
ಕೋಲ್ಕತಾ (ಜೂ.2): ಇತ್ತೀಚಿನ ವಿಧಾನಸಭಾ ಚುನಾವಣೆಯ ಆಘಾತಕಾರಿ ಸೋಲಿನಿಂದ ಚೇತರಿಸಿಕೊಳ್ಳುವ ಮೊದಲೇ ಪಶ್ಚಿಮ ಬಂಗಾಳ(West bengal)ದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(mamata banerjee)ಗೆ ಮತ್ತಷ್ಟು ಆಘಾತ ಎದುರಾಗಿದೆ. ಶನಿವಾರ ಮಮತಾರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ(Abhishek banerjee) ಮೇಲಿನ ಹಲ್ಲೆಯ ಬೆನ್ನಲ್ಲೇ ಟಿಎಂಸಿ(TMC)ಯ ಮತ್ತೋರ್ವ ಸಂಸದ ಕಲ್ಯಾಣ್ ಬ್ಯಾನರ್ಜಿ(MP Kalyan banerjee) ಮೇಲೆ ಭಾನುವಾರ ಗುಂಪೊಂದು ಕೋಲ್ಕತಾದಲ್ಲಿ ಹಲ್ಲೆ ನಡೆಸಿದೆ. ಇದು ಪಕ್ಷದ ನಾಯಕರು ಮತ್ತು ಕಾರ್ಯಕರ್ತರಲ್ಲಿ ಭಾರೀ ಕಳವಳ ಹುಟ್ಟಿಸಿದೆ.
ಈ ಬೆಳವಣಿಗೆ ನಡುವೆಯೇ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಭಾನುವಾರ ಇಲ್ಲಿ ಕರೆದಿದ್ದ ನೂತನ ಶಾಸಕರ ಸಭೆಗೆ 80 ಶಾಸಕರ ಪೈಕಿ ಕೇವಲ 20 ಮಂದಿ ಮಾತ್ರ ಹಾಜರಾಗಿದ್ದಾರೆ. ಮಮತಾ ಅವರ ಕಾಳಿಘಾಟ್ ನಿವಾಸದಲ್ಲಿ ಸಭೆ ಆಯೋಜಿಸಲಾಗಿತ್ತು. ಆದರೆ ಶಾಸಕರ ಸಭೆಗೆ ನಾಲ್ಕನೇ ಒಂದು ಭಾಗದಷ್ಟು ಶಾಸಕರು ಗೈರಾಗಿದ್ದ ಕಾರಣ ಸಭೆಯನ್ನೇ ರದ್ದುಗೊಳಿಸಲಾಯಿತು.
ಇಬ್ಬರು ನಾಯಕರ ಮೇಲಿನ ದಾಳಿಯಿಂದ ಭೀತಿಗೊಳಗಾಗಿ ಶಾಸಕರು ಸಭೆಗೆ ಗೈರಾಗಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿದ್ದರೆ, ಚುನಾವಣಾ ಫಲಿತಾಂಶದ ಬಳಿಕ ಟಿಎಂಸಿಯಲ್ಲಿ ಒಡಕು ಮೂಡಿರುವುದೇ ಶಾಸಕರು ಸಭೆಗೆ ಗೈರಾಗಲು ಕಾರಣ ಎಂದು ವರದಿಗಳು ಹೇಳಿವೆ.
ಕೋಲ್ಕತಾ: ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಮೇಲೆ ಹಲ್ಲೆ ಸಂಬಂಧ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ್ದಕ್ಕೆ ಆಸ್ಪತ್ರೆ ಸಿಇಒ ಮೇಲೆಯೇ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಕೂಗಾಟ ನಡೆಸಿದ್ದಾರೆ. ಇದರ ವಿಡಿಯೋ ಹಂಚಿಕೊಂಡು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.
