
ಮುಂಬೈ : ಈ ಹಿಂದೆ ಮನೆಮಾತಾಗಿದ್ದ ‘ಮಿಲೇ ಸುರ್ ಮೇರಾ ತುಮ್ಹಾರಾ’ ಹಾಡಿನ ಲೇಖಕ, ‘ಅಬ್ ಕೀ ಬಾರ್ ಮೋದಿ ಸರ್ಕಾರ್’ನಂಥ ಪ್ರಸಿದ್ಧ ಕ್ಯಾಂಪೇನ್ ಉದ್ಘೋಷಗಳ ಜನಕ, ಭಾರತದ ಜಾಹೀರಾತು ಲೋಕದ ದಿಗ್ಗಜ. ‘ಆ್ಯಡ್ ಗುರು’ ಪೀಯೂಷ್ ಪಾಂಡೆ (70) ಅವರು ಶುಕ್ರವಾರ ನಿಧನರಾದರು.
ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬೆಳಗ್ಗೆ 5.30ಕ್ಕೆ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಪೀಯೂಷ್ ಪಾಂಡೆ ಅವರ ನಿಧನಕ್ಕೆ ಪ್ರಧಾನಿ ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಉದ್ಯಮಿ ಗೌತಮ್ ಅದಾನಿ ಮತ್ತಿತರರು ಸಂತಾಪ ಸೂಚಿಸಿದ್ದಾರೆ.
ಜಾಹೀರಾತು ದಿಗ್ಗಜ:
ಭಾರತದ ಜಾಹೀತಾರು ಜಗತ್ತಿನ ಸ್ಟಾರ್ ಎಂದೇ ಬಿಂಬಿತರಾಗಿದ್ದ ಪದ್ಮಶ್ರೀ ಪುರಸ್ಕೃತ ಪೀಯೂಷ್ ಪಾಂಡೆ ಅವರು 2014ರ ‘ಅಬ್ ಕೀ ಬಾರ್ ಮೋದಿ ಸರ್ಕಾರ್’ ಸ್ಲೋಗನ್ ಮೂಲಕ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದರು.
ಓಗಿಲ್ವಿ ಇಂಡಿಯಾ ಸಂಸ್ಥೆಗೆ 1982ರಲ್ಲಿ ಸೇರಿಕೊಂಡ ಪಾಂಡೆ ಅವರು ನಂತರ ಆ ಸಂಸ್ಥೆಯ ಗ್ಲೋಬಲ್ ಕ್ರಿಯೇಟಿವ್ ಚೀಫ್ ಆಗಿ ನೇಮಕವಾದರು. ಸ್ಥಳೀಯ ಭಾಷೆ, ಹಾಸ್ಯ ಮತ್ತು ಭಾವನೆಗಳ ಮೂಲಕ ಭಾರತೀಯ ಜಾಹೀರಾತು ಲೋಕಕ್ಕೆ ಹೊಸ ಸ್ಪರ್ಶ ನೀಡಿದರು.
ಜಾಹೀರಾತು ಯಾವತ್ತಿದ್ದರೂ ಜನರ ಹೃದಯ ತಟ್ಟುವಂತಿರಬೇಕು ಎಂದು ಭಾವಿಸಿದ್ದ ಅವರು, ಕ್ಯಾಡ್‌ಬರಿ ಚಾಕೊಲೇಟ್‌ನ ‘ಕುಚ್ ಖಾಸ್ ಹೈ’, ಏಷ್ಯನ್ ಪೈಂಟ್ಸ್‌ನ ‘ಹರ್ ಖುಷಿ ಮೇ ರಂಗ್ ಲಾಯೆ’, ಅದೇ ರೀತಿ ಫೆವಿಕಾಲ್‌ನ ‘ಎ ಫೆವಿಕಾಲ್ ಕಾ ಜೋಡ್ ಹೈ ಟೂಟೇಗಾ ನಹೀ’ಯಂತ ಜನಪ್ರಿಯ ಜಾಹೀರಾತಿನ ಹಿಂದಿನ ಪ್ರೇರಣೆಯಾಗಿದ್ದರು.
ಇವರು ಬರೆದ ಮಿಲೇ ಸುರ್ ಮೇರಾ ತುಮ್ಹಾರಾ ಗೀತೆಯನ್ನು ಭಾರತ ಸರ್ಕಾರ ವಿವಿಧ ಗಾಯಕರ ಕಡೆ ಹಾಡಿಸಿ ದೇಶದ ವೈವಿಧ್ಯತೆಯನ್ನು ಜಾಹೀರಾತು ಮೂಲಕ ದೂರದರ್ಶನದಲ್ಲಿ ಪ್ರಸಾರ ಮಾಡಿತ್ತು.
ಜಾಹೀರಾತು ಲೋಕಕ್ಕೆ ಸಲ್ಲಿಸಿದ ಸೇವೆಗಾಗಿ 2016ರಲ್ಲಿ ಪದ್ಮಶ್ರೀ ಪುರಸ್ಕಾರಕ್ಕೆ ಪಾತ್ರರಾದ ಪಾಂಡೆ ಅವರು, ಲಂಡನ್ ಇಂಟರ್‌ನ್ಯಾಷನಲ್ ಅವಾರ್ಡ್ಸ್ ಲೆಜೆಂಡ್ ಅವಾರ್ಡ್ -2024 ಗೌರವಕ್ಕೆ ಪಾತ್ರರಾದ ಮೊದಲ ಏಷ್ಯನ್ ಆಗಿದ್ದಾರೆ. ಕ್ರಿಕೆಟ್ ಪ್ರೇಮಿಯೂ ಆಗಿದ್ದ ಅವರು, ರಣಜಿ ಪಂದ್ಯಾವಳಿಯಲ್ಲಿ ರಾಜಸ್ಥಾನವನ್ನು ಪ್ರತಿನಿಧಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