'ಬೈಕ್ ಟ್ಯಾಕ್ಸಿಗಳು ಸಾರ್ವಜನಿಕ ಸಾರಿಗೆ ವಾಹನಗಳಲ್ಲ': ಸುಪ್ರೀಂ ಕೋರ್ಟ್‌ಗೆ ಕರ್ನಾಟಕ ಸರ್ಕಾರ ಸ್ಪಷ್ಟನೆ

Published : Aug 12, 2026, 04:54 PM IST
Bihar Bike Taxi Service

ಸಾರಾಂಶ

ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಿದ ಹೈಕೋರ್ಟ್ ತೀರ್ಪನ್ನು ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ. ದ್ವಿಚಕ್ರ ವಾಹನಗಳು ಕಡಿಮೆ ಸುರಕ್ಷತೆ, ಹೆಚ್ಚಿನ ಅಪಘಾತದ ಅಪಾಯ ಮತ್ತು ಸಾರ್ವಜನಿಕ ಸಾರಿಗೆಗೆ ಸೂಕ್ತವಲ್ಲ ಎಂದು ಸರ್ಕಾರ ವಾದಿಸಿದೆ.

ನವದೆಹಲಿ (ಆ.12): 'ಬೈಕ್ ಟ್ಯಾಕ್ಸಿ'ಗಳಿಗೆ ಅನುಮತಿ ನೀಡಿರುವ ಹೈಕೋರ್ಟ್ ತೀರ್ಪು ದ್ವಿಚಕ್ರ ವಾಹನಗಳ ಕಡಿಮೆ ಸುರಕ್ಷತಾ ಮಾನದಂಡಗಳು, ಹೆಚ್ಚಿನ ಅಪಘಾತ ಮರಣ ಪ್ರಮಾಣ, ಸಂಚಾರ ದಟ್ಟಣೆ ಮತ್ತು ಸಾರ್ವಜನಿಕ ಸಾರಿಗೆ ವಾಹನಗಳಾಗಿ ಅವುಗಳಿಗಿರುವ ಸೀಮಿತ ಉಪಯುಕ್ತತೆಯನ್ನು ನಿರ್ಲಕ್ಷಿಸಿದೆ ಎಂದು ಕರ್ನಾಟಕ ಸರ್ಕಾರ ಮಂಗಳವಾರ (ಆಗಸ್ಟ್ 11, 2026) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ರಾಜ್ಯ ಸರ್ಕಾರದ ಈ ಮೇಲ್ಮನವಿ ಅರ್ಜಿಯು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿದ್ದು, ಸುದೀರ್ಘ ಪರಿಶೀಲನೆಗಾಗಿ ವಿಚಾರಣೆಯನ್ನು ಮುಂದಿನ ದಿನಾಂಕಕ್ಕೆ ಮುಂದೂಡಲಾಗಿದೆ.

ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ವಕೀಲ ಸಂಚಿತ್ ಗಾರ್ಗಾ, ದ್ವಿಚಕ್ರ ವಾಹನಗಳನ್ನು ಟ್ಯಾಕ್ಸಿಗಳಾಗಿ ಬಳಸುವುದರ ಮೇಲಿನ ನಿರ್ಬಂಧವು ಸಂಪೂರ್ಣ ಸಮಂಜಸವಾಗಿದೆ, ಪ್ರಮಾಣಬದ್ಧ ಹಾಗೂ ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದೆ ಎಂದು ವಾದಿಸಿದರು.

"ವಾಣಿಜ್ಯ ಉದ್ದೇಶಗಳಿಗಾಗಿ ಮೋಟಾರ್ ಸೈಕಲ್ ಬಳಕೆಯ ಮೇಲೆ ರಾಜ್ಯ ಸರ್ಕಾರ ಯಾವುದೇ ಸಂಪೂರ್ಣ ನಿಷೇಧವನ್ನು ಹೇರಿಲ್ಲ. ಬದಲಾಗಿ, ಪ್ರಯಾಣಿಕರನ್ನು ಕರೆದೊಯ್ಯಲು ಮಾತ್ರ ಅವುಗಳ ಬಳಕೆಯನ್ನು ನಿರ್ಬಂಧಿಸಲಾಗಿದೆ. ಮೋಟಾರ್ ಸೈಕಲ್ ಸವಾರರಿಗೆ ಪರ್ಯಾಯ ಜೀವನೋಪಾಯದ ಮಾರ್ಗಗಳು ಮುಕ್ತವಾಗಿವೆ. ಪ್ರಮುಖವಾಗಿ 'ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಕಾಯ್ದೆ, 2025'ರ ಅಡಿಯಲ್ಲಿ ಇಂತಹ ಕಾರ್ಮಿಕರಿಗೆ ಶಾಸನಬದ್ಧ ರಕ್ಷಣೆ ಮತ್ತು ಕಲ್ಯಾಣ ಕ್ರಮಗಳನ್ನು ಒದಗಿಸಲಾಗಿದೆ" ಎಂದು ಕರ್ನಾಟಕ ಸರ್ಕಾರ ಪೀಠಕ್ಕೆ ಸಲ್ಲಿಕೆ ಮಾಡಿದೆ.

ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ

ರಾಜ್ಯ ಸರ್ಕಾರವು ಬೈಕ್ ಟ್ಯಾಕ್ಸಿ ನೀತಿಯನ್ನು ರೂಪಿಸುವವರೆಗೆ ಸೇವೆಗಳನ್ನು ಸ್ಥಗಿತಗೊಳಿಸಿ ಏಕಸದಸ್ಯ ಪೀಠವು ಏಪ್ರಿಲ್ 2025ರಲ್ಲಿ ನೀಡಿದ್ದ ಆದೇಶವನ್ನು ಹೈಕೋರ್ಟ್‌ನ ವಿಭಾಗೀಯ ಪೀಠವು ಜನವರಿ 2026ರಲ್ಲಿ ರದ್ದುಗೊಳಿಸಿತ್ತು. ಈ ವಿಭಾಗೀಯ ಪೀಠದ ಆದೇಶವನ್ನು ರಾಜ್ಯ ಸರ್ಕಾರವೀಗ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದೆ. ಹೈಕೋರ್ಟ್ ತನ್ನ ತೀರ್ಪಿನಲ್ಲಿ "ಮೋಟಾರ್ ವಾಹನಗಳ ಕಾಯ್ದೆ, 1988ರ ಅಡಿಯಲ್ಲಿ ಮೋಟಾರ್ ಸೈಕಲ್‌ಗಳನ್ನು ಟ್ಯಾಕ್ಸಿಗಳಾಗಿ ಚಲಾಯಿಸಲು ಪರವಾನಗಿ (ಪರ್ಮಿಟ್) ಪಡೆಯುವ ಸ್ಪಷ್ಟ ಹಕ್ಕು ಟ್ಯಾಕ್ಸಿ ಅಗ್ರಿಗೇಟರ್‌ಗಳು ಮತ್ತು ವೈಯಕ್ತಿಕ ಮೋಟಾರ್ ಸೈಕಲ್ ಮಾಲೀಕರಿಗೆ ಇದೆ" ಎಂದು ಹೇಳಿತ್ತು.

ಅಷ್ಟೇ ಅಲ್ಲದೆ, ಮೋಟಾರ್ ಸೈಕಲ್‌ಗಳು 'ಸಾರಿಗೆ ವಾಹನಗಳ' ವರ್ಗಕ್ಕೆ ಸೇರುತ್ತವೆ ಎಂದು ಅಭಿಪ್ರಾಯಪಟ್ಟಿದ್ದ ಹೈಕೋರ್ಟ್, ಮೋಟಾರ್ ಸೈಕಲ್‌ಗಳಿಗೆ ಕಾಂಟ್ರಾಕ್ಟ್ ಕ್ಯಾರೇಜ್ ಪರ್ಮಿಟ್‌ಗಳನ್ನು ನೀಡಲು ಸಕಾರಾತ್ಮಕವಾಗಿ ಪರಿಶೀಲಿಸುವಂತೆ ರಾಜ್ಯ ಸಾರಿಗೆ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಿತ್ತು.

ಹೈಕೋರ್ಟ್ ನಿರ್ಧಾರದ ವಿರುದ್ಧ ಸರ್ಕಾರದ ವಾದವೇನು?

ವಿಭಾಗೀಯ ಪೀಠದ ಈ ಜನವರಿ 2026ರ ತೀರ್ಪು, ಪರ್ಮಿಟ್‌ಗಳನ್ನು ನೀಡುವ ಅಥವಾ ನಿರಾಕರಿಸುವ ವಿಷಯದಲ್ಲಿ ರಾಜ್ಯ ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳಿಗಿರುವ ವಿವೇಚನಾ ಅಧಿಕಾರವನ್ನು 'ಕೇವಲ ಔಪಚಾರಿಕತೆ' ಎಂಬಂತೆ ಕನಿಷ್ಠಗೊಳಿಸಿದೆ ಎಂದು ರಾಜ್ಯ ಸರ್ಕಾರ ವಾದಿಸಿದೆ.

