
ನವದೆಹಲಿ: ಬಿಜೆಪಿಯ ಪೂರ್ವಾಶ್ರಮವಾಗಿರುವ ಜನಸಂಘದ ಸಂಸ್ಥಾಪಕರು ಶ್ಯಾಮಪ್ರಸಾದ ಮುಖರ್ಜಿ. ಅವರಿಂದ ಕುಡಿಯೊಡೆದ ಪಕ್ಷ ಈಗ ದೇಶಾದ್ಯಂತ ಹೆಮ್ಮರವಾಗಿ ಬೆಳೆದಿದೆ, ವಿಶ್ವದ ಅತಿದೊಡ್ಡ ಪಕ್ಷವಾಗಿದೆ. ಎಂದೂ ಗೆಲ್ಲದ ರಾಜ್ಯಗಳಲ್ಲೆಲ್ಲಾ 2014ರ ನಂತರ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಿದೆ. ಆದರೆ ಮುಖರ್ಜಿ ಅವರ ತವರು ರಾಜ್ಯವಾಗಿರುವ ಪಶ್ಚಿಮಬಂಗಾಳದಲ್ಲಿ ಏನೇ ತಿಪ್ಪರಲಾಗ ಹಾಕಿದರೂ ಗೆಲುವು ಮರೀಚಿಕೆಯಾಗಿತ್ತು. ಅದು ಕೂಡ ಈಗ ಸಾಕಾರಗೊಂಡಿದೆ. ಶ್ಯಾಮಪ್ರಸಾದ ಮುಖರ್ಜಿ ಅವರ 125ನೇ ವರ್ಷಾಚರಣೆ ಹೊತ್ತಲ್ಲೇ.
ಇದಕ್ಕೆ ಯಾರು ಕಾರಣ ಎಂದರೆ, ಬಿಜೆಪಿಯಲ್ಲಿ ಕೇಳಿಬರುವುದು ಎರಡೇ ಹೆಸರು. ನರೇಂದ್ರ ಮೋದಿ, ಅಮಿತ್ ಶಾ!
ಬಂಗಾಳಿ ಅಸ್ಮಿತೆ, ಅಲ್ಪಸಂಖ್ಯಾತರ ಮತ, ತೋಳ್ಬಲದಿಂದಾಗಿ 15 ವರ್ಷಗಳಿಂದ ಬಂಗಾಳದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ವಿರುದ್ಧ ಆಡಳಿತ ವಿರೋಧಿ ಅಲೆ ಇತ್ತು. ಆದರೆ ಅದನ್ನು ಮತವಾಗಿ ಪರಿವರ್ತಿಸಲು ಹಲವು ಕೊರತೆಗಳು ಇದ್ದವು. ಅವನ್ನೆಲ್ಲಾ ಮೋದಿ- ಶಾ ಜೋಡಿ ನೀಗಿಸಿದ ಫಲವೇ ಈ ಫಲಿತಾಂಶ.
ಬಂಗಾಳದಲ್ಲಿ 2014ರ ನಂತರ ಬಿಜೆಪಿ ತಳಮಟ್ಟದಿಂದ ನೆಲೆ ಕಾಣಲು ಆರಂಭಿಸಿತು. 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಅದು ಗೋಚರವಾಯಿತು. 2021ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಇನ್ನೇನು ಗೆದ್ದೇ ಬಿಟ್ಟಿತು ಎನ್ನುವಂತಹ ವಾತಾವರಣ ಕಂಡುಬಂತಾದರೂ ಅಲ್ಪಮತಗಳ ಅಂತರದ ಸೋಲುಗಳು ಮಮತಾ ದೀದಿಯನ್ನು ಅಧಿಕಾರಕ್ಕೇರಿಸಿದ್ದವು.
ಬಂಗಾಳವನ್ನು ಗೆಲ್ಲಲು ಅಬ್ಬರದ ಪ್ರಚಾರವೊಂದೇ ಸಾಲುವುದಿಲ್ಲ ಎಂಬುದನ್ನು ಮನಗಂಡ ಮೋದಿ- ಅಮಿತ್ ಶಾ ಜೋಡಿ, ಅಲ್ಪಮತಗಳಿಂದ ಫಲಿತಾಂಶವೇ ಬದಲಾಗುತ್ತಿದ್ದ ಬೂತ್‌ಗಳತ್ತ ಗಮನಹರಿಸಿತು. ಉತ್ತರಪ್ರದೇಶ ಸೇರಿ ವಿವಿಧ ರಾಜ್ಯಗಳಲ್ಲಿ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ ಬೂತ್ ಪ್ರಮುಖ ವ್ಯವಸ್ಥೆಯನ್ನು ಬಂಗಾಳದಲ್ಲೂ ಜಾರಿಗೆ ತಂದಿತು. ಬೂತ್ ಮಟ್ಟವನ್ನು ಬಲಪಡಿಸಿತು. ಟಿಎಂಸಿ ಕಾರ್ಯಕರ್ತರ ಗೂಂಡಾಗಿರಿ ಎದುರು ತಲೆ ಎತ್ತಲು ಪ್ರಯಾಸಪಡುತ್ತಿದ್ದ ಬಿಜೆಪಿ ಕಾರ್ಯಕರ್ತರಿಗೆ ಎಲ್ಲ ರೀತಿಯಲ್ಲೂ ಶಕ್ತಿ ತುಂಬಿತು.