ಹಲ್ಲೆ ಬಳಿಕ ಅಭಿಷೇಕ್ ಅವರನ್ನು ಕೋಲ್ಕತ್ತಾದ ಬೆಲ್ಲೆ ವ್ಯೂ ಆಸ್ಪತ್ರೆ(Bellevue Hospital, Kolkata)ಗೆ ಕರೆದೊಯ್ಯಲಾಗಿತ್ತು. ಪ್ರಾಥಮಿಕ ಚಿಕಿತ್ಸೆ ನೀಡಿದ್ದ ವೈದ್ಯರು, ಅವರನ್ನು ದಾಖಲಿಸಿಕೊಳ್ಳುವ ಅಗತ್ಯವಿರಲಿಲ್ಲ ಎಂದಿದ್ದರು. ಇಷ್ಟಕ್ಕೆ ಸಿಟ್ಟಾದ ಮಮತಾ ಆಸ್ಪತ್ರೆ ಸಿಇಒ ಪ್ರದೀಪ್ ಟಂಡನ್ ವಿರುದ್ಧ ಕಿಡಿಕಾರಿದ್ದಾರೆ. ‘ನೀವು ತಪ್ಪು ಮಾಡುತ್ತಿದ್ದೀರಿ. ದೇವರು ನಿಮ್ಮನ್ನು ಕ್ಷಮಿಸುವುದಿಲ್ಲ. ನೀವು ನಾಚಿಕೆ ಪಡಬೇಕು. ಬಿಜೆಪಿ ಅಧಿಕಾರದಲ್ಲಿರುವುದರಿಂದ ನೀವು ಆಸ್ಪತ್ರೆ ನಡೆಸುತ್ತಿದ್ದೀರಿ. ವೈದ್ಯರನ್ನು ಬೆದರಿಸುತ್ತಿದ್ದೀರಿ. ಒಂದು ವೇಳೆ ನಾಳೆ ಕೇಂದ್ರ ಅಧಿಕಾರದಲ್ಲಿರದಿದ್ದರೆ ನಾವು ಇದನ್ನು ನೋಡಿಕೊಳ್ಳುತ್ತೇವೆ’ ಎಂದು ಬೆದರಿಸಿದ್ದಾರೆ.
ಬಿಜೆಪಿ ರಾಜ್ಯ ವಕ್ತಾರ ದೇವಜಿತ್ ಸರ್ಕಾರ್ ಈ ವಿಡಿಯೋ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ‘ಗಂಭೀರ ಗಾಯಗಳಾಗದಿದ್ದರೂ ತಮ್ಮ ಸೋದರಳಿಯನನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಮಮತಾ ಬ್ಯಾನರ್ಜಿ ಆಸ್ಪತ್ರೆಯವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದು ಸಿಐಡಿ ಸಮನ್ಸ್‌ನಿಂದ ತಪ್ಪಿಸಿಕೊಳ್ಳುವ ಪ್ರಯತ್ನವೇ? ’ ಎಂದು ಪ್ರಶ್ನಿಸಿದ್ದಾರೆ.
ಕೋಲ್ಕತಾ: ಪಶ್ಚಿಮ ಬಂಗಾಳ ಚುನಾವಣಾ ಬಳಿಕ ಟಿಎಂಸಿಯಲ್ಲಿ ಒಡಕು ಮೂಡಿದೆ ಎನ್ನುವ ವದಂತಿ ನಡುವೆ ಅದನ್ನು ಪುಷ್ಟೀಕರಿಸುವಂತೆ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕರೆದಿದ್ದ ನೂತನ ಶಾಸಕರ ಸಭೆಗೆ 80 ಶಾಸಕರ ಪೈಕಿ ಕೇವಲ 20 ಮಂದಿ ಮಾತ್ರ ಹಾಜರಾಗಿದ್ದಾರೆ.
ಮಮತಾ ಅವರ ಕಾಳಿಘಾಟ್ ನಿವಾಸದಲ್ಲಿ ಸಭೆ ಆಯೋಜಿಸಲಾಗಿತ್ತು. ಆದರೆ ಶಾಸಕರ ಸಭೆಗೆ ನಾಲ್ಕನೇ ಒಂದು ಭಾಗದಷ್ಟು ಶಾಸಕರು ಗೈರಾಗಿದ್ದ ಕಾರಣ ಸಭೆಯನ್ನೇ ರದ್ದುಗೊಳಿಸಲಾಯಿತು.
