ಚೀನಾ ಗೂಢಚಾರಿ ಎಂದು ಶಂಕಿಸಿದ್ದ ಪಾರಿವಾಳ ಬಿಡುಗಡೆ

By Santosh NaikFirst Published Jan 31, 2024, 6:46 PM IST
Highlights


ಚೀನಾದ ಗೂಢಚಾರಿ ಎಂದು ಶಂಕಿಸಲಾಗಿದ್ದ ಪಾರಿವಾಳವನ್ನು ಎಂಟು ತಿಂಗಳ ಬಳಿಕ ಭಾರತ ಬಿಡುಗಡೆ ಮಾಡಿದೆ. ಮುಂಬೈನ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಇದನ್ನು ಬಂಧನದಲ್ಲಿ ಇರಿಸಲಾಗಿತ್ತು.

ಮುಂಬೈ (ಜ.31): ಕಳೆದ 8 ತಿಂಗಳ ಹಿಂದೆ ಚೀನಾದ ಗೂಢಚಾರಿ ಎಂದು ಶಂಕಿಸಿ ಸೆರೆ ಹಿಡಿಯಲಾಗಿದ್ದ ಪಾರಿವಾಳವನ್ನು ಮುಂಬೈನ ಪಶುವೈದ್ಯಕೀಯ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ತೈವಾನ್‌ನಲ್ಲಿ ಪಾರಿವಾಳಗಳ ರೇಸ್‌ಗೆ ಬಳಸುತ್ತಿದ್ದ ಈ ಪಾರಿವಾಳ ಆಕಸ್ಮಿಕವಾಗಿ ಭಾರತಕ್ಕೆ ಬಂದಿದೆ ಎಂಬುದು ಪತ್ತೆಯಾಗಿದೆ. ಹೀಗಾಗಿ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಮೇ ತಿಂಗಳಿನಲ್ಲಿ ಚೆಂಬೂರಿನ ಪಿರ್‌ಪೌ ಜೆಟ್ಟಿಯಲ್ಲಿ ಆರ್‌ಸಿಎಫ್ ಪೊಲೀಸರು ಪಾರಿವಾಳವನ್ನು ಸೆರೆ ಹಿಡಿದಿದ್ದರು. ಈ ಪಾರಿವಾಳದ ಕಾಲುಗಳಿಗೆ ಒಂದು ಅಲ್ಯುಮಿನಿಯಂ ಹಾಗೂ ಮತ್ತೊಂದು ತಾಮ್ರದ ಉಂಗುರ ಹಾಕಲಾಗಿತ್ತು. ಅಲ್ಲದೇ ಅದರ ರೆಕ್ಕೆಯ ಕೆಳಭಾಗದಲ್ಲಿ ಚೀನಿ ಭಾಷೆ ರೀತಿಯ ಲಿಪಿಯಲ್ಲಿ ಸಂದೇಶವನ್ನು ಬರೆಯಲಾಗಿತ್ತು. ಹೀಗಾಗಿ ಇದನ್ನು ಚೀನಾವು ಭಾರತದ ವಿರುದ್ಧ ಗೂಢಚಾರಿಕೆಗೆ ಬಿಟ್ಟಿದೆ ಎಂದು ಶಂಕಿಸಲಾಗಿತ್ತು. ಆದರೀಗ ಆಸ್ಪತ್ರೆಯು ಪೊಲೀಸರ ಅನುಮತಿ ಮೇರೆಗೆ ಪಾರಿವಾಳವನ್ನು ಬಿಡುಗಡೆ ಮಾಡಿದೆ.

ಕಳೆದ ಎಂಟು ತಿಂಗಳಿಂದ ಪರೇಲ್‌ನಲ್ಲಿರುವ ಪಶು ವೈದ್ಯಕೀಯ ಆಸ್ಪತ್ರೆ ಬಾಯಿ ಸಕರ್ಬಾಯಿ ದಿನ್ಶಾ ಪೆಟಿಟ್ ಆಸ್ಪತ್ರೆಯ ವಶದಲ್ಲಿದ್ದ ಪಾರಿವಾಳವನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷ ಮೇ 17ರಂದು ಚೆಂಬೂರಿನ ಆರ್‌ಸಿಎಫ್ (ರಾಷ್ಟ್ರೀಯ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್) ಪೊಲೀಸರು ಪಿರ್ ಪೌ ಜೆಟ್ಟಿ ಜೆಟ್ಟಿಯಲ್ಲಿ ಇದನ್ನು ಸೆರೆ ಹಿಡಿದಿದ್ದರು. ಉಂಗುರಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದ್ದರೆ. ಪಾರಿವಾಳವನ್ನು ತಪಾಸಣೆಗಾಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. ಪಾರಿವಾಳದ ಆರೋಗ್ಯ ಉತ್ತಮ ಸ್ಥಿತಿಯಲ್ಲಿದೆ ಎಂದು ಆಸ್ಪತ್ರೆಯ ಮ್ಯಾನೇಜರ್ ಡಾ ಮಯೂರ್ ದಂಗರ್ ತಿಳಿಸಿದ್ದಾರೆ. "ನಾವು ಪಾರಿವಾಳವನ್ನು ಪೋಲೀಸ್ ಕಸ್ಟಡಿಯಲ್ಲಿ ನೀಡಿದ್ದರಿಂದ, ಅನುಮತಿಯಿಲ್ಲದೆ ನಾವು ಅದನ್ನು ಬಿಡಲು ಸಾಧ್ಯವಿಲ್ಲ' ಎಂದು ಹೇಳಿದ್ದರು.

