ವಿಮಾನದಲ್ಲಿತ್ತು 1.25 ಲಕ್ಷ ಲೀಟರ್ ಪವರ್‌ಫುಲ್ ಇಂಧನ: ಸಾವಿನ ಪ್ರಮಾಣ ಹೆಚ್ಚಲು ಇದೇ ಕಾರಣ: ಶಾ

Published : Jun 13, 2025, 07:51 AM IST
India air crash history

ಸಾರಾಂಶ

ಅಹಮದಾಬಾದ್ ವಿಮಾನ ದುರಂತದಲ್ಲಿ 265 ಜನರ ಸಾವಿಗೆ ವಿಮಾನದಲ್ಲಿದ್ದ ಭಾರೀ ಪ್ರಮಾಣದ ಇಂಧನ ಕೂಡಾ ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಹಿರಂಗಪಡಿಸಿದ್ದಾರೆ. ಘಟನಾ ಸ್ಥಳದಲ್ಲಿ 1000 ಡಿಗ್ರಿ ತಾಪಮಾನ ದಾಖಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಕಷ್ಟಕರವಾಗಿತ್ತು.

ಅಹಮದಾಬಾದ್: ವಿಮಾನ ಸುಟ್ಟುಕರಕಲಾಗಿ ಅದರಲ್ಲಿದ್ದ 265 ಜನರ ಸಾವಿಗೆ ವಿಮಾನದಲ್ಲಿದ್ದ ಭಾರೀ ಪ್ರಮಾಣದ ಇಂಧನ ಕೂಡಾ ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಹಿರಂಗಪಡಿಸಿದ್ದಾರೆ.

ಸಾಮಾನ್ಯವಾಗಿ ದೂರ ಪ್ರಯಾಣದ ವಿಮಾನಕ್ಕೆ ಭಾರೀ ಪ್ರಮಾಣದ ಇಂಧನ ಬೇಕಾಗುತ್ತದೆ. ಹೀಗಾಗಿ ಲಂಡನ್‌ಗೆ ಹೊರಟಿದ್ದ ವಿಮಾನದಲ್ಲಿ 1.25 ಲಕ್ಷ ಲೀಟರ್ ವೈಮಾನಿಕ ಪೆಟ್ರೋಲ್ ತುಂಬಿಸಲಾಗಿತ್ತು. ವಿಮಾನ ಅಪಘಾತಗೊಂಡು ಅದರಿಂದ ಹತ್ತಿ ಕೊಂಡು ಬೆಂಕಿಯು ಇಂಧನ ಟ್ಯಾಂಕ್‌ಗೆ ತಗಲಿದ ಕಾರಣ ಅದರಿಂದ ಭಾರೀ ಪ್ರಮಾಣದ ಅಗ್ನಿಜ್ವಾಲೆಗಳು ಎದ್ದಿವೆ. ಹೀಗಾಗಿ ಘಟನೆಯಲ್ಲಿ 241 ಜನರು ಸಾವನ್ನಪ್ಪಿದ್ದಾರೆ ಎಂದು ಶಾ ಹೇಳಿದ್ದಾರೆ.

ಘಟನೆ ನಡೆದ ಸ್ಥಳದ ಸುತ್ತಲೂ 1000 ಡಿಗ್ರಿ ತಾಪ

ವಿಮಾನ ಅಪಘಾತಗೊಂಡ ವೇಳೆ ವಿಮಾನ ಸ್ಫೋಟಗೊಂಡ ತೀವ್ರತೆಗೆ ಸುತ್ತಲಿನ ತಾಪಮಾನ 1000 ಡಿಗ್ರಿಗೆ ತಲುಪಿತು. ಇದರಿಂದಾಗಿ ರಕ್ಷಣೆಯೂ ಸಾಧ್ಯವಾಗಲಿಲ್ಲ. ಇದರ ಜೊತೆಗೆ ಸ್ಪೋಟದ ವೇಗಕ್ಕೆ ಅಲ್ಲಿನ ಹಕ್ಕಿಗಳು, ಪ್ರಾಣಿಗಳೂ ಸಹ ಬದುಕುಳಿಯಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ನಾವು ಪಿಪಿಇ ಕಿಟ್ ಧರಿಸಿ ಹೋಗಿದ್ದೆವು, ಆದರೆ ಅಲ್ಲಿನ ತೀವ್ರತೆಗೆ ಎಲ್ಲೆಲ್ಲೂ ವಿಮಾನ, ಕಟ್ಟಡದ ಅವಶೇಷಗಳು ಹೇರಿಕೊಂಡಿದ್ದವು. ಇದರಿಂದ ರಕ್ಷಣೆ ತುಂಬಾ ಕಷ್ಟವಾಗಿತ್ತು. ಕಡೆಗೆ ನಾವು ಹೊರತೆಗೆದ ದೇಹಗಳ ಸಂಖ್ಯೆಯೇ ಮರೆತುಹೋಯಿತು ಎಂದು ಹೇಳಿದ್ದಾರೆ.

