ಯುಪಿ ಗೆದ್ದ ಬೆನ್ನಲ್ಲೇ ಮಧ್ಯಪ್ರದೇಶ ಗೆಲ್ಲಲು ಬಿಜೆಪಿ ರಣತಂತ್ರ!

By Suvarna News  |  First Published Mar 27, 2022, 8:45 AM IST

* ಉ.ಪ್ರ.ದಲ್ಲಿ ಯೋಗಿ ‘ಬುಲ್ಡೋಜರ್‌ ಬಾಬಾ’ ಆಗಿ ಯಶಸ್ವಿ

* ಮ.ಪ್ರ.ದಲ್ಲೂ ಅಂತಹುದೇ ರಣತಂತ್ರ ಬಳಸಲು ಬಿಜೆಪಿ ಸಿದ್ಧತೆ

* ಕ್ರಿಮಿನಲ್‌ಗಳ ಮನೆ ನೆಲಸಮ ಮಾಡುತ್ತಾರೆ ಎಂಬ ಸಂದೇಶ


ಭೋಪಾಲ್‌(ಮಾ.27): ಇತ್ತೀಚೆಗೆ ನಡೆದ ಉತ್ತರ ಪ್ರದೇಶದ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನು ಅಲ್ಲಿನ ಬಿಜೆಪಿ ಘಟಕ ‘ಬುಲ್ಡೋಜರ್‌ ಬಾಬಾ’ ಎಂದು ಬಿಂಬಿಸಿ ಯಶಸ್ವಿಯಾದ ಬೆನ್ನಲ್ಲೇ ಪಕ್ಕದ ಮಧ್ಯಪ್ರದೇಶದಲ್ಲೂ ಬಿಜೆಪಿ ನಾಯಕರು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ರನ್ನು ‘ಬುಲ್ಡೋಜರ್‌ ಮಾಮಾ’ ಎಂದು ಬಿಂಬಿಸಲು ಆರಂಭಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದವರು ಯೋಗಿಯನ್ನು ಟೀಕಿಸಲು ಬಳಸಿದ ಪದವನ್ನೇ ಬಿಜೆಪಿ ನಾಯಕರು ‘ಯೋಗಿ ಆದಿತ್ಯನಾಥ್‌ ಕ್ರಿಮಿನಲ್‌ಗಳ ಅಕ್ರಮ ಆಸ್ತಿಗಳನ್ನು ಬುಲ್ಡೋಜರ್‌ ಬಳಸಿ ನೆಲಸಮ ಮಾಡುತ್ತಾರೆ’ ಎಂಬರ್ಥದಲ್ಲಿ ತಿರುಗಿಸಿ ಪ್ರಚಾರಕ್ಕೆ ಬಳಸಿದ್ದರು. ಅದೇ ಮಾದರಿಯಲ್ಲಿ ಶಿವರಾಜ್‌ ಸಿಂಗ್‌ ಕೂಡ ಅಪರಾಧ ಕೃತ್ಯಗಳನ್ನು ಕಬ್ಬಿಣದ ಹಸ್ತದಿಂದ ಮಟ್ಟಹಾಕುತ್ತಾರೆ, ಅತ್ಯಾಚಾರ ಆರೋಪಿಗಳ ಮನೆ ನೆಲಸಮ ಮಾಡುತ್ತಾರೆ ಎಂಬ ಸಂದೇಶ ಸಾರಲು ‘ಬುಲ್ಡೋಜರ್‌ ಮಾಮಾ’ ಎಂದು ಹೆಸರಿಡಲಾಗಿದೆ.

Tap to resize

Latest Videos

ಬಿಜೆಪಿ ಶಾಸಕ ರಾಮೇಶ್ವರ್‌ ಶರ್ಮಾ ಇತ್ತೀಚೆಗೆ ತಮ್ಮ ಮನೆ ಮುಂದೆ ಒಂದಷ್ಟುಬುಲ್ಡೋಜರ್‌ ನಿಲ್ಲಿಸಿ, ‘ನಮ್ಮ ಹೆಣ್ಮಕ್ಕಳನ್ನು ಮುಟ್ಟಿದರೆ ಸಿಎಂ ಅಂಕಲ್‌ ಬುಲ್ಡೋಜರ್‌ ಹತ್ತಿಸಿಬಿಡ್ತಾರೆ’ ಎಂದು ಬ್ಯಾನರ್‌ ಹಾಕಿದ್ದರು. ಅಲ್ಲಿಗೆ ಶಿವರಾಜ್‌ ಸಿಂಗ್‌ ಭೇಟಿ ನೀಡಿದಾಗ ‘ಬುಲ್ಡೋಜರ್‌ ಮಾಮಾ ಜಿಂದಾಬಾದ್‌’ ಎಂದು ಘೋಷಣೆ ಕೂಗಲಾಯಿತು. ಅದಕ್ಕೂ ಕೆಲ ದಿನಗಳ ಮುನ್ನ ಮೂರು ಜಿಲ್ಲೆಗಳಲ್ಲಿ ಮೂವರು ಅತ್ಯಾಚಾರ ಆರೋಪಿಗಳ ಮನೆಯನ್ನು ಜಿಲ್ಲಾಧಿಕಾರಿಗಳು ನೆಲಸಮ ಮಾಡಿಸಿದ್ದರು. ಅಲ್ಲದೆ ಇನ್ನೊಂದು ಜಿಲ್ಲೆಯಲ್ಲಿ ಆದಿವಾಸಿಗಳಿಗೆ ತೊಂದರೆ ನೀಡಿದ ಕೆಲ ಮುಸ್ಲಿಮರ ಅಕ್ರಮ ಮನೆಗಳನ್ನು ಕೆಡವಿದ್ದರು.

ತಮಗೆ ದೊರೆತ ಹೊಸ ‘ಬಿರುದಿಗೆ’ ಶಿವರಾಜ್‌ ಕೂಡ ಖುಷಿಯಾಗಿದ್ದು, ‘ಎಲ್ಲಾ ಕ್ರಿಮಿನಲ್‌ಗಳನ್ನೂ ನೆಲಸಮ ಮಾಡುವವರೆಗೆ ನಮ್ಮ ಬುಲ್ಡೋಜರ್‌ ನಿಲ್ಲುವುದಿಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.

click me!