
ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ ಸಾಮಾನ್ಯವಾಗಿ ಪೋಷಕರು ಮಕ್ಕಳಿಗೆ ಹೊಸ ಸೈಕಲ್, ಮೊಬೈಲ್ ಅಥವಾ ಇಷ್ಟವಾದ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ ಪಶ್ಚಿಮ ಬಂಗಾಳದ ಉದ್ಯಮಿಯೊಬ್ಬರು ತಮ್ಮ ಮಗನಿಗೆ ನೀಡಿರುವ ಉಡುಗೊರೆ ಮಾತ್ರ ಎಲ್ಲರನ್ನೂ ಅಚ್ಚರಿಗೊಳಿಸಿದೆ. 9ನೇ ತರಗತಿಯ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ 15 ವರ್ಷದ ಮಗನಿಗೆ ಬರೋಬ್ಬರಿ 1.62 ಕೋಟಿ ರೂ. ಮೌಲ್ಯದ ಐಷಾರಾಮಿ BMW M4 ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಪಶ್ಚಿಮ ಬಂಗಾಳದ ಪೂರ್ವ ಬರ್ಧಮಾನ್ ಜಿಲ್ಲೆಯ ಪರಾಜ್ ಗ್ರಾಮದ ಮೊಹಮ್ಮದ್ ತಲ್ಹಾ ಎಂಬಾತ ಈ ದುಬಾರಿ ಕಾರು ಪಡೆದ ವಿದ್ಯಾರ್ಥಿ. ಈತನ ತಂದೆ ಶಂಸುದ್ದೀನ್ ಮಿದ್ಯಾ ಉದ್ಯಮಿಯಾಗಿದ್ದು, ಮಗನಿಗೆ BMW ಕಾರು ಎಂದರೆ ಬಹಳ ಇಷ್ಟ ಎಂಬುದನ್ನು ತಿಳಿದಿದ್ದರು.
ಮಗ ಉತ್ತಮ ಅಂಕ ಗಳಿಸಿದರೆ ಆತನ ಬಹುದಿನದ ಆಸೆಯನ್ನು ಈಡೇರಿಸುವುದಾಗಿ ತಂದೆ ಭರವಸೆ ನೀಡಿದ್ದರು. ಅದರಂತೆ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಮುಂಬೈಗೆ ತೆರಳಿ BMW M4 Competition ಕಾರನ್ನು ಖರೀದಿಸಿದ್ದಾರೆ.
ಮುಂಬೈನ ಅಂಧೇರಿ ಪ್ರದೇಶದ ಶೋರೂಂನಿಂದ ಖರೀದಿಸಿದ ಈ ಕಾರನ್ನು ವಿಶೇಷ ಕಂಟೇನರ್ ಮೂಲಕ ಪಶ್ಚಿಮ ಬಂಗಾಳದ ಪರಾಜ್ ಗ್ರಾಮಕ್ಕೆ ತರಲಾಯಿತು. ನವೆಂಬರ್ 6ರಂದು ಕಾರು ಗ್ರಾಮಕ್ಕೆ ತಲುಪುತ್ತಿದ್ದಂತೆ ಅದನ್ನು ನೋಡಲು ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ಈ ಕಾರು ತಂದೆಯ ಗ್ಯಾರೇಜ್‌ನಲ್ಲಿರುವ ರೇಂಜ್ ರೋವರ್, ಮರ್ಸಿಡಿಸ್ ಸೇರಿದಂತೆ ಇತರ ಐಷಾರಾಮಿ ವಾಹನಗಳ ಸಂಗ್ರಹಕ್ಕೆ ಹೊಸ ಸೇರ್ಪಡೆಯಾಗಿದೆ.
ಇಷ್ಟೊಂದು ದುಬಾರಿ ಕಾರು ಉಡುಗೊರೆಯಾಗಿ ಸಿಕ್ಕಿದ್ದರೂ ತಲ್ಹಾಗೆ ಸದ್ಯ ಅದನ್ನು ಸ್ವತಃ ಚಲಾಯಿಸಲು ಸಾಧ್ಯವಿಲ್ಲ. ಏಕೆಂದರೆ ಆತನಿಗೆ ಇನ್ನೂ 15 ವರ್ಷ ವಯಸ್ಸು. ಚಾಲನಾ ಪರವಾನಗಿ ಪಡೆಯುವ ಅರ್ಹ ವಯಸ್ಸು ಬಂದಿಲ್ಲ.
ಹೀಗಾಗಿ ಪರವಾನಗಿ ಸಿಗುವವರೆಗೆ ಕಾರಿನ ಸ್ಟೀರಿಂಗ್ ಮುಟ್ಟುವಂತಿಲ್ಲ ಎಂದು ತಂದೆ ಸ್ಪಷ್ಟಪಡಿಸಿದ್ದಾರೆ. ಸದ್ಯ ವಾರಕ್ಕೊಮ್ಮೆ ತಂದೆಯೊಂದಿಗೆ ಕಾರಿನಲ್ಲಿ ಪ್ರಯಾಣಿಸಲು ತಲ್ಹಾ ನಿರ್ಧರಿಸಿದ್ದಾನೆ. ಓದಿನ ಕಡೆಗೂ ಗಮನ ಹರಿಸುವುದಾಗಿ ಆತ ಹೇಳಿದ್ದಾನೆ.
ಈ ದುಬಾರಿ ಉಡುಗೊರೆಯ ಸುದ್ದಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಮಗನ ಪರಿಶ್ರಮಕ್ಕೆ ತಂದೆ ನೀಡಿದ ಬಹುಮಾನವನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವರು 15 ವರ್ಷದ ಬಾಲಕನಿಗೆ ಇಷ್ಟು ದುಬಾರಿ ಕಾರು ನೀಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ, ಸಾಮಾನ್ಯ ಪರೀಕ್ಷೆಯ ಫಲಿತಾಂಶಕ್ಕೆ ಕೋಟಿ ಮೌಲ್ಯದ ಕಾರು ಉಡುಗೊರೆಯಾಗಿ ಸಿಕ್ಕಿರುವ ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