
ಶಿಮ್ಲಾ: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಮನುಕುಲವೇ ತಲೆ ತಗ್ಗಿಸುವಂಥ ಕೃತ್ಯ ನಡೆದಿದೆ. ಪತ್ನಿಯ ಮೇಲಿನ ಕೋಪಕ್ಕೆ ತಂದೆಯೊಬ್ಬ ತನ್ನ ಆರು ವರ್ಷದ ಮಗುವನ್ನ ರಭಸವಾಗಿ ಹರಿಯುತ್ತಿದ್ದ ರಾವಿ ನದಿಗೆ ಎಸೆದು ಹೋದ ಘಟನೆ ಬೆಳಕಿಗೆ ಬಂದಿದೆ.
ಆರೋಪಿ ಹಿತೇಶ್ ಕುಮಾರ್ ಎಂಬಾತ ಚಂಬಾದ ಪರೇಲ್ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಈತನ ಪತ್ನಿ ಕಳೆದ ಒಂದು ತಿಂಗಳಿನಿಂದ ತನ್ನ ಕಿರಿಯ ಮಗನೊಂದಿಗೆ ಅಮೃತಸರದಲ್ಲಿರುವ ತಾಯಿ ಮನೆಯಲ್ಲಿ ವಾಸವಿದ್ದರು. ಆರು ವರ್ಷದ ಹಿರಿಯ ಮಗ ಗಗನ್‌ದೀಪ್ ತಂದೆಯ ಜೊತೆಗಿದ್ದ. ಸೋಮವಾರ ರಾತ್ರಿ ಹಿತೇಶ್ ತನ್ನ ಪತ್ನಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಇಬ್ಬರ ನಡುವೆ ಜೋರಾದ ಜಗಳ ನಡೆದಿದೆ.
ಪತ್ನಿಯೊಂದಿಗಿನ ಜಗಳದಿಂದ ಆಕ್ರೋಶಗೊಂಡ ಹಿತೇಶ್, ತನ್ನ ಮಗ ಗಗನ್‌ದೀಪ್‌ನನ್ನು ಕರೆದುಕೊಂಡು ಹೋಗಿ ಪರೇಲ್ ಸೇತುವೆಯ ಮೇಲಿಂದ ತುಂಬಿ ಹರಿಯುತ್ತಿದ್ದ ನದಿಗೆ ಎಸೆದಿದ್ದಾನೆ. ಮರುದಿನ ಬೆಳಿಗ್ಗೆ (ಮಂಗಳವಾರ) ತಾನೇ ಪೊಲೀಸ್ ಸಹಾಯವಾಣಿ 112 ಗೆ ಕರೆ ಮಾಡಿ, ಮಗನನ್ನು ನದಿಗೆ ಎಸೆದಿರುವುದಾಗಿ ತಿಳಿಸಿದ್ದಾನೆ.
ಆರಂಭದಲ್ಲಿ ಪೊಲೀಸರು ಹಿತೇಶ್ ಹೇಳಿಕೆಯನ್ನು ನಂಬಲಿಲ್ಲ. ಆದರೆ ಆತನ ಬಾಡಿಗೆ ಮನೆಗೆ ಹೋಗಿ ಪರಿಶೀಲಿಸಿದಾಗ ಮಗು ನಾಪತ್ತೆಯಾಗಿರುವುದು ದೃಢಪಟ್ಟಿದೆ. ಕೂಡಲೇ ಹಿತೇಶ್‌ನನ್ನು ಬಂಧಿಸಿದ ಪೊಲೀಸರು, ನದಿಯಲ್ಲಿ ಮಗುವಿನ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದು ಮತ್ತು ನೀರಿನ ಹರಿವು ತೀವ್ರವಾಗಿರುವುದರಿಂದ ಮಗುವಿನ ದೇಹ ಇನ್ನು ಪತ್ತೆಯಾಗಿಲ್ಲ.
ಪೊಲೀಸರು ಹಿತೇಶ್‌ನ ಪತ್ನಿಯ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಘಟನೆಗೆ ಮುನ್ನ ದಂಪತಿ ನಡುವೆ ನಡೆದ ಸಂಭಾಷಣೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಹಿತೇಶ್ ಕುಮಾರ್ ಈ ಹಿಂದೆ ಬದ್ದಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಸದ್ಯ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಪತ್ನಿಯ ಮೇಲಿನ ಕೋಪಕ್ಕೆ ಅಮಾಯಕ ಮಗುವನ್ನು ಬಲಿಪಡೆದ ತಂದೆಯ ಕ್ರೌರ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