101 ವರ್ಷಗಳಾದರೂ ಮಾಸದ ಜಲಿಯನ್ ವಾಲಾಬಾಗ್ ಗಾಯದ ನೋವು

By Suvarna NewsFirst Published Apr 13, 2020, 9:38 AM IST
Highlights

ದೇಶದ ಇತಿಹಾಸದಲ್ಲಿ ಮತ್ತೆ ಘಟಿಸಲು ಸಾಧ್ಯವೇ ಇಲ್ಲದಂಥ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು ಏ.13ಕ್ಕೆ 101 ವರ್ಷ. ಶತಮಾನವೇ ಕಳೆದರೂ ಭಾರತೀಯರ ಸಂಕಟವಿನ್ನೂ ಕಡಿಮೆಯಾಗಿಲ್ಲ. ಅನ್ಯಾಯವಾಗಿ ಭಾರತೀಯರ ಮೇಲೆ ಗುಂಡಿನ ದಾಳಿ ನಡೆಸಿದ ಬ್ರಿಟಿಷರ ಮೇಲೆ ಆಕ್ರೋಶ ಮಾಸಿಲ್ಲ. ಇಂಥ ಐತಿಹಾಸಿಕ ಘಟನೆಯ ಮೆಲಕು. 

ಅದು 101 ವರ್ಷಗಳ ಹಿಂದೆ ನಡೆದುಹೋದ ಭೀಕರ ಮಾರಣಹೋಮ. ಮನುಕುಲದ ಇತಿಹಾಸದ ಅತ್ಯಂತ ನಿರ್ಧಯ ಹತ್ಯಾಕಾಂಡ. ಅದೇ ಜಲಿಯನ್ ವಾಲಾಬಾಗ್ ಹತ್ಯಾಕಾಂಡ. ಇಂತಹ ಮತ್ತೊಂದು ನಿರ್ಧಯ ಮಾರಣಹೋಮ ದೇಶದ ಇತಿಹಾಸದಲ್ಲಿ ದಾಖಲಾಗಿಯೇ ಇಲ್ಲ. ನೂರು ವರ್ಷಗಳ ಹಿಂದೆ ನಡೆದು ಹೋದ ಆ ಹಳೇ ಗಾಯದ ಗುರುತು ಇನ್ನೂ ಮಾಸಿಲ್ಲ.. 

ಅದು ಸಿಖ್​ರ ನಾಡು ಪಂಜಾಬ್​ನ ಅಮೃತಸರದಲ್ಲಿ ನಡೆದು ಹೋದ ಭೀಕರ ಮಾರಣ ಹೋಮ. 1919ರ ಏಪ್ರಿಲ್ 13 ನೇ ತಾರೀಖಿನ ಭಾನುವಾರ. ಅವತ್ತು ಸಿಖ್ಖರ ಪಾಲಿನ ಯುಗಾದಿ ಬೈಸಾಕಿ ಹಬ್ಬ. ಹೊಸ ವರ್ಷ ಆಚರಿಸಲು ಸಾವಿರಾರು ಜನ ಅಮೃತಸರದ ಜಲಿಯನ್ ವಾಲಾಬಾಗ್ ಉದ್ಯಾನವನದಲ್ಲಿ ಸೇರಿದ್ರು. ಆರರಿಂದ ಏಳು ಎಕರೆ ವಿಸ್ತೀರ್ಣದ ಪಾರ್ಕ್ ಅದು. ಎಲ್ಲರೂ ಬೈಸಾಕಿ ಹಬ್ಬದ ಸಂಭ್ರಮದಲ್ಲಿದ್ರು.

