲ್ಲ. ಆದರೆ, ಆಕೆ ಹೇಳಿದ್ದ ಮಾತುಗಳು ಸಂಪೂರ್ಣ ತಪ್ಪು ಎಂದು ಹೇಳಿದ್ದಾರೆ.
ನೂಪುರ್ ಶರ್ಮ ವಿರುದ್ಧ ಸೇಡು ತೀರಿಸಿಕೊಳ್ತೇವೆ, ಅಲ್‌ಖೈದಾ ನೇರ ಎಚ್ಚರಿಕೆ!
ನೂಪುರ್ ಶರ್ಮ ಬಳಿಕ ತಾವು ನೀಡಿದ್ದ ಹೇಳಿಕೆಯನ್ನೂ ವಾಪಾಸ್ ಪಡೆದುಕೊಂಡಿರುವುದಾಗಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಯಾರನ್ನೂ ನೋಯಿಸುವುದು ತಮ್ಮ ಉದ್ದೇಶವಾಗಿರಲಿಲ್ಲ ಎಂದು ಅವರು ಈ ವೇಳೆ ಹೇಳಿದ್ದರು. ನೂಪುರ್ ಶರ್ಮ ಕ್ಷಮೆ ಕೇಳಿದ್ದರ ಕುರಿತು ಮಾತನಾಡಿದ ಓವೈಸಿ, 'ಆಕೆ ಎಲ್ಲಿ ಕ್ಷಮೆ ಕೇಳಿದ್ದಾರೆ. ಆಕೆ ತಾವು ಆ ಮಾತನ್ನು ಹೇಳಿಲ್ಲ ಎಂದು ಹೇಳಿದ್ದಾರೆ. ಕ್ಷಮೆ ಕೇಳಿಲ್ಲ. ಸ್ಪಷ್ಟವಾದ ಕ್ಷಮೆ ಅವರೆಂದೂ ಕೇಳಿಲ್ಲ' ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