ಮೊದಲ ತಿಂಗಳು ಉದ್ಧವ್ ಠಾಕ್ರೆ ಕೊರೋನಾ ಪರಿಸ್ಥಿತಿ ನಿಭಾಯಿಸಿದ ಬಗ್ಗೆ ಭಾರೀ ಪ್ರಶಂಸೆ ಕೇಳಿ ಬರುತ್ತಿತ್ತು. ಆದರೆ ಈಗ ಕೇವಲ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಹತ್ತು ಸಾವಿರಕ್ಕೆ ತಲುಪುತ್ತಿರುವಾಗ ಉದ್ಧವ್ ಸರ್ಕಾರ ತನ್ನ ಜನಪ್ರಿಯತೆ ಕಳೆದುಕೊಳ್ಳುತ್ತಿದೆ.
ಮೊದಲ ತಿಂಗಳು ಉದ್ಧವ್ ಠಾಕ್ರೆ ಕೊರೋನಾ ಪರಿಸ್ಥಿತಿ ನಿಭಾಯಿಸಿದ ಬಗ್ಗೆ ಭಾರೀ ಪ್ರಶಂಸೆ ಕೇಳಿ ಬರುತ್ತಿತ್ತು. ಆದರೆ ಈಗ ಕೇವಲ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಹತ್ತು ಸಾವಿರಕ್ಕೆ ತಲುಪುತ್ತಿರುವಾಗ ಉದ್ಧವ್ ಸರ್ಕಾರ ತನ್ನ ಜನಪ್ರಿಯತೆ ಕಳೆದುಕೊಳ್ಳುತ್ತಿದೆ.
ಉದ್ಧವ್ ಮಂತ್ರಿಮಂಡಲದಲ್ಲಿ ಗೃಹ ಸಚಿವ ರಾಷ್ಟ್ರವಾದಿ ಪಕ್ಷದವರು, ಆರೋಗ್ಯ ಸಚಿವರು ಕೂಡ ಅದೇ ಶರದ್ ಪವಾರ್ ಪಕ್ಷದವರು. ಕೊರೋನಾ ನಿಯಂತ್ರಿಸುವ ವಿಷಯದಲ್ಲಿ ಇಬ್ಬರು ಸಚಿವರೂ ಮುಖ್ಯಮಂತ್ರಿ ಮಾತೇ ಕೇಳಲ್ಲ. ಏನೇ ಹೇಳಿಸಬೇಕೆಂದರೂ ಉದ್ಧವ್ ಠಾಕ್ರೆ, ಶರದ್ ಪವಾರ್ ಕಡೆಯಿಂದ ಹೇಳಿಸಬೇಕು. ಮಂತ್ರಿಗಳೇ ಮುಖ್ಯಮಂತ್ರಿ ಮಾತು ಕೇಳೋಲ್ಲ ಎಂದಾಗ ಅಧಿಕಾರಿಗಳು ಕೇಳುತ್ತಾರೆಯೇ. ಬಹುತೇಕ ಐಎಎಸ್ ಬ್ಯುರೋಕ್ರಸಿ ಶರದ್ ಪವಾರ್ ಕಣ್ಸನ್ನೆಯ ಮೇಲೆ ನಡೆಯುತ್ತದೆಯೇ ಹೊರತು, ಶಿವಸೇನೆ ಬಗ್ಗೆ ಅಷ್ಟೊಂದು ಒಲವಿಲ್ಲ.
ಮೇ 3 ಕ್ಕೆ ಎರಡನೇ ಹಂತದ ಲಾಕ್‌ಡೌನ್ ಅಂತ್ಯ; ಮುಂದೇನು?
ಇಂಥ ಸ್ಥಿತಿಯಲ್ಲಿ ಕೊರೋನಾ ಕಂಟ್ರೋಲ್ ಮಾಡುವುದಾದರೂ ಹೇಗೆ ಎಂಬುದು ಪಾಪ ಉದ್ಧವ್‌ಗೂ ಅರ್ಥವಾಗುತ್ತಿಲ್ಲ. ಶಿವಸೇನೆ, ರಾಷ್ಟ್ರವಾದಿ ಮತ್ತು ಕಾಂಗ್ರೆಸ್ ಮೂರು ಪಕ್ಷಗಳು ಸೇರಿ ಸರ್ಕಾರ ರಚಿಸಿದರೂ ಮರಾಠಾ ಚಾಣಕ್ಯ ಶರದ್ ಪವಾರ್ ಕಪಿಮುಷ್ಟಿಯಲ್ಲಿ ಮಹಾರಾಷ್ಟ್ರವಿದೆ. ಇದೆಲ್ಲ ನೋಡಿದರೆ ಸರ್ಕಾರ ಬಹಳ ದಿನ ಉಳಿಯುವಂತೆ ಕಾಣುತ್ತಿಲ್ಲ.
