
ಉತ್ತರ ಪ್ರದೇಶ (ನ.27): ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮರು, ದಲಿತರು ಸಮಾಜದ ಶೋಷಿತ ಸಮುದಾಯಗಳು ಒಂದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವನ್ನು ಕಿತ್ತೊಗೆದು ಅಬ್ದುಲ್ ಚಂದ್ರಶೇಖರ್ ಅಜಾದ್ ಅವರನ್ನು ಉತ್ತರ ಪ್ರದೇಶದ ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡಲಿದ್ದಾರೆ ಎಂದು ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸ್ಫೋಟಕ ಹೇಳಿಕೆ ನೀಡಿದದರು.
ಇಂದು ಲಖನೌ ರಮಾಬಾಯಿ ಅಂಬೇಡ್ಕರ್ ಮೈದಾನದಲ್ಲಿ ನಡೆದ ಸಮಾವೇಶ ಜಂಟಿ ಸಮಾವೇಶದಲ್ಲಿ ಓವೈಸಿ ಮತ್ತು ಅಜಾದ್ ಚಂದ್ರಶೇಖರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಉತ್ತರ ಪ್ರದೇಶದಲ್ಲಿ ಹೊಸ ರಾಜಕೀಯ ಬದಲಾವಣೆಯ ಸಂದೇಶ ನೀಡಿದ್ದಾರೆ.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಒವೈಸಿ ಅವರು ಮುಖ್ಯಮಂತ್ರಿ ಯೋಗಿ ಸರ್ಕಾರವನ್ನು ಎದುರಿಸಲು ಸಾಮಾಜಿಕ ಪರಿವರ್ತನೆ ಮೋರ್ಚಾ ಅಡಿಯಲ್ಲಿ ರಾಜಕೀಯ ಚಳವಳಿಯನ್ನ ಆರಂಭಿಸುವುದಾಗಿ ಘೋಷಿಸಿದರು. ಇದರ ಅರ್ಥ ಮುಂದಿನ ಚುನಾವಣೆಯಲ್ಲಿ ದಲಿತರು, ಮುಸ್ಲಿಮರು, ಶೋಷಿತ ಸಮುದಾಯಗಳು ಒಟ್ಟಾಗಿ ಯೋಗಿ ಸರ್ಕಾರವನ್ನು ಕಿತ್ತೊಗೆದು ಪರ್ಯಾಯ ಸರ್ಕಾರ ರಚಿಸುವುದು ಒವೈಸಿ-ಅಜಾದ್ ಮೈತ್ರಿಯ ಉದ್ದೇಶವಾಗಿದೆ. ಉತ್ತರಪ್ರದೇಶದ ಮುಸ್ಲಿಮರು ಕೇವಲ ಮತಬ್ಯಾಂಕ್ ಆಗಿ ಉಳಿಯಬಾರದು. ಬದಲಾಗಿ ರಾಜಕೀಯ ನಾಯಕತ್ವ ರೂಪಿಸುವಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.
'ಇನ್ನು ಮುಂದೆ ಅಬ್ದುಲ್ ಯಾರಿಗೂ ಜಮಖಾನೆ ಹಾಸುವುದಿಲ್ಲ. ಬದಲಾಗಿ ಅಬ್ದುಲ್ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಾನೆ. ನಮ್ಮ ಮುಸ್ಲಿಮರ ಮತಗಳ ಶಕ್ತಿ ಬಳಸಿಕೊಂಡು ಚಂದ್ರಶೇಖರ್ ಆಜಾದ್ ಅವರನ್ನು ಮುಂದಿನ ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎಂದರು. ಇದೇ ವೇಳೆ ಬುಲ್ಡೋಜರ್ ಕ್ರಮ, ಪೊಲೀಸ್ ಎನ್‌ಕೌಂಟರ್, ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಒವೈಸಿ, ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮುಖ್ಯಮಂತ್ರಿ ಯೋಗಿ ಸರ್ಕಾರ ವಿಫಲವಾಗಿದೆ. ಬುಲ್ಡೋಜರ್ ಮೂಲಕ ಮನೆಗಳನ್ನು ಕೆಡುವುದು, ಪೊಲೀಸರು ಎನ್‌ಕೌಂಟರ್ ಮಾಡುತ್ತಿದ್ದಾರೆ. ಇದರಿಂದ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಇನ್ನುಮುಂದೆ ಬಾಬಾ ಅಧಿಕಾರ ಹೆಚ್ಚು ದಿನ ನಡೆಯೊಲ್ಲ, ಅಧಿಕಾರದ ದಿನಗಳು ಮುಗಿಯುವ ಕಾಲ ಹತ್ತಿರವಾಗಿವೆ ಎನ್ನುವ ಮೂಲಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು.
