ಭಾರತದ ದಾಳಿಗೆ 8 ಉಗ್ರರು, 15 ಪಾಕ್ ಯೋಧರು ಸಾವು | ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕ್‌ಗೆ ತಕ್ಕ ಶಾಸ್ತಿ | ದೂರಗಾಮಿ ಫಿರಂಗಿ ಬಳಸಿ ಉಗ್ರರ ನೆಲೆ ಮೇಲೆ ದಾಳಿ
ನವದೆಹಲಿ (ಏ. 13): ಗಡಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ಜಮ್ಮು- ಕಾಶ್ಮೀರದ ಕೆರಾನ್ ಸೆಕ್ಟರ್‌ಗೆ ಅಭಿಮುಖವಾಗಿರುವ ದುಧ್ನಿಯಲ್ ಪ್ರದೇಶದಲ್ಲಿನ ಉಗ್ರರ ಲಾಂಚ್‌ಪ್ಯಾಡ್‌ಗಳ ಮೇಲೆ ಭಾರತೀಯ ಸೇನಾಪಡೆಗಳು ಫಿರಂಗಿಗಳ ಮೂಲಕ ಏ.10ರಂದು ದಾಳಿ ನಡೆಸಿವೆ. ಈ ದಾಳಿಯಲ್ಲಿ 8 ಮಂದಿ ಉಗ್ರರು ಹಾಗೂ 15 ಮಂದಿ ಪಾಕಿಸ್ತಾನ ಸೈನಿಕರು ಹತರಾಗಿದ್ದಾರೆ ಎಂಬ ಸಂಗತಿ ಈಗ ಬೆಳಕಿಗೆ ಬಂದಿದೆ.
ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆ ಪ್ರತಿಯಾಗಿ ಕಿಶನ್‌ಗಂಗಾ ನದಿಯ ದಂಡೆಯ ಮೇಲಿರುವ ದುಧ್ನಿಯಲ್ ಪ್ರದೇಶವನ್ನು ಗುರಿಯಾಗಿಸಿಕೊಂಡು ಭಾರತೀಯ ಪಡೆಗಳು ದೂರಗಾಮಿ ಫಿರಂಗಿಗಳ ಮೂಲಕ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿವೆ. ಗುಪ್ತಚರ ವರದಿಗಳ ಪ್ರಕಾರ ಈ ದಾಳಿಯಲ್ಲಿ ಪಾಕಿಸ್ತಾನದ 15 ಸೈನಿಕರು, 8 ಮಂದಿ ಉಗ್ರರು ಸಾವನ್ನಪ್ಪಿದ್ದಾರೆ. ದಾಳಿಯಿಂದ ಆಹಾರ ಮತ್ತು ಸರಕುಗಳನ್ನು ಶೇಖರಿಸಿ ಇಟ್ಟಿದ್ದ ಅಂಗಡಿಗಳಿಗೂ ಹಾನಿ ಸಂಭವಿಸಿದೆ.
ದೇಶದಲ್ಲಿ ಮೂರು ವಲಯ ರಚಿಸಿ ಲಾಕ್‌ಡೌನ್ 2.0 ಜಾರಿ?
ಈ ವಲಯದಲ್ಲಿ ಉಗ್ರರು ಏ.5ರಂದು ಒಳನುಸುಳುವಿಕೆಗೆ ಯತ್ನಿಸುತ್ತಿದ್ದ ವೇಳೆ ಭಾರತೀಯ ಪಡೆಗಳು ದಾಳಿ ನಡೆಸಿ 5 ಮಂದಿ ಉಗ್ರರನ್ನು ಹತ್ಯೆ ಮಾಡಿದ್ದವು. ಇದೇ ವೇಳೆ ಪಾಕಿಸ್ತಾನದ ಲಾಚ್‌ಪ್ಯಾಡ್‌ಗಳಲ್ಲಿ ಲಷ್ಕರ್ ಎ ತೊಯ್ಬಾ, ಜೈಷ್ ಎ ಮೊಹಮ್ಮದ್, ಹಿಜ್ಬುಲ್ ಮುಜಾಹಿದೀನ್‌ನ ಕನಿಷ್ಠ 160 ಉಗ್ರರು ಭಾರತ ಪ್ರವೇಶಕ್ಕೆ ಹೊಂಚು ಹಾಕುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಭಾರತ ಕಾರ್ಯಾಚರಣೆ ಕೈಗೊಂಡಿದೆ.
ಪಾಕ್ ದಾಳಿಗೆ 3 ಮಂದಿ ಸಾವು:
ಈ ಮಧ್ಯೆ ಪಾಕಿಸ್ತಾನ ಪಾಕಿಸ್ತಾನ ಸತತ 7ನೇ ದಿನವೂ ಕದನ ವಿರಾಮ ಉಲ್ಲಂಘಿಸಿ ಪೂಂಛ್ ಜಿಲ್ಲೆಯ ಕೆರ್ನಿ ಸೆಕ್ಟರ್ ಹಾಗೂ ಕುಪ್ವಾರಾ ಜಿಲ್ಲೆಯ ಕರ್ನಾಹ್ ಸೆಕ್ಟರ್‌ನಲ್ಲಿ ಭಾನುವಾರ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಮೂವರು ನಾಗರಿಕರು ಸಾವಿಗೀಡಾಗಿದ್ದಾರೆ.
ಭಾನುವಾರ ಮಧ್ಯಾಹ್ನ ಸುಮಾರು 1.40ರ ವೇಳೆಗೆ ಗುಂಡು ಮತ್ತು ಶೆಲ್‌ಗಳ ಮೂಲಕ ಗಡಿಗೆ ಹೊಂದಿಕೊಂಡಿರುವ ಗ್ರಾಮಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ಸೇನಾ ವಕ್ತಾರರೊಬ್ಬರು ತಿಳಿಸಿದ್ದಾರೆ.