ಇದು ಭಾರತದಲ್ಲಾದ ಭಾರತೀಯ ವಿಮಾನದ ಅತಿದೊಡ್ಡ ದುರಂತ

ಅಹಮದಾಬಾದ್: ಗುರುವಾರ ಇಲ್ಲಿ ಸಂಭವಿಸಿದ ಏರಿಂಡಿಯಾ ವಿಮಾನ ದುರಂತವು ದೇಶದಲ್ಲಿಈವರೆಗೆ ಸಂಭವಿಸಿದ ಅತಿ ದೊಡ್ಡ ಹಾಗೂ ಭೀಕರವಾದ ವಿಮಾನ ಅವಘಡ. ಈ ಅಪಘಾತದಲ್ಲಿ 243 ಜನರು ಸಾವನ್ನಪ್ಪಿದ್ದಾರೆ. ಇದು ಭಾರತದಲ್ಲಿ ಇದುವರೆಗೆ ನಡೆದ ಭಾರತದ ವಿಮಾನ ವೊಂದರ ಅಪಘಾತದಲ್ಲಿ ಸಂಭವಿಸಿದ ಅತಿದೊಡ್ಡ ಸಾವಿನ ಪ್ರಮಾಣವಾಗಿದೆ.

ಈ ಹಿಂದೆ 1996ರಲ್ಲಿ ಸೌದಿ ಅರೇಬಿಯನ್ ಏರ್‌ಲೈನ್ಸ್‌ನ ಬೋಯಿಂಗ್ 747 ಮತ್ತು ಕಝಾಕಿಸ್ತಾನ್ ಏರ್‌ಲೈನ್ಸ್‌ನ ಇಲ್ಯುಶಿನ್ ಇಲ್-76 ವಿಮಾನಗಳು ಹರ್ಯಾಣದ ಚರ್ಖಿ ದಾದ್ರಿ ಎಂಬಲ್ಲಿ ಡಿಕ್ಕಿಯಾಗಿದ್ದವು. ಆಗ, ಎರಡೂ ವಿಮಾನಗಳಲ್ಲಿದ್ದ ಎಲ್ಲಾ 349 ಜನ ಸಾವನ್ನಪ್ಪಿದ್ದರು. ಸೌದಿ ವಿಮಾನದಲ್ಲಿ 312 ಜನರಿದ್ದು, ಅದರಲ್ಲಿ ಬಹುತೇಕರು ಭಾರತೀಯರು, 2010ರ ಮೇ 22ರಂದು ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ 812, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೂ ಸ್ಪರ್ಶ ಮಾಡುವ ವೇಳೆ ನೆಲಕ್ಕಪ್ಪಳಿಸಿ ಹೊತ್ತಿ ಉರಿದಿತ್ತು. ಈ ವೇಳೆ, ವಿಮಾನದಲ್ಲಿದ್ದ 166 ಪ್ರಯಾಣಿಕರ ಪೈಕಿ 158 ಮಂದಿ ಅಸುನೀಗಿದ್ದರು. ಜೊತೆಗೆ 1984ರಲ್ಲಿ ಏರಿಂಡಿಯಾ ಕಾನಿಷ್ಕಾ ವಿಮಾನ ಕೆನಡಾದಿಂದ ಲಂಡನ್‌ ಗೆ ಬರುವಾಗ ಸ್ಫೋಟ ಗೊಂಡು 329 ಜನರು ಸಾವನ್ನಪಿದ್ದರು.

