ಜೋಶಿಮಠದ ಕುರಿತು ಹೇಳಿಕೆ ನೀಡುವಂತಿಲ್ಲ: ಸರ್ಕಾರಿ ಅಧಿಕಾರಿಗೆಳಿಗೆ ಕೇಂದ್ರ ತಾಕೀತು

By Kannadaprabha NewsFirst Published Jan 15, 2023, 9:32 AM IST
Highlights

ಉತ್ತರಾಖಂಡದ ಜೋಶಿಮಠ ಹೇಗೆ ಕೇವಲ 12 ದಿನಗಳಲ್ಲಿ 5.4 ಸೆಂ.ಮೀ.ನಷ್ಟು ಕುಸಿದಿದೆ ಎಂಬ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ತನ್ನ ಉಪಗ್ರಹ ಚಿತ್ರಗಳ ಜೊತೆಗೆ ಮಾಹಿತಿ ಬಿಡುಗಡೆ ಮಾಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಕುರಿತು ಸರ್ಕಾರಿ ಸಂಸ್ಥೆಗಳು ಮಾಧ್ಯಮಗಳಿಗೆ ಮಾಹಿತಿ ನೀಡುವುದನ್ನು ನಿಷೇಧಿಸಿದೆ.

ನವದೆಹಲಿ: ಉತ್ತರಾಖಂಡದ ಜೋಶಿಮಠ ಹೇಗೆ ಕೇವಲ 12 ದಿನಗಳಲ್ಲಿ 5.4 ಸೆಂ.ಮೀ.ನಷ್ಟು ಕುಸಿದಿದೆ ಎಂಬ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ತನ್ನ ಉಪಗ್ರಹ ಚಿತ್ರಗಳ ಜೊತೆಗೆ ಮಾಹಿತಿ ಬಿಡುಗಡೆ ಮಾಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಕುರಿತು ಸರ್ಕಾರಿ ಸಂಸ್ಥೆಗಳು ಮಾಧ್ಯಮಗಳಿಗೆ ಮಾಹಿತಿ ನೀಡುವುದನ್ನು ನಿಷೇಧಿಸಿದೆ.

ಈ ಬಗ್ಗೆ ಸೂಚನೆ ನೀಡಿರುವ ಕೇಂದ್ರ ಸರ್ಕಾರದ (Union Govt)ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರ (NDMA), ‘ಜೋಶಿಮಠದ ಪರಿಸ್ಥಿತಿಯ ಕುರಿತು ವಿವಿಧ ಸರ್ಕಾರಿ ಸಂಸ್ಥೆಗಳು ಸಾಮಾಜಿಕ ಮಾಧ್ಯಮಗಳಿಗೆ ತಮ್ಮದೇ ಆದ ಮಾಹಿತಿ ಬಿಡುಗಡೆ ಮಾಡುವುದು ಹಾಗೂ ಮಾಧ್ಯಮಗಳ ಜೊತೆ ಮಾತನಾಡುತ್ತಿರುವುದು ಗಮನಕ್ಕೆ ಬಂದಿದೆ. ಇದು ಜೋಶಿಮಠದ ಹಾಗೂ ದೇಶದ ಜನರಲ್ಲಿ ಗೊಂದಲಗಳನ್ನು ಹುಟ್ಟುಹಾಕುತ್ತಿದೆ. ಜೋಶಿಮಠದ ಪರಿಸ್ಥಿತಿಯ ಅಧ್ಯಯನಕ್ಕೆ (Study) ಈಗಾಗಲೇ ತಜ್ಞರ ಸಮಿತಿ ರಚಿಸಲಾಗಿದೆ. ಅದು ವರದಿ ನೀಡುವವರೆಗೆ ಇಸ್ರೋ ಸೇರಿದಂತೆ ಇನ್ನಿತರ ಸಂಸ್ಥೆಗಳು ತಮ್ಮ ಅಧಿಕಾರಿಗಳಿಗೆ ಸಂಯಮ ವಹಿಸಲು ಸೂಚಿಸಬೇಕು’ ಎಂದು ತಾಕೀತು ಮಾಡಿದೆ.

ಇಸ್ರೋದ ಕಾರ್ಟೋಸ್ಯಾಟ್‌-2ಎಸ್‌ ಉಪಗ್ರಹವು (Satellite) ಕ್ಲಿಕ್ಕಿಸಿದ ಚಿತ್ರಗಳಲ್ಲಿ ಡಿಸೆಂಬರ್‌ 27 ಹಾಗೂ ಜನವರಿ 8ರ ನಡುವೆ ಜೋಶಿಮಠದಲ್ಲಿ (Joshimath) ಭಾರಿ ಪ್ರಮಾಣದ ಕುಸಿತವಾಗಿರುವುದು ಕಂಡುಬಂದಿತ್ತು. ಈ ಬಗ್ಗೆ ಇಸ್ರೋ ಮಾಹಿತಿ ಬಿಡುಗಡೆ ಮಾಡಿತ್ತು.