"ಪರವಾನಗಿ ನೀಡುವುದು ಸ್ವಯಂಚಾಲಿತ ಪ್ರಕ್ರಿಯೆಯಲ್ಲ. ಸಾರ್ವಜನಿಕ ಸುರಕ್ಷತೆ, ವಾಹನದ ಸೂಕ್ತತೆ ಮತ್ತು ನಿಯಂತ್ರಣ ಸನ್ನದ್ಧತೆಯ ಆಧಾರದ ಮೇಲೆ ಸೂಕ್ಷ್ಮ ಪರಿಶೀಲನೆಗೆ ಒಳಪಟ್ಟಿರುತ್ತದೆ ಎಂಬುದನ್ನು ಕಾನೂನು ಸ್ಪಷ್ಟವಾಗಿ ಪರಿಗಣಿಸುತ್ತದೆ" ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿದೆ.

"1988ರ ಕಾಯ್ದೆಯಡಿಯಲ್ಲಿನ ಶಾಸನಬದ್ಧ ವ್ಯಾಖ್ಯಾನಗಳನ್ನು ಹೈಕೋರ್ಟ್ ತಪ್ಪಾಗಿ ಅರ್ಥೈಸಿಕೊಂಡಿದೆ. ಮೋಟಾರ್ ಸೈಕಲ್‌ಗಳು ಪ್ರಯಾಣಿಕರನ್ನು ಬಾಡಿಗೆಗೆ ಕರೆದೊಯ್ಯಲು ನಿರ್ಮಿಸಿದ ಅಥವಾ ಹೊಂದಿಸಿಕೊಂಡ ವಾಹನಗಳಲ್ಲದಿದ್ದರೂ, ಅವುಗಳನ್ನು ಮೋಟಾರ್ ಕ್ಯಾಬ್‌ಗಳು ಮತ್ತು ಕಾಂಟ್ರಾಕ್ಟ್ ಕ್ಯಾರೇಜ್‌ಗಳಿಗೆ ಸಮಾನವಾಗಿ ಪರಿಗಣಿಸಿದೆ. ಹೀಗೆ ಮೋಟಾರ್ ಸೈಕಲ್‌ಗಳನ್ನು ಮೋಟಾರ್ ಕ್ಯಾಬ್ ಮತ್ತು ಕಾಂಟ್ರಾಕ್ಟ್ ಕ್ಯಾರೇಜ್ ವ್ಯಾಖ್ಯಾನಗಳಿಗೆ ಸೇರಿಸುವ ಮೂಲಕ ಹೈಕೋರ್ಟ್ ತೀರ್ಪು ಸಾರ್ವಜನಿಕ ಸುರಕ್ಷತೆಯನ್ನು ಆಡಳಿತ ನಡೆಸುವ ನಿಯಂತ್ರಣ ಶಾಸನದಲ್ಲಿ ಕಾನೂನಿನಲ್ಲಿ ಇಲ್ಲದ ಹೊಸ ವಾಹನ ವರ್ಗವನ್ನೇ ಸೃಷ್ಟಿಸಿದೆ" ಎಂದು ಅರ್ಜಿ ತಿಳಿಸಿದೆ.

"ವಿಭಾಗೀಯ ಪೀಠವು ಮೋಟಾರ್ ಸೈಕಲ್‌ನಲ್ಲಿ ಹಿಂಬದಿ ಸವಾರನನ್ನು (Pillion Rider) ಕುಳ್ಳಿರಿಸಿಕೊಂಡು ಹೋಗುವ ಭೌತಿಕ ಸಾಮರ್ಥ್ಯವನ್ನು, ಪ್ರಯಾಣಿಕರನ್ನು ಬಾಡಿಗೆಗೆ ಕರೆದೊಯ್ಯುವ ಕಾನೂನುಬದ್ಧ ಅಧಿಕಾರಕ್ಕೆ ಸಮೀಕರಿಸುವ ಮೂಲಕ ಭೌತಿಕ ಸಾಮರ್ಥ್ಯ ಮತ್ತು ಶಾಸನಬದ್ಧ ಅನುಮತಿಯ ನಡುವೆ ಗೊಂದಲ ಮೂಡಿಸಿಕೊಂಡಿದೆ" ಎಂದು ರಾಜ್ಯ ಸರ್ಕಾರ ತನ್ನ ಅರ್ಜಿಯಲ್ಲಿ ಸ್ಪಷ್ಟಪಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುದ್ದಾದ ಇಬ್ಬರು ಮಕ್ಕಳನ್ನ ಅನಾಥರನ್ನಾಗಿ ಮಾಡಿ ಹೋದ ಅಪ್ಪ-ಅಮ್ಮ.. ಯಾಕೆ ಹೀಗೆ ಮಾಡಿಬಿಟ್ಟರು?
Expensive Plant: ಚಿನ್ನಕ್ಕಿಂತಲೂ ದುಬಾರಿ ಈ ಗಿಡ, ಎಲ್ಲಿ ಸಿಗುತ್ತೆ? ಎಷ್ಟಿದೆ ಬೆಲೆ?