ಇದೇ ವೇಳೆ ಬಿಜೆಪಿ, ಸಂಘ ಪರಿವಾರದ ವಿರುದ್ಧ ವಾಗ್ದಾಳಿ ನಡೆಸಿದ ಒವೈಸಿ ಅವರು, ಬಿಜೆಪಿ ಆರೆಸ್ಸೆಸ್ ಸಂವಿಧಾನ ವಿರೋಧಿಗಳು. ಹೀಗಾಗಿ ಮುಸ್ಲಿಮರು, ದಲಿತರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಹಕ್ಕುಗಳನ್ನು ರಕ್ಷಿಸಲು ನಾವು ಸಂವಿಧಾನವನ್ನು ಉಳಿಸಿಕೊಳ್ಳುವುದು ಅಗತ್ಯವಾಗಿದೆ. ಸ್ವರಾಜ್ಯ ಎಂದರೆ ಠಾಕೂರ್ ಅಥವಾ ಯಾದವರ ಆಡಳಿತವಲ್ಲ. ಸ್ವರಾಜ್ಯ ಎಂದರೆ ಒಂದು ಜಾತಿ ಅಥವಾ ಕುಟುಂಬದ ಆಡಳಿತವಲ್ಲ. ಎಲ್ಲ ಸಮುದಾಯಗಳಿಗೂ ಅಧಿಕಾರದಲ್ಲಿ ಸಮಾನ ಅವಕಾಶ ಸಿಗಬೇಕು. ಸ್ವರಾಜ್ಯ ಎಂದರೆ ಹಿಂದೂ ರಾಷ್ಟ್ರದ ಆಡಳಿತವಲ್ಲ, ಜನರ ಆಡಳಿತ ಎಂದು ಅಭಿಪ್ರಾಯಪಟ್ಟರು.
ಉತ್ತರ ಪ್ರದೇಶ ರಾಜ್ಯದಲ್ಲಿ ರಾಜಕೀಯ ಅಧಿಕಾರ ಕೆಲವೇ ಕೆಲವು ನಿರ್ದಿಷ್ಟ ಸಮುದಾಯಗಳ ಕೈಯಲ್ಲಿದೆ. ಕೆಲವು ಸಲ ಠಾಕೂರರ ಆಡಳಿತ, ಇನ್ನು ಕೆಲವು ಸಲ ಯಾದವರ ಆಡಳಿತ ನಡೆಯುತ್ತಿದೆ. ಇವೆರಡನ್ನು ನಾವು ವಿರೋಧಿಸುತ್ತೇವೆ. ದಲಿತರು, ಮುಸ್ಲಿಮರು, ಹಿಂದೂಳಿದ ಶೋಷಿತ ವರ್ಗದವರು ಆಡಳಿತ ನಡೆಸುವಂತಾಗಬೇಕು, ಅವರಿಗೂ ಅಧಿಕಾರದಲ್ಲಿ ಸಮಾನ ಪ್ರಾತಿನಿಧ್ಯ ಸಿಗಬೇಕು ಎಂದರು.
ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರಲ್ಲದೆ. ಇಬ್ಬರು ನಾಯಕರನ್ನು ಸ್ಟ್ಯಾಂಡಪ್ ಕಾಮಿಡಿಯನ್ಸ್ ಎಂದು ವ್ಯಂಗ್ಯವಾಡಿದರು.
ಯೋಗಿ-ಮೋದಿ ಇಬ್ಬರೂ ದೇಶದಲ್ಲಿ ಹಾಗೂ ಉತ್ತರಪ್ರದೇಶದಲ್ಲಿ ದ್ವೇಷ ಮತ್ತು ವಿಭಜನೆಯ ವಾತಾವರಣ ಹರಡಲು ಇವರಿಬ್ಬರು ಕಾರಣರಾಗಿದ್ದಾರೆ ಎಂದು ಆರೋಪಿಸಿದರು. ಮುಂದುವರಿದು, ಮುಂದಿನ ಚುನಾವಣೆಯಲ್ಲಿ ಪರ್ಯಾಯ ಸರ್ಕಾರ ಅಧಿಕಾರಕ್ಕೆ ಬರಬೇಕು, ಬಡವರು, ದುರ್ಬಲರು ಮತ್ತು ಶೋಷಿತ ವರ್ಗಗಳಿಗೆ ನ್ಯಾಯ ಸಿಗುವವರೆಗೂ ಸಾಮಾಜಿಕ ಪರಿವರ್ತನೆ ಮೋರ್ಚಾ ತನ್ನ ರಾಜಕೀಯ ಹೋರಾಟವನ್ನು ಮುಂದುವರಿಸಲಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