ಮಮತಾ ಬ್ಯಾನರ್ಜಿ ಅವರ ವರ್ಚಸ್ಸಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ನಾಯಕ ಬಂಗಾಳ ಬಿಜೆಪಿಯಲ್ಲಿ ಇರಲಿಲ್ಲ. ಹೀಗಾಗಿ ಮೋದಿ ಮುಖವನ್ನೇ ದೊಡ್ಡದಾಗಿ ಬಿಂಬಿಸಲಾಯಿತು. ಪ್ರಚಾರಕ್ಕೆ ಅವರನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲಾಯಿತು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯ ಸುತ್ತಿದ ಮೋದಿ, ಚುರುಮುರಿ ಅಂಗಡಿ ಭೇಟಿ, ಹೂಗ್ಲಿ ನದಿಯಲ್ಲಿ ಬೋಟ್ ಸಂಚಾರದಂತಹ ಪ್ರಚಾರದ ಮೂಲಕ ಜನರಿಗೆ ಹತ್ತಿರವಾದರು. ಅಮಿತ್ ಶಾ ಅವರು ರಾಜ್ಯದಲ್ಲೇ ಹಲವು ದಿನಗಳ ಕಾಲ ಬೀಡುಬಿಟ್ಟು ತೆರೆಯ ಹಿಂದೆ ತಂತ್ರಗಾರಿಕೆ ರೂಪಿಸಿದರು.
ಇವತ್ತಿಗೂ ಬಂಗಾಳದಲ್ಲಿ ಉದ್ಯೋಗ ಖಾತ್ರಿ, ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಜಾರಿಯಾಗಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಡಬಲ್ ಎಂಜಿನ್ ಸರ್ಕಾರವಾಗುತ್ತದೆ, ಕೇಂದ್ರದ ಯೋಜನೆಗಳ ಲಾಭ ಸಿಗುತ್ತದೆ ಎಂಬುದನ್ನು ಬಿಜೆಪಿ ಮನದಟ್ಟು ಮಾಡಿಕೊಡುವಲ್ಲಿ ಸಫಲವಾಯಿತು. ಮಮತಾ ಸರ್ಕಾರದಲ್ಲಿ ಅಭಿವೃದ್ಧಿಯಲ್ಲಿ ಬಂಗಾಳ ಹಿಂದೆ ಹೋಗುತ್ತಿದೆ, ಭ್ರಷ್ಟಾಚಾರ ಮಿತಿಮೀರಿದೆ ಎಂದು ಮತದಾರರ ಮನಸ್ಸಿನಲ್ಲಿ ಬಿತ್ತುವಲ್ಲಿ ಸಫಲವಾಯಿತು.
ಹೊರಗಿನವರು ವರ್ಸಸ್ ಸ್ಥಳೀಯರು:
ಬಿಜೆಪಿ ಗೆದ್ದರೆ, ಬಂಗಾಳ ಅಸ್ಮಿತೆ ಮೇಲೆ ದಾಳಿಯಾಗುತ್ತದೆ. ಉತ್ತರ ಭಾರತದಂತೆ ಮಾಂಸಾಹಾರಕ್ಕೆ ನಿಷೇಧ ಹೇರಿಬಿಡುತ್ತಾರೆ ಎಂಬ ಪ್ರಚಾರವನ್ನು ಮಮತಾ ವ್ಯವಸ್ಥಿತವಾಗಿ ಮಾಡಿದರು. ಬಂಗಾಳದ ಸಂಸ್ಕೃತಿಗೆ ಬಿಜೆಪಿ ವಿರೋಧಿ ಎಂದು ಬಿಂಬಿಸಿದರು. ಇದಕ್ಕೆ ಪ್ರತ್ಯುತ್ತರವನ್ನು ಬಿಜೆಪಿ ನೀಡಿತು. ಬಂಗಾಳಕ್ಕೆ ಭೇಟಿ ನೀಡುವ ನಾಯಕರು (ನಾನ್ ವೆಜಿಟೇರಿಯನ್) ಬಂಗಾಳದ ಮೀನು ಖಾದ್ಯವನ್ನು ಸವಿದು ನಾವು ಮಾಂಸಾಹಾರ ವಿರೋಧಿಗಳಲ್ಲ ಎಂದು ಸಾರಿದರು. ಪ್ರಧಾನಿ ಮೋದಿ ಮಾಂಸಾಹಾರವನ್ನೇ ಪ್ರಸಾದವಾಗಿ ನೀಡುವ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವ ಮೂಲಕ ಮಮತಾ ವಾದವನ್ನು ಸುಳ್ಳಾಗಿಸಿದರು.
ವಲಸಿಗರ ಸಮಸ್ಯೆ:
ಬಂಗಾಳಕ್ಕೆ ಬಾಂಗ್ಲಾದೇಶದಿಂದ ಅಕ್ರಮ ವಲಸಿಗರು ಭಾರಿ ಪ್ರಮಾಣದಲ್ಲಿ ಬರುತ್ತಿದ್ದಾರೆ, ಸ್ಥಳೀಯರ ಉದ್ಯೋಗ ಕಸಿಯುತ್ತಿದ್ಧಾರೆ ಎಂಬ ಬಿಜೆಪಿಯ ಪ್ರಚಾರ ಭರ್ಜರಿ ಫಸಲು ತಂದಿದೆ. ವಿಶೇಷ ಮತಪಟ್ಟಿ ಪರಿಷ್ಕರಣೆ ಮೂಲಕ ಸುಮಾರು 1 ಕೋಟಿ ಮತದಾರರನ್ನು ಚುನಾವಣಾ ಆಯೋಗ ಕೈಬಿಟ್ಟಿದ್ದರಿಂದ ಹಲವು ಕ್ಷೇತ್ರಗಳಲ್ಲಿ ಮಮತಾ ಅಭ್ಯರ್ಥಿಗಳು ಗೆಲ್ಲುವುದಕ್ಕೆ ತೊಡಕಾಗಿದೆ ಎನ್ನಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