
ನವದೆಹಲಿ: ಇತ್ತೀಚೆಗಷ್ಟೆ ಜನಸಾಮಾನ್ಯರ ದೈನಂದಿನ ಖರ್ಚಿಗೆ ಕರ್ನಾಟಕದ ಕೆಎಂಎಫ್ ಮತ್ತೊಮ್ಮೆ ದೊಡ್ಡ ಹೊಡೆತ ಕೊಟ್ಟಿತ್ತು. ನಂದಿನಿ ಹಾಲಿನ ಬೆಲೆಯನ್ನು ದುಪ್ಪಟ್ಟು ಹೆಚ್ಚಿಸಿತ್ತು. ಇದೀಗ ಇದೇ ಹಾದಿಯಲ್ಲಿ ದೇಶದ ಪ್ರಮುಖ ಡೈರಿ ಸಂಸ್ಥೆಗಳಾದ ಗುಜರಾತ್ ನ ಅಮುಲ್ ಮತ್ತು ಭಾರತ ಸರ್ಕಾರದ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಅಂಗ ಸಂಸ್ಥೆಯಾಗಿರುವ ಮದರ್ ಡೈರಿ ತಮ್ಮ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ₹2ರಿಂದ ₹4ರವರೆಗೆ ಏರಿಸಿದೆ. ಈ ಪರಿಷ್ಕೃತ ದರಗಳು ಗುರುವಾರ ನವೆಂಬರ್ 12, 2026ರಿಂದಲೇ ದೇಶಾದ್ಯಂತ ಜಾರಿಗೆ ಬರಲಿವೆ. ಕಳೆದ ಮೇ ತಿಂಗಳಲ್ಲಿ ಈ ಸಂಸ್ಥೆಗಳು ಬೆಲೆ ಏರಿಕೆ ಮಾಡಿತ್ತು. ಇದೀಗ ಕೇವಲ ಆರು ತಿಂಗಳ ಅಂತರದಲ್ಲಿ ಮತ್ತೊಮ್ಮೆ ದರ ಏರಿಕೆ ಮಾಡುವ ಮೂಲಕ ಗ್ರಾಹಕರಿಗೆ ಶಾಕ್ ಕೊಟ್ಟಿದೆ.
ಅಮುಲ್ ಬ್ರಾಂಡ್ ಅಡಿಯಲ್ಲಿ ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ 'ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ' (GCMMF), ತನ್ನ ತಾಜಾ ಪೌಚ್ ಹಾಲಿನ ವಿವಿಧ ರೂಪಾಂತರಗಳ ಬೆಲೆಯಲ್ಲಿ ಶೇ. 4ರಿಂದ 5ರಷ್ಟು ಹೆಚ್ಚಳ ಮಾಡಿರುವುದಾಗಿ ಬುಧವಾರ ಅಧಿಕೃತವಾಗಿ ಘೋಷಿಸಿದೆ. ಅತಿ ಹೆಚ್ಚು ಮಾರಾಟವಾಗುವ, ಶೇ. 3ರಷ್ಟು ಕೊಬ್ಬಿನಾಂಶ ಹೊಂದಿರುವ 'ಅಮುಲ್ ತಾಜಾ' (ಟೋನ್ಡ್ ಹಾಲು) ದರವನ್ನು ಪ್ರತಿ ಲೀಟರ್‌ಗೆ 2 ರೂ ಹೆಚ್ಚಿಸಲಾಗಿದೆ. ಶೇ. 6ರಷ್ಟು ಕೊಬ್ಬಿನಾಂಶವಿರುವ 'ಅಮುಲ್ ಗೋಲ್ಡ್' ಹಾಲಿನ ದರದಲ್ಲಿ ಪ್ರತಿ ಲೀಟರ್‌ಗೆ 4 ರೂ ಏರಿಕೆ ಮಾಡಲಾಗಿದೆ.
ಹಾಲು ಉತ್ಪಾದನೆ ಮತ್ತು ಸಂಸ್ಕರಣಾ ವೆಚ್ಚದಲ್ಲಿ ತೀವ್ರ ಏರಿಕೆಯಾಗಿರುವುದೇ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ಒಕ್ಕೂಟ ಸ್ಪಷ್ಟಪಡಿಸಿದೆ. ಕಳೆದ ಒಂದು ವರ್ಷದಲ್ಲಿ ಹಸಿರು ಮತ್ತು ಒಣ ಮೇವು, ಹಿಂಡಿ , ಮೆಕ್ಕೆಜೋಳ ಹಾಗೂ ಮೊಲಾಸಸ್‌ನಂತಹ ಜಾನುವಾರು ಆಹಾರದ ಬೆಲೆ ಗಗನಕ್ಕೇರಿದೆ. ಇದರ ಜೊತೆಗೆ ಪ್ಯಾಕೇಜಿಂಗ್ ಫಿಲ್ಮ್ ಮತ್ತು ಇಂಧನ ವೆಚ್ಚವೂ ದುಬಾರಿಯಾಗಿದೆ ಎಂದಿದೆ.
ಗುಜರಾತ್ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಮಳೆಯ ಕೊರತೆ ಹಾಗೂ ಅಸಮಾನ ಮಳೆಯಿಂದಾಗಿ ಹೈನುಗಾರಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಹಾಲು ಉತ್ಪಾದಕ ರೈತರಿಗೆ ಉತ್ತಮ ಬೆಂಬಲ ಬೆಲೆ ನೀಡುವುದು ಅನಿವಾರ್ಯವಾಗಿದೆ. ಗ್ರಾಹಕರಿಂದ ಸಂಗ್ರಹವಾಗುವ ಪ್ರತಿ ರೂಪಾಯಿಯಲ್ಲಿ ಸುಮಾರು 80 ಪೈಸೆಯಷ್ಟು (ಶೇ.80) ಹಣವನ್ನು ತನ್ನ 36 ಲಕ್ಷ ಹಾಲು ಉತ್ಪಾದಕರಿಗೆ ನೇರವಾಗಿ ತಲುಪಿಸಲಾಗುತ್ತದೆ. ಈ ಹೊಸ ದರ ಏರಿಕೆಯ ಸಿಂಹಪಾಲು ಕೂಡ ರೈತರಿಗೇ ಸೇರಲಿದೆ ಎಂದು GCMMF ತಿಳಿಸಿದೆ.
