ಅಟಲ್ ಸೇತುವಿನಲ್ಲಿ ಅಪಘಾತ: ಹಿಂದಿದ್ದ ಕಾರಿನ ಡ್ಯಾಶ್ ಕ್ಯಾಮರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ

Published : Jan 22, 2024, 10:05 AM ISTUpdated : Jan 22, 2024, 10:20 AM IST
ಅಟಲ್ ಸೇತುವಿನಲ್ಲಿ ಅಪಘಾತ: ಹಿಂದಿದ್ದ ಕಾರಿನ ಡ್ಯಾಶ್ ಕ್ಯಾಮರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ಸಾರಾಂಶ

ದೇಶದ ಅತೀ ಉದ್ದದ ಸೀ ಬ್ರಿಡ್ಜ್ ಅಟಲ್ ಸೇತು ಉದ್ಘಾಟನೆಯಾಗಿ ತಿಂಗಳಾಗುವ ಮೊದಲೇ  ಸೇತುವೆ ಮೇಲೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದವರು ಪವಾಡಸದೃಶವಾಗಿ ಪಾರಾಗಿದ್ದಾರೆ

ಮುಂಬೈ: ದೇಶದ ಅತೀ ಉದ್ದದ ಸೀ ಬ್ರಿಡ್ಜ್ ಅಟಲ್ ಸೇತು ಉದ್ಘಾಟನೆಯಾಗಿ ತಿಂಗಳಾಗುವ ಮೊದಲೇ ಅಪಘಾತ ಸಂಭವಿಸಿದೆ. ಸೀ ಬ್ರಿಡ್ಜ್‌ನಲ್ಲಿ ಸಾಗುತ್ತಿದ್ದ ಕಾರೊಂದು ಬ್ರಿಡ್ಜ್‌ ಬದಿ ತಡೆಗೋಡೆಯಂತೆ ಹಾಕಿದ್ದ ಕಬ್ಬಿಣದ ಸರಳುಗಳಿಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದಿದೆ. ಈ ಅಟಲ್ ಸೇತು ಸೀ ಬ್ರಿಡ್ಜ್‌, ದಕ್ಷಿಣ ಮುಂಬೈಯನ್ನು ಉಪಗ್ರಹ ನಗರಿ ನವೀ ಮುಂಬೈಗೆ ಸಂಪರ್ಕಿಸುತ್ತದೆ. 

ಈ ಹೊಸ ಸೀ ಬ್ರಿಡ್ಜ್‌ನಲ್ಲಿ ವೇಗವಾಗಿ ಬಂದ ಕಾರೊಂದು ಬ್ರಿಡ್ಜ್‌ ಬದಿಯಲ್ಲಿರುವ ಕಬ್ಬಿಣದ ರೇಲಿಂಗ್‌ಗೆ ಡಿಕ್ಕಿ ಹೊಡೆದು ನಿಲ್ಲುವ ಮೊದಲು ಹಲವು ಪಲ್ಟಿ ಹೊಡೆದಿದ್ದು, ಈ ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ. ಈ ಘಟನೆಯ ದೃಶ್ಯಾವಳಿಗಳು ಇದೇ ಕಾರಿನ ಹಿಂಭಾಗದಲ್ಲಿ ಬರುತ್ತಿದ್ದ ಮತ್ತೊಂದು ಕಾರಿನ ಡ್ಯಾಶ್‌ ಕ್ಯಾಮರಾದಲ್ಲಿ ಸೆರೆಯಾಗಿದೆ. ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಈ ಕಾರು ಮಹಾರಾಷ್ಟ್ರದ ರಾಯ್‌ಗಡ ಜಿಲ್ಲೆಯ ಉರ್ನಾ ತಾಲೂಕಿನ ಚಿರ್ಲೆ ಗ್ರಾಮಕ್ಕೆ ತೆರಳುತ್ತಿತ್ತು.  ಅಪಘಾತದ ಸಮಯದಲ್ಲಿ ಕಾರಿನಲ್ಲಿ ಮಹಿಳೆ ಹಾಗೂ ಸಣ್ಣ ಮಕ್ಕಳು ಕೂಡ ಇದ್ದರು ಎಂದು ತಿಳಿದು ಬಂದಿದ್ದು, ಕಾರಿನಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ದೇಶದ ಉದ್ದದ ಸಮುದ್ರ ಸೇತುವೆಗಿಂದು ಮೋದಿ ಚಾಲನೆ: ಹೊಸ ಸೇತುವೆ ಮೇಲೆ ಪ್ರಧಾನಿ ಸಂಚಾರ

ಮಹಿಳೆ ವಾಹನ ಚಲಾಯಿಸುತ್ತಿದ್ದು,  ಚಾಲನೆ ವೇಳೆ ನಿಯಂತ್ರಣ ಕಳೆದುಕೊಂಡ ಪರಿಣಾಮ ಕಾರು ಸೇತುವೆಯ ಕಬ್ಬಿಣದ ಬ್ರಿಡ್ಜ್‌ಗಳಿಗೆ ಡಿಕ್ಕಿ ಹೊಡೆದು ಬಳಿಕ ಹಲವು ಬರೀ ಪಲ್ಟಿ ಹೊಡೆದು ರಸ್ತೆಯಲ್ಲೇ ನಿಂತಿದೆ. ಇದು ಭಾರತದ ಅತೀ ಉದ್ಧದ ಸೀ ಬ್ರಿಡ್ಜ್ ಎನ್ನುವ ಖ್ಯಾತಿ ಗಳಿಸಿರುವ ಅಟಲ್ ಸೇತುವಿನಲ್ಲಿ ನಡೆದ ಮೊದಲ ಅಪಘಾತವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಸೆವ್ರಿ ನವ ಶೇವಾ ಅಟಲ್ ಸೇತು ಎಂದು ಈ ನೂತನ ಸೇತುವೆಯ ಹೆಸರಿದ್ದು, ಮೊನ್ನೆ ಜನವರಿ 12 ರಂದು ಕೇವಲ 10 ದಿನಗಳ ಹಿಂದೆ ಪ್ರಧಾನಿ ಈ ಸೇತುವೆಯನ್ನು ಲೋಕಾರ್ಪಣೆಗೊಳಿಸಿದ್ದರು. ಇದು ರಾಯಗಢ ಹಾಗೂ ಮುಂಬೈ ನಡುವಿನ ಪ್ರಯಾಣದ ಅವಧಿಯನ್ನು ಕೂಡ ಕಡಿಮೆ ಮಾಡಲಿದೆ.

