ಎಐಎಡಿಎಂಕೆಯಲ್ಲಿ ಬಿರುಕು, ಪನ್ನೀರಸೆಲ್ವಂ ಸೇರಿ ನಾಲ್ವರ ಉಚ್ಚಾಟನೆ, ಪ್ರಧಾನ ಕಚೇರಿ ಸೀಲ್!

By Suvarna NewsFirst Published Jul 11, 2022, 4:31 PM IST
Highlights

* ತಮಿಳುನಾಡು ರಾಜಕೀಯದಲ್ಲಿ ಬಿಗುವಿನ ವಾತಾವರಣ

* ಓ ಪನ್ನೀರಸೆಲ್ವಂ, ಇತರ ಮೂವರು ಪಕ್ಷದಿಂದ ಉಚ್ಛಾಟನೆ

* ಎಐಎಡಿಎಂಕೆ ಕಚೇರಿ ಪ್ರದೇಶದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ

ಚೆನ್ನೈ(ಜು.11): ಇಬ್ಬರು ಎದುರಾಳಿ ಎಐಎಡಿಎಂಕೆ ನಾಯಕರಾದ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಓ ಪನ್ನೀರಸೆಲ್ವಂ ಅವರ ಬೆಂಬಲಿಗರು ಪಕ್ಷದ ಕಚೇರಿಯ ಒಳಗೆ ಮತ್ತು ಹೊರಗೆ ಹಿಂಸಾಚಾರ ಮತ್ತು ವಿಧ್ವಂಸಕತೆಯನ್ನು ಉಂಟು ಮಾಡಿದ ನಂತರ ಕಂದಾಯ ಅಧಿಕಾರಿಗಳು ಸೋಮವಾರ ತಮಿಳುನಾಡಿನ ಪಕ್ಷದ ಪ್ರಧಾನ ಕಚೇರಿಯನ್ನು ಸೀಲ್ ಮಾಡಿದ್ದಾರೆ. ಪನ್ನೀರಸೆಲ್ವಂ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದ್ದು, ಈ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗುವುದಾಗಿ, ಕಾನೂನು ಕ್ರಮ ಜರುಗಿಸಿ ನ್ಯಾಯ ದೊರಕಿಸಿಕೊಡುವುದಾಗಿ ಕಾರ್ಯಕರ್ತರಲ್ಲಿ ಹೇಳಿದ್ದಾರೆ. ಇದರೊಂದಿಗೆ ಪಕ್ಷದ ಕಚೇರಿಯಿಂದ ನಿರ್ಗಮಿಸಿದರು.

 ಎಐಎಡಿಎಂಕೆ ಕೇಂದ್ರ ಕಚೇರಿ 'ಎಂಜಿಆರ್ ಮಾಳಿಗೈ'ಗೆ ಕಂದಾಯ ಅಧಿಕಾರಿಗಳು ಸೀಲ್ ಹಾಕಿದ್ದಾರೆ. ಹಿಂಸಾಚಾರದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಪಕ್ಷದ ಕಚೇರಿಯಲ್ಲಿದ್ದ ಎಲ್ಲ ಜನರನ್ನು ಪೊಲೀಸರು ಹೊರಹಾಕಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಇಬ್ಬರೂ ನಾಯಕರ ಬೆಂಬಲಿಗರ ನಡುವೆ ಹಿಂಸಾಚಾರ ಭುಗಿಲೆದ್ದಿತು ಮತ್ತು ನಂತರ ಅವರು ಅವೈ ಷಣ್ಮುಗಂ ಸಲೈನಲ್ಲಿರುವ ಎಐಎಡಿಎಂಕೆ ಪ್ರಧಾನ ಕಚೇರಿಯನ್ನು ಧ್ವಂಸಗೊಳಿಸಿದರು.

ಪನ್ನೀರಸೆಲ್ವಂ ಅವರನ್ನು ಆಡಳಿತಾರೂಢ ಡಿಎಂಕೆಯ "ಕೈಗೊಂಬೆ" ಎಂದು ಕರೆದ ಪಳನಿಸ್ವಾಮಿ ಹಿಂಸಾಚಾರಕ್ಕೆ ಅವರೇ ಮುಖ್ಯ ಕಾರಣ ಎಂದು ಹೊಣೆಗಾರರನ್ನಾಗಿ ಮಾಡಿದರು. ಪನ್ನೀರಸೆಲ್ವಂ ಅವರು ಪಕ್ಷದ ಕಚೇರಿಯಿಂದ ಮತ್ತು ದಿವಂಗತ ಪಕ್ಷದ ಮುಖ್ಯಸ್ಥೆ ಜೆ ಜಯಲಲಿತಾ ಅವರ ಕಚೇರಿ ಕೊಠಡಿಯಿಂದ ಎಲ್ಲಾ ಪತ್ರಗಳನ್ನು ತೆಗೆದುಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಎಐಎಡಿಎಂಕೆ ಮುಖಂಡ ಡಿ.ಜಯಕುಮಾರ್ ಮಾತನಾಡಿ, ಪಕ್ಷದ ಕಚೇರಿಯ ಭದ್ರತೆಗಾಗಿ ಪೊಲೀಸರಿಗೆ ಈಗಾಗಲೇ ಅರ್ಜಿಯನ್ನು ನೀಡಲಾಗಿದ್ದು, ಈಗ ಅವರ ಭಯ ನಿಜವಾಗಿದೆ. ಹಿಂಸಾಚಾರಕ್ಕೆ ಪನ್ನೀರಸೆಲ್ವಂ ಮತ್ತು ಅವರ ಬೆಂಬಲಿಗರೇ ಕಾರಣ ಎಂದು ಆರೋಪಿಸಿದ ಅವರು, ಪಕ್ಷದ ಕಚೇರಿಗೆ ಸರ್ಕಾರ ಮೊಹರು ಹಾಕಿದೆ ಎಂದು ಟೀಕಿಸಿದರು.

click me!