ಠಾಕ್ರೆ ಪದಚ್ಯುತಿ ಅನಾಯಾಸ
ಉದ್ಧವ್ ಠಾಕ್ರೆ ಕೊರೋನಾ ಸಮಯದಲ್ಲಿ ತಾಂತ್ರಿಕ ಆಟದಲ್ಲಿ ಮುಖ್ಯಮಂತ್ರಿ ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿ ಇದ್ದಾರೆ. ಏನಕೇನ ಉದ್ಧವ್ ಠಾಕ್ರೆ ಮೇ 28ರೊಳಗೆ ವಿಧಾನ ಪರಿಷತ್ ಸದಸ್ಯರಾಗದೇ ಹೋದರೆ ಚೀಫ್ ಮಿನಿಸ್ಟರ್ ಆಗಿ ಮುಂದುವರೆಯುವುದು ಅಸಾಧ್ಯ. ಉದ್ಧವ್ ಅಧ್ಯಕ್ಷತೆಯಲ್ಲಿ ಸಂಪುಟ ಸಭೆ ಠಾಕ್ರೆಯನ್ನು ವಿಧಾನ ಪರಿಷತ್ತಿಗೆ ನಾಮಕರಣ ಮಾಡಿ ಎಂದು ಶಿಫಾರಸ್ಸು ಮಾಡಿದರೂ ರಾಜ್ಯಪಾಲ ಭಗತ್ ಕೊಶಿಯಾರಿ ‘ಇದು ಸಾಧ್ಯವಿಲ್ಲ’ ಎಂದಿದ್ದಾರೆ.
ಹೀಗಾಗಿ ಉದ್ಧವ್ ನೇರವಾಗಿ ಪ್ರಧಾನಿಗೆ ನಿನ್ನೆ ಬೆಳಿಗ್ಗೆ ಫೋನ್ ಮಾಡಿದ್ದು, ಸರ್ಕಾರ ಬೀಳಿಸಲು ಸಿಕ್ಕ ಅವಕಾಶ ಎಂದು ಬಿಜೆಪಿ ಎದ್ದು ಕೂತಿದೆ. ಜನವರಿಯಲ್ಲಿ ಎರಡು ಬಾರಿ ವಿಧಾನ ಪರಿಷತ್ ಚುನಾವಣೆ ನಡೆದರೂ ಸ್ಪರ್ಧಿಸದೆ ಸುಮ್ಮನಿದ್ದ ಉದ್ಧವ್‌ಗೆ ಈಗ ಪೀಕಲಾಟ ಶುರುವಾಗಿದೆ.
ಆದರೆ ಬಿಜೆಪಿಯಲ್ಲೂ ಎಲ್ಲವೂ ಚೆನ್ನಾಗಿಲ್ಲ. ದೇವೇಂದ್ರ ಫಡ್ನವೀಸ್ ಅವರನ್ನು ಮುಖ್ಯಮಂತ್ರಿ ಮಾಡಲು ಯಾವುದೇ ಸ್ಥಳೀಯ ಬಿಜೆಪಿ ನಾಯಕರಿಗೆ ಮನಸ್ಸಿಲ್ಲ. ಆದರೆ ದೇವೇಂದ್ರ ಬಿಟ್ಟು ಇತರರ ಕೈಗೆ ಅಧಿಕಾರ ಕೊಡಲು ಮೋದಿಗೆ ಮನಸ್ಸಿಲ್ಲ. ಇನ್ನು ನನಗೂ ಇದಕ್ಕೂ ಸಂಬಂಧ ಇಲ್ಲ ಎಂದು ನಿತಿನ್ ಗಡ್ಕರಿ ತಣ್ಣಗೆ ನಾಗಪುರದಲ್ಲಿ ಕುಳಿತಿದ್ದಾರೆ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