ಎಂಟಿಎಚ್‌ಎಲ್ ಎಂದು ಕರೆಯಲಾಗುವ ಈ ಸೇತುವೆ ಯೋಜನೆ 21.8 ಕಿಲೋಮೀಟರ್‌ ಉದ್ದದ ಈ ಸಮುದ್ರ ಸೇತುವೆಯಾಗಿದ್ದು, ಅಂದಾಜು 17, 843 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. . 2023ರ ಡಿಸೆಂಬರ್‌ 25 ರಂದು ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮಜಯಂತಿಯನ್ನು ಇದು ಉದ್ಘಾಟನೆ ಆಗಬೇಕಿತ್ತಾದರೂ, ಸೇತುವೆ ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗದ ಕಾರಣ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿತ್ತು. 2018ರಲ್ಲಿ ಈ ಸೇತುವೆಯ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಇಲ್ಲಿಯವರೆಗೂ ಎರಡು ಡೆಡ್‌ಲೈನ್‌ಗಳನ್ನು ಈ ಕಾಮಗಾರಿ ಮಿಸ್‌ ಮಾಡಿಕೊಂಡಿತ್ತು. 2022ರಲ್ಲಿ ಇದರ ನಿರ್ಮಾಣ ಮುಗಿಯಬೇಕಿತ್ತಾದರೂ, ಕೋವಿಡ್‌ ಕಾರಣದಿಂದಾಗಿ ಇದು ಮುಂದೂಡಿಕೆಯಾಗಿತ್ತು.

ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು
- ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (MTHL) ಆರು ಪಥದ  21.8-ಕಿಮೀ ಉದ್ದದ ಸೇತುವೆ. ಇದು ಭಾರತದ ಅತಿ ಉದ್ದದ ಸಮುದ್ರ ಸೇತುವೆಯಾಗಿದೆ. ಸಮುದ್ರದ ಮೇಲೆ 16.5 ಕಿಲೋಮೀಟರ್‌ ದೂರು ಹೊಂದಿದ್ದರೆ, ಉಳಿದ 5.5 ಕಿಲೋಮೀಟರ್‌ ಮಾರ್ಗ ಭೂಮಿಯ ಮೇಲಿದೆ.

- ಅಟಲ್‌ ಸೇತು ಎಂದು ಕರೆಸಿಕೊಳ್ಳುವ ಈ ಸೇತುವೆಯು ನವಿ ಮುಂಬೈ ತುದಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 4B ಯಲ್ಲಿ ಸೆವ್ರಿ, ಶಿವಾಜಿ ನಗರ, ಜಸ್ಸಿ ಮತ್ತು ಚಿರ್ಲೆಯಲ್ಲಿ ಇಂಟರ್‌ಚೇಂಜ್‌ಗಳನ್ನು ಹೊಂದಿರುತ್ತದೆ. ಇದು ರಾಜ್ಯದ ಎರಡು ದೊಡ್ಡ ನಗರಗಳಾದ ಮುಂಬೈ ಹಾಗೂ ಪುಣೆಗೆ ಸಂಪರ್ಕಿಸುವ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಗೆ ಲಿಂಕ್‌ ಆಗಿಯೂ ಸಂಪರ್ಕ ಕಲ್ಪಿಸುತ್ತದೆ.

- ಸೇತುವೆಯ ನಿರ್ಮಾಣವು 2018 ರಲ್ಲಿ ಪ್ರಾರಂಭವಾಯಿತು. ಇದು 4.5 ವರ್ಷಗಳಲ್ಲಿ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಕೋವಿಡ್ -19 ಕಾರಣದಿಂದಾಗಿ ಯೋಜನೆಯು ಎಂಟು ತಿಂಗಳು ವಿಳಂಬವಾಯಿತು. ಈ ಹಿಂದೆ ಡಿಸೆಂಬರ್ 25ರಂದು ಸೇತುವೆ ಉದ್ಘಾಟನೆಯಾಗಬೇಕಿತ್ತು. ಆ ಡೆಡ್‌ಲೈನ್‌ ಕೂಡ ಮಿಸ್‌ ಆಗಿತ್ತು. ಕಳೆದ ಹದಿನೈದು ದಿನಗಳಿಂದ ನಡೆದ ಭಾರ ಹೊರುವ ಸಾಮರ್ಥ್ಯ ಪರೀಕ್ಷೆಗಳಲ್ಲಿ ಸೇತುವೆ ಪಾಸ್‌ ಆಗಿದ್ದು, ವಾಹನ ಸಂಚಾರಕ್ಕೆ ಮುಕ್ತವಾಗಲು ಸಿದ್ಧವಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!