ಟ್ರಂಪ್‌ಗೆ ಸ್ಲಮ್ ಕಾಣದಂತೆ ತಡೆಯಲು ಅರ್ಧ ಕಿಮೀ ಉದ್ದದ ತಡೆಗೋಡೆ!

By Kannadaprabha NewsFirst Published Feb 14, 2020, 10:17 AM IST
Highlights

ಟ್ರಂಪ್‌ಗೆ ಕೊಳಚೆ ಪ್ರದೇಶ ಕಾಣದಂತೆ| ತಡೆಯಲು ಅರ್ಧ ಕಿಮೀ ಉದ್ದದ ಗೋಡೆ| ಟ್ರಂಪ್‌-ಮೋದಿ ರೋಡ್‌ ಶೋ ವ್ಯಾಪ್ತಿಯ ಅರ್ಧ ಕಿ.ಮೀ ತಡೆಗೋಡೆ| 6-7 ಅಡಿ ಎತ್ತರದ ಗೋಡೆ, ಅದರ ಸಿಂಗಾರಕ್ಕಾಗಿ 50 ಕೋಟಿ ರು. ವೆಚ್ಚ!

ಅಹಮದಾಬಾದ್‌[ಫೆ.14]: ಗಣ್ಯ ವ್ಯಕ್ತಿಗಳ ಭೇಟಿ ವೇಳೆ ನಗರದ ರಸ್ತೆಗಳನ್ನು ದುರಸ್ತಿಪಡಿಸುವುದು, ಹಳೆಯ ಕಟ್ಟಡಗಳಿಗೆ ಬಣ್ಣ ಹೊಡೆಸುವುದು ಸಾಮಾನ್ಯ. ಆದರೆ ಅಮೆರಿಕ ಅಧ್ಯಕ್ಷರ ಭೇಟಿ ಹಿನ್ನೆಲೆಯಲ್ಲಿ ಅಹಮದಾಬಾದ್‌ ನಗರ ಪಾಲಿಗೆ ಅರ್ಧ ಕಿ.ಮೀ ಉದ್ದದ ಗೋಡೆಯೊಂದನ್ನು ಕಟ್ಟುವ ಮೂಲಕ ಹೊಸ ಸಾಹಸ ಮಾಡುತ್ತಿದೆ.

ಹೌದು, ಫೆ.24ರಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಡೊನಾಲ್ಡ್‌ ಟ್ರಂಪ್‌ ಅವರು ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದಿರಾ ಸೇತುವೆವರೆಗೂ ರೋಡ್‌ ಶೋ ನಡೆಸಲಿದ್ದಾರೆ. ಆದರೆ, ಈ ಭಾಗದಲ್ಲಿ ದೇವ್‌ ಸರನ್‌ ಅಥವಾ ಸರನಿಯವಾಸ್‌ ಎಂಬ ಕೊಳಗೇರಿ ಪ್ರದೇಶವಿದ್ದು, ಸುಮಾರು 500 ಕಚ್ಚಾ ಮನೆಗಳಲ್ಲಿ 2500ಕ್ಕೂ ಹೆಚ್ಚು ಮಂದಿ ವಾಸವಾಗಿದ್ದಾರೆ. ಈ ಬಡಜನರು, ಟ್ರಂಪ್‌ ಹಾಗೂ ಮೋದಿ ಅವರಿಗೆ ಕಾಣಬಾರದು ಎಂಬ ಕಾರಣಕ್ಕೆ, ಈ ನಾಯಕರ ಮೆರವಣಿಗೆ ಸಾಗಲಿರುವ ಅರ್ಧ ಕಿ.ಮೀ ಹಾದಿಯಲ್ಲಿ ಸುಮಾರು 6 ಅಥವಾ 7 ಅಡಿ ಎತ್ತರದ ತಡೆಗೋಡೆ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿದೆ.

ತಡೆಗೋಡೆ ನಿರ್ಮಿಸಿದ ಬಳಿಕ, ರಸ್ತೆ ಎರಡೂ ಬದಿಗಳಲ್ಲಿ ತಾಳೆಮರ, ಲೈಟಿಂಗ್‌ ಸೇರಿದಂತೆ ಇನ್ನಿತರ ಶೃಂಗಾರ ನೆರವೇರಿಸಲಾಗುತ್ತದೆ. ಈ ಎಲ್ಲ 16 ರಸ್ತೆಗಳ ಸಿಂಗಾರಕ್ಕಾಗಿ ಸುಮಾರು 50 ಕೋಟಿ ರು. ವೆಚ್ಚವಾಗುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.

ಈ ಹಿಂದೆ 2017ರಲ್ಲಿ ಟ್ರಂಪ್‌ ಪುತ್ರಿ ಇವಾಂಕಾ ಟ್ರಂಪ್‌ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲೂ ಭಿಕ್ಷಾಟನೆ ಮುಚ್ಚಿಡುವ ನಿಟ್ಟಿನಲ್ಲಿ ಹೈದರಾಬಾದ್‌ನಲ್ಲಿ ಭಿಕ್ಷುಕರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದರು. ಅಲ್ಲದೆ, 2014ರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಹಾಗೂ 2017ರಲ್ಲಿ ಜಪಾನ್‌ ಪ್ರಧಾನಿ ಶಿಂಜೋ ಅಬೆ ಗುಜರಾತ್‌ ಭೇಟಿ ಸಂದರ್ಭದಲ್ಲಿಯೂ ಇದೇ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು

click me!