ಇನ್ನೇನು ಸೂರ್ಯ ಮುಳುಗುವ ಸಮಯ. ಆಗ ಅಲ್ಲಿಗೆ ಬಂದಿದ್ದು 90 ಸೈನಿಕರ ಬ್ರಿಟೀಷ್ ತುಕಡಿ. ಬಂದವರೇ ಒಬ್ಬರೂ ತಪ್ಪಿಸಿಕೊಳ್ಳಬಾರದು ಅಂತ ಉದ್ಯಾನವನಕ್ಕಿದ್ದ ಏಕೈಕ ಬಾಗಿಲನ್ನ ಮುಚ್ಚಲಾಯ್ತು.  ಬ್ರಿಟೀಷ್ ಸೈನಿಕ ತುಕಡಿ ಪೊಸಿಷನ್ ತೆಗೆದುಕೊಂಡು ತಮ್ಮ ಬಂದೂಕುಗಳಿಂದ ಗುಂಡಿನ ಮಳೆಗರೆದರು. ಅದು ಸುಮಾರು 10 ನಿಮಿಷಗಳ ಕಾಲ ಗುಂಡಿನ ಬೋರ್ಗರೆತ. ಹಬ್ಬದ ಸಂಭ್ರಮದಲ್ಲಿದ್ದ ಉದ್ಯಾನವನ ಅಕ್ಷರಶಃ ಸ್ಮಶಾನವಾಗಿತ್ತು. ಅವತ್ತು ಹಾಗೆ ಬ್ರಿಟಿಷರ ಗುಂಡಿಗೆ ಪ್ರಾಣ ತೆತ್ತವರ ಸಂಖ್ಯೆ 1200 ಕ್ಕೂ ಹೆಚ್ಚು. ಗುಂಡಿಗೆ ಎದೆಯೊಡ್ಡಲು ಅಳುಕಿದ ನೂರಕ್ಕೂ ಹೆಚ್ಚು ಜನ ಅಲ್ಲೇ ಇದ್ದ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡ್ರು. ಎಳೆಯ ಕಂದಮ್ಮಗಳು, ಮಕ್ಕಳು, ಮಹಿಳೆಯರೂ, ವೃದ್ಧರೂ ಅನ್ನೋದನ್ನೂ ನೋಡದೇ ನಿರ್ಧಯವಾಗಿ ಮಾರಣಹೋಮ ನಡೆಸಲಾಗಿತ್ತು. 

ಭಾರತದ ದಾಳಿಗೆ 8 ಉಗ್ರರು, 15 ಪಾಕ್‌ ಯೋಧರು ಸಾವು; ಪಾಕ್‌ಗೆ ತಕ್ಕ ಶಾಸ್ತಿ

ಆ ಕ್ರೂರಿಯ ಹೆಸರು ಡಯರ್...

ಇಂತದ್ದೊಂದು ಘೋರ ಹತ್ಯಾಕಾಂಡ ನಡೆಸಿದವನ ಹೆಸರು ಜನರಲ್ ಡಯರ್. ಬ್ರಿಟೀಷ್-ಇಂಡಿಯಾ ಸೇನೆಯ ಅಧಿಕಾರಿಯಾಗಿದ್ದ ಈತನನ್ನ ಇತಿಹಾಸ ರಕ್ತ ಪಿಪಾಸು ಅಂತಲೇ ಗುರುತಿಸುತ್ತೆ. ಇಂತದ್ದೊಂದು ಭೀಕರ ಹತ್ಯಾಕಾಂಡ ನಡೆಸಲಿಕ್ಕೆ ಅಲ್ಲಿ ಸೇರಿದ್ದ ಜನ ಮಾಡಿದ್ದ ತಪ್ಪಾದ್ರೂ ಏನು ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಬ್ರಿಟೀಷರ ವಿರುದ್ಧ ಭಾರತೀಯರು ದಂಗೆಯೇಳಬಹುದು ಅನ್ನೋ ಒಂದೇ ಒಂದು ಅನುಮಾನ ಇಂಥದ್ದೊಂದು ಮಾರಣಹೋಮಕ್ಕೆ ಕಾರಣವಾಗಿತ್ತು.

ಬ್ರಿಟಿಷ್ ಸರ್ಕಾರ ಎಲ್ಲ ಸಭೆ ಸಮಾರಂಭಗಳನ್ನೂ ನಿಷೇಧಿಸಿತ್ತು.  ನಿಷೇಧಾಜ್ಞೆ ಉಲ್ಲಂಘಿಸಿ ಹಬ್ಬದ ಸಂಭ್ರಮಕ್ಕೆ ಸೇರಿದ್ದೇ ಆ ಜನ ಮಾಡಿದ್ದ ತಪ್ಪು. ಈ ಹತ್ಯಾಕಾಂಡದಲ್ಲಿ ಪ್ರಾಣ ತೆತ್ತವರ ಸಂಖ್ಯೆ 1200ಕ್ಕೂ ಹೆಚ್ಚು ಅನ್ನುತ್ತದೆ ಇತಿಹಾಸ. ಆದ್ರೆ ಅವತ್ತಿನ ಬ್ರಿಟಿಷ್ ಸರ್ಕಾರ ಸತ್ತವರ ಸಂಖ್ಯೆ ಕೇವಲ 379 ಅನ್ನೋ ಕಾಟಾಚಾರದ ಲೆಕ್ಕ ಕೊಟ್ಟಿತ್ತು.

