ಜನತಾ ಕರ್ಫ್ಯೂಗೆ ಇಂದು ಒಂದು ವರ್ಷ| ಕೊರೋನಾ ಮುಂಚೂಣಿ ಕಾರ‍್ಯಕರ್ತರ ಗೌರವಕ್ಕೆ ಚಪ್ಪಾಳೆಗೂ ಸೂಚಿಸಿದ್ದ ನಮೋ
ನವದೆಹಲಿ(ಮಾ.22): ಕೊರೋನಾ ಸೋಂಕು ಹಬ್ಬುವಿಕೆಯ ತಡೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ‘ಜನತಾ ಕರ್ಫ್ಯೂ’ಗೆ ಸೋಮವಾರ (ಮಾ.22) ಒಂದು ವರ್ಷ ತುಂಬಲಿದೆ.
2020ರ ಮಾ.22ರ ಭಾನುವಾರದಂದು ಪ್ರಧಾನಿ ಮೋದಿ ಅವರು ಜನರು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಹೊರಗೆ ಬಾರದೆ ಮನೆಯಲ್ಲೇ ಕುಳಿತುಕೊಳ್ಳಬೇಕು. ಭಾರತದಲ್ಲಿ ಕೊರೋನಾ ವೈರಸ್ ಅನ್ನು ಹೇಗೆ ಮಣಿಸಬೇಕು ಎಂಬುದಕ್ಕೆ ಜನತಾ ಕರ್ಫ್ಯೂ ನೆರವಾಗಲಿದೆ ಎಂದು ಮೋದಿ ಹೇಳಿದ್ದರು.
ಜನತಾ ಕರ್ಫ್ಯೂ: ಪಕ್ಷಾತೀತ ಬೆಂಬಲ, ಬಂದ್‌ನಲ್ಲಿ ಒಂದಾದ ಭಾರತ!
ಈ ಬಗ್ಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದ ಮೋದಿ ಅವರು, ‘ಆರೋಗ್ಯ ಸಿಬ್ಬಂದಿ, ಸರ್ಕಾರಿ ಸೇವೆಗಳು, ನೈರ್ಮಲ್ಯೀಕರಣದ ಸಿಬ್ಬಂದಿ ಮತ್ತು ಪತ್ರಕರ್ತರು ಹೊರತುಪಡಿಸಿ ಉಳಿದವರು ಯಾರೂ ಸಹ ಮನೆಯಿಂದ ಹೊರಬರಬಾರದು. ಅಲ್ಲದೆ ಕೊರೋನಾ ಪರಿಸ್ಥಿತಿಯ ಈ ಕಠಿಣ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಸರ್ಕಾರಿ ಸಿಬ್ಬಂದಿ, ಪತ್ರಕರ್ತರು ಸೇರಿದಂತೆ ಇನ್ನಿತರ ವರ್ಗಗಳ ಸಿಬ್ಬಂದಿಗೆ ಗೌರವ ಸಲ್ಲಿಸಲು ಪ್ರತಿಯೊಬ್ಬರು ಮಾ.22ರ ಸಂಜೆ 5 ಗಂಟೆಗೆ ತಮ್ಮ ಬಾಲ್ಕನಿಗಳಲ್ಲಿ ನಿಂತು 5 ನಿಮಿಷಗಳ ಚಪ್ಪಾಳೆ, ತಟ್ಟೆಬಾರಿಸಬೇಕು’ ಎಂದು ಹೇಳಿದ್ದರು.