ಇಮ್ರಾನ್‌ ಖಾನ್‌ ಪರ ನಿಂತ ನಟ ಅಮೀರ್‌ ಮಾಜಿ ಪತ್ನಿ ಕಿರಣ್‌ ರಾವ್‌, ಇಂತಹ ವ್ಯಕ್ತಿಗೆ ಈ ಸ್ಥಿತಿಯೇ?

Published : Oct 17, 2026, 12:36 PM IST
kiran rao

ಸಾರಾಂಶ

ವಲಸೆ ನಿಯಮ ಉಲ್ಲಂಘನೆ ಆರೋಪದಡಿ ನಟ ಇಮ್ರಾನ್ ಖಾನ್‌ಗೆ ಅಕ್ಟೋಬರ್ 28ರೊಳಗೆ ದೇಶ ಬಿಡುವಂತೆ ಮುಂಬೈ ಪೊಲೀಸರು ನೋಟಿಸ್ ನೀಡಿದ್ದಾರೆ. ಈ ನಿರ್ಧಾರವನ್ನು ಖಂಡಿಸಿ ಕಿರಣ್ ರಾವ್ ಸೇರಿದಂತೆ ಹಲವು ಬಾಲಿವುಡ್ ಗಣ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಡಿಪಾರು ನೋಟಿಸ್ ಪ್ರಶ್ನಿಸಿ ಇಮ್ರಾನ್ ಕಾನೂನು ತಂಡ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದೆ.

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ನಡೆದ ಜಿರಳೆ ಪ್ರತಿಭಟನೆಯಲ್ಲಿ ಭಾಗಿಯಾಗಿ ವಲಸೆ ನಿಯಮ ಉಲ್ಲಂಘಿಸಿದ ಕಾರಣಕ್ಕೆ ನಟ ಅಮೀರ್‌ ಖಾನ್‌ ಸೋದರಳಿಯ, ನಟ ಇಮ್ರಾನ್‌ ಖಾನ್‌ಗೆ ಅಕ್ಟೋಬರ್ 28ರೊಳಗೆ ದೇಶ ಬಿಡಲು ಸೂಚಿಸಿದ ಮುಂಬೈ ಪೊಲೀಸರ ನಿರ್ಧಾರಕ್ಕೆ ಅಮೀರ್‌ ಮಾಜಿ ಪತ್ನಿ, ನಿರ್ದೇಶಕಿ ಕಿರಣ್‌ ರಾವ್‌ ಕಿಡಿಕಾರಿದ್ದು, ‘ 40 ವರ್ಷಗಳಿಂದ ಭಾರತದಲ್ಲಿದ್ದವರಿಗೆ ಈ ಪರಿಸ್ಥಿತಿಯೇ?’ ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿರುವ ಕಿರಣ್, ‘ಇಮ್ರಾನ್‌ಗೆ ಈಗ 43 ವರ್ಷ. ಭಾರತಲ್ಲಿಯೇ 40 ವರ್ಷ ಕಳೆದಿದ್ದಾರೆ. ಇಲ್ಲಿಯೇ ಓದಿ, ಇಲ್ಲಿಯೇ ಕೆಲಸ ಮಾಡಿದ್ದಾರೆ. ಸೋಲು- ಗೆಲುವನ್ನೂ ಇಲ್ಲಿಯೇ ಕಂಡಿದ್ದಾರೆ. ಪ್ರೀತಿ, ದ್ವೇಷವನ್ನು ಇಲ್ಲಿಯೇ ಅನುಭವಿಸಿದ್ದಾರೆ’ ಇಂತಹ ವ್ಯಕ್ತಿಗೆ ಈ ಸ್ಥಿತಿಯೇ?" ಎಂದು ಬರೆದುಕೊಂಡಿದ್ದಾರೆ, ಈ ಹಿಂದೆ ಕಿರಣ್‌ ರಾವ್‌ ಅವರು ‘ಭಾರತದಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ’ ಎಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು.

ಅಮೆರಿಕದ ಪೌರತ್ವ ಹಾಗೂ ಭಾರತದ ಸಾಗರೋತ್ತರ ನಾಗರಿಕ ಕಾರ್ಡ್ ಹೊಂದಿರುವ ನಟ ಇಮ್ರಾನ್ ಖಾನ್ ಅವರಿಗೆ ನೀಡಿರುವ ಗಡಿಪಾರು ನೋಟಿಸ್‌ಗೆ ಸಂಬಂಧಿಸಿದಂತೆ ನಟ ಆಮಿರ್ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಕಿರಣ್ ರಾವ್, "ವಾಹ್, ಈಗ ಮುಂಬೈ ಪೊಲೀಸರು ಹೀಗೆ ಮಾಡುತ್ತಿದ್ದಾರೆಯೇ? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇಮ್ರಾನ್‌ಗೆ ಹರಿದುಬಂದ ಬಾಲಿವುಡ್ ಬೆಂಬಲ

ಇಮ್ರಾನ್ ಖಾನ್ ಅವರಿಗೆ ನೀಡಲಾದ ನೋಟಿಸ್ ವಿರುದ್ಧ ಚಿತ್ರರಂಗದ ಹಲವು ಉದಯೋನ್ಮುಖ ಹಾಗೂ ಪ್ರಸಿದ್ಧ ಕಲಾವಿದರು ಆಕ್ರೋಶ ಹೊರಹಾಕಿದ್ದಾರೆ:

ಸಬಾ ಆಜಾದ್: ಈ ಸುದ್ದಿಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ನಟಿ ಸಬಾ ಆಜಾದ್, "ಏನು? ಇದು ಸಂಪೂರ್ಣವಾಗಿ ಅರ್ಥಹೀನ ಮತ್ತು ಅಸಂಬದ್ಧ ನಿರ್ಧಾರ" ಎಂದು ಕಿಡಿಕಾರಿದ್ದಾರೆ.