ಜನರಲ್ ಡಯರ್ ಮಾಡಿದ ಕೆಲಸಕ್ಕೆ ಬ್ರಿಟನ್ ನಲ್ಲಿ ಶ್ಲಾಘನೆ ವ್ಯಕ್ತವಾಗಿತ್ತು. ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮವನ್ನ ಜನರಲ್ ಡಯರ್ ಹತ್ತಿಕ್ಕಿದ ಅಂತ ಸಂಭ್ರಮಿಸಿದ್ದರು ಬ್ರಿಟಿಷರು. ಅವತ್ತು ಆತನಿಗೆ ಶಿಕ್ಷೆ ಕೊಡಿ ಅಂತ ಕೇಳುವ ಗಟ್ಟಿ ದ್ವನಿ ಗಾಂಧೀಜಿ, ನೆಹರೂ ಸೇರಿದಂತೆ ಯಾರಿಗೂ ಇರಲಿಲ್ಲ. ಅವತ್ತಿಗೆ ಜನರಲ್ ಡಯರ್ ಮತ್ತು ಬ್ರಿಟೀಷ್ ಆಡಳಿತದ ವಿರುದ್ಧ ಪಂಜಾಬ್ ಸೇರಿದಂತೆ ಇಡೀ ದೇಶದಲ್ಲಿ ಆಕ್ರೋಶದ ಜ್ವಾಲೆ ಕುದಿಯುತ್ತಿತ್ತು. ಆಕ್ರೋಶಕ್ಕೆ ಮಣಿದ ಬ್ರಿಟೀಷ್ ಸರ್ಕಾರ ಕಾಟಾಚಾರಕ್ಕೊಂದು ತನಿಖೆಯನ್ನೂ ಮಾಡಿ, ಡಯರ್ ನನ್ನ ಲಂಡನ್ ಗೆ ವಾಪಸ್ ಕರೆಸಿಕೊಂಡಿತ್ತು. 1200 ಕ್ಕೂ ಹೆಚ್ಚು ಜನರ ರಕ್ತ ಕುಡಿದವನು ಕೆಲ ವರ್ಷಗಳ ನಂತರ ಬ್ರಿಟನ್ ನಲ್ಲಿ ಪಾರ್ಶ್ವವಾಯು ರೋಗಕ್ಕೆ ತುತ್ತಾಗಿ ಮಲಗಿದ್ದಲ್ಲೇ ಸತ್ತ.

ದೇಶದಲ್ಲಿ ಮೂರು ವಲಯ ರಚಿಸಿ ಲಾಕ್‌ಡೌನ್ 2.0 ಜಾರಿ?

