
ನವದೆಹಲಿ: ಯುವ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಸಂವಾದ ಕಾರ್ಯಕ್ರಮದಲ್ಲಿ, ರಾಹುಲ್ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಡುವೆ ಚುಟುಕು ವಾಗ್ವಾದ ನಡೆದ ಘಟನೆ ಶುಕ್ರವಾರ ನಡೆದಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್, ಈ ಹಿಂದೆ ಪಕ್ಷವನ್ನು ತೊರೆದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಮಾಜಿ ಕೇಂದ್ರ ಸಚಿವ ಗುಲಾಮ್ ನಬಿ ಆಜಾದ್ ಅವರನ್ನು ಉಲ್ಲೇಖಿಸಿ, ‘ಪಕ್ಷ ತೊರೆದವರೆಲ್ಲರೂ ಹೇಡಿಗಳು ಮತ್ತು ದುರಾಸೆಯುಳ್ಳವರು. ಈಗ ಕಾಂಗ್ರೆಸ್ನಲ್ಲಿ ಸಿಂಹಗಳು ಮಾತ್ರ ಉಳಿದಿವೆ’ ಎಂದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಖರ್ಗೆ, ‘ಪಕ್ಷ ತೊರೆದ ನಾಯಕರೆಲ್ಲರೂ ರಾಹುಲ್ರ ಸ್ನೇಹಿತರೇ’ ಎನ್ನುವ ಮೂಲಕ ಲಘುವಾಗಿ ಚುಚ್ಚಿದರು. ಈಗ ಮೋದಿ ಸಂಪುಟದಲ್ಲಿ ಸಚಿವರಾಗಿರುವ ಸಿಂಧಿಯಾ ಈ ಹಿಂದೆ ರಾಹುಲ್ಗೆ ಅತ್ಯಂತ ಆತ್ಮೀಯರಾಗಿದ್ದರು.
ಖರ್ಗೆಯವರ ಈ ದಿಢೀರ್ ಮಾತಿನಿಂದ ಕ್ಷಣಕಾಲ ಮುಜುಗರಕ್ಕೊಳಗಾದ ರಾಹುಲ್ ಗಾಂಧಿ, ನಸುನಗುತ್ತಲೇ ಉತ್ತರ ನೀಡಿದರು. "ಇಲ್ಲಿ ನನ್ನ ತಂಗಿ ಪ್ರಿಯಾಂಕಾ ಗಾಂಧಿ ಕುಳಿತಿದ್ದಾಳೆ. ಸಿಂಧಿಯಾ ಎಂದಿಗೂ ನನ್ನ ಆಪ್ತ ಸ್ನೇಹಿತನಾಗಿರಲಿಲ್ಲ ಎಂಬ ಸತ್ಯ ಆಕೆಗೆ ಚೆನ್ನಾಗಿ ಗೊತ್ತಿದೆ ಎಂದರು. ಪಕ್ಷ ತೊರೆದ ಹಿರಿಯ ನಾಯಕರ ಕುರಿತು ಮಾತನಾಡುತ್ತಿದ್ದ ವೇಳೆ ಇಬ್ಬರೂ ನಾಯಕರು ಪರಸ್ಪರ ಕಾಲೆಳೆದುಕೊಂಡಿದ್ದು, ಸಭೆಯಲ್ಲಿದ್ದವರನ್ನು ರಂಜಿಸಿತು.
ಇತ್ತೀಚೆಗೆ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಭಾರತೀಯ ಯುವ ಕಾಂಗ್ರೆಸ್ , ಎನ್ಎಸ್ಯುಐ ಮತ್ತು ಸೇವಾ ದಳದ ಸುಮಾರು 60ಕ್ಕೂ ಹೆಚ್ಚು ಕಾರ್ಯಕರ್ತರನ್ನು ರಾಹುಲ್ ಗಾಂಧಿ ಚಹಾ ಕೂಟಕ್ಕೆ ಆಹ್ವಾನಿಸಿದ್ದರು.
ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಪಕ್ಷ ತೊರೆದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಮಾಜಿ ಕೇಂದ್ರ ಸಚಿವ ಗುಲಾಮ್ ನಬಿ ಆಜಾದ್ ಅವರ ಹೆಸರುಗಳನ್ನು ಉಲ್ಲೇಖಿಸಿದರು.
"ಸವಲತ್ತು, ಭದ್ರತೆಯ ಆಸೆಗಾಗಿ ಅಥವಾ ಇಡಿ ಹಾಗೂ ಸಿಬಿಐ ತನಿಖಾ ಸಂಸ್ಥೆಗಳ ಭಯದಿಂದ ಹಲವರು ಕಾಂಗ್ರೆಸ್ ತೊರೆದರು. ಅಂತಹ ದುರಾಸೆಯುಳ್ಳವರು ಮತ್ತು ಹೇಡಿಗಳು ಹೊರನಡೆದ ನಂತರ, ಈಗ ನಮ್ಮ ಪಕ್ಷದಲ್ಲಿ ನಿಜವಾದ ಧೈರ್ಯಶಾಲಿಗಳಾದ 'ಸಿಂಹಗಳು' ಮಾತ್ರವೇ ಉಳಿದುಕೊಂಡಿವೆ," ಎಂದು ರಾಹುಲ್ ಬಣ್ಣಿಸಿದರು.
