ಇಸ್ರೋ ಕಂಪ್ಯೂಟರ್ ಗಳು ಕೂಡ ಹ್ಯಾಕರ್ಸ್ಗಳ ದಾಳಿಗೆ ತುತ್ತಾಗಿದೆಯಾ? ಚಂದ್ರನ ಮೇಲೆ ಲ್ಯಾಂಡರ್ ಇಳಿಸುವ 3 ದಿನ ಮುನ್ನ ಬಂದಿತ್ತು ಸಂದೇಶ | ಕೂಡಂಕುಲಂ ಸ್ಥಾವರದಲ್ಲಿ ಬೇಹುಗಾರಿಕೆ ದೃಢ
ನವದೆಹಲಿ (ನ. 07): ತಮಿಳುನಾಡಿನ ಕೂಡಂಕುಲಂ ಅಣುಸ್ಥಾವರದ ಆಡಳಿತ ಕಚೇರಿಯ ಕಂಪ್ಯೂಟರ್ ಹ್ಯಾಕ್ ಆಗಿರುವುದು ಖಚಿತಪಟ್ಟಬೆನ್ನಲ್ಲೇ, ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೂಡ ಹ್ಯಾಕರ್ಸ್ಗಳ ದಾಳಿಗೆ ತುತ್ತಾಗಿದೆಯಾ ಎಂಬ ಆತಂಕ ಮಿಶ್ರಿತ ಅನುಮಾನ ವ್ಯಕ್ತವಾಗಿದೆ.
ಮಾಲ್‌ವೇರ್ ಬಳಸಿ ಕಂಪ್ಯೂಟರ್ ವ್ಯವಸ್ಥೆಯನ್ನು ಹ್ಯಾಕ್ ಮಾಡಿರುವ ಕುರಿತು ಕೇಂದ್ರ ಸರ್ಕಾರದ ಸಂಸ್ಥೆಯೊಂದು ಕೂಡಂಕುಲಂ ಸ್ಥಾವರ ಹಾಗೂ ಇಸ್ರೋ ಎರಡಕ್ಕೂ ಏಕಕಾಲಕ್ಕೆ ಮಾಹಿತಿ ನೀಡಿತ್ತು. ಆ ಪೈಕಿ ಕೂಡಂಕುಲಂ ಸ್ಥಾವರದಲ್ಲಿ ಹ್ಯಾಕ್ ಖಚಿತಪಟ್ಟಿದೆ. ಇಸ್ರೋ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲದಿರುವುದು ಕಳವಳಕ್ಕೆ ಕಾರಣವಾಗಿದೆ.
ಕೂಡಂಕುಳಂ ಅಣು ವಿದ್ಯುತ್ ಘಟಕದ ಮೇಲೆ ಸೈಬರ್ ದಾಳಿ ವದಂತಿ, ಆತಂಕ
ಕೇಂದ್ರ ಸರ್ಕಾರದ ಸಂಸ್ಥೆ ಈ ಎರಡೂ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದು ಸೆ.4ರಂದು. ಚಂದ್ರಯಾನ-2 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲು ಹೋಗಿ ವಿಫಲವಾಗಿದ್ದು ಸೆ.7ರಂದು. ಹೀಗಾಗಿ ಈ ಎರಡಕ್ಕೂ ಸಂಬಂಧವಿದೆಯಾ ಎಂಬ ಪ್ರಶ್ನೆ ಏಳುವಂತಾಗಿದೆ.
ಮೊದಲೇ ಮಾಹಿತಿ:
ಸಂಭಾವ್ಯ ಸೈಬರ್ ಭದ್ರತಾ ಬೆದರಿಕೆಗಳನ್ನು ತಿಳಿಸಲು ಹಾಗೂ ಸಕಾಲಕ್ಕೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ರಾಷ್ಟ್ರೀಯ ಸೈಬರ್ ಸಮನ್ವಯ ಕೇಂದ್ರವನ್ನು ಸ್ಥಾಪಿಸಲಾಗಿದೆ. ಕೂಡಂಕುಲಂ ಹಾಗೂ ಇಸ್ರೋ ಸಂಸ್ಥೆಗಳಿಗೆ ‘ಡಿಟ್ರ್ಯಾಕ್’ ಎಂಬ ಮಾಲ್‌ವೇರ್ ದಾಳಿ ಕುರಿತ ಸಂದೇಶವನ್ನು ಅಮೆರಿಕ ಮೂಲದ ಸೈಬರ್ ಭದ್ರತಾ ಕಂಪನಿಯೊಂದು ಈ ಸಂಸ್ಥೆ ಜತೆಗೆ ಸೆ.3 ರಂದು ಹಂಚಿಕೊಂಡಿತ್ತು. ಅದಾದ ಮರುದಿನವೇ ಕೂಡಂಕುಲಂ ಅಣು ಸ್ಥಾವರ ನಿರ್ವಹಿಸುತ್ತಿರುವ ರಾಷ್ಟ್ರೀಯ ಅಣು ವಿದ್ಯುತ್ ನಿಗಮ ಹಾಗೂ ಇಸ್ರೋ ಜತೆಗೆ ಸೈಬರ್ ಸಮನ್ವಯ ಕೇಂದ್ರ ಮಾಹಿತಿ ವಿನಿಮಯ ಮಾಡಿಕೊಂಡಿತ್ತು.
ಯಾವುದೇ ದಾಳಿ ಆಗಿಲ್ಲ ಎಂದು ಅ.29ರಂದು ಕೂಡಂಕುಲಂ ಅಧಿಕಾರಿಗಳು ಹೇಳಿದ್ದರು. ಆದರೆ ಅದಾದ ಮರುದಿನವೇ ಸ್ಪಷ್ಟನೆ ನೀಡಿ, ಆಡಳಿತ ವಿಭಾಗದ ಕಂಪ್ಯೂಟರ್ ಹ್ಯಾಕ್ ಆಗಿವೆ. ಅಣು ರಿಯಾಕ್ಟರ್‌ಗಳ ವ್ಯವಸ್ಥೆ ಭದ್ರವಾಗಿದೆ ಎಂದು ಹೇಳಿಕೊಂಡಿದ್ದರು. ಆದರೆ ಹ್ಯಾಕ್ ಬಗ್ಗೆ ಇಸ್ರೋದಿಂದ ಮಾಹಿತಿ ಸಿಕ್ಕಿಲ್ಲ. ಈ ಕುರಿತು ಸಂಪರ್ಕಿಸಿದರೂ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ಆಂಗ್ಲ ದೈನಿಕವೊಂದು ವರದಿ ಮಾಡಿದೆ.