* ಅಭಿಷೇಕ್ ಬ್ಯಾನರ್ಜಿಗೆ ಮಹತ್ವದ ಹುದ್ದೆ
* ದೀದಿ ಸೋದರಳಿಯಗೆ ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಟ್ಟ
* ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಅಭಿಷೇಕ್‌ರನ್ನು ನಂ.2 ನಾಯಕ ಎಂದು ಬಿಜೆಪಿಗರ ಟೀಕೆ
ಕೋಲ್ಕತಾ(ಜೂ.07): ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು ತಮ್ಮ ಸೋದರ ಅಳಿಯ ಅಭಿಷೇಕ್ ಬ್ಯಾನರ್ಜಿ ಅವರಿಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಂಥ ಮಹತ್ವದ ಹುದ್ದೆಯನ್ನು ಕರುಣಿಸಿದ್ದಾರೆ.
ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಅಭಿಷೇಕ್‌ರನ್ನು ನಂ.2 ನಾಯಕ ಎಂದು ಬಿಜೆಪಿಗರು ಟೀಕಿಸುತ್ತಿದ್ದರು. ಅದು ಈಗ ನಿಜ ಆದಂತಾಗಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ,
ಈ ಬಗ್ಗೆ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ಹಿರಿಯ ನಾಯಕ ಪಾರ್ಥ ಚಟರ್ಜಿ ಅವರು, ‘ಡೈಮಂಡ್ ಹಾರ್ಬರ್ ಕ್ಷೇತ್ರದ ಸಂಸದ ಹಾಗೂ ತಮ್ಮ ಸೋದರ ಅಳಿಯ ಅಭಿಷೇಕ್ ಬ್ಯಾನರ್ಜಿ ಅವರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಿದ್ದಾರೆ. ಜೊತೆಗೆ ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮ ಜಾರಿಗೆ ತರಲು ಪಕ್ಷದ ಕೋರ್ ಕಮಿಟಿ ನಿರ್ಧರಿಸಿದೆ’ ಎಂದು ಹೇಳಿದ್ದಾರೆ.
ಇನ್ನು ಸಿನಿಮಾ ನಟ ಹಾಗೂ ಟಿಎಂಸಿ ಮುಖಂಡ ಸಯೋನಿ ಘೋಷ್ ಅವರನ್ನು ಪಕ್ಷದ ಯುವ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಆದಾಗ್ಯೂ, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಟಿಎಂಸಿಯಿಂದ ಬಿಜೆಪಿಗೆ ಜಿಗಿದ ಹಾಗೂ ಇದೀಗ ಪಕ್ಷಕ್ಕೆ ಮರಳಲು ಕಾತರರಾಗಿರುವ ಬಿಜೆಪಿ ನಾಯಕರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳಬೇಕೇ ಎಂಬ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಪಾರ್ಥ ಚಟರ್ಜಿ ಖಚಿತಪಡಿಸಿದರು.