ಈ ಸಂವಾದದ ವೇಳೆ ರಾಜಕೀಯದಲ್ಲಿ ಸ್ನೇಹ ಮತ್ತು ವೈರತ್ವದ ಸ್ವರೂಪವನ್ನು ವಿವರಿಸಲು ರಾಹುಲ್ ಗಾಂಧಿ ತಮ್ಮ ಅಜ್ಜಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರೊಂದಿಗಿನ ನೆನಪೊಂದನ್ನು ಹಂಚಿಕೊಂಡರು.
"ನನಗೆ ರಾಜಕೀಯ ತರಬೇತಿ ಸಿಕ್ಕಿದ್ದೇ ನನ್ನ ಅಜ್ಜಿಯಿಂದ. ಒಮ್ಮೆ ನಾನು ಅವರನ್ನು 'ನಿಮ್ಮ ಆತ್ಮೀಯ ಗೆಳತಿ ಯಾರು?' ಎಂದು ಕೇಳಿದೆ. ಅದಕ್ಕೆ ಅವರು 'ನನಗೆ ಯಾರೂ ಆತ್ಮೀಯ ಗೆಳತಿಯರಿಲ್ಲ' ಎಂದರು. ನಮ್ಮ ಮನೆಗೆ ಆಗಾಗ್ಗೆ ಬರುತ್ತಿದ್ದ ಮಹಿಳೆಯೊಬ್ಬರ ಹೆಸರು ಹೇಳಿ, 'ಆಕೆ ನಿಮ್ಮ ಗೆಳತಿಯಲ್ಲವೇ?' ಎಂದು ಪ್ರಶ್ನಿಸಿದೆ. ಅದಕ್ಕೆ ಅಜ್ಜಿ, 'ಇಲ್ಲ, ನಾನು ಆಕೆಗೆ ಅತ್ಯಂತ ಆತ್ಮೀಯ ಗೆಳತಿಯಾಗಿರಬಹುದು, ಆದರೆ ಆಕೆ ನನಗೆ ಆತ್ಮೀಯ ಗೆಳತಿಯಲ್ಲ' ಎಂದು ಸ್ಪಷ್ಟವಾಗಿ ಹೇಳಿದರು."
ಈ ಕಥೆಯನ್ನು ನೆನಪಿಸಿಕೊಂಡ ರಾಹುಲ್, ಖರ್ಗೆಯವರತ್ತ ತಿರುಗಿ: "ನಾನೊಬ್ಬ ಸಂಪೂರ್ಣ ರಾಜಕೀಯ ವ್ಯಕ್ತಿ. ರಾಜಕೀಯದಲ್ಲಿ ನನ್ನ ಸ್ನೇಹಿತನಂತೆ ಕಾಣುವವನು ನಿಜವಾದ ಸ್ನೇಹಿತನಲ್ಲದಿರಬಹುದು, ಹಾಗೂ ಶತ್ರುವಿನಂತೆ ಕಾಣುವವನು ನಿಜವಾದ ಶತ್ರ್ಯಾಗಿರಲಿಕ್ಕಿಲ್ಲ. ಹಾಗಾಗಿ ನನ್ನ ನಿಜವಾದ ಸ್ನೇಹಿತರು ಯಾರು ಎಂದು ಗುರುತಿಸುವುದು ನಿಮಗೂ ಕಷ್ಟವಾಗಬಹುದು," ಎಂದು ವಿಶ್ಲೇಷಿಸಿದರು.
ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಮಲ್ಲಿಕಾರ್ಜುನ ಖರ್ಗೆಯವರ ದೀರ್ಘಕಾಲದ ರಾಜಕೀಯ ಪಯಣ ಹಾಗೂ ಪಕ್ಷದ ಮೇಲಿನ ನಿಷ್ಠೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಖರ್ಗೆಯವರು ತಮ್ಮ ರಾಜಕೀಯ ಜೀವನದಲ್ಲಿ ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗುವ ಅವಕಾಶವನ್ನು ಕಳೆದುಕೊಂಡರೂ, ಸಿದ್ಧಾಂತದ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದೆ ಪಕ್ಷಕ್ಕೆ ನಿಷ್ಠರಾಗಿ ಉಳಿದಿದ್ದಾರೆ ಎಂದು ಯುವ ನಾಯಕರಿಗೆ ಉದಾಹರಣೆಯಾಗಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