
ಹೈದರಾಬಾದ್: ಸಾಲದ ಹಣ ತೀರಿಸಲಿಲ್ಲ ಎಂಬ ಕಾರಣಕ್ಕೆ ಕೇವಲ 21 ದಿನದ ಹಸುಗೂಸನ್ನು ಕಿಡ್ನ್ಯಾಪ್ ಮಾಡಿದ ಅಮಾನುಷ ಕೃತ್ಯ ಹೈದರಾಬಾದ್‌ನ ಹೊರವಲಯದಲ್ಲಿ ಬೆಳಕಿಗೆ ಬಂದಿದೆ. ಹಣದ ದಾಹಕ್ಕಾಗಿ ಮನುಷ್ಯ ಎಷ್ಟು ಕೆಳಮಟ್ಟಕ್ಕೆ ಇಳಿಯಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.
ರಂಗಾರೆಡ್ಡಿ ಜಿಲ್ಲೆಯ ರಾಜೇಂದ್ರನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಾನ್ ನಗರದಲ್ಲಿ ಘಟನೆ ನಡೆದಿದೆ. ಅನಿತಾ ಮತ್ತು ಆಕೆಯ ಪತಿ ರಾಘವೇಂದ್ರ ಅವರು ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಕುಟುಂಬದ ಅವಶ್ಯಕತೆಗಾಗಿ ಹಫೀಜ್‌ಪೇಟ್ ನಿವಾಸಿ ಮಂಜುಳಾ ಎಂಬಾಕೆಯಿಂದ 30 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಈ ಸಾಲದ ಹಣವನ್ನು ಮರಳಿ ನೀಡುವ ವಿಚಾರದಲ್ಲಿ ಇತ್ತಂಡಗಳ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ.
ಸೋಮವಾರ ಮಂಜುಳಾ ಪರವಾಗಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಆಟೋದಲ್ಲಿ ಅನಿತಾ ಅವರ ಮನೆಗೆ ಬಂದಿದ್ದಾರೆ. ಸಾಲದ ಹಣಕ್ಕಾಗಿ ವಾಗ್ವಾದ ನಡೆಸಿದ ಅವರು, ಕೊನೆಗೆ ಮನೆಯಲ್ಲಿದ್ದ 21 ದಿನದ ಹಸುಗೂಸನ್ನು ಬಲವಂತವಾಗಿ ಎತ್ತುಕೊಂಡು ಹೋಗಿದ್ದಾರೆ. ತನ್ನ ಮಗುವನ್ನು ಬಿಟ್ಟುಬಿಡಿ ಎಂದು ಅನಿತಾ ಕಿಡ್ನ್ಯಾಪರ್‌ಗಳ ಕಾಲು ಹಿಡಿದು ಬೇಡಿಕೊಂಡರೂ, ಆಕೆಯನ್ನು ಪಕ್ಕಕ್ಕೆ ತಳ್ಳಿ ಮಗುವಿನೊಂದಿಗೆ ಪರಾರಿಯಾಗಿದ್ದಾರೆ.
ಮಗು ಅಪಹರಣಕ್ಕೊಳಗಾದ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜೇಂದ್ರನಗರ ಪೊಲೀಸರು ಅಲರ್ಟ್ ಆದರು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದರು. ಪೊಲೀಸರ ಸಮಯಪ್ರಜ್ಞೆ ಮತ್ತು ಚುರುಕಿನ ಕಾರ್ಯಾಚರಣೆಯಿಂದಾಗಿ ಕೇವಲ ಎರಡು ಗಂಟೆಗಳ ಒಳಗಾಗಿ ಮಗುವನ್ನು ಪತ್ತೆ ಹಚ್ಚಲಾಯಿತು.
ಅಪಹರಣಕಾರರ ಕಪಿಮುಷ್ಠಿಯಿಂದ ಮಗುವನ್ನು ರಕ್ಷಿಸಿದ ಪೊಲೀಸರು, ತಾಯಿ ಅನಿತಾ ಅವರಿಗೆ ಮಗುವನ್ನು ಹಸ್ತಾಂತರಿಸಿದ್ದಾರೆ. ಕಳೆದುಹೋಗಿದ್ದ ಮಗು ಮರಳಿ ಕೈಗೆ ಸಿಗುತ್ತಿದ್ದಂತೆಯೇ ತಾಯಿ ಮತ್ತು ಕುಟುಂಬದವರು ನಿಟ್ಟುಸಿರು ಬಿಟ್ಟಿದ್ದಾರೆ.
ಕೇವಲ 30 ಸಾವಿರ ರೂಪಾಯಿ ಸಾಲದ ವಿಚಾರಕ್ಕೆ ಹಸುಗೂಸನ್ನು ಅಪಹರಿಸಿದ ಆರೋಪಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಂಜುಳಾ ಸೇರಿದಂತೆ ಕಿಡ್ನ್ಯಾಪ್‌ನಲ್ಲಿ ಭಾಗಿಯಾದ ಇತರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಹಣದ ವಿವಾದ ಏನೇ ಇದ್ದರೂ ಇಂತಹ ಅಮಾನುಷ ಕೃತ್ಯ ಎಸಗುವುದು ಕ್ಷಮಾರ್ಹವಲ್ಲ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