ಪ್ರತೀಕಾರದ ಪಣ

ಹಬ್ಬದ ಸಂಭ್ರಮದಲ್ಲಿದ್ದವರನ್ನ ಮಾರಣ ಹೋಮ ಮಾಡಿದ್ದನ್ನ ಬಾಲಕ ಉದಮ್ ಸಿಂಗ್ ಕಣ್ಣಾರೆ ನೋಡಿದ್ದ. ಅವತ್ತು ತನ್ನವರನ್ನೆಲ್ಲಾ ಕಳೆದುಕೊಂಡು ಗುಂಡೇಟಿನಿಂದ ಗಾಯಗೊಂಡಿದ್ದ ಉದಮ್ ಸಿಂಗ್ ಹತ್ಯಾಕಾಂಡಕ್ಕೆ ಪ್ರತೀಕಾರದ ಪಣ ತೊಟ್ಟಿದ್ದ. ಜಲಿಯನ್ ವಾಲಾಬಾಗ್ ನಲ್ಲಿನ ಮಣ್ಣನ್ನ ಮನೆಗೆ ಕೊಂಡೊಯ್ದು, ತನ್ನ ಜೀವಿತಾವಧಿವರೆಗೆ ಜತೆಗೇ ಇಟ್ಟುಕೊಂಡಿದ್ದ ಉದಮ್ ಸಿಂಗ್. ಹತ್ಯಾಕಾಂಡ ನಡೆಸಿದವನು ಮಲಗಿದ್ದಲ್ಲೇ ಪ್ರಾಣ ಬಿಟ್ಟ ಅನ್ನೋದೇನೋ ನಿಜ. ಆದರೆ ಉದಮ್ ಸಿಂಗ್ ನ ಪ್ರತೀಕಾರದ ಜ್ವಾಲೆ ಮಾತ್ರ ಆರಿರಲಿಲ್ಲ. ಆದರೆ ಪ್ರತೀಕಾರ ಯಾರ ವಿರುದ್ಧ..? ಸಾಮೂಹಿಕವಾಗಿ ಮಾರಣ ಹೋಮ ನಡೆಸಿದವನು ಪ್ರಾಣ ಬಿಟ್ಟಾಗಿತ್ತು. ಗುಂಡಿನ ಮಳೆ ಸುರಿಸುವಂತೆ ಜನರಲ್ ಡಯರ್ ಗೆ ಆದೇಶ ಕೊಟ್ಟಿದ್ದನಲ್ಲ ಅವನ ವಿರುದ್ಧ. ಆತನ ಹೆಸರೇ ಮೈಕಲ್ ಓಡ್ವೈರ್. ಜಲಿಯನ್​ ವಾಲಾ ಬಾಗ್ ಹತ್ಯಾಕಾಂಡ ನಡೆದಾಗ ಪಂಜಾಬ್​ನ ಲೆಫ್ಟಿನೆಂಟ್ ಗೌವರ್ನರ್​ ಆಗಿದ್ದವನು ಈ ಮೈಕಲ್. ಹತ್ಯಾಕಾಂಡದ ನಂತರ ಮಾತನಾಡಿದ್ದ ಮೈಕಲ್ ಬ್ರಿಟೀಷ್ ಸೇನೆ ಮಾಡಿದ್ದು ಸರಿಯಾದ ಕ್ರಮ ಎಂದಿದ್ದ.

ಪ್ರತೀಕಾರದ ನಿರ್ಧಾರ ಮಾಡಿದ್ದ ಉದಮ್​ ಸಿಂಗ್ 1934ರಲ್ಲಿ ಕಾಶ್ಮೀರ ಮೂಲಕ ಇಸ್ಲಾಮಾಬಾದ್, ಕಾಬೂಲ್ ದಾಟಿ ಜರ್ಮನಿ ಸೇರಿಕೊಂಡ. ಕೆಲಕಾಲ ಜರ್ಮನಿಯಲ್ಲಿದ್ದು ನಂತರ ಇಂಗ್ಲೆಂಡ್ ತಲುಪಿಕೊಂಡಿದ್ದ. ಅಲ್ಲೊಂದು ಬಾಡಿಗೆ ಮನೆ ಮಾಡಿಕೊಂಡು ಮೈಕಲ್ ಓಡ್ವೈರ್​ ನ ಹತ್ಯೆಗೆ ಸಂಚು ಮಾಡುತ್ತಲೇ ಇದ್ದ. ಅದು 1940 ಮಾರ್ಚ್ 13 ನೇ ತಾರೀಕಿನ ದಿನ. ಲಂಡನ್ ನ ಕ್ಯಾಕ್ ಸ್ಟನ್ ಹಾಲ್ ನಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ಲೆಫ್ಟಿನೆಂಟ್ ಗೌವರ್ನರ್ ಮೈಕಲ್​ ಬಂದಿದ್ದ. ಆ ಕಾರ್ಯಕ್ರಮಕ್ಕೆ ಹೋಗಿದ್ದ ಉದಮ್​ ಸಿಂಗ್​ ಪಿಸ್ತೂಲ್​ನಿಂದ ಮೈಕೆಲ್​ನ ಎದೆಗೆ ಗುಂಡಿಕ್ಕಿ ಪ್ರತೀಕಾರ ಮುಗಿಸಿದ್ದ. ತನ್ನ ನೆಲದಲ್ಲಿ ಮಾರಣ ಹೋಮ ನಡೆಸಿದವನನ್ನ ಅವನದ್ದೇ ನೆಲಕ್ಕೆ ನುಗ್ಗಿ ಕೊಂದು ಹಾಕಿದ್ದ ಉದಮ್ ಸಿಂಗ್. ಅವತ್ತು ಜಲಿಯನ್ ವಾಲಾಬಾಗ್ ನಲ್ಲಿ ರಕ್ತ ಚೆಲ್ಲಿದ ಸಾವಿರಾರು ಜನರ ಆತ್ಮಗಳ ಆರ್ತನಾದಕ್ಕೆ ಅಂತ್ಯ ಸಿಕ್ಕಿತ್ತು. 21 ವರ್ಷಗಳ ಹೋರಾಟದ ನಂತರ ಉದಮ್ ಸಿಂಗ್ ಮೈಕೆಲ್​ನನ್ನು ಕೊಂದು ಪ್ರತೀಕಾರ ತೀರಿಸಿಕೊಂಡಿದ್ದ.