ಆರ್‌ಸಿಎಫ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ರವೀಂದ್ರ ಪಾಟೀಲ್ ಜನವರಿ 17 ರಂದು ಮಾತನಾಡುವ ವೇಳೆ, ಪಾರಿವಾಳವು ತೈವಾನ್‌ನಲ್ಲಿ ಓಪನ್‌ ವಾಟರ್‌ ರೇಸಿಂಗ್‌ನಲ್ಲಿ ಭಾಗವಹಿಸುತ್ತದೆ. ಇಂಥದ್ದೇ ಒಂದು ಕಾರ್ಯಕ್ರಮದ ವೇಳೆ ಇದು ದೇಶದ ಗಡಿಯನ್ನು ದಾಟಿ ಭಾರತಕ್ಕೆ ಬಂದಿದೆ. ಇದರ ಮೇಲಿದ್ದ ಬೇಹುಗಾರಿಕೆ ಆರೋಪಗಳನ್ನೂ ಕೈಬಿಡಲಾಗಿದ್ದು, ಈಗಾಗಲೇ ಪಾರಿವಾಳವನ್ನು ಬಿಡುಗಡೆ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಿದ್ದರು.

ಆಸ್ಪತ್ರೆಯಲ್ಲಿ ಸೋಂಕು ಮತ್ತು ಗಾಯಗೊಂಡ ಪಕ್ಷಿಗಳಿಗೆ ಮೀಸಲಾದ ಎಂಟು ಪಂಜರಗಳಲ್ಲಿ ಒಂದರಲ್ಲಿ ಈ ಪಾರಿವಾಳವನ್ನು ಇಡಲಾಗಿತ್ತು. ಆರ್‌ಸಿಎಫ್ ಪೊಲೀಸ್ ಠಾಣೆಗೆ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ದಂಗರ್‌ ತಿಳಿಸಿದ್ದರು. ಮಾಧ್ಯಮ ವರದಿಯ ನಂತರ, ಆಸ್ಪತ್ರೆಯು ಜನವರಿ 22 ರಂದು ಪೊಲೀಸರಿಗೆ ಮತ್ತೊಮ್ಮೆ ಪತ್ರ ಬರೆದು, ಪಾರಿವಾಳವನ್ನು ಬಿಡಲು ಅನುಮತಿ ಕೇಳಿತ್ತು.

ಡಿಡಿಯಲ್ಲಿ ಮತ್ತೆ ಪ್ರಸಾರವಾಗಲಿದೆ ರಮಾನಂದ್‌ ಸಾಗರ್‌ ಅವರ 'ರಾಮಾಯಣ'!

ಪೊಲೀಸ್ ಠಾಣೆಯು ಸೋಮವಾರ ಆಸ್ಪತ್ರೆಗೆ ಪತ್ರವನ್ನು ಕಳುಹಿಸಿದ್ದು, “ಪಾರಿವಾಳವನ್ನು ಔಷಧೀಯ ಮತ್ತು ಸುರಕ್ಷಿತವಾಗಿರಿಸುವ ಉದ್ದೇಶಕ್ಕಾಗಿ ಕಳುಹಿಸಲಾಗಿದೆ. ವಿಚಾರಣೆ ಪೂರ್ಣಗೊಂಡಿದೆ. ಪಾರಿವಾಳ ವೈದ್ಯಕೀಯವಾಗಿ ಸ್ಥಿರವಾಗಿದ್ದರೆ, ಅದನ್ನು ಬಿಡುಗಡೆ ಮಾಡಲು ಪೊಲೀಸ್ ಠಾಣೆಗೆ ಯಾವುದೇ ಅಭ್ಯಂತರವಿಲ್ಲ' ಎಂದು ಬರೆದಿದೆ.

ಮಾಲ್ಡೀವ್ಸ್‌ನತ್ತ ಚೀನಾ ಗೂಢಚರ್ಯೆ ನೌಕೆ: ಭಾರತ-ಮಾಲ್ಡೀವ್ಸ್‌ ಸಂಘರ್ಷದ ಬೆನ್ನಲ್ಲೇ ಈ ಬೆಳವಣಿಗೆ

click me!