ಜೋಶಿಮಠಕ್ಕೆ ಪೂರ್ಣ ಭೂಸಮಾಧಿ ಅಪಾಯ: ಇಸ್ರೋ ವರದಿ ಎಚ್ಚರಿಕೆ

ಉತ್ತರಾಖಂಡದ ಪ್ರಸಿದ್ಧ ಪುಣ್ಯಕ್ಷೇತ್ರಗಳ ಹೆಬ್ಬಾಗಿಲಿನಂತಿರುವ ಹಾಗೂ ಭೂಕುಸಿತದಿಂದ ಸುದ್ದಿಯಾಗುತ್ತಿರುವ ಉತ್ತರಾಖಂಡದ ಜೋಶಿಮಠ ನಗರ ಕೇವಲ 12 ದಿನಗಳಲ್ಲಿ ಬರೋಬ್ಬರಿ 5.4 ಸೆಂಟಿಮೀಟರ್‌ನಷ್ಟುಕುಸಿತ ಕಂಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಹೇಳಿದೆ. ಅಷ್ಟುಮಾತ್ರವಲ್ಲ ಮುಂದಿನ ದಿನಗಳಲ್ಲಿ ಇಡೀ ನಗರವೇ ಭೂಸಮಾಧಿಯಾಗುವ ಅಪಾಯವನ್ನೂ ಎದುರಿಸುತ್ತಿದೆ ಎಂದು ಎಚ್ಚರಿಸಿದೆ.

ಇಸ್ರೋ ನೀಡಿರುವ ಈ ಮಾಹಿತಿ, ಭಾರೀ ಭೂಕುಸಿತದ ಹೊರತಾಗಿಯೂ ನಗರವನ್ನು ತೊರೆಯಲು ನಿರಾಕರಿಸುತ್ತಿರುವವರ ಪಾಲಿಗೆ ಮತ್ತು ಸರ್ಕಾರದ ಪಾಲಿಗೆ ಹೊಸ ಎಚ್ಚರಿಕೆ ಗಂಟೆಯಾಗಿ ಹೊರಹೊಮ್ಮಿದೆ. ಅಲ್ಲದೆ ಮುಂದಿನ ಕೆಲ ದಿನಗಳಲ್ಲಿ ಜೋಶಿಮಠ ಸುತ್ತಮುತ್ತಲ ಪ್ರದೇಶವು ಮಳೆ ಮತ್ತು ಹಿಮಪಾತಕ್ಕೆ ಒಳಗಾಗುವ ಸಾಧ್ಯತೆ ಇರುವ ಕಾರಣ, ಯಾವುದೇ ಸಮಯದಲ್ಲಿ ದೊಡ್ಡ ಅನಾಹುತವೊಂದು ಎದುರಾಗುವ ಭೀತಿ ಕಾಣಿಸಿಕೊಂಡಿದೆ.

ಪ್ರತಿ ವರ್ಷ ಜೋಶಿಮಠ 6.5 ಸೆ.ಮೀ. ಕುಸಿತ: ಚಂಬಾದಲ್ಲೂ ಭೂಮಿ ಬಿರುಕು, ಕುಸಿತ ಭೀತಿ

ಇಸ್ರೋ ಹೇಳಿದ್ದೇನು?:

ಕಾರ್ಟೋಸ್ಯಾಟ್‌-2ಎಸ್‌ ಉಪಗ್ರಹ ಸೆರೆಹಿಡಿದಿರುವ ಚಿತ್ರಗಳ ಪ್ರಕಾರ 2022ರ ಏಪ್ರಿಲ್‌ನಿಂದ ನವೆಂಬರ್‌ವರೆಗೆ ಜೋಶಿಮಠದಲ್ಲಿ ಭೂಮಿ 8.9 ಸೆಂ.ಮೀ. ಕುಸಿತವಾಗಿದೆ. ಆದರೆ 2022ರ ಡಿ.27ರಿಂದ 2023ರ ಜ.8ರವರೆಗಿನ ಕೇವಲ 12 ದಿನಗಳ ಅವಧಿಯಲ್ಲಿ 5.4 ಸೆಂ.ಮೀ.ನಷ್ಟುಜಾರಿದೆ. ಈ ಸಂಗತಿ ಇಸ್ರೋದ ರಾಷ್ಟ್ರೀಯ ಸೂಕ್ಷ್ಮ ಸಂವೇದಿ ಕೇಂದ್ರದ ಪ್ರಾಥಮಿಕ ಅಧ್ಯಯನದಿಂದ ತಿಳಿದುಬಂದಿದೆ. ಭೂಕುಸಿತ ಹಿನ್ನೆಲೆಯಲ್ಲಿ ಜೋಶಿಮಠದಿಂದ ಈಗಾಗಲೇ 589 ಮಂದಿಯನ್ನೊಳಗೊಂಡ 169 ಕುಟುಂಬಗಳನ್ನು ಸ್ಥಳಾಂತರಿಸಿ, ಪರಿಹಾರ ಶಿಬಿರಕ್ಕೆ ದಾಖಲಿಸಲಾಗಿದೆ.

Joshimath Sinking: 12 ದಿನಗಳಲ್ಲಿ 5.4 ಸೆಂಟಿಮೀಟರ್‌ ಕುಸಿದ ಜೋಶಿಮಠ, ಇಸ್ರೋ ಸ್ಯಾಟಲೈಟ್‌ ಇಮೇಜ್‌!

click me!