ಮಂಗಳೂರು ಘಟನೆ ನೆನಪಿಸಿದ ಗುಜರಾತ್ ದುರಂತ

ಮಂಗಳೂರು: ಅಹಮದಾಬಾದ್ ವಿಮಾನ ದುರಂತ ಘಟನೆ, ಮಂಗಳೂರು ವಿಮಾನ ಪತನ ದುರಂತದ ನೆನಪು ಮರುಕಳಿಸುವಂತೆ ಮಾಡಿದೆ. ಮಂಗಳೂರು ವಿಮಾನ ದುರಂತಕ್ಕೆ ಇದೀಗ 15 ವರ್ಷವಾಗಿದೆ. 2010ರ ಮೇ 22ರಂದು ಈ ಭೀಕರ ದುರಂತ ಸಂಭವಿಸಿ ವಿಮಾನದಲ್ಲಿದ್ದ 158 ಮಂದಿ ಮೃತಪಟ್ಟಿದ್ದರು. ಕೇವಲ 8 ಮಂದಿ ಮಾತ್ರ ಬದುಕಿ ಉಳಿದಿದ್ದರು. ಈ ದುರಂತದಲ್ಲಿ ಮೃತಪಟ್ಟವರಲ್ಲಿ ಅನೇಕರ ಮೃತದೇಹದ ಗುರುತು ಪತ್ತೆಯಾಗದೆ ಉಳಿದಿದ್ದವು. ಅವುಗಳನ್ನು ಕೂಳೂರಿನ ಫಲ್ಗುಣಿ ನದಿ ಕಿನಾರೆಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಅದೇ ಜಾಗದಲ್ಲಿ ಸಂತ್ರಸ್ತರ ನೆನಪಿನ ಸ್ಮರಣಾರ್ಥವಾಗಿ ದೊಡ್ಡ ಪಾರ್ಕ್ ನಿರ್ಮಿಸಲಾಗಿದೆ.

ಅಂದು ಏನಾಗಿತ್ತು?:

2010ರ ಮೇ 22ರಂದು ಬೆಳಗ್ಗೆ 6.20ರ ಸಮಯ. ದುಬೈನಿಂದ ಮಂಗಳೂರು ಏರ್ ಪೋರ್ಟ್‌ಗೆ ಆಗಮಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆ ನಿಯಂತ್ರಣಕ್ಕೆ ಸಿಗದೆ ಕೆಂಜಾರಿನ ಗುಡ್ಡದಿಂದ ಕೆಳಜಾರಿ ಅಪಘಾತಕ್ಕೀಡಾಗಿತ್ತು. ಕೂಡಲೇ ವಿಮಾನ ಪೂರ್ತಿ ಅಗ್ನಿ ಆವರಿಸಿದ್ದು, ಅದರಲ್ಲಿದ್ದ 158 ಮಂದಿ ಸಜೀವದಹನವಾಗಿದ್ದರು. ಈ ವಿಮಾನದಲ್ಲಿ6 ಶಿಶುಗಳು, 19 ಮಕ್ಕಳು, 6 ವಿಮಾನ ಸಿಬ್ಬಂದಿ ಸೇರಿ ಒಟ್ಟು 166 ಮಂದಿ ಪ್ರಯಾಣ ಮಾಡುತ್ತಿದ್ದರು. ವಿಮಾನದ ಭೀಕರ ಅಪಘಾತದ ನಡುವೆಯೂ ಅದೃಷ್ಟವಶಾತ್ ಕೇವಲ 8 ಮಂದಿ ಸಾವನ್ನು ಜಯಿಸಿ ಬದುಕಿ ಬಂದಿದ್ದರು.

ಪರಿಹಾರಕ್ಕಾಗಿ ಹೋರಾಟ

ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ಒದಗಿಸುವುದಕ್ಕಾಗಿ ಕಂಪನಿಯು ಮುಂಬೈನ ಕಾನೂನು ತಜ್ಞ ಎಚ್.ಡಿ.ನಾನಾವತಿ ನೇತೃತ್ವದ ಸಂಸ್ಥೆಯನ್ನು ನೇಮಿಸಿತ್ತು. ಈ ಸಂಸ್ಥೆ ಸುಮಾರು 147 ಕುಟುಂಬಗಳಿಗೆ ಪರಿಹಾರ ಒದಗಿಸಿರುವುದಾಗಿ ಹೇಳಿ ಕೊಂಡಿತ್ತು. ಇದರಲ್ಲಿ ಗರಿಷ್ಠ ಎಂದರೆ 7.7 ಕೋಟಿ ರು. ಪಡೆದವರೂ ಇದ್ದರು. ಆದರೆ, ಪರಿಹಾರದ ಮೊತ್ತದ ಬಗ್ಗೆ ಅನೇಕ ರು ಆಕ್ಷೇಪವೆತ್ತಿದ್ದರು. ಎರಡು ವರ್ಷದ ಹಿಂದೆ ಸುಮಾರು 45 ಕುಟುಂಬದವರು ಹೋರಾಟ ಮುಂದುವರಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್