ಮತ್ತೊಂದೆಡೆ, ದೆಹಲಿ-ಎನ್‌ಸಿಆರ್ ಭಾಗದ ಅತಿದೊಡ್ಡ ಹಾಲು ಪೂರೈಕೆದಾರ ಸಂಸ್ಥೆಯಾದ ಮದರ್ ಡೈರಿ ಕೂಡ ನವೆಂಬರ್ 12ರಿಂದಲೇ ಜಾರಿಗೆ ಬರುವಂತೆ ದ್ರವ ಹಾಲಿನ ದರವನ್ನು ಲೀಟರ್‌ಗೆ ₹2ರಿಂದ ₹4ರವರೆಗೆ ಹೆಚ್ಚಿಸಿದೆ. ಈ ಹಿಂದೆ ಮೇ 14, 2026ರಂದು ಬೆಲೆ ಪರಿಷ್ಕರಿಸಲಾಗಿತ್ತು. ಹಾಲು ಖರೀದಿ ವೆಚ್ಚ ಹೆಚ್ಚಾಗಿರುವುದರಿಂದ, ಆ ಆರ್ಥಿಕ ಹೊರೆಯನ್ನು ಅನಿವಾರ್ಯವಾಗಿ ಗ್ರಾಹಕರಿಗೆ ವರ್ಗಾಯಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ.
ಮದರ್ ಡೈರಿಯ ಪರಿಷ್ಕೃತ ದರಗಳು ಈ ಕೆಳಗಿನಂತಿವೆ
ಮದರ್ ಡೈರಿ ಸಂಸ್ಥೆಯು ತನ್ನ ಮಳಿಗೆಗಳು, ಚಿಲ್ಲರೆ ವ್ಯಾಪಾರಿಗಳು ಹಾಗೂ ಇ-ಕಾಮರ್ಸ್ ವೇದಿಕೆಗಳ ಮೂಲಕ ದೆಹಲಿ-ಎನ್‌ಸಿಆರ್‌ನಲ್ಲಿ ನಿತ್ಯ ಸುಮಾರು 35 ಲಕ್ಷ ಲೀಟರ್ ಹಾಗೂ ದೇಶಾದ್ಯಂತ ಒಟ್ಟು 50 ಲಕ್ಷ ಲೀಟರ್‌ಗೂ ಅಧಿಕ ಹಾಲನ್ನು ಮಾರಾಟ ಮಾಡುತ್ತದೆ. ತಾನು ಗಳಿಸುವ ಆದಾಯದ ಶೇ. 75ರಿಂದ 80ರಷ್ಟು ಪಾಲನ್ನು ರೈತರಿಗೆ ನೀಡುವುದಾಗಿ ಸಂಸ್ಥೆ ಹೇಳಿಕೊಂಡಿದೆ.
ಹಾಲು ಪ್ರತಿಯೊಂದು ಕುಟುಂಬದ ಅತ್ಯಗತ್ಯ ಆಹಾರ ಪದಾರ್ಥವಾಗಿದೆ. ಎರಡು ಪ್ರಮುಖ ಬ್ರಾಂಡ್‌ಗಳು ಏಕಕಾಲದಲ್ಲಿ ದರ ಏರಿಸಿರುವುದರಿಂದ ಮಧ್ಯಮ ಮತ್ತು ಬಡ ವರ್ಗದ ಕುಟುಂಬಗಳ ಮಾಸಿಕ ಖರ್ಚು ಹೆಚ್ಚಾಗಲಿದೆ. ಅಲ್ಲದೆ, ಹಾಲಿನ ದರ ಏರಿಕೆಯು ಮುಂದಿನ ದಿನಗಳಲ್ಲಿ ಮೊಸರು, ತುಪ್ಪ, ಪನೀರ್, ಸಿಹಿತಿಂಡಿಗಳು ಹಾಗೂ ಹೋಟೆಲ್ ತಿನಿಸುಗಳ ಬೆಲೆ ಹೆಚ್ಚಳಕ್ಕೂ ದಾರಿ ಮಾಡಿಕೊಡಲಿದ್ದು, ಒಟ್ಟಾರೆ ಆಹಾರ ಹಣದುಬ್ಬರವನ್ನು ಮತ್ತಷ್ಟು ಏರಿಸುವ ಆತಂಕ ಎದುರಾಗಿದೆ.
ನ.1ರಿಂದ ಕೆಎಂಎಫ್ ಹಾಲಿನ ದರವನ್ನು 8ರಿಂದ 12 ರು.ನಷ್ಟು ಮತ್ತು ಮೊಸರಿನ ದರವನ್ನು ಬರೋಬ್ಬರಿ 14 ರು. ಏರಿಕೆ ಮಾಡಿತ್ತು. ಇದರ ಬೆನ್ನಲ್ಲೇ ನಂದಿನಿ ಪೈಪೋಟಿ ಎಂಬಂತೆ ಅಮೂಲ್ ಮೊಸರು ದರ 10 ರು. ಇಳಿಕೆ ಮಾಡಿತ್ತು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