ಅಮೃತಾ ಬಾಗ್ಚಿ: ನಟಿ ಅಮೃತಾ ಬಾಗ್ಚಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇಮ್ರಾನ್‌ಗೆ ಒಗ್ಗಟ್ಟು ಸೂಚಿಸುತ್ತಾ, "ನೀವು ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದೀರಿ. ನಿಮಗಾಗಿ ಬೆಂಬಲ ನೀಡಲು ಈ ಇಡೀ ಪೀಳಿಗೆಯೇ ವಿಮಾನ ನಿಲ್ದಾಣಕ್ಕೆ ಓಡಿಬರಲಿದೆ ನೋಡಿ" ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಅನ್ನು ನಟಿಯರಾದ ಝೇನ್ ಮೇರಿ ಮತ್ತು ಲೇಖಾ ವಾಷಿಂಗ್ಟನ್ ಮರು-ಹಂಚಿಕೊಂಡಿದ್ದಾರೆ.

ಝೇನ್ ಮೇರಿ: ಇಮ್ರಾನ್ ಅವರ ಸೋದರಿ, ನಟಿ ಝೇನ್ ಮೇರಿ ಅವರು ಇಮ್ರಾನ್ ಖಾನ್ ಮತ್ತು ಲೇಖಾ ವಾಷಿಂಗ್ಟನ್ ಅವರನ್ನು ಆಲಂಗಿಸಿಕೊಂಡಿರುವ ಭಾವನಾತ್ಮಕ ಛಾಯಾಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅಧಿಕಾರಿಗಳ ಕ್ರಮವನ್ನು ಸಮರ್ಥಿಸಿಕೊಂಡ ಹಿರಿಯ ನಟರು

ಇನ್ನೊಂದೆಡೆ, ಹಿರಿಯ ನಟರಾದ ರಜಾ ಮುರಾದ್ ಮತ್ತು ಗಜೇಂದ್ರ ಚೌಹಾಣ್ ಅವರು ಸರ್ಕಾರದ ಹಾಗೂ ಎಫ್‌ಆರ್‌ಆರ್‌ಒ ಅಧಿಕಾರಿಗಳ ಕ್ರಮವನ್ನು ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದಾರೆ.

ಇಮ್ರಾನ್ ಖಾನ್ ಅವರು ವಿದೇಶಿ ಪೌರತ್ವ ಹೊಂದಿರುವ ಕಾರಣ, ಭಾರತದಲ್ಲಿ ವಿದೇಶಿ ಪ್ರಜೆಗಳಿಗೆ ಅನ್ವಯವಾಗುವ ಕಾನೂನು ಮತ್ತು ವೀಸಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅವರ ಕರ್ತವ್ಯ. ನಿಯಮ ಉಲ್ಲಂಘನೆಯಾದಾಗ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವುದು ಸಹಜ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ಇಮ್ರಾನ್ ಕಾನೂನು ತಂಡ

ಎಫ್‌ಆರ್‌ಆರ್‌ಒ ನೀಡಿರುವ ಈ ಗಡಿಪಾರು ನೋಟಿಸ್ ಅನ್ನು ಪ್ರಶ್ನಿಸಿ ಇಮ್ರಾನ್ ಖಾನ್ ಅವರ ಕಾನೂನು ಸಲಹೆಗಾರರ ತಂಡ ಈಗಾಗಲೇ ಬಾಂಬೆ ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದೆ. ಅಕ್ಟೋಬರ್ 28ರ ಗಡುವು ಹತ್ತಿರವಾಗುತ್ತಿರುವುದರಿಂದ, ನ್ಯಾಯಾಲಯದಲ್ಲಿ ಈ ಪ್ರಕರಣದ ಮುಂದಿನ ವಿಚಾರಣೆ ಹಾಗೂ ತೀರ್ಪು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಈಗ ತೀವ್ರ ಕುತೂಹಲ ಕೆರಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚುನಾವಣಾ ಆಯುಕ್ತ ಗ್ಯಾನೇಶ್​ ಕುಮಾರ್​ ಹಿನ್ನೆಲೆ ಅಂತಿಂಥದ್ದಲ್ಲ! ಜಿರಳೆಗಳ ಕೋಪಕ್ಕೆ ಕಾರಣ ಕೊನೆಗೂ ರಿವೀಲ್​
ಒಬ್ಬ ಮುಸ್ಲಿಂ ವ್ಯಕ್ತಿ ಹಿಂದೂ ಧರ್ಮಕ್ಕೆ ಮತಾಂತರಗೊಂಡರೆ ಮೀಸಲಾತಿ ಸಿಗುತ್ತಾ? ಎಸ್‌ಟಿ ಪ್ರಕರಣವೇ ಬೇರೆ!