ಆದರೆ ಇದಕ್ಕೆ ಸ್ಪಷ್ಟನೆ ನೀಡಿದ ಟಿಎಂಸಿ ವಕ್ತಾರ ಕುನಾಲ್ ಘೋಷ್, ‘ನಮ್ಮ ನಾಯಕ ಅಭಿಷೇಕ್ ಬ್ಯಾನರ್ಜಿ ಮತ್ತು ಸಂಸದ ಕಲ್ಯಾಣ್ ಬ್ಯಾನರ್ಜಿ ಅವರ ಮೇಲಿನ ಹಲ್ಲೆ ಕಾರಣದಿಂದ ಆತಂಕಗೊಂಡಿರುವ ಶಾಸಕರು ಸಭೆಗೆ ಬಂದಿಲ್ಲ. ಗೈರಾದ ಶಾಸಕರ ವಿನಂತಿ ಮೇರೆಗೆ ಸಭೆ ಮುಂದೂಡಲಾಗಿದೆ. ಶೀಘ್ರದಲ್ಲಿ ಮುಂದಿನ ದಿನಾಂಕ ನಿಗದಿಪಡಿಸಲಾಗುವುದು’ ಎಂದರು.
ಅಭಿಷೇಕ್ ಬ್ಯಾನರ್ಜಿ ಹಲ್ಲೆ ಪ್ರಕರಣ: 6 ಜನರ ಬಂಧನ
ಇನ್ನು ಬಂಗಾಳ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಸೋದರಳಿಯ, ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಮೇಲೆ ಶನಿವಾರ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾನುವಾರ 6 ಜನರನ್ನು ಬಂಧಿಸಿದ್ದಾರೆ.
ಶನಿವಾರ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಷೇಕ್ ಬ್ಯಾನರ್ಜಿ ಆಗಲಿ ಅಥವಾ ತೃಣಮೂಲ ಕಾಂಗ್ರೆಸ್ ಯಾವುದೇ ದೂರು ನೀಡಿರಲಿಲ್ಲ. ಹೀಗಾಗಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅದರಂತೆ ಸೋನಾರ್ಪುರ್ ದಕ್ಷಿಣದಲ್ಲಿ ಶನಿವಾರ ನಡೆದಿದ್ದ ಹಲ್ಲೆ ಸಂದರ್ಭದಲ್ಲಿನ ಸಿಸಿಟೀವಿ ದೃಶ್ಯಗಳ ಪರಿಶೀಲಿಸಿ ಪೊಲೀಸರು ರಾತ್ರಿಯಿಡೀ ಶೋಧ ನಡೆಸಿ 6 ಜನರನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚುನಾವಣೋತ್ತರ ಹಿಂಸಾಚಾರಕ್ಕೆ ತುತ್ತಾಗಿದ್ದ ಪಕ್ಷದ ಕಾರ್ಯಕರ್ತರ ಮನೆಗೆ ತೆರಳಿದ್ದ ಟಿಎಂಸಿ ನಂ.2 ನಾಯಕನ ಮೇಲೆ ಶನಿವಾರ ಗುಂಪೊಂದು ಕಲ್ಲು, ಚಪ್ಪಲಿ, ಮೊಟ್ಟೆಯಿಂದ ದಾಳಿ ಮಾಡಿತ್ತು. ಆಗ ಪೊಲೀಸರು ಹೆಲ್ಮೆಟ್ ಹಾಕಿ ರಕ್ಷಣೆ ಮಾಡಿದ್ದರು.
ಬಂಧಿತರಲ್ಲಿ ಹಲವರು ಟಿಎಂಸಿಯವರೇ?
ಬಂಧಿತರಲ್ಲಿ ತಪನ್ ಮೈಟಿ, ಆಕಾಶ್, ನಿರ್ಮಾಲ್ಯ ಸೇನ್‌ಗುಪ್ತಾ, ಕಾಜಲ್ ದಾಸ್ ಮತ್ತು ದೇಬಾಶಿಶ್ ದತ್ತಾ ಎಂಬುವರು ಇದ್ದಾರೆ. ಇವರಲ್ಲಿ ದಾಸ್, ನಿರ್ಮಾಲ್ಯ ಹಾಗೂ ದತ್ತಾ ಟಿಎಂಸಿಯ ಮಾಜಿ ಶಾಸಕಿ ಲವ್ಲಿ ಮೈತ್ರಾ ಅವರ ಆಪ್ತರಾಗಿದ್ದರು. ಬಹುಶಃ ಪಕ್ಷದಲ್ಲಿನ ಒಳಜಗಳ ಘಟನೆಗೆ ಕಾರಣವಾಗಿರಬಹುದೆ ಎಂದು ಪ್ರಶ್ನೆ ಉದ್ಭವಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