ಕಳೆದ ಡಿಸೆಂಬರ್‌ನಲ್ಲಿ ಭಾರತೀಯ ಸೇನೆಯ ಕಸ್ಟಡಿಯಲ್ಲಿದ್ದಾಗಲೇ ಮೂವರು ನಾಗರೀಕರು ಸಾವು ಕಂಡ ಬೆನ್ನಲ್ಲಿಯೇ ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಪಿರ್ ಟೋಪಾ ಹಳ್ಳಿಯನ್ನು ದತ್ತು ತೆಗೆದುಕೊಳ್ಳುವುದಾಗಿ ಭಾರತೀಯ ಸೇನೆ ಘೋಷಣೆ ಮಾಡಿದೆ.
ನವದೆಹಲಿ (ಜ.13): ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆ ಪಿರ್ ಟೋಪಾ ಹಳ್ಳಿಯನ್ನು ದತ್ತು ತೆಗೆದುಕೊಳ್ಳುವುದಾಗಿ ಭಾರತೀಯ ಸೇನೆ ಘೋಷಣೆ ಮಾಡಿದೆ. ಕಳೆದ ಡಿಸೆಂಬರ್‌ನಲ್ಲಿ ಭಾರತೀಯ ಸೇನೆಯ ಕಸ್ಟಡಿಯಲ್ಲಿದ್ದಾಗಲೇ ಈ ಹಳ್ಳಿಯ ಮೂವರು ನಾಗರೀಕರು ಸಾವು ಕಂಡಿದ್ದರು. ಇದರ ಬೆನ್ನಲ್ಲಿಯೇ ಭಾರತೀಯ ಸೇನೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಹಳ್ಳಿಗರ ಹೃದಯ ಗೆಲ್ಲುವ ಗುರಿಯಲ್ಲಿ ಸಾರ್ವಜನಿಕ ಪರ ಕಾರ್ಯಕ್ರಮ "ಸದ್ಭಾವನಾ" ಅಡಿಯಲ್ಲಿ ಸೇನೆಯು ಉಪಕ್ರಮವನ್ನು ತೆಗೆದುಕೊಂಡಿದೆ. ಎಕ್ಸ್‌ನಲ್ಲಿ ಈ ಕುರಿತಾದ ಪೋಸ್ಟ್ ಹಂಚಿಕೊಳ್ಳುವ ಮೂಲಕ ಭಾರತೀಯ ಸೇನೆ ಈ ಘೋಷಣೆ ಮಾಡಿದೆ. ನಾರ್ಥರ್ನ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಸದ್ಭಾವನಾ ಅಡಿಯಲ್ಲಿ ವೈಟ್‌ನೈಟ್ ಕಾರ್ಪ್ಸ್‌ನ ನಿರ್ಧಾರವನ್ನು ಶ್ಲಾಘಿಸಿದ್ದಾರೆ ಎಂದು ಸೇನೆ ಹೇಳಿದೆ.
ಪಿರ್ ಟೋಪಾ ಪೂಂಚ್‌ನ ಸುರನ್‌ಕೋಟೆ ಉಪವಿಭಾಗದಲ್ಲಿರುವ ಗ್ರಾಮವಾಗಿದೆ ಮತ್ತು ಈ ಗ್ರಾಮವು ರಾಜೌರಿ ಜಿಲ್ಲೆಯ ಥಾನಮಂಡಿ ಉಪ ವಿಭಾಗ ಮತ್ತು ಪೂಂಚ್‌ನ ಸುರನ್‌ಕೋಟೆ ನಡುವಿನ ಡೆಹ್ರಾ ಕಿ ಗಲಿ (ಡಿಕೆಜಿ) ದಟ್ಟವಾದ ಅರಣ್ಯದ ಪಕ್ಕದಲ್ಲಿದೆ. ಸರಿಯಾದ ರಸ್ತೆ ಸಂಪರ್ಕವಿಲ್ಲದ ದೂರದ ಹಳ್ಳಿಯಲ್ಲಿ ಹೆಚ್ಚಾಗಿ ಬುಡಕಟ್ಟು ಸಮುದಾಯಗಳ ಜನರು ವಾಸಿಸುತ್ತಾರೆ.
ಪಿರ್ ಟೋಪಾ ಗ್ರಾಮದ ನಿವಾಸಿಗಳಾದ ಮೂವರು ನಾಗರಿಕರು ಸೇನೆಯ ವಶದಲ್ಲಿಯೇ ಸಾವನ್ನಪ್ಪಿದ ನಂತರ ಗ್ರಾಮವು ವಿಚಾರ ಮುನ್ನೆಲೆಗೆ ಬಂದಿತ್ತು. ಭಯೋತ್ಪಾದಕರು ಸೇನಾ ವಾಹನಗಳನ್ನು ಗುರಿ ಮಾಡಿ ದಾಳಿ ಮಾಡಿದ ಒಂದು ದಿನದ ಬಳಿಕ ಭಾರತೀಯ ಸೇನೆ ಮೂವರು ನಾಗರೀಕರನ್ನು ವಶಕ್ಕೆ ಪಡೆದುಕೊಂಡಿತ್ತು. ಈ ದಾಳಿಯಲ್ಲಿ ನಾಲ್ವರು ಸೈನಿಕರು ಸಾವು ಕಂಡಿದ್ದರು.
ಭಾರತೀಯ ಸೇನೆಯನ್ನು ಬೆಂಬಲಿಸಿ ಎಂದು ಹೇಳಿ ಸಾವಿಗೆ ಶರಣಾದ ಜಮ್ಮುಕಾಶ್ಮೀರದ ವ್ಯಕ್ತಿ
ಸೇನಾ ವಶದಲ್ಲಿ ನಾಗರೀಕರು ಸಾವು ಕಂಡ ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪೂಂಚ್‌ಗೆ ಭೇಟಿ ನೀಡಿ ಕುಟುಂಬಗಳನ್ನು ಭೇಟಿ ಮಾಡಿದರು. ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳನ್ನು ಮುಂದುವರೆಸಲು ಅವರು ಸೇನಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಆದರೆ 'ಜನರ ಹೃದಯವನ್ನು ಗೆಲ್ಲುವತ್ತಲೂ ಸೇನೆ ಗಮನ ನೀಡಬೇಕು ಎಂದು ಹೇಳಿದ್ದರು. ಘಟನೆಯ ಕುರಿತು ಸೇನೆಯು ನ್ಯಾಯಾಲಯದ ವಿಚಾರಣೆಯನ್ನು (COI) ಸ್ಥಾಪನೆ ಮಾಡಲಾಗಿದ್ದು, ಬ್ರಿಗೇಡ್ ಕಮಾಂಡರ್ ಸೇರಿದಂತೆ ಮೂವರು ಉನ್ನತ ಅಧಿಕಾರಿಗಳನ್ನು ಈಗಾಗಲೇ ತೆಗೆದುಹಾಕಲಾಗಿದೆ.
ಪೂಂಚ್ ಸೆಕ್ಟರ್‌ನಲ್ಲಿ ಭೀಕರ ಭಯೋತ್ಪಾದಕ ದಾಳಿ, ಭಾರತೀಯ ಸೇನಾ ಮೇಲೆ ಗುಂಡಿನ ಸುರಿಮಳೆ!