ದೇಶದಲ್ಲಿ 9000 ದಾಟಿದ ಕೊರೋನಾ ಸೋಂಕು, ಮೃತರ ಸಂಖ್ಯೆ 327ಕ್ಕೆ!

ಪ್ರತೀಕಾರದ ಜ್ವಾಲೆಯನ್ನ ತೀರಿಸಿಕೊಂಡ ಉದಮ್ ಸಿಂಗ್ ಲಂಡನ್ ಕೋರ್ಟ್​ನಲ್ಲಿ ನಿಂತು ಹೇಳಿದ್ದು ಕೆಚ್ಚದೆಯ ಮಾತುಗಳನ್ನ. ‘ನನ್ನ ಜನಗಳ ರಕ್ತ ಕುಡಿದವನನ್ನ ನಾನು ಕೊಂದು ಹಾಕಿದೆ. ನನಗೀಗ ಆನಂದವಾಗಿದೆ, ಇದು ತಾಯ್ನಾಡಿಗಾಗಿ ನಾನು ಮಾಡಿದ ಕರ್ತವ್ಯ. ಪ್ರಾಣ ತ್ಯಾಗ ಮಾಡುವುದಕ್ಕಿಂತಲೂ ಹೆಚ್ಚಿನ ಗೌರವ ಇನ್ನೇನಿದೆ..?’ ಎಂಬ ದಿಟ್ಟ ಮಾತುಗಳನ್ನಾಡಿದ್ದ. ಈ ಘಟನೆ ನಡೆದ ಮೂರು ತಿಂಗಳಲ್ಲೇ ಉದಮ್ ಸಿಂಗ್‌ನನ್ನ ಲಂಡನ್‌ನಲ್ಲಿ ನೇಣಿಗೇರಿಸಲಾಯಿತು.

ಅವತ್ತು ಧೀರ ಉದಮ್ ಸಿಂಗ್ ತೋರಿದ ದೈರ್ಯ ಸಾಹಸ ನೂರಾರು ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಪೂರ್ತಿಯಾಗಿತ್ತು. ಈ ಘಟನೆ ನಡೆದ ಏಳು ವರ್ಷಗಳ ನಂತರ ಸ್ವಾತಂತ್ರ್ಯ ಭಾರತದ ಉದಯವಾಗಿತ್ತು. ಅಮೃತಸರದಲ್ಲಿರುವ ಇವತ್ತಿಗೂ ಜಲಿಯನ್ ವಾಲಾಬಾಗ್ ಗೋಡೆಗಳ ಮೇಲಿರೋ ಗುಂಡಿನ ದಾಳಿಯ ಗುರುತುಗಳು ಸಾವಿರಾರು ಜನರ ಆರ್ತನಾದದ ಕಥೆ ಹೇಳುತ್ವೆ.. ಈ ಏಪ್ರಿಲ್ 13ಕ್ಕೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು 101 ವರ್ಷಗಳಾಗುತ್ತೆ. ಆ ಮಾರಣ ಹೋಮ ನಡೆದು ನೂರು ವರ್ಷಗಳಾದ್ರೂ ಅವತ್ತು ಆದ ಗಾಯ ಇನ್ನೂ ಮಾಸಿಲ್ಲ ಅನ್ನೋದು ಮಾತ್ರ ಸತ್ಯ.

- ಶಶಿಶೇಖರ್, ಸುವರ್ಣ ನ್ಯೂಸ್

click me!