ಮಾಸ್ಕ್ ಜಟಾಪಟಿ ವಿಡಿಯೋ ವೈರಲ್; ಯುವತಿ ಕಪಾಳಕ್ಕೆ ಹೊಡೆದ ಪೊಲೀಸ್ ಅಮಾನತು!

By Suvarna NewsFirst Published Jan 16, 2021, 8:01 PM IST
Highlights

ಮಾಸ್ಕ್ ಧಾರಣೆ ಕುರಿತು ಈಗಾಗಲೇ ಹಲವು ಜಟಾಪಟಿಗಳು ನಡೆದು ಹೋಗಿದೆ. ಕೂಲಿ ಕಾರ್ಮಿಕರಿಗೆ ತಮ್ಮ ತಿಂಗಳ ಸಂಬಳವನ್ನೇ ದಂಡ ರೂಪದಲ್ಲಿ ನೀಡಿ ಕಣ್ಣೀರು ಹಾಕಿದ ಘಟನೆಗಳು ಈಗಾಗಲೇ ವರದಿಯಾಗಿದೆ. ಇದೀಗ ಮಾಸ್ಕ್ ವಿಚಾರದಲ್ಲಿ ಪೊಲೀಸ್ ಪೇದೆ, ಯುವತಿಯ ಕಪಾಳ ಹಾಗೂ ತಲೆಗೆ ಹೊಡೆದ ಘಟನೆ ನಡೆದಿದೆ.

ಅಹಮ್ಮದಾಬಾದ್(ಜ.16): ಕೊರೋನಾ ವೈರಸ್ ಕಾರಣ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಡ್ಡಾಯವಾಗಿದೆ. ಇತ್ತ ಪೊಲೀಸರು ಮಾಸ್ಕ್ ಧರಿಸಿದವರ ವಿರುದ್ಧ ದಂಡ ಹಾಕುತ್ತಿದ್ದಾರೆ. ಆದರೆ ಅಹಮ್ಮದಾಬಾದ್ ಪೊಲೀಸರು ಮಾಸ್ಕ್ ಹಾಕದವರನ್ನು ದಂಡ ಮಾತ್ರವಲ್ಲ, ವಶಕ್ಕೆ ಪಡೆಯುತ್ತಿದ್ದಾರೆ. ಈ ಕುರಿತು ಪ್ರಶ್ನಿಸಿ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ ಯುವತಿಗೆ ಅಹಮ್ಮದಾಬಾದ್ ಪೊಲೀಸರು ಕಪಾಳಕ್ಕೆ ಹೊಡೆದಿದ್ದಾರೆ.

ಮಾಸ್ಕ್ ಧರಿಸದೆ ಮಕ್ಕಳೊಂದಿಗೆ ಅಮೀರ್ ಖಾನ್ ಕ್ರಿಕೆಟ್.. ಬಿತ್ತು ಕಮೆಂಟ್ಸ್.

ಮಾಸ್ಕ್ ಹಾಕದವರನ್ನು ವಶಕ್ಕೆ ಪಡೆಯುತ್ತಿದ್ದ ಪೊಲೀಸರು ನಗರದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದರು. ಈ ವೇಳೆ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಾಗ ಗೆಳತಿ ಅಸಮಾಧಾನ ಹೊರಹಾಕಿದ್ದಾರೆ. ಇಷ್ಟೇ ಅಲ್ಲ ಪೊಲೀಸರು ವಶಕ್ಕೆ ಪಡೆಯದಂತೆ ಕೂಗಾಡಿದ್ದಾಳೆ. ಈ ವೇಳೆ ಅಹಮ್ಮದಾಬಾದ್‌ನ ನವ್ರರಂಗಪುರ ಠಾಣಾ ಪೊಲೀಸ್ ಪೇದೆ ವಿಕ್ರಮ್‌ಸಿಂಹ್ ಯುವತಿಯ ಕಪಾಳಕ್ಕೆ ಭಾರಿಸಿದ್ದಾರೆ.

ಈ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಎಚ್ಚತ್ತ ಅಹಮ್ಮದಾಬಾದ್ ಪೊಲೀಸ್, ತಕ್ಷಣವೇ ಪೇದೆಯನ್ನು ಅಮಾನತು ಮಾಡಿದ್ದಾರೆ. ಮಾಸ್ಕ್ ಧಾರಣೆ ಕುರಿತು ರಾಜಕಾರಣಿಗಳಿಗೆ, ಶ್ರೀಮಂತರಿಗೆ ಒಂದು ನ್ಯಾಯ, ಬಡವರಿಗೆ ಒಂದು ನ್ಯಾಯ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.

